ಇವಿಎಂಗಳು, ಮ್ಯಾಚ್ ಫಿಕ್ಸಿಂಗ್ ಇಲ್ಲದೆ ಬಿಜೆಪಿ 180 ಸೀಟು ದಾಟುವುದಿಲ್ಲ: ರಾಹುಲ್ ಗಾಂಧಿ

0
260

ಸನ್ಮಾರ್ಗ ವಾರ್ತೆ

ಬಿಜೆಪಿ 400 ಸ್ಥಾನ ಗೆಲ್ಲುವುದಾಗಿ ಎಲ್ಲ ಕಡೆ ಪ್ರಚಾರ ಮಾಡುತ್ತಿರುವ ಮರ್ಮದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನುಮಾನ ವ್ಯಕ್ತಪಡಿಸಿದ್ದಾರೆ.

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಅರವಿಂದ್‌ ಕೇಜ್ರಿವಾಲ್ ಬಂಧನದ ವಿರುದ್ಧ ಇಂಡಿಯಾ ಒಕ್ಕೂಟದಿಂದ ಹಮ್ಮಿಕೊಂಡಿರುವ ‘ಪ್ರಜಾಪ್ರಭುತ್ವ ಉಳಿಸಿ’ ರ್‍ಯಾಲಿಯಲ್ಲಿ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಇವಿಎಂಗಳು, ಮ್ಯಾಚ್‌ ಫಿಕ್ಸಿಂಗ್, ಸಾಮಾಜಿಕ ಮಾಧ್ಯಮ ಹಾಗೂ ಮಾಧ್ಯಮಗಳ ಮೇಲೆ ಒತ್ತಡವಿಲ್ಲದೆ ಬಿಜೆಪಿ 180ಕ್ಕೂ ಅಧಿಕ ಸ್ಥಾನ ಗೆಲ್ಲುವುದಿಲ್ಲ. ಪಕ್ಷದ 400 ಸ್ಥಾನಗಳ ಘೋಷವಾಕ್ಯವು ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೆ ಸಾಧ್ಯವಿಲ್ಲ. ಇವರು ತಮ್ಮ 400ರ ಸಂಖ್ಯೆಗಾಗಿ ಅಂಪೈರ್‌ ಬಳಿ ಹೋಗಿದ್ದಾರೆ” ಎಂದು ಹೇಳಿದರು.

“ ಈಗ ಐಪಿಎಲ್‌ ಪಂದ್ಯಗಳು ನಡೆಯುತ್ತಿವೆ. ಅಂಪೈರ್‌ಗಳು ಒತ್ತಡದಲ್ಲಿದ್ದರೆ, ಆಟಗಾರರು ಹಾಗೂ ನಾಯಕರ ಮೇಲೆ ಒತ್ತಡ ಹಾಕಿ ಪಂದ್ಯಗಳನ್ನು ಗೆಲ್ಲಿಸುತ್ತಾರೆ. ಇದನ್ನು ಕ್ರಿಕೆಟ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌” ಎಂದು ಕರೆಯಲಾಗುತ್ತದೆ. ನಾವು ಲೋಕಸಭಾ ಚುನಾವಣೆಗೆ ಹೋಗುವ ಮುಂಚೆ ಪ್ರಧಾನಿಯವರು ಅಂಪೈರ್‌ಗಳನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಮ್ಯಾಚ್‌ ಶುರುವಾಗುವುದಕ್ಕೂ ಮುಂಚೆ ನಮ್ಮ ತಂಡದ ಇಬ್ಬರು ನಾಯಕರನ್ನು ಬಂಧಿಸಲಾಗಿದೆ” ಎಂದು ರಾಹುಲ್ ಗಾಂಧಿ ತಿಳಿಸಿದರು.