ಪರಿಹಾರ ಘೋಷಿಸದಂತೆ ಮುಖ್ಯಮಂತ್ರಿಯನ್ನು ತಡೆದವರು ಯಾರು?

0
204

ಸನ್ಮಾರ್ಗ ಸಂಪಾದಕೀಯ

ಕಳೆದ ಜುಲೈ 20ರಿಂದ 28ರ ನಡುವೆ ದ.ಕ. ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದಿವೆ. ಇವರಾರೂ ನುಸುಳುಕೋರರಲ್ಲ, ಭಯೋತ್ಪಾದಕರಲ್ಲ, ಒಂದೇ ಒಂದು ಪ್ರಕರಣ ಕೂಡಾ ಇವರ ಮೇಲೆ ದೇಶದ ಯಾವುದೇ ಪೊಲೀಸ್ ಠಾಣೆಯಲ್ಲೂ ದಾಖಲಾಗಿಲ್ಲ. ಮೂವರಲ್ಲೂ ಆಧಾರ್ ಕಾರ್ಡ್ ಇದೆ, ಮತದಾರರ ಗುರುತಿನ ಚೀಟಿ ಇದೆ, ರೇಶನ್ ಕಾರ್ಡ್ನಲ್ಲಿ ಹೆಸರಿದೆ, ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಇಲ್ಲಿಯೇ ದುಡಿಯುತ್ತಿದ್ದ ತರುಣರು ಇವರು. ಇವರು ಶಿಕ್ಷಣ ಪಡೆದ ದಾಖಲೆಗಳೂ ಸ್ಥಳೀಯ ಶಾಲೆಗಳಲ್ಲಿ ಲಭ್ಯ ಇವೆ. ಇವರ ಹೆತ್ತವರೂ ಸ್ಥಳೀಯರೇ ಆಗಿದ್ದಾರೆ. ಹೀಗಿದ್ದೂ ರಾಜ್ಯ ಸರ್ಕಾರ ಅತ್ಯಂತ ಪಕ್ಷಪಾತಿತನದಿಂದ ವರ್ತಿಸಿತು. ಜುಲೈ 20ರಂದು ಹತ್ಯೆಯಾದ ಮಸೂದ್‌ನ ಮನೆಗೆ ಭೇಟಿ ಕೊಡದ ಮುಖ್ಯಮಂತ್ರಿಗಳು ಜುಲೈ 26ರಂದು ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕೊಟ್ಟರು. 25 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನೂ ವಿತರಿಸಿದರು. ಪ್ರವೀಣ್ ನೆಟ್ಟಾರು ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನೂ ನೀಡಿದರು. ಅಲ್ಲದೇ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೂ ವಹಿಸಿಕೊಟ್ಟರು. ಬೆಂಗಳೂರಿನಿಂದ ಪ್ರವೀಣ್ ನೆಟ್ಟಾರು ಮನೆಗೆ ಸುಮಾರು 400 ಕಿಲೋಮೀಟರ್ ದೂರವಿದ್ದರೆ, ಪ್ರವೀಣ್ ನೆಟ್ಟಾರು ಮನೆಯಿಂದ ಮಸೂದ್ ಮನೆಗೆ ಹತ್ತು-ಹದಿನೈದು ಕಿಲೋಮೀಟರ್ ದೂರವಷ್ಟೇ ಇದೆ. ಆದ್ದರಿಂದ ಪ್ರವೀಣ್ ಮನೆಗೆ ಭೇಟಿಕೊಟ್ಟ ಮುಖ್ಯಮಂತ್ರಿಗಳು ಮಸೂದ್ ನೆಗೆ ಭೇಟಿ ಕೊಡದೇ ಇರುವುದಕ್ಕೆ ಎರಡೂ ಮನೆಗಳ ನಡುವಿನ ದೂರ ಕಾರಣ ಅಲ್ಲವೇ ಅಲ್ಲ. ಹಾಗಾದರೆ ಇನ್ನೇನು? ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಇದ್ದಾಗಲೇ ಫಾಝಿಲ್ ಎಂಬ ಯುವಕನ ಹತ್ಯೆಯೂ ನಡೆದಿದೆ. ಆದರೂ ಮುಖ್ಯಮಂತ್ರಿಗಳು ಈ ಇಬ್ಬರಿಗೆ ನಯಾ ಪೈಸೆ ಪರಿಹಾರವ ನ್ನೂ ಘೋಷಿಸಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಿಲ್ಲ. ಮಸೂದ್ ಮತ್ತು ಫಾಝಿಲ್ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಲಿಲ್ಲ. ಪ್ರವೀಣ್ ನೆಟ್ಟಾರು ಹತ್ಯೆಯನ್ನು NIA ಗೆ ವಹಿಸಿಕೊಟ್ಟಂತೆ ಈ ಇಬ್ಬರ ಹತ್ಯಾ ಪ್ರಕರಣವನ್ನು NIA ಗೆ ವಹಿಸಿ ಕೊಡಲಿಲ್ಲ. ಇದು ಅನ್ಯಾಯ. ಬಹಿರಂಗ ಪಕ್ಷಪಾತ. ಆದ್ದರಿಂದಲೇ ಮುಖ್ಯಮಂತ್ರಿಗಳು ಮೇಲಿಂದ ಮೇಲೆ ಪ್ರಶ್ನೆಗೆ ಒಳಗಾದರು. ಪರಿಹಾರ ಘೋಷಿಸದೇ ಇರುವುದನ್ನು ಮತ್ತು ಸಂತ್ರಸ್ತರ ಮನೆಗೆ ಭೇಟಿ ಕೊಡದೇ ಇರುವುದನ್ನು ಮಾಧ್ಯಮಗಳು ಸಹಿತ ನಾಗರಿಕರು ಪ್ರಶ್ನಿಸಿದರು. ಸೋಶಿಯಲ್ ಮೀಡಿಯಾದಲ್ಲಂತೂ ಮುಖ್ಯಮಂತ್ರಿಯನ್ನು ತೀವ್ರವಾಗಿಯೇ ತರಾಟೆಗೆ ಎತ್ತಿಕೊಳ್ಳಲಾಯಿತು. ಎಲ್ಲಿಯ ವರೆಗೆಂದರೆ, ನಾನು ಸಂತ್ರಸ್ತರ ಮನೆಗೆ ಭೇಟಿ ಕೊಡುವೆ ಎಂದವರು ಮಾಧ್ಯಮಗಳ ಮುಂದೆಯೇ ಹೇಳಿಕೊಂಡರು. ಅಂದಹಾಗೆ,

ಈ ಹೇಳಿಕೆಗೆ ಇದೀಗ ಒಂದು ತಿಂಗಳು ತುಂಬಿದೆ. ಆದರೆ ಈವರೆಗೆ ಅವರು ಮಸೂದ್ ಮತ್ತು ಫಾಝಿಲ್ ಮನೆಗೆ ಭೇಟಿ ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಭೇಟಿ ಕೊಡುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸಿದ್ದರು. ಫಾಝಿಲ್ ಮನೆ ಮಂಗಳೂರಿನಲ್ಲಿಯೇ ಇದೆ. ಮಸೂದ್ ಮನೆಗೆ ಮಂಗಳೂರಿನಿAದ 30 ಕಿಲೋಮೀಟರ್ ದೂರವಷ್ಟೇ ಇದೆ. ಮುಖ್ಯಮಂತ್ರಿಗಳು ನಿಜಕ್ಕೂ ರಾಜಧರ್ಮವನ್ನು ಪಾಲಿಸುತ್ತಿದ್ದಾರೆ ಎಂದಾದರೆ, ಈ ಸಂದರ್ಭವನ್ನು ಅವರು ಬಳಸಿಕೊಳ್ಳಲೇ ಬೇಕಿತ್ತು. ಸಂತ್ರಸ್ತರ ಮನೆಗೆ ತೆರಳಿ ಪರಿಹಾರವನ್ನು ಘೋಷಿಸಬೇಕಿತ್ತು. ಒಂದುವೇಳೆ, ಪರಿಹಾರ ಮತ್ತು ಭೇಟಿಯ ವಿಷಯದಲ್ಲಿ ಅವರಿಗೆ ತಕರಾರು ಇದೆ ಎಂದಾದರೆ, ಅದನ್ನಾದರೂ ಹೇಳಿಕೊಳ್ಳಬೇಕಿತ್ತು. ಇದು ಓರ್ವ ಮುಖ್ಯಮಂತ್ರಿಯ ಜವಾಬ್ದಾರಿ. ಮಸೂದ್, ಪ್ರವೀಣ್ ಮತ್ತು ಫಾಝಿಲ್ ಸಹಿತ 6 ಕೋಟಿ ಕನ್ನಡಿಗರನ್ನು ಏಕರೀತಿಯಲ್ಲಿ ಪೊರೆಯಬೇಕಾದ ಮುಖ್ಯಮಂತ್ರಿಯವರು, ಅದರಲ್ಲಿ ವಿಫಲರಾಗುತ್ತಾರೆಂದರೆ ಅದಕ್ಕೆ ಸ್ಪಷ್ಟೀಕರಣ ಕೊಡಬೇಕಾದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು. ಆದರೆ ಮುಖ್ಯಮಂತ್ರಿ ಬೊಮ್ಮಾಯಿಯವರು ಈ ಯಾವುದನ್ನೂ ಮಾಡಿಲ್ಲ. ಮಾತ್ರವಲ್ಲ, ಅವರು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡಕೊಂಡಿದ್ದಾರೆ ಎಂಬುದಕ್ಕೆ ‘ನಾನು ಸಂತ್ರಸ್ತರ ಮನೆಗೆ ಭೇಟಿ ಕೊಡುತ್ತೇನೆ…’ ಎಂಬ ಅವರ ಹೇಳಿಕೆಯೇ ಸಾಕ್ಷಿ. ತಾನು ನಡಕೊಂಡಿರುವುದು ರಾಜಧರ್ಮ ಅಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಹಾಗಿದ್ದರೆ, ಆತ್ಮಸಾಕ್ಷಿಯನ್ನು ಕೊಂದುಕೊAಡು ಅವರು ಅ ಧಿಕಾರದಲ್ಲಿರುವುದಾದರೂ ಯಾತಕ್ಕೆ? ಅಧಿಕಾರದ ಆಯುಷ್ಯ ಬಹಳ ಕಡಿಮೆ. ಮುಖ್ಯಮಂತ್ರಿಯಾಗಿ ರಾತ್ರಿ ಮಲಗಿದವರು ಬೆಳಿಗ್ಗೆ ಏಳುವಾಗ ಮಾಜಿಯಾದ ಇತಿಹಾಸವಿದೆ. ಆದರೆ ಮಾಜಿಯಾದ ಮುಖ್ಯಮಂತ್ರಿಯನ್ನು ಜನರು ಗೌರವಿಸಬೇಕಾದರೆ, ಹಾಲಿಯಾಗಿದ್ದಾಗ ಆತ್ಮಸಾಕ್ಷಿಯಂತೆ ನಡಕೊಂಡ ಇತಿಹಾಸವೂ ಇರಬೇಕು. ಅಂದಹಾಗೆ,

ಪ್ರಧಾನಿ ಮೋದಿಯವರು ಮಂಗಳೂರಿಗೆ ಆಗಮಿಸುವುದಕ್ಕಿಂತ ಮೊದಲು ಫಾಝಿಲ್ ಕುಟುಂಬ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಮುಖ್ಯಮಂತ್ರಿಗಳು ಅನ್ಯಾಯವಾಗಿ ನಡಕೊಂಡಿರುವುದರ ಬಗ್ಗೆ ಅಸಂತೋಷ ವ್ಯಕ್ತಪಡಿಸಿತ್ತು. ಮಾತ್ರವಲ್ಲ, ಈ ಬಗ್ಗೆ ಪ್ರಧಾನಿಯವರ ಗಮನ ಸೆಳೆಯುವುದಕ್ಕಾಗಿ ಭೇಟಿಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು ಜಿಲ್ಲಾಡಳಿತ ಪರಿಗಣಿಸಲಿಲ್ಲ. ಪ್ರಧಾನಿಯವರ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಶಾಸಕರೂ ಹಾಜರಿದ್ದರು. ಮಸೂದ್ ಮನೆಯನ್ನು ವಿಧಾನ ಸಭೆಯಲ್ಲಿ ಪ್ರತಿನಿಧಿಸುವ ಬಿಜೆಪಿ ಶಾಸಕರೂ ಸಚಿವರೂ ಆದ ಅಂಗಾರ ಹಾಗೂ ಫಾಝಿಲ್ ಕುಟುಂಬವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುವ ಬಿಜೆಪಿ ಶಾಸಕ ಭರತ್ ಶೆಟ್ಟಿಯವರೂ ಇದ್ದರು. ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಗೆದ್ದಿರುವುದೂ ಬಿಜೆಪಿ ಅಭ್ಯರ್ಥಿಗಳೇ. ಸಂಸದರೂ ಬಿಜೆಪಿಯವರೇ. ಒಂದುರೀತಿಯಲ್ಲಿ,

ಬಿಜೆಪಿ ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವುದಕ್ಕೆ ಈ ಜಿಲ್ಲೆಯ ಕೊಡುಗೆ ಬಹಳವೇ ಇದೆ. ಇಷ್ಟಿದ್ದೂ, ಈ ಜಿಲ್ಲೆಯ ನಾಗರಿಕರ ಜೊತೆ ಬಿಜೆಪಿ ಇಷ್ಟು ನಿರ್ಲಜ್ಜ ಅನ್ಯಾಯ ತೋರಿದ್ದು ಯಾಕೆ? ಅದಕ್ಕೆ ಯಾರ ಭಯ? ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಪರಿಹಾರ ಘೋಷಿಸುವುದರಿಂದ ಬಿಜೆಪಿಗೆ ಹಾನಿ ಇದೆಯೇ? ಇದ್ದರೆ ಯಾವ ರೀತಿಯ ಹಾನಿ? ಮುಖ್ಯಮಂತ್ರಿಗಳು ಆ ಎರಡು ಮನೆಗಳಿಗೆ ಭೇಟಿ ಕೊಡುವುದನ್ನು ಬಿಜೆಪಿ ಇಷ್ಟಪಡುವುದಿಲ್ಲವೇ? ಇಲ್ಲ ಎಂದಾದರೆ ಯಾಕೆ? ಮತದಾರರ ಭಯವೇ? ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕೊಡುವುದನ್ನು ಮತ್ತು ಪರಿಹಾರ ಘೋಷಿಸುವುದನ್ನು ಬೆಂಬಲಿಸುವ ಮತದಾರರು, ಮಸೂದ್ ಮತ್ತು ಫಾಝಿಲ್ ಮನೆಗೆ ಭೇಟಿ ಕೊಡುವುದನ್ನು ಬೆಂಬಲಿಸದೇ ಇರಲು ಕಾರಣ ಏನು? ಅವರು ಮುಸ್ಲಿಮರು ಎಂದೇ? ಅಲ್ಲ, ಎಂದಾದರೆ ಬೇರೆ ಕಾರಣ ಯಾವುದು? ಮುಖ್ಯಮಂತ್ರಿಗಳಾದರೂ ಹೇಳಬಹುದಲ್ಲ? ಬಿಜೆಪಿ ರಾಜ್ಯಾಧ್ಯಕ್ಷರಾದರೂ ಹೇಳಬಹುದಲ್ಲ? ಅಷ್ಟಕ್ಕೂ,

ಬಿಜೆಪಿಗೆ ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತ ಮೋರ್ಚಾ ಇದೆ. ಸಯ್ಯದ್ ಸಲಾಂ ಅದರ ಅಧ್ಯಕ್ಷರು. ಶಾಂತಕುಮಾರ್ ಕೆನಡಿ ಉಪಾಧ್ಯಕ್ಷರು. 17 ಮಂದಿ ಪದಾಧಿಕಾರಿಗಳ ಪೈಕಿ 14 ಮಂದಿಯೂ ಮುಸ್ಲಿಮರು. 27 ಮಂದಿ ಕಾರ್ಯಕಾರಿಣಿ ಸದಸ್ಯರ ಪೈಕಿ 20 ಮಂದಿಯೂ ಮುಸ್ಲಿಮರು. ಇದಲ್ಲದೇ ಜಿಲ್ಲಾ ಮಟ್ಟದಲ್ಲೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಇದೆ. ಅಲ್ಲದೆ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾ ಎಂಬ ವಿಭಾಗ ಇದ್ದು, ಜಲಾಲ್ ಸಿದ್ದೀಖಿ ಅದರ ಅಧ್ಯಕ್ಷರಾಗಿದ್ದಾರೆ. ಒಂದುವೇಳೆ, ಮುಸ್ಲಿಮ್ ಸಂತ್ರಸ್ತರಿಗೆ ಸಾಂತ್ವನ ಹೇಳುವುದು ಮತ್ತು ಅವರಿಗೆ ಪರಿಹಾರ ಘೋಷಿಸುವುದು ಬಿಜೆಪಿಯ ಮತದಾರರನ್ನು ಅಸಂತೋಷಗೊಳಿಸುತ್ತದೆ ಎಂದಾದರೆ, ಬಿಜೆಪಿಯ ಈ ಅಲ್ಪಸಂಖ್ಯಾತ ಮೋರ್ಚಾಗಳ ಬಗ್ಗೆ ಆ ಮತದಾರರ ನಿಲುವೇನು? ಇಂಥದ್ದೊಂದು ಮೋರ್ಚಾದ ಅಗತ್ಯ ಬಿಜೆಪಿಗೆ ಯಾಕಿದೆ ಎಂದವರು ಪ್ರಶ್ನಿಸುವು ದಿಲ್ಲವೇ? ಅಲ್ಪಸಂಖ್ಯಾತ ಮೋರ್ಚಾ ಎಂದು ಹೆಸರಿಟ್ಟು ಬರೇ ಮುಸ್ಲಿಮರನ್ನೇ ಅದರಲ್ಲಿ ತುಂಬಿಸುವುದು ಮತ್ತು ಅವರಿಗೆ ಅಧ್ಯಕ್ಷ ಸ್ಥಾ ನವನ್ನೂ ವಹಿಸಿ ಕೊಡುವುದು ಅವರಲ್ಲಿ ಅಸಂತೋಷ ತರಿಸುವುದಿಲ್ಲವೇ? ಈ ಮೋರ್ಚಾಗಳನ್ನು ಬರ್ಖಾಸ್ತು ಮಾಡದಿದ್ದರೆ ಮತ ಚಲಾಯಿಸಲ್ಲ ಎಂದವರು ಬೆದರಿಕೆ ಹಾಕುವುದಿಲ್ಲವೇ? ನಿಜವಾಗಿ,

ಮಸೂದ್ ಮತ್ತು ಫಾಝಿಲ್‌ಗೆ ಪರಿಹಾರ ಘೋಷಿಸದೇ ಇರುವುದಕ್ಕೂ ಬಿಜೆಪಿ ಮತದಾರರಿಗೂ ಸಂಬಂಧ ಇಲ್ಲ. ಬಿಜೆಪಿ ಮತದಾರರು ಎಲ್ಲೇ ಆಗಲಿ ಇಂಥದ್ದೊಂದು ಒತ್ತಾಯ ಮಾಡಿಲ್ಲ. ಪರಿಹಾರ ಘೋಷಿಸದಂತೆ ಮತ್ತು ಮುಖ್ಯಮಂತ್ರಿಗಳು ಭೇಟಿ ಕೊಡದಂತೆ ರ‍್ಯಾಲಿ ನಡೆಸಿಲ್ಲ. ಯಾಕೆಂದರೆ, ಬಿಜೆಪಿ ಮತದಾರರೆಂದರೆ, ಅನ್ಯಗೃಹದ ಜೀವಿಗಳಲ್ಲ. ಇದೇ ಮಣ್ಣಿನ ಮಕ್ಕಳು. ಅವರ ಅಕ್ಕಪಕ್ಕದಲ್ಲೇ ಮುಸ್ಲಿಮರು ಬದುಕುತ್ತಾ ಇದ್ದಾರೆ. ಸುಖ, ದುಃಖ, ಸಡಗರ, ಸಂಭ್ರಮ, ಕಣ್ಣೀರು, ನಗು.. ಎಲ್ಲವೂ ಇವರಲ್ಲಿ ಸಮಾನವಾಗಿವೆ. ದುಡಿದರೆ ಮಾತ್ರ ಇವರ ಮನೆಗಳಲ್ಲಿ ಅನ್ನ ಬೇಯುತ್ತೆ. ಶಾಲೆಗಳಲ್ಲಿ ಬಿಜೆಪಿ ಮತದಾರರಿಗೆ ಒಂದು, ಮುಸ್ಲಿಮರಿಗೆ ಒಂದು ಎಂಬ ಶುಲ್ಕ ನೀತಿ ಇಲ್ಲ. ಆಸ್ಪತ್ರೆಗಳಲ್ಲೂ ಅಷ್ಟೇ. ಅಂಗಡಿ, ಮೆಡಿಕಲ್‌ಗಳಲ್ಲೂ ಅಷ್ಟೇ. ಸುಖ, ದುಃಖಗಳಲ್ಲಿ ಇವರಿಬ್ಬರೂ ಪಕ್ಷಾತೀತವಾಗಿ ಮತ್ತು ಧರ್ಮಾತೀತವಾಗಿ ಸಮಾನರು. ಆದ್ದರಿಂದ ಮಸೂದ್‌ಗಾಗಲಿ ಫಾಝಿಲ್‌ಗಾಗಲಿ ಪರಿಹಾರ ಕೊಡಬೇಡಿ, ಆ ಮನೆಗೆ ಭೇಟಿ ಕೊಡಬೇಡಿ ಎಂದು ಅವರು ಆಗ್ರಹಿಸುವುದಕ್ಕೆ ಸಾಧ್ಯವೇ ಇಲ್ಲ. ನಿಜ ಏನೆಂದರೆ, ಇದು ಬಿಜೆಪಿಯ ರಾಜಕೀಯ ನೀತಿ. ಮತದಾರರದ್ದಲ್ಲ. ಆದರೆ ಬಿಜೆಪಿ ಈ ಅನ್ಯಾಯದ ನೀತಿಯನ್ನು ಬಹಳ ಜಾಣತನದಿಂದ ತನ್ನ ಮತದಾರರ ಬಯಕೆಯಾಗಿ ಬಿಂಬಿಸಲು ಮತ್ತು ಪರಿವರ್ತಿಸಲು ಯತ್ನಿಸುತ್ತಿದೆ. ಸಾಲು ಸಾಲು ಅಲ್ಪಸಂಖ್ಯಾತ ಮೋರ್ಚಾವನ್ನು ರಚಿಸಿ ಮುಸ್ಲಿಮರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಾಗ ಇಲ್ಲದ ಭಯ ಸಂತ್ರಸ್ತರಿಗೆ ಪರಿಹಾರ ಘೋಷಿಸುವಾಗ ಎದುರಾಗಿರುವುದಕ್ಕೆ ಕಾರಣ ಇದುವೇ. ಅದು ತನ್ನ ರಾಜಕೀಯ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕೆ ತನ್ನದೇ ಮತದಾರರನ್ನು ಮುಸ್ಲಿಮ್ ವಿರೋಧಿಗಳಂತೆ ಬಿಂಬಿಸುತ್ತಿದೆ.

ನಾವು ಪ್ರಶ್ನಿಸಬೇಕಾದದ್ದು ಬಿಜೆಪಿಯನ್ನು, ಅದರ ಮತದಾರರನ್ನಲ್ಲ.