ಸನ್ಮಾರ್ಗ ವಾರ್ತೆ
ಮಲಪ್ಪುರಂ, ಜ. 24: ಪೌರತ್ವ ಕಾಯ್ದೆಯನ್ನು ಬೆಂಬಲಿಸುವರಿಗೆ ಕುಡಿಯುವ ನೀರು ನಿರಾಕರಿಸಲಾಗಿದೆ ಎಂದು ಅಪಪ್ರಚಾರ ಮಾಡಿದ ಘಟನೆಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕುಟ್ಟಿಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೌರತ್ವ ಕಾನೂನು ಬೆಂಬಲಿಸಿದವರಿಗೆ ಕುಟ್ಟಿಪುರಂ ಪಂಚಾಯತ್ ಕುಡಿಯುವ ನೀರು ನಿರಾಕರಿಸಿದೆ ಎಂದು ಸಂಘಪರಿವಾರ ಸುಳ್ಳು ಪ್ರಚಾರ ಮಾಡಿತ್ತು. ಇದನ್ನು ಚಿತ್ರ ಸಹಿತ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದರು. ಈಗ ಅವರ ವಿರುದ್ಧ ಕೇಸು ದಾಖಲಾಗಿದೆ.
153 ಎ ಖಲಂ ಪ್ರಕಾರ ಧರ್ಮಗಳ ನಡುವೆ ಸಂಘರ್ಷ ಬೆಳೆಸುವ ಯತ್ನದ ಆರೋಪದಲ್ಲಿ ಅವರ ವಿರುದ್ಧ ಕೇಸು ದಾಖಲಿಸಲಾಗಿದ್ದು ಸೇವಾ ಭಾರತಿ ಕಾರ್ಯಕರ್ತರ ವಿರುದ್ಧ ಕೂಡ ಕೇಸು ದಾಖಲಿಸಲಾಗಿದೆ. ಕುಟ್ಟಿಪುರಂ ಪಂಚಾಯತ್ ಹಿಂದೂಗಳಿಗೆ ಕುಡಿಯುವ ನೀರು ಕೊಡುತ್ತಿಲ್ಲ, ಆದ್ದರಿಂದ ಸೇವಾಭಾರತಿ ನೇತೃತ್ವದಲ್ಲಿ ಕುಡಿಯು ನೀರು ವಿತರಣೆ ಮಾಡಲಾಗುತ್ತಿದೆ ಎಂದು ಶೋಭಾ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದರು. ಆದರೆ ಕಳೆದ ವರ್ಷದ ಕುಡಿಯುವ ನೀರು ವಿತರಣೆಯ ಚಿತ್ರವನ್ನು ಅವರು ಟ್ವೀಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳ ಕಾಶ್ಮೀರವಾಗಿ ಬದಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.












