800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ: ಸರ್ಕಾರದ ಧನಾತ್ಮಕ ಸ್ಪಂದನೆಗೆ ಸೋಲಿಡಾರಿಟಿ ಸ್ವಾಗತ

0
256

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಷಾ ಅಲ್ಪಸಂಖ್ಯಾತ ಮಾಧ್ಯಮಕ್ಕೂ ಸಮಾನ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಇತರ ಸಂಘ ಸಂಸ್ಥೆಗಳ ಜೊತೆಗೂಡಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ನಡೆಸಿಕೊಂಡು ಬಂದ ನಿರಂತರ ಹೋರಾಟಕ್ಕೆ ಸರ್ಕಾರದಿಂದ ಧನಾತ್ಮಕ ಸ್ಪಂದನೆ ದೊರೆತಿರುವುದನ್ನು ಸ್ವಾಗತಿಸಿದೆ.

2026ರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು, ಮರಾಠಿ ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ಸಮರ್ಪಕ ಅವಕಾಶ ಕಲ್ಪಿಸಲಾಗಿಲ್ಲ ಎಂಬ ವಿಚಾರವನ್ನು ಆರಂಭದಿಂದಲೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಸರ್ಕಾರದ ಗಮನಕ್ಕೆ ತರುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಸರ್ಕಾರದ ಹಿರಿಯ ಅಧಿಕಾರಿಗಳು, ಸಚಿವರು, ವಿಧಾನಮಂಡಲದ ಸದಸ್ಯರು ಹಾಗೂ ವಿವಿಧ ಆಯೋಗಗಳಿಗೆ ಮನವಿಗಳನ್ನು ಸಲ್ಲಿಸಿ ನಿರಂತರವಾಗಿ ಒತ್ತಾಯಿಸಲಾಗಿತ್ತು.

ಕರಡು ಅಧಿಸೂಚನೆಯಿಂದ ಹೋರಾಟಕ್ಕೆ ಚಾಲನೆ

ಜೂನ್ 29ರಂದು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಕರಡು ಅಧಿಸೂಚನೆ ಪ್ರಕಟವಾದ ಬಳಿಕ, ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು ಎಂಬ ಕಡ್ಡಾಯ ಷರತ್ತಿನ ಕುರಿತು ಸೋಲಿಡಾರಿಟಿ ಆಕ್ಷೇಪಣೆ ವ್ಯಕ್ತಪಡಿಸಿತು.

ಜುಲೈ 3ರಂದು ಶಿಕ್ಷಣ ಇಲಾಖೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲಾಯಿತು. ಜುಲೈ 21ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ಭೇಟಿ ಮಾಡಿ ಕರಡು ನಿಯಮಗಳ ಕುರಿತು ವಿವರವಾದ ಮನವಿ ಸಲ್ಲಿಸಲಾಯಿತು. ಜುಲೈ 30ರಂದು ಗ್ರೇಡ್–1 ಮತ್ತು ಗ್ರೇಡ್–2 ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಬೋಧನಾ ಮಾಧ್ಯಮದ ಅರ್ಹತೆಯನ್ನು ಸ್ಪಷ್ಟಪಡಿಸುವಂತೆಯೂ ಒತ್ತಾಯಿಸಲಾಯಿತು.

ಆಗಸ್ಟ್ 10ರ ಅಧಿಸೂಚನೆಯ ಬಳಿಕ ಹೋರಾಟ ತೀವ್ರ

ಆಗಸ್ಟ್ 10ರಂದು ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಟವಾದ ನಂತರ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ ಮಾತ್ರ ಹೆಚ್ಚಿನ ಅವಕಾಶ ಕಲ್ಪಿಸಲಾಗಿದ್ದು, ಉರ್ದು, ಮರಾಠಿ ಸೇರಿದಂತೆ ಭಾಷೆಗೆ ಸಮರ್ಪಕ ಅವಕಾಶವಿಲ್ಲ ಎಂಬುದು ಮತ್ತಷ್ಟು ಸ್ಪಷ್ಟವಾಯಿತು.

ಇದರ ಜೊತೆಗೆ ಐದು ವರ್ಷಗಳ ವಿಶೇಷ ವಯೋಮಿತಿ ಸಡಿಲಿಕೆ ಇಲ್ಲದಿರುವುದು ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಗಣಿತ ಶಿಕ್ಷಕರ ಹುದ್ದೆಗಳನ್ನು ನೇಮಕಾತಿಗೆ ಒಳಪಡಿಸದಿರುವುದರ ಬಗ್ಗೆಯೂ ಸೋಲಿಡಾರಿಟಿ ಪ್ರಶ್ನೆ ಎತ್ತಿತು.

ಆಗಸ್ಟ್ 12ರಂದು ಶಿಕ್ಷಣ ಇಲಾಖೆಗೆ ತಿದ್ದುಪಡಿ ಮತ್ತು ಮರುಅಧಿಸೂಚನೆ ಹೊರಡಿಸುವಂತೆ ಮನವಿ ಸಲ್ಲಿಸಲಾಯಿತು. ಅದೇ ದಿನ ಸಚಿವರಾದ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.

ಆಗಸ್ಟ್ 13ರಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರಿಗೆ ಮನವಿ ಸಲ್ಲಿಸಿ, ಶಿಕ್ಷಣ ಸಚಿವರ ಗಮನಕ್ಕೆ ವಿಷಯವನ್ನು ತಂದು ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಅವಕಾಶ, ಐದು ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ಸರ್ಕಾರಿ ಪ್ರೌಢಶಾಲೆಗಳ ಖಾಲಿ ಗಣಿತ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೂ ಮನವಿ ಸಲ್ಲಿಸಲಾಯಿತು.

ಆಗಸ್ಟ್ 14ರಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಮಾನವ ಹಕ್ಕುಗಳ ಆಯೋಗ ಹಾಗೂ ಕರ್ನಾಟಕ ಉರ್ದು ಅಕಾಡೆಮಿಗೂ ಮನವಿ ಸಲ್ಲಿಸಲಾಯಿತು. ಸೋಲಿಡಾರಿಟಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಅಲ್ಪಸಂಖ್ಯಾತರ ಆಯೋಗವು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು ಹೋರಾಟಕ್ಕೆ ಮತ್ತಷ್ಟು ಬಲ ನೀಡಿತು.

ಅಭ್ಯರ್ಥಿಗಳ ಹೋರಾಟಕ್ಕೆ ನೇರ ಬೆಂಬಲ

ಆಗಸ್ಟ್ 16 ಮತ್ತು 17ರಂದು ವಿವಿಧ ಮಾಧ್ಯಮಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿನ ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳ ಸಮಸ್ಯೆಗಳು ವ್ಯಾಪಕವಾಗಿ ಚರ್ಚೆಗೆ ಬಂದವು. ವಾರ್ತಾಭಾರತಿಯಲ್ಲಿ ವಿಶೇಷ ವರದಿ ಪ್ರಕಟವಾಗುವುದರ ಜೊತೆಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಯೂಟ್ಯೂಬ್ ಚಾನೆಲ್‌ನಲ್ಲಿ ಶಿಕ್ಷಕ ಅಭ್ಯರ್ಥಿ ಮುರ್ತಝಾ ಇಳಕಲ್ ಅವರೊಂದಿಗೆ ವಿಶೇಷ ಚರ್ಚೆ ನಡೆಯಿತು.

ಆಗಸ್ಟ್ 18ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿನ ಕೆಎಂಡಿಸಿ ಭವನಕ್ಕೆ ಆಗಮಿಸಿದ್ದ ಶಿಕ್ಷಕ ಅಭ್ಯರ್ಥಿಗಳ ಹೋರಾಟಕ್ಕೆ ಸೋಲಿಡಾರಿಟಿ ನೇರವಾಗಿ ಸಾಥ್ ನೀಡಿತು. ಅಭ್ಯರ್ಥಿಗಳ ಜಂಟಿ ಕ್ರಿಯಾ ಸಮಿತಿ ರಚನೆಗೆ ನೆರವು ನೀಡುವುದರ ಜೊತೆಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿಗಳ ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಅಭ್ಯರ್ಥಿಗಳಿಗೆ ರಾತ್ರಿ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲು ಸಹ ಸೋಲಿಡಾರಿಟಿ ತಂಡ ನೆರವಾಯಿತು.

ಆಗಸ್ಟ್ 19ರಂದು ಸಚಿವ ರಿಝ್ವಾನ್ ಅರ್ಷದ್ ಅವರನ್ನು ಅಭ್ಯರ್ಥಿಗಳ ನಿಯೋಗದೊಂದಿಗೆ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಲಾಯಿತು. ಬಳಿಕ ವಿಧಾನಸೌಧಕ್ಕೆ ತೆರಳಿ ಸಚಿವ ಯು.ಟಿ. ಖಾದರ್ ಸೇರಿದಂತೆ ಹಲವು ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಉರ್ದು ಶಿಕ್ಷಕರ ನೇಮಕಾತಿ ಹಾಗೂ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳ ಬಗ್ಗೆಯೂ ಸಭೆ ನಡೆಸಲಾಯಿತು.

ಆಗಸ್ಟ್ 20ರಂದು ಜಂಟಿ ಕ್ರಿಯಾ ಸಮಿತಿಯೊಂದಿಗೆ ವಿಧಾನಸೌಧಕ್ಕೆ ತೆರಳಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

800 ಉರ್ದು, 200 ಮರಾಠಿ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ

ಈ ನಿರಂತರ ಪ್ರಯತ್ನಗಳ ಫಲವಾಗಿ ಆಗಸ್ಟ್ 21ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿರುವುದು ಭಾಷಾ ಅಲ್ಪಸಂಖ್ಯಾತ ಶಿಕ್ಷಕ ಅಭ್ಯರ್ಥಿಗಳ ಹೋರಾಟಕ್ಕೆ ಮಹತ್ವದ ಮುನ್ನಡೆಯಾಗಿದೆ.

ಸರ್ಕಾರದ ಈ ನಿರ್ಧಾರವನ್ನು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಸ್ವಾಗತಿಸುತ್ತದೆ. ಆರ್ಥಿಕ ಇಲಾಖೆಯ ವರದಿ ಹಾಗೂ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬರಲಿದೆ ಎಂಬ ನಿರೀಕ್ಷೆ ಇದೆ.

“ಇದು ಅಂತ್ಯವಲ್ಲ, ಹೋರಾಟದ ಮುಂದಿನ ಹಂತಕ್ಕೆ ಆರಂಭ”

ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುವುದರ ಜೊತೆಗೆ, ಅನುಮೋದನೆ ಪಡೆದ 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ಹುದ್ದೆಗಳಿಗೆ ಶೀಘ್ರ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹಿಸುತ್ತದೆ.

ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದು ಅವರ ಶಿಕ್ಷಣದ ಹಕ್ಕಿನ ಭಾಗವಾಗಿದೆ. ಆದ್ದರಿಂದ ಉರ್ದು, ಮರಾಠಿ ಸೇರಿದಂತೆ ಎಲ್ಲಾ ಭಾಷಾ ಮಾಧ್ಯಮಗಳ ಶಿಕ್ಷಕರ ಹುದ್ದೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಗುರುತಿಸಿ ಭರ್ತಿ ಮಾಡಬೇಕು. ಜೊತೆಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ, ಗಣಿತ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಇತರ ಬಾಕಿ ಬೇಡಿಕೆಗಳಿಗೂ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಂ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.