ಫೆಲೆಸ್ತೀನನ್ನು ಹರಿವಾಣದಲ್ಲಿಟ್ಟು ಇಸ್ರೇಲ್‌ಗೆ ಕೊಡುತ್ತಿರುವ ಅಬ್ಬಾಸ್

0
564

ಸನ್ಮಾರ್ಗ ವಾರ್ತೆ

✍️ ಪಿ.ಕೆ. ನಿಯಾಝ್

ಗಾಝಾವನ್ನು ಸಂಪೂರ್ಣವಾಗಿ ವಶಪಡಿಸಿದರೆ ಹಮಾಸನ್ನು ಹೊರಹಾಕಿ ಅಲ್ಲಿನ ಆಡಳಿತವನ್ನು ಇಸ್ರೇಲ್ ನಿರ್ವಹಿಸುತ್ತದೆ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಗಾಝಾಕ್ಕೆ ಹಿಂತಿರುಗಲು ಹಮಾಸ್‌ಗೆ ಅವಕಾಶ ನೀಡುವುದಿಲ್ಲ ಮತ್ತು ಆಡಳಿತವನ್ನು ಫೆಲೆಸ್ತೀನ್ ಅಥಾರಿಟಿ(ಪಿಎ)ಗೆ ಹಸ್ತಾಂತರಿಸಲಾಗುವುದೆಂದು ಅಮೇರಿಕವು ಸ್ಪಷ್ಟ ಪಡಿಸಿದೆ. ಗಾಝಾದ ಭಾವೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಫೆಲೆಸ್ತೀನ್ ಪ್ರಾಧಿಕಾರವು ಆಸಕ್ತಿ ಹೊಂದಿದೆ ಎಂದು ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರು ತನ್ನ ನಿಲುವನ್ನು ಸ್ಪಷ್ಟಪಡಿಸುವುದರೊಂದಿಗೆ ‘ಹಮಾಸ್‌ನ ನಂತರದ ಗಾಝಾ’ದ ಕುರಿತು ಚರ್ಚೆಗಳಿಗೆ ಗರಿಗೆದರಿದೆ.

ಅಬ್ಬಾಸ್ ನೇತೃತ್ವದ ಫತಹ್ ಪಕ್ಷದ ಮಾಜಿ ನಾಯಕ ಹಾಗೂ ಗಾಝಾದ ಭದ್ರತಾ ಮುಖ್ಯಸ್ಥರಾಗಿದ್ದ ಮಹಮ್ಮದ್ ಯೂಸುಫ್ ದಹ್ಲಾ ನ್‌ರ ನೇತೃತ್ವದಲ್ಲಿ ಗಾಝಾವನ್ನು ಪುನಃ ವಶಪಡಿಸಲು ಇಸ್ರೇಲ್ ಮತ್ತು ಅಮೇರಿಕ ಬಯಸುತ್ತಿದೆ ಎಂದು ವಾರ್ತೆಗಳಿವೆ. ಅಮೇರಿಕ ಅದನ್ನು ಬಹಿರಂಗಪಡಿಸುತ್ತಿಲ್ಲ. ಅಬ್ಬಾಸ್‌ರೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಬೇರೆಡೆ ವಾಸಿಸುತ್ತಿರುವ ದಹ್ಲಾನ್, ಇಸ್ರೇಲ್‌ನೊಂದಿಗೆ ರಹಸ್ಯ ವ್ಯವಹಾರಗಳನ್ನು ನಡೆಸುತ್ತಿದ್ದಾರೆಂದು ಮೊದಲೇ ಆರೋಪಗಳಿವೆ.

2007ರಲ್ಲಿ ಗಾಝಾದಲ್ಲಿ ಆಂತರಿಕ ಕಲಹಕ್ಕೆ ನೇತೃತ್ವ ನೀಡಿದ ಮತ್ತು ತುರ್ಕಿಯಲ್ಲಿ ರಜಬ್ ತ್ವಯ್ಯಬ್ ಉರ್ದುಗಾನ್‌ರ ವಿರುದ್ಧ 2016ರ ದಂಗೆಯ ಹಿಂದೆಯೂ ದಹ್ಲಾನ್‌ರ ಕೈಗಳಿತ್ತು ಎಂಬುದು ರಹಸ್ಯ ವಿಚಾರವಲ್ಲ.

ಪಿ.ಎ. ಎಂಬ ಇಸ್ರೇಲಿ ಗೊಂಬೆ
ಅಕ್ಟೋಬರ್‌ನಲ್ಲಿ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರೊಂದಿಗಿನ ಸಭೆಯಲ್ಲಿ ಹಮಾಸ್‌ನ ರೀತಿ-ನೀತಿಗಳು, ಕ್ರಮಗಳು ಫೆಲೆಸ್ತೀನಿಯನ್ ಜನರನ್ನು ಪ್ರತಿನಿಧಿಸುವುದಿಲ್ಲ ಮತ್ತು ಪಿ.ಎಲ್.ಓ.ಗೆ ಮಾತ್ರ ಫೆಲೆಸ್ತೀನಿಯರನ್ನು ಪ್ರತಿನಿಧಿಸುವ ಕಾನೂನಾತ್ಮಕ ಅಧಿಕಾರವಿದೆಯೆಂದು ಅಬ್ಬಾಸ್ ಹೇಳಿದ್ದರು. ಆದರೆ ಹೇಳಿಕೆಯಲ್ಲಿನ ತಪ್ಪು ಮತ್ತು ಅಪಾಯವನ್ನು ಮನಗಂಡು ಹಮಾಸ್‌ನ ಹೆಸರನ್ನು ಕೈಬಿಟ್ಟು ತನ್ನ ಹೇಳಿಕೆಯನ್ನು ತಿದ್ದಿದರು.

ಆದರೆ ಈ ಸಂದರ್ಭದಲ್ಲಿ ಕಳೆದ 14 ವರ್ಷಗಳಿಂದ ತಾನು ಅಕ್ರಮವಾಗಿ ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷನಾಗಿ ಮುಂದುವರಿಯುತ್ತಿದ್ದೇನೆಂಬುದು ಅಬ್ಬಾಸ್‌ರಿಗೆ ಮರೆತು ಹೋಯಿತು. ಈಗ 87 ವರ್ಷ ದಾಟಿರುವ ಅಬ್ಬಾಸ್ 2005 ಜನವರಿ 9ರಂದು ಫೆಲೆಸ್ತೀನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2009 ಜನವರಿ 15ಕ್ಕೆ ತಮ್ಮ ಅವಧಿ ಮುಗಿದರೂ 2010ರಲ್ಲಿ ಚುನಾವಣೆ ನಡೆಸೋಣ ಎಂಬ ಶರತ್ತಿನ ಮೇಲೆ ಅವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಯಿತು. ಆದರೆ ಕುಂಟು ನೆಪ ಹೇಳಿ ಚುನಾವಣೆ ನಡೆಸದೇ ಎಲ್ಲ ಸೌಕರ್ಯಗಳನ್ನು ಅನುಭವಿಸುತ್ತಾ ಈಗಲೂ ಅಧ್ಯಕ್ಷ ಗಾದಿಗೆ ಅಂಟಿಕೊಂಡಿದ್ದಾರೆ.

ಹಮಾಸ್‌ನ ನಾಶವನ್ನು ನೋಡಬಯಸುವ ಪಾಶ್ಚಿಮಾತ್ಯ ಶಕ್ತಿಗಳು ಪ್ರಜಾಪ್ರಭುತ್ವದ ಈ ನಾಶವನ್ನು ಕಾಣಲೇ ಇಲ್ಲ. ಫೆಲೆಸ್ತೀನ್ ಜನತೆಯನ್ನು ಮೋಸಗೊಳಿಸಲು ಮಹ್ಮೂದ್ ಅಬ್ಬಾಸ್ ಎಂಬ ಚಿತ್ರವು ಅಲ್ಲಿ ಉಳಿಯಬೇಕಾದುದು ಅವರಿಗೆ ಅಗತ್ಯವಾಗಿತ್ತು. ಫೆಲೆಸ್ತೀನ್ ಜನತೆಯ ಕಾನೂನಾತ್ಮಕ ಅಧಿಕಾರ ಪಿ.ಎಲ್.ಓ.ಗೆಂದು ಬಡಾಯಿ ಕೊಚ್ಚಿಕೊಳ್ಳುವ ಮಹ್ಮೂದ್ ಅಬ್ಬಾಸ್, 2006ರಲ್ಲಿ ಚುನಾವಣೆಯಲ್ಲಿ ತನ್ನ ಪಕ್ಷ ಹಮಾಸ್‌ನ ವಿರುದ್ಧ ಸೋತು ಸುಣ್ಣವಾಯಿತು ಎಂಬ ವಿಚಾರದಲ್ಲಿ ಜಾಣ ಕುರುಡನ್ನು ತೋರಿಸುತ್ತಿದ್ದಾರೆ. ಇಸ್ರೇಲ್ ಮತ್ತು ಅಮೇರಿಕದೊಂದಿಗೆ ಗೂಢಾಲೋಚನೆ ಮಾಡಿ, ಹಮಾಸನ್ನು ಆಡಳಿತ ನಡೆಸುವುದರಿಂದ ತಡೆಯಲು ಇಸ್ರೇಲ್ ಮತ್ತು ಅಮೇರಿಕದೊಂದಿಗೆ ಸಂಚು ರೂಪಿಸಿದ್ದನ್ನು ಇವರು ಮರೆಯಬಾರದು. ವೆಸ್ಟ್ ಬ್ಯಾಂಕ್‌ನಲ್ಲಿ ತನ್ನದೇ ಜನರ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸದ ಅಬ್ಬಾಸ್‌ರ ಆದರ್ಶ ಭಾಷಣವನ್ನು ಇಸ್ರೇಲ್ ಕೂಡಾ ಪರಿಗಣಿಸುವುದಿಲ್ಲ.

ಪಶ್ಚಿಮ ದಂಡೆಯ ಜನರ ದೊಡ್ಡ ವಿಭಾಗವು ಮಹ್ಮೂದ್ ಅಬ್ಬಾಸ್‌ರಿಗೆ ವಿರುದ್ಧವಾಗಿದ್ದಾರೆ. ಸಮೀಕ್ಷೆಗಳಲ್ಲಿ ಇವರಿಗಿಂತ ಹಮಾಸ್ ನಾಯಕ ಇಸ್ಮಾಈಲ್ ಹನಿಯ್ಯರಿಗೆ ಹೆಚ್ಚಿನ ಪರಿಗಣನೆ ಇದೆ. ಅಧಿಕಾರದ ಅಮಲಿನಲ್ಲಿ ರಮಲ್ಲಾದ ಅರಮನೆಯಲ್ಲಿ ವಾಸಿಸುತ್ತಿರುವ ಮಹ್ಮೂದ್ ಅಬ್ಬಾಸ್‌ರಿಗೆ ಇಸ್ರೇಲ್‌ನ ವಿರುದ್ಧ ಹೋರಾಡುತ್ತಿರುವ ಹಮಾಸ್‌ನ ಕುರಿತು ಮಾತನಾಡುವ ಅರ್ಹತೆಯೂ ಇಲ್ಲ.

ಝಿಯೋನಿಸ್ಟ್ ಗಳೊಂದಿಗೆ ರಾಜಿ ನಾಝಿಝಂ ಮತ್ತು ಝಿಯೋನಿಝಂನ ನಡುವಿನ ರಹಸ್ಯ ಸಂಬಂಧ ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ 1982ರಲ್ಲಿ ಮಾಸ್ಕೋದ ಪಾಟ್ರಿಸ್‌ಲುಮಂಬ ವಿಶ್ವವಿದ್ಯಾನಿಲಯದಿಂದ ಮಹ್ಮೂದ್ ಅಬ್ಬಾಸ್‌ರಿಗೆ ಡಾಕ್ಟರೇಟ್ ಲಭಿಸಿತು. ಎರಡನೇ ಮಹಾ ಯುದ್ಧಕ್ಕಿಂತ ಮೊದಲು ಜರ್ಮನಿಯ ನಾಝಿ ಆಡಳಿತದೊಂದಿಗೆ ಝಿಯೋನಿಸ್ಟ್ ಗಳಿಗೆ ಆತ್ಮೀಯ ಸಂಬಂಧವಿತ್ತೆಂದೂ ಅರವತ್ತು ಲಕ್ಷ ಯಹೂದಿಯರನ್ನು ಸಾಮೂಹಿಕ ಹತ್ಯೆ (ಹೋಲೋಕಾಸ್ಟ್) ನಡೆಸಿರುವುದೆಂಬುದು ಸಂಶಯಾಸ್ಪದವೆಂದೂ ತನ್ನ ಸಂಶೋಧನಾ ಪ್ರಬಂಧದಲ್ಲಿ ಅಬ್ಬಾಸ್ ಪ್ರತಿಪಾದಿಸುತ್ತಾರೆ. 1977ರಲ್ಲಿ ಪ್ರಕಟಗೊಂಡ ‘ಝಿಯೋನಿಝಂನ ಆರಂಭ ಮತ್ತು ಅಂತ್ಯ’ (ಅಸ್ಸಹ್‌ಯೂನಿಯ್ಯ ಬಿದಾಯ ವನಿಹಾಯ) ಎಂಬ ಪುಸ್ತಕದಲ್ಲಿ ಝಿಯೋನಿಝಂ ಮತ್ತು ಯಹೂದಿಝಮ್‌ನ ನಡುವೆ ಯಾವುದೇ ಸಂಬಂಧವಿಲ್ಲವೆಂದೂ ಯಹೂದಿಯರು ಅವರ ಮೊದಲ ಬಲಿಪಶುಗಳೆಂದೂ ಅವರು ಸಮರ್ಥಿಸುತ್ತಾರೆ.

ಆದರೆ, ಝಿಯೋನಿಝಂನ ವಿರುದ್ಧ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದ ಅಬ್ಬಾಸ್ ಕ್ರಮೇಣ ತನ್ನ ನಿಲುವುಗಳನ್ನು ಬದಲಾಯಿಸುವುದನ್ನು ನಂತರ ಕಂಡೆವು. ‘ಓಸ್ಲೋದ ದಾರಿ’ (ತ್ವರೀಖ್ ಓಸ್‌ಲೋ) ಎಂಬ ಹೆಸರಿನಲ್ಲಿ 2011ರಲ್ಲಿ ಪ್ರಕಟಗೊಂಡ ಪುಸ್ತಕದಲ್ಲಿ ಇಸ್ರೇಲಿನೊಂದಿಗೆ ಶಾಂತಿಯ ಚರ್ಚೆಗಳನ್ನು ನಡೆಸಬೇಕೆಂದು ಫತಹ್ ಪಕ್ಷದಲ್ಲಿ ಮೊದಲು ಧ್ವನಿಯೆತ್ತಿದ್ದು ತಾನೆಂದು ಅವರು ವಾದಿಸುತ್ತಾರೆ. ಪುಸ್ತಕದಲ್ಲಿ ‘ಝಿಯೋನಿಝಂ’ ಎಂಬ ಪದ ಬರದಿರಲು ಅವರು ವಿಶೇಷ ಗಮನಹರಿಸಿದ್ದು ಮಾತ್ರವಲ್ಲ, ಇಸ್ರೇಲಿನ ‘ಶಾಂತಿಯ ವಾಹಕ’ರಾದ ಮೇಜರ್ ಜನರಲ್ ಮಾಟ್ಟಿ ಪೆಲೇಡ್ ಸೇರಿಕೊಂಡು ನಡೆಸಿದ ಚರ್ಚೆಗಳು ಬಳಿಕ ಓಸ್ಲೋ ಒಪ್ಪಂದಕ್ಕೆ ದಾರಿ ಮಾಡಿಕೊಟ್ಟಿತೆಂದು ಸಮರ್ಥಿಸುತ್ತಾರೆ.

ಯಹೂದಿ ವಲಸೆಯು ಝಿಯೋನಿಸ್ಟ್ ಗಳ ಪಿತೂರಿಯೆಂಬ ಸಾಮಾನ್ಯ ದೃಷ್ಟಿಕೋನಕ್ಕೆ ವಿರುದ್ಧವಾದ ನಿಲುವನ್ನು ನಂತರದ ಕಾಲದಲ್ಲಿ ಅಬ್ಬಾಸ್ ಹಂಚಿಕೊಂಡರು. ವೈಯಕ್ತಿಕ ಮತ್ತು ಧಾರ್ಮಿಕ ನಂಬಿಕೆಯ ಕಾರಣಗಳಿಂದ ಯಹೂದಿ ವಲಸೆ ನಡೆಯಿತೆಂದೂ ಈ ವಾಸ್ತವಿಕತೆಯನ್ನು ಅರಬ್ ಜಗತ್ತು ಅರ್ಥ ಮಾಡಿಕೊಳ್ಳಬೇಕೆಂದೂ ಅವರು ಹೇಳಿದ್ದರು.

ತನ್ನ ಡಾಕ್ಟರೇಟ್ ಪ್ರಬಂಧದ ವಿಚಾರಗಳಿಂದ ಹಿಂದೆ ಸರಿಯುವ ಅಬ್ಬಾಸ್‌ರನ್ನೂ ನಾವು ನಂತರದ ಕಾಲದಲ್ಲಿ ಕಂಡೆವು. 2014ರ ಫೆಬ್ರವರಿಯಲ್ಲಿ ರಮಲ್ಲಾದಲ್ಲಿ ಇಸ್ರೇಲ್ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ತಾನು ಹೋಲೋಕಾಸ್ಟ್ ನಿಷೇಧಿಯಲ್ಲವೆಂದೂ ಲಕ್ಷಾಂತರ ಯಹೂದಿಯರನ್ನು ನಾಝಿಗಳು ಸಾಮೂಹಿಕ ಹತ್ಯೆ ನಡೆಸಿದ್ದಾರೆಂದೂ ಅವರು ಹೇಳಿದರು. ಎರಡು ವಾರದ ಬಳಿಕ ಇಸ್ರೇಲ್‌ನ ಹೋಲೋಕಾಸ್ಟ್ ಸ್ಮರಣಾ ದಿನದಲ್ಲಿ ಯಹೂದಿಯರ ಸಾಮೂಹಿಕ ಹತ್ಯೆಯು ಆಧುನಿಕ ಜಗತ್ತಿನ ಅತ್ಯಂತ ಹೀನಾಯ ಘಟನೆಯೆಂದು ಫೆಲೆಸ್ತೀನ್‌ನ ಅಧಿಕೃತ ವಾರ್ತಾ ಏಜೆನ್ಸಿಯಾದ ‘ವಫಕ್’ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದರು.

ಇಸ್ರೇಲ್‌ನ ಮಾಜಿ ಪ್ರಧಾನಿ ಮತ್ತು ಅಧ್ಯಕ್ಷರಾಗಿದ್ದ ಶಿಮೋನ್ ಪೆರೆಸ್‌ರೊಂದಿಗೆ ಅಬ್ಬಾಸ್ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಅವರೀರ್ವರ ಸ್ನೇಹ ವರ್ಷಗಳಷ್ಟು ಹಳೆಯದು. ಇಸ್ರೇಲ್‌ನೊಂದಿಗೆ ಚರ್ಚೆಗೆ ಸಿದ್ಧರಾದ ಅಬ್ಬಾಸ್‌ರ ‘ಕೆಚ್ಚೆದೆಯ ಕ್ರಮ’ವನ್ನು ಪೆರೆಸ್ ಶ್ಲಾಘಿಸಿದ್ದರು. 2016ರಲ್ಲಿ ಪೆರೆಸ್ ಮರಣ ಹೊಂದಿದಾಗ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅವರನ್ನು ಮಹಾನ್ ವ್ಯಕ್ತಿಯೆಂದು ಹೊಗಳಿದ ಫೆಲೆಸ್ತೀನ್‌ನ ಅಧ್ಯಕ್ಷ ‘ಪೆರೆಸ್‌ರ ವಿಯೋಗವು ಈ ಪ್ರದೇಶದ ಮಾನವೀಯತೆ ಮತ್ತು ಶಾಂತಿಗೆ ದೊಡ್ಡ ನಷ್ಟವುಂಟು ಮಾಡಿದೆ’ ಎಂದು ಟ್ವೀಟ್ ಮಾಡಿದ್ದರು.

1984ರಿಂದ 1986ರ ವರೆಗೆ ಇಶಾಕ್ ರಬಿನ್‌ರ ಹತ್ಯೆಯ ಬಳಿಕ 1995ರಿಂದ 1996ರ ವರೆಗೂ ಇಸ್ರೇಲ್‌ನ ಪ್ರಧಾನಮಂತ್ರಿಯಾಗಿ, 2007ರಿಂದ 2014ರ ವರೆಗೆ ಅಧ್ಯಕ್ಷ ಪದವಿಯನ್ನು ಪೆರೆಸ್ ಅಲಂಕರಿಸಿದ್ದರು. ಇದರ ಹೊರತಾಗಿ ರಕ್ಷಣಾ, ವಿದೇಶ, ಹಣಕಾಸು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಆದರೆ ಫೆಲೆಸ್ತೀನಿಯರಿಗೆ ಮಾನವರೆಂಬ ಪರಿಗಣನೆಯನ್ನು ಪೆರೆಸ್ ನೀಡಿರಲಿಲ್ಲ. ಫೆಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ಎಲ್ಲ ಆಕ್ರಮಣಗಳಲ್ಲೂ ಪ್ರತ್ಯಕ್ಷವಾಗಿಯೂ ಅಲ್ಲದೆಯೂ ಪಾಲ್ಗೊಂಡ ವ್ಯಕ್ತಿ. 1948ರಲ್ಲಿ ಫೆಲೆಸ್ತೀನನ್ನು ಭೂಪಟದಿಂದ ಕಿತ್ತೊಗೆಯಬೇಕೆಂದು ವಾದಿಸಿ ಈಜಿಪ್ಟ್ ಮತ್ತು ಸಿರಿಯಾದಲ್ಲೂ ಇಸ್ರೇಲ್‌ನ ಆಕ್ರಮಣಕ್ಕೆ ನೇತೃತ್ವವನ್ನು ನೀಡಿ ಇಸ್ರೇಲ್‌ನ ಅಣುಬಾಂಬು ಯೋಜನೆಯ ಮೇಲ್ನೋಟವನ್ನು ವಹಿಸಿಕೊಂಡ ವ್ಯಕ್ತಿಯಾಗಿದ್ದಾರೆ ಪೆರೆಸ್. 1996ರಲ್ಲಿ ಲೆಬನಾನ್‌ನ ಕ್ವಾನಾದಲ್ಲಿ ವಿಶ್ವಸಂಸ್ಥೆಯ ಶಿಬಿರದ ಮೇಲೆ ಬಾಂಬ್ ದಾಳಿ ಮಾಡಿ ಪ್ರಜೆಗಳನ್ನು ಕೊಲ್ಲಲು ಆದೇಶಿಸಿದ ವ್ಯಕ್ತಿಯೂ ಆಗಿದ್ದರು. ಓಸ್ಲೋ ಒಪ್ಪಂದ ಎಂಬ ವಂಚನೆಗೆ
ಫೆಲೆಸ್ತೀನಿಯರನ್ನು ಧುಮುಕಿಸಿದ್ದಕ್ಕೆ ಪ್ರತಿಫಲವಾಗಿ 1996ರಲ್ಲಿ ನೋಬೆಲ್ ಪ್ರಶಸ್ತಿ ಲಭಿಸುವುದರೊಂದಿಗೆ ಪೆರೆಸ್ ಶಾಂತಿಯ ಮುಖವಾಡ ಧರಿಸಲು ಆರಂಭಿಸಿದರು.

ಓಸ್ಲೋ ಒಪ್ಪಂದದಲ್ಲಿ ತನ್ನೊಂದಿಗೆ ಸಹಿ ಹಾಕಿದ ರಾಬಿನ್‌ರ ಅಂತ್ಯಕ್ರಿಯೆಯಲ್ಲಿ ಯಾಸಿರ್ ಅರಫಾತ್ ಭಾಗವಹಿಸಲಿಲ್ಲ. ಇಸ್ರೇಲ್‌ನೊಂ ದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಜೋರ್ಡಾನ್‌ನ ರಾಜ ಮತ್ತು ಈಜಿಪ್ಟ್ ನ ಅಧ್ಯಕ್ಷರು ಪೆರೆಸ್‌ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಮಾತ್ರವಲ್ಲ, ಸಂತಾಪ ಸೂಚನೆಯನ್ನು ಸಹ ನೀಡಲಿಲ್ಲ. ಹೀಗಿರುವಾಗ ಶಿಮೋನ್ ಪೆರೆಸ್‌ರನ್ನು ಹೊಗಳಿದ ಅಬ್ಬಾಸ್‌ರ ಕೃತ್ಯವು ಫೆಲೆಸ್ತೀನ್ ಜನತೆಗೆ ಮಾಡಿದ ದ್ರೋಹವಾಗಿತ್ತು.

ಝಿಯೋನಿಸ್ಟ್ ಭಯೋತ್ಪಾದಕ ಶಿಮೋನ್ ಪೆರೆಸ್‌ರನ್ನು ಅಬ್ಬಾಸ್‌ರು ಹೊಗಳಿದ್ದಕ್ಕೆ ಹಲವು ಕಾರಣಗಳಿವೆ. ತನ್ನ ಸ್ವಂತ ಸುಖಭೋಗಗಳ ಕುರಿತು ಮಾತ್ರ ಕಾಳಜಿ ವಹಿಸುವ ಅಬ್ಬಾಸ್ ಇಸ್ರೇಲ್‌ನ ಹಿತಾಸಕ್ತಿಗೆ ಅನುಗುಣವಾಗಿ ಫೆಲೆಸ್ತೀನ್ ಪ್ರಾಧಿಕಾರವನ್ನು ನಡೆಸುತ್ತಿದ್ದರು. ಪೆರೆಸ್ ಇಸ್ರೇಲ್ ಅಧ್ಯಕ್ಷರಾಗಿದ್ದ ಏಳು ವರ್ಷಗಳ ಅವಧಿಯಲ್ಲಿ ಪಶ್ಚಿಮ ದಂಡೆಯಲ್ಲಿ ಯಾವುದೇ ಪ್ರತಿಕ್ರಮಗಳನ್ನು ಅನುಮತಿಸಲಾಗಿರಲಿಲ್ಲ. ಇಂದು ವೆಸ್ಟ್ ಬ್ಯಾಂಕ್ ಇಸ್ರೇಲ್ ಸೈನಿಕರು ಮತ್ತು ಮೂಲಭೂತವಾದಿ ಯಹೂದಿ ವಸಾಹತುಗಾರರ ಬೇಟೆಯ ಕೇಂದ್ರವಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ ಮುನ್ನೂರರಷ್ಟು ಮಂದಿ ಅಲ್ಲಿ ಕೊಲ್ಲಲ್ಪಟ್ಟರು. ಆದರೆ ಅಬ್ಬಾಸ್‌ರಲ್ಲಿ ಯಾವುದೇ ಕುಲುಕಾಟವಿಲ್ಲ.

ನೇತನ್ಯಾಹು ಕಣ್ಣು ಹೊರಳಿಸಿದರೆ ಅಬ್ಬಾಸ್‌ರು ತನ್ನ ನಿಲುವನ್ನು ಬದಲಾಯಿಸುತ್ತಾರೆ. ಹಮಾಸ್‌ನೊಂದಿಗೆ ಸಮನ್ವಯ ಒಪ್ಪಂದಗಳನ್ನು ಜಾರಿಗೆ ತರುವಂತೆ ಇಸ್ರೇಲಿನ ಒತ್ತಡಕ್ಕೆ ಅಬ್ಬಾಸ್ ತಲೆ ಬಾಗಿದಾಗ ಫೆಲೆಸ್ತೀನ್‌ನ ಏಕತೆಗೆ ಹೊಡೆತ ಬಿತ್ತು. 2006ರ ಚುನಾವಣೆಯಲ್ಲಿ ಹಮಾಸ್‌ನ ವಿರುದ್ಧ ಸೋತ ಬಳಿಕ ಗಾಝಾವನ್ನು ನಿಯಂತ್ರಿಸುವ ಅವರ ಬಯಕೆಯು ಹಿನ್ನಡೆಯನ್ನು ಅನುಭವಿಸಿತು. ಇದರಿಂದ ಅವರು ಇಸ್ರೇಲ್ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ದಿಗ್ಬಂಧನಕ್ಕೆ ಸಂಪೂರ್ಣ ಬೆಂಬಲಿಸುವ ವಿಧಾನವನ್ನು ಅಳವಡಿಸಿಕೊಂಡರು. ಅಕ್ಟೋಬರ್ 7ಕ್ಕೆ ನೋವಾ ಉತ್ಸವದಲ್ಲಿ ಭಾಗವಹಿಸಿದವರಲ್ಲಿ 364 ಮಂದಿ ಇಸ್ರೇಲ್‌ನ ಬಾಂಬ್‌ನಿಂದ ಕೊಲ್ಲಲ್ಪಟ್ಟಿದ್ದಾರೆಂದೂ ಸಾಮೂಹಿಕ ಹತ್ಯೆಗೆ ಹಮಾಸನ್ನು ದೂಷಿಸುವುದು ಸರಿಯಲ್ಲವೆಂದೂ ಹರೇಟ್ಸ್ ನ ವರದಿಯನ್ನು ಎತ್ತಿ ತೋರಿಸಿ ಫೆಲೆಸ್ತೀನ್ ಅಥಾರಿಟಿ ಹೊರತಂದ ಪ್ರಸ್ತಾವನೆಯನ್ನೂ ಅಬ್ಬಾಸ್ ಮಧ್ಯಪ್ರವೇಶಿಸಿ ಹಿಂಪಡೆದಿದ್ದರು. ಫೆಲೆಸ್ತೀನ್ ಅಥಾರಿಟಿಯು ಇಷ್ಟು ನಿಷ್ಕ್ರಿಯವಾಗಲು ಮಹ್ಮೂದ್ ಅಬ್ಬಾಸ್‌ರ ಸರಕಾರವೇ ಕಾರಣವಾಗಿದೆ. ಅವರು ಗಾಝಾದ ಮೇಲೆ ಕಣ್ಣಿಟ್ಟರೆ ಅದು ದುರಂತವಾಗುತ್ತದೆ. ಫೆಲೆಸ್ತೀನ್ ಜನತೆ ಅದನ್ನು ಒಪ್ಪುವುದಿಲ್ಲ.