ಹಜ್ಜ್, ಉಮ್ರ ನಿರ್ವಹಿಸುವ ಬದಲು ಆ ಹಣವನ್ನು ಫೆಲೆಸ್ತೀನಿಯರಿಗೆ ನೀಡಬಹುದೇ?

0
693

ಸನ್ಮಾರ್ಗ ವಾರ್ತೆ

✍️ ಡಾ. ಮಸ್ಹೂದ್ ಸ್ವಬರಿ

ಪ್ರಸಕ್ತ ಪರಿಸ್ಥಿತಿಯಲ್ಲಿ ಹಜ್ಜ್ ಉಮ್ರ ನಿರ್ವಹಿಸುವುದಕ್ಕಿಂತ ಆ ಹಣವನ್ನು ಫೆಲೆಸ್ತೀನಿಯರ ನೆರವಿಗೆ ನೀಡುವುದು ಶರಇಯ್ಯಾದ ಕರ್ತವ್ಯವಾಗಿದೆ ಎಂಬ ಅಭಿಪ್ರಾಯಗಳು ಈಗ ಕೇಳಿ ಬರುತ್ತಿವೆ. ಸರಿಯಾದ ಫಿಕ್‌ಹಿ ಕರ್ಮಶಾಸ್ತ್ರಗಳ ಬಗ್ಗೆ ಅರಿಯುವುದರ ಬದಲು ಆವೇಶದಿಂದ ಭಾವನಾತ್ಮಕವಾಗಿ ಮುನ್ನುಗ್ಗುವುದು ಇಂತಹ ಪ್ರತಿಕ್ರಿಯೆಗಳು ಬರಲು ಕಾರಣವಾಗಿದೆ. ವಾಸ್ತವದಲ್ಲಿ ಈ ವಾದದಲ್ಲಿ ಹುರುಳಿಲ್ಲ.

ಹಜ್ಜ್ ಮತ್ತು ಉಮ್ರ ಮುಂತಾದ ಆರಾಧನಾ ಕರ್ಮಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವ ಯೋಧರ ಖರ್ಚು ವೆಚ್ಚ ಭರಿಸುವುದರ ಕುರಿತು ಅಧ್ಯಯನ ನಡೆಸಿದಾಗ ಈ ವಿಚಾರ ಅರ್ಥೈಸಬಹುದು.

1.ಹಜ್ಜ್ ಎಂಬುದು ಕಡ್ಡಾಯ ಕರ್ತವ್ಯವಾಗಿದೆ. ಪ್ರತೀ ಮುಸ್ಲಿಮನಿಗೂ ವೈಯಕ್ತಿಕವಾಗಿ ನಿರ್ವಹಿಸುವುದು (ಫರ್ಝ್ ಐನ್) ಕಡ್ಡಾಯವಾಗಿದೆ. ಸಾಮೂಹಿಕವಾಗಿ ಮುಸ್ಲಿಮ್ ಸಮುದಾಯಕ್ಕೆ ಫರ್ಝ್ ಕಿಫಾಯ ಆಗಿದೆ. ವೈಯಕ್ತಿಕ ಕರ್ತವ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕಾಗಿದೆ.

2.ಹಜ್ಜ್ ಇಸ್ಲಾಮಿನ ಪಂಚ ಸ್ಥಂಭಗಳಲ್ಲಿ ಒಂದಾಗಿದೆ. ಜಿಹಾದ್ ಇಸ್ಲಾಮಿನ ಅತ್ಯಂತ ಉನ್ನತ ಕಾರ್ಯವಾದರೂ ಇಸ್ಲಾಮಿನ ಪಂಚಸ್ಥಂಭಗಳಲ್ಲಿ ಸೇರುವುದಿಲ್ಲ.

ಒಟ್ಟಿನಲ್ಲಿ ಈ ವಾದಗಳಿಗೆ ಸಂಬಂಧಿಸಿ ಕೆಲವು ಎರಡು ವಿಚಾರಗಳನ್ನು ಮಾತ್ರ ಮೇಲೆ ಸೂಚಿಸಲಾಗಿದೆ. ಆದರೆ ಈ ಚರ್ಚೆಯ ತಳಹದಿ ಹಜ್ಜ್ ನಿರ್ವಹಿಸುವ ಆದೇಶದತ್ತ ಸಾಗುತ್ತದೆ. ಹಜ್ಜ್ ಈಗಲೇ ನಿರ್ವಹಿಸಬೇಕೇ ಸ್ವಲ್ಪ ಅದನ್ನು ಮುಂದೂಡಿ ಮತ್ತೆ ನಿರ್ವಹಿಸಿದರೆ ಸಾಕೇ? ಎಂಬುದು ಆ ಚರ್ಚೆಯ ಮುಖ್ಯಾಂಶ. ಕರ್ಮಶಾಸ್ತ್ರದ ವಿದ್ವಾಂಸರು ಈ ಬಗ್ಗೆ ಪ್ರಮುಖವಾದ ಎರಡು ಅಭಿಪ್ರಾಯಗಳನ್ನು ಸೂಚಿಸುತ್ತಾರೆ.

1.ಹಜ್ಜ್ ಆದಷ್ಟು ಬೇಗ ಮಾಡುವ ಆರಾಧನೆಯಾಗಿದೆ. ಓರ್ವನಿಗೆ ಹಜ್ಜ್ ನಿರ್ವಹಿಸುವ ಶಕ್ತಿಯಿದ್ದರೆ ಅವನು ಕೂಡಲೇ ನಿರ್ವಹಿಸಬೇಕು. ಅದನ್ನು ಮುಂದೂಡಿದರೆ ಆತ ತಪ್ಪಿತಸ್ಥನಾಗುತ್ತಾನೆ. ಹೆಚ್ಚಿನ ಕರ್ಮಶಾಸ್ತ್ರ ವಿದ್ವಾಂಸರ ಅಭಿಪ್ರಾಯ ಇದೇ ಅಗಿದೆ. ಭವಿಷ್ಯದಲ್ಲಿ ರೋಗ, ದಾರಿದ್ರ್ಯತೆ ಮುಂತಾದವುಗಳು ಬಂದು ಹಜ್ಜ್ ನಿರ್ವಹಿಸಲು ಕಷ್ಟವಾಗಬಹುದು ಎಂಬ ಭಯದಲ್ಲಿ ತಕ್ಷಣ ನಿರ್ವಹಿಸುವುದು ಉತ್ತಮ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.

2. ಓರ್ವನಿಗೆ ಹಜ್ಜ್ ನಿರ್ವಹಿಸುವ ಶಕ್ತಿ ಸಾಮರ್ಥ್ಯವಿದ್ದರೆ ತಕ್ಷಣ ಹಜ್ಜ್ ನಿರ್ವಹಿಸಬೇಕೆಂಬುದು ಕಡ್ಡಾಯವಲ್ಲ. ಮುಂದೂಡಿ ನಂತರ ನಿರ್ವಹಿಸಿದರೂ ಆಗುತ್ತದೆ. ಇದು ಇಮಾಮ್ ಶಾಫೀ(ರ), ಇಮಾಮ್ ಮುಹಮ್ಮದ್ ಬಿನ್ ಹಸನ್(ರ)ರವರ ಅಭಿಪ್ರಾಯವಾಗಿದೆ. ಭವಿಷ್ಯದಲ್ಲಿ ಹಜ್ಜ್ ನಿರ್ವಹಿಸುವೆನೆಂಬ ದೃಢ ನಿರ್ಧಾರ ತಾಳಿ ಅದನ್ನು ಮುಂದೂಡಿ ಅದರ ನಿರೀಕ್ಷೆಯಲ್ಲಿರುವನು ತಪ್ಪಿತಸ್ಥನಾಗಲಾರನು. ಅದೇ ವೇಳೆ ರೋಗ, ಬಡತನದ ಕಾರಣದಿಂದ ಹಜ್ಜ್ ನಿರ್ವಹಿಸಲಾಗದೇ ಇರುವ ಸಾಧ್ಯತೆ ಇದೆ ಎಂಬ ಭಯ ಇದ್ದರೆ ಸಾಮರ್ಥ್ಯವಿದ್ದೂ ಹಜ್ಜ್ ನಿರ್ವಹಿಸಲಿಲ್ಲ ಎಂದಾದರೆ ಆತ ತಪ್ಪಿತಸ್ಥನಾಗುವನು.

ಇಮಾಮ್ ಶಾಫೀ(ರ) ಮತ್ತು ಅವರ ಅನುಯಾಯಿಗಳು ಎರಡು ಪುರಾವೆಗಳ ಆಧಾರದಲ್ಲಿ ಹೀಗೆ ಹೇಳಿದ್ದಾರೆ. “ಈ ಭವನದವರೆಗೆ ತಲುಪಲು ಸಾದನಾನುಕೂಲತೆಗಳು ಇರುವವನು ಅದರ ಹಜ್ಜ್ ಯಾತ್ರೆ ಕೈಗೊಳ್ಳಬೇಕೆಂಬುದು ಜನರ ಮೆಲೆ ಅಲ್ಲಾಹನ ಹಕ್ಕಾಗಿದೆ.” (ಆಲೆ ಇಮ್ರಾನ್: 97) ಆ ಪ್ರಕಾರವೇ ಪ್ರವಾದಿವರ್ಯರು(ಸ) ಹಿಜಿರಾ ಹತ್ತನೇ ವರ್ಷ ಅಂದರೆ ಮಕ್ಕಾ ಫತಹ್ ಬಳಿಕ ಹಜ್ಜ್ ನಿರ್ವಹಿಸಿದರು. ಅದು ತಕ್ಷಣ ಮಾಡುವ ಪುಣ್ಯ ಕರ್ಮವಾಗಿದ್ದಿದ್ದರೆ ಪ್ರವಾದಿವರ್ಯರು(ಸ) ಅಷ್ಟು ತಡ ಮಾಡುತ್ತಿರಲಿಲ್ಲ.

1.ಎರಡನೇ ಹಜ್ಜ್ ಅಥವಾ ಉಮ್ರ ಮಾಡಬಯಸುವವರು ಅಲ್ಲಾಹನ ಮಾರ್ಗದ ಧರ್ಮಯುದ್ಧ (ಜಿಹಾದ್)ಕ್ಕಾಗಿ ವಿನಿಯೋಗಿಸುವುದು ಅತ್ಯುತ್ತಮ. ಅದೇ ವೇಳೆ ಧರ್ಮ ಯುದ್ದಕ್ಕಾಗಿ ವ್ಯಯಿಸದೆ ಪುನಃ ಸುನ್ನತ್ತಾದ ಹಜ್ಜ್ ಅಥವಾ ಉಮ್ರಾ ನಿರ್ವಹಿಸಿದರೂ ಅವರು ತಪ್ಪಿತಸ್ಥರಾಗಲಾರರು.

2. ಮೊದಲು ಹಜ್ಜ್ ಮತ್ತು ಉಮ್ರ
ನಿರ್ವಹಿಸುವವರ ಕುರಿತು ಹೇಳುವುದಾದರೆ ಹೆಚ್ಚಿನ ಸಂಖ್ಯೆಯ ವಿದ್ವಾಂಸರು ಅವರಿಗೆ ಕಡ್ಡಾಯಗೊಳಿಸಿದ ಹಜ್ಜ್ ನಿರ್ವಹಿಸಿಲ್ಲ ಎಂದಾದರೆ ಅವರು ತಪ್ಪಿತಸ್ಥರಾಗುವರು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಇಮಾಮ್ ಶಾಫೀ(ರ) ಮತ್ತು ಅವರ ಶಿಷ್ಯಂದಿರ ಅಭಿಪ್ರಾಯವು ಭವಿಷ್ಯದಲ್ಲಿ ಅವರಿಗೆ ಹಜ್ಜ್ ನಿರ್ವಹಿಸುವ ಸಾಮರ್ಥ್ಯ ಉಂಟಾದರೆ ಅವರು ಅದನ್ನು ಅಲ್ಲಾಹನ ಮಾರ್ಗದಲ್ಲಿ ವ್ಯಯಿಸಲಿ ಎಂದಾಗಿದೆ. ಉಮ್ರ ಕಡ್ಡಾಯ ಎಂದು ಹೇಳುವವರ ವಿಚಾರದಲ್ಲಿಯೂ ಇದೇ ಅಭಿಪ್ರಾಯವಾಗಿದೆ. ಭವಿಷ್ಯದಲ್ಲಿ ಕಡ್ಡಾಯವಾದ ಉಮ್ರ ನಿರ್ವಹಿಸಲು ಸಾಧ್ಯವೆಂದು ನಿರೀಕ್ಷಿಸುವುದಾದರೆ ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಹಣವನ್ನು ವ್ಯಯಿಸಬಹುದು. ಆದರೆ ಉಮ್ರ ನಿರ್ವಹಣೆ ಸುನ್ನತ್ ಎಂದು ಅಭಿಪ್ರಾಯ ವ್ಯಕ್ತಪಡಿಸುವವರ ಪ್ರಕಾರ ಅಲ್ಲಿ ಅತ್ಯುತ್ತಮವಾದುದು ಜಿಹಾದ್‌ಗಾಗಿ ಹಣ ವ್ಯಯಿಸುವುದಾಗಿದೆ.

ಏನೇ ಆದರೂ ಹಜ್ಜ್ ಮತ್ತು ಉಮ್ರವನ್ನು ಮುಸ್ಲಿಮರು ಪೂರ್ಣವಾಗಿ ತೊರೆಯುವುದು ಹರಾಮ್ ಆಗಿದೆ. ಪ್ರತೀ ವರ್ಷ ಅದು ನಿರ್ವಹಿಸಲೇಬೇಕು. ಯಾಕೆಂದರೆ ಅದು ಇಸ್ಲಾಮಿನ ಲಾಂಛನವಾಗಿದೆ.

“ಅಲ್ಲಾಹನು ನಿಶ್ಚಯಿಸಿದ ಲಾಂಛನಗಳನ್ನು ಗೌರವಿಸಿದರೆ ಇದು ಹೃದಯಗಳ ಭಕ್ತಿಯಿಂದಾಗಿದೆ.” (ಅಲ್ಹಜ್ಜ್: 32)