ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 23: ಪೌರತ್ವ ತಿದ್ದುಪಡಿ ಕಾನೂನು ಸಹಿತ ಮೋದಿ ಸರಕಾರದ ಜನವಿರೋಧಿ ನೀತಿಯ ವಿರುದ್ಧ ದೇಶವ್ಯಾಪಕ ಜಾಥಾ ನಡೆಸಲು ಕಾಂಗ್ರೆಸಿನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದು, ಪೌರತ್ವಪಟ್ಟಿ, ಆರ್ಥಿಕ ಕ್ಷೇತ್ರದಲ್ಲಿ ಕೇಂದ್ರ ಸರಕಾರ ವೈಫಲ್ಯ, ನಿರುದ್ಯೋಗಗಳನ್ನು ತನ್ನ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜನರ ಮುಂದಿಡಲಿದ್ದಾರೆ. ಜನವರಿ 11ಕ್ಕೆ ಸೇರಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಾಷ್ಟ್ರಾದ್ಯಂತ ಯಾತ್ರೆ ನಡೆಸಲು ತೀರ್ಮಾನಿಸಿದ್ದು ಜನವರಿ 28ಕ್ಕೆ ಜೈಪುರದಲ್ಲಿ ರಾಹುಲ್ರ ಯುವ ಆಕ್ರೋಶ್ ರ್ಯಾಲಿ ಆರಂಭವಾಗಲಿದೆ. ಜನವರಿ 30ಕ್ಕೆ ವಯನಾಡ್ ಜಿಲ್ಲೆಯ ಕಲ್ಪಟ್ಟದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಲಾಂಗ್ ಮಾರ್ಚ್ ನಡೆಯಲಿದ್ದು, ಸ್ಥಳೀಯ ಸಂಸದ ರಾಹುಲ್ ಗಾಂಧಿ ನಾಯಕತ್ವ ವಹಿಸಲಿದ್ದಾರೆ. ರಾಹುಲ್ರ ದೇಶವ್ಯಾಪಿ ಯಾತ್ರೆಯ ಭಾಗವಾಗಿ ಯುವ ಕಾಂಗ್ರೆಸ್ ಕಾರ್ಯಕ್ರಮ ಸಂಘಟಿಸಲಿದೆ. ನಿರುದ್ಯೋಗದಲ್ಲಿ ಹೆಚ್ಚಳವಾದ ಪರಿಸ್ಥಿತಿಯಲ್ಲಿ ನಿರುದ್ಯೋಗಿಗಳ ಪಟ್ಟಿ ತಯಾರಿಸಬೇಕೆಂದು ಯಾತ್ರೆಯಲ್ಲಿ ಬೇಡಿಕೆ ಇಡಲಾಗುವುದು.
ಯುವಕರು, ರೈತರು, ಆದಿವಾಸಿಗಳು, ಗ್ರಾಮೀಣ ನಿರುದ್ಯೋಗಿಗಳು, ಸಣ್ಣ, ಮಧ್ಯಮ ರೈತರು, ಉದ್ಯಮಿಗಳು, ಉದ್ಯೋಗ ತಜ್ಞರ ಸಹಿತ ಜನರ ಸಮಸ್ಯೆಗಳನ್ನು ರಾಹುಲ್ ತನ್ನ ಯಾತ್ರೆಯಲ್ಲಿ ಎತ್ತಲಿದ್ದಾರೆ.












