ಐಸಿಸ್‌ಗೆ ಹಣಕಾಸು ನೆರವು ನೀಡಿದ ಆರೋಪ: ನಾಸಿಕ್ ಇಂಜಿನಿಯರ್‌ಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್

0
219

ಸನ್ಮಾರ್ಗ ವಾರ್ತೆ

ಮುಂಬೈ: ನಾಸಿಕ್‌ನ 34 ವರ್ಷದ ಇಂಜಿನಿಯರ್‌ಗೆ ಐಸಿಸ್ ಚಟುವಟಿಕೆಗಳೊಂದಿಗೆ ಸಂಬಂಧವಿರುವುದಕ್ಕೆ ಮೇಲ್ನೋಟಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಗಮನಿಸಿದ ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, 50,000 ರೂಪಾಯಿಗಳ ವರ್ಗಾವಣೆಯು ನಿಷೇಧಿತ ಸಂಘಟನೆಗೆ ನೀಡಿದ ಹಣಕಾಸಿನ ನೆರವು ಎಂಬ ಭಯೋತ್ಪಾದನಾ ವಿರೋಧಿ ದಳದ (ಎಟಿಎಸ್) ವಾದವನ್ನು ನ್ಯಾಯಾಲಯವು ಪ್ರಶ್ನಿಸಿದೆ.

ಹುಝೈಫ್ ಅಬ್ದುಲ್ ಅಝೀಝ್‌ ಶೇಖ್ ಅವರನ್ನು 2024 ರ ಜನವರಿಯಲ್ಲಿ ಎಟಿಎಸ್ ಬಂಧಿಸಿತ್ತು. ಐಸಿಸ್ ಜೊತೆಗೆ ಸಂಬಂಧ ಹೊಂದಿದ್ದಾರೆನ್ನಲಾದ ಸಹ-ಆರೋಪಿ ಉಮ್ ಒಸಾಮಾ ಅಲಿಯಾಸ್ ರಾಬಿಯಾ ಎಂಬಾಕೆಯೊಂದಿಗೆ ಶೇಖ್ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ಶೇಖ್ ಐಸಿಸ್ ಸಿದ್ಧಾಂತವನ್ನು ಉತ್ತೇಜಿಸಲು ಆನ್‌ಲೈನ್ ಸಭೆಗಳನ್ನು ಏರ್ಪಡಿಸಿದ್ದರು ಮತ್ತು ಹವಾಲಾ ಮೂಲಕ ಯುಎಇ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದರು ಎಂದು ಎಟಿಎಸ್ ತಿಳಿಸಿತ್ತು.

ಈ ಹಣವನ್ನು ಸಿರಿಯಾದಲ್ಲಿ ಐಸಿಸ್‌ಗೆ ಸಂಬಂಧಿಸಿದ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿರಬಹುದು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

ನ್ಯಾಯಮೂರ್ತಿಗಳಾದ ಅಜಯ್ ಎಸ್. ಗಡ್ಕರಿ ಮತ್ತು ಕಮಲ್ ಆರ್. ಖಾತಾ ಅವರಿದ್ದ ವಿಭಾಗೀಯ ಪೀಠವು ಮೇ 6 ರಂದು ನೀಡಿದ ಆದೇಶದಲ್ಲಿ, ರಾಬಿಯಾ ಐಸಿಸ್ ಜೊತೆಗೆ ಯಾವುದೇ ಸಂಪರ್ಕವನ್ನು ಹೊಂದಿದ್ದಾಳೆ ಎಂದು ಸೂಚಿಸುವ ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದೆ. ಹಣ ವರ್ಗಾವಣೆಯ ಬಗ್ಗೆ ಪ್ರಾಸಿಕ್ಯೂಷನ್ ನೀಡಿರುವ ವ್ಯಾಖ್ಯಾನವನ್ನು ನ್ಯಾಯಾಲಯವು “ಸಂಕುಚಿತ ದೃಷ್ಟಿಕೋನ” (myopic eyesight) ಎಂದು ಬಣ್ಣಿಸಿದೆ.

ಶೇಖ್ ಪರ ಹಾಜರಾದ ವಕೀಲ ಪಯೋಶಿ ರಾಯ್, ರಾಬಿಯಾ ತನ್ನ ಕುಟುಂಬದ ಸಂಪರ್ಕಗಳ ಮೂಲಕ ಆರ್ಥಿಕ ಸಹಾಯ ಕೋರಿದ ನಂತರ ಕುಟುಂಬದ ನಿರ್ವಹಣೆಗಾಗಿ ಹಣವನ್ನು ಕಳುಹಿಸಲಾಗಿದೆ ಎಂದು ವಾದಿಸಿದರು.

ಈ ಪ್ರಕರಣದಲ್ಲಿ ಮಂಡಿಸಲಾದ ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಿದ ಹೈಕೋರ್ಟ್, ಸಂಭಾಷಣೆಗಳು ಆರೋಪಿಗಳ ನಡುವಿನ ಸಾಮಾನ್ಯ ಸಂವಹನವನ್ನು ಪ್ರತಿಬಿಂಬಿಸುತ್ತವೆ ಎಂದು ಗಮನಿಸಿತು. ಶೇಖ್ ಅವರು ಭಾರತ ಅಥವಾ ಸಿರಿಯಾದಲ್ಲಿ ಐಸಿಸ್ ಕಾರ್ಯಸೂಚಿಯನ್ನು ಮುಂದುವರಿಸಿದ್ದಾರೆ ಎಂಬುದನ್ನು ತೋರಿಸುವ ಯಾವುದೇ ಆಕ್ಷೇಪಾರ್ಹ ಅಂಶಗಳು ಅಲ್ಲಿ ಕಂಡುಬಂದಿಲ್ಲ ಎಂದು ಪೀಠವು ಹೇಳಿದೆ.

ಆರೋಪಿತ ಅಪರಾಧಕ್ಕೂ ಶೇಖ್‌ಗೂ ಇರುವ ನೇರ ಸಂಬಂಧ ಮತ್ತು ನಿರ್ದಿಷ್ಟ ಕೃತ್ಯಗಳನ್ನು ಪ್ರಾಸಿಕ್ಯೂಷನ್ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಹೈಕೋರ್ಟ್ 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿಗಳ ಮೇಲೆ ಜಾಮೀನು ಮಂಜೂರು ಮಾಡಿದೆ. ತನಿಖೆಗೆ ಸಹಕರಿಸುವಂತೆ ಶೇಖ್‌ಗೆ ಸೂಚಿಸಿದ ನ್ಯಾಯಾಲಯವು, ನಾಸಿಕ್ ವಿಶೇಷ ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೋಗದಂತೆ ಅವರಿಗೆ ನಿರ್ಬಂಧ ವಿಧಿಸಿದೆ.