ಭಾರತೀಯ ಮುಸ್ಲಿಮರ ಇಂದಿನ ಸವಾಲುಗಳು

0
8838

✍️ ಯಾಸೀನ್ ಕೋಡಿಬೆಂಗ್ರೆ

ಸನ್ಮಾರ್ಗ ವಾರ್ತೆ

ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಸುಮಾರು ಹತ್ತೊಂಭತ್ತು ಕೋಟಿ. ದೇಶದ ಜನಸಂಖ್ಯೆಯಲ್ಲಿ 14% ದಷ್ಟಿರುವ ಮುಸ್ಲಿಮರು ವಿಶ್ವದಲ್ಲೇ ಗಣನೀಯ ಸಂಖ್ಯೆಯಲ್ಲಿದ್ದಾರೆ. ಇಷ್ಟು ದೊಡ್ಡ ಗಾತ್ರದ ಜನಸಂಖ್ಯೆ ಹೊಂದಿರುವ ಹೊರತಾಗಿಯೂ ದೇಶದಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ‍್ಯದ ನಂತರ ಕೂಡ ಹಲವು ರೀತಿಯ ಸಮಸ್ಯೆಗಳಿಂದ ಮುಸ್ಲಿಮ್ ಸಮುದಾಯ ಬಳಲುತ್ತಿದೆ.

ಮುಖ್ಯವಾಗಿ ಈ ದೇಶದ ವಿಭಜನೆಯ ಸಂದರ್ಭದಲ್ಲಿ ಅವರು ಅನುಭವಿಸಿದ ಸಾವು-ನೋವು. ಕೆಲವು ಮೇಲ್ಪಂಕ್ತಿಯ ಮುಸ್ಲಿಮರ ವರ್ತನೆಯ  ಕಾರಣಕ್ಕೆ ಭಾರತದ ಮುಸ್ಲಿಮರು ಅನುಭವಿಸಿದ ಅವಮಾನ, ಶೋಷಣೆ ಗಮನಾರ್ಹ. 1947 ರಿಂದ ಹಿಡಿದು 2023 ರ ಈ ದಿನದ ವರೆಗೆ ಸಾಮಾಜಿಕ, ಅರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಬಸವಳಿದ ಸಮುದಾಯ.

ಮುಸ್ಲಿಮ್ ಸಮುದಾಯ ಇಂದು ಸಾಮಾಜಿಕ, ಅರ್ಥಿಕ, ರಾಜಕೀಯ ಮತ್ತು ಕಾನೂನಾತ್ಮಕ ಸವಾಲುಗಳನ್ನು ಈ ಮುಂಚಿನಕ್ಕಿಂತಲೂ  ಹೆಚ್ಚಾಗಿ ಎದುರಿಸುತ್ತಿದೆ. ಭಾರತ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರು ಸಾಂವಿಧಾನಿಕ ರಕ್ಷಣೆಯ ಹೊರತಾಗಿ ವ್ಯವಸ್ಥಿತ ದೌರ್ಜನ್ಯ, ಪೂರ್ವಾಗ್ರಹ ಪೀಡಿತ ಧೋರಣೆ ಹಾಗೂ ನಿರಂತರ ಹಿಂಸಾಚಾರವನ್ನು ವಿವಿಧ ರೂಪದಲ್ಲಿ ಎದುರಿಸುತ್ತಿದ್ದಾರೆ.

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಮ್ ಅಝಾದ್‌ರಂತಹ ಧೀಮಂತ ನಾಯಕರು ಹುಟ್ಟಿ ಬಂದಂತಹ ಮುಸ್ಲಿಮ್ ಸಮುದಾಯದಲ್ಲಿ ಇಂದು ದಯನೀಯ ರೀತಿಯಲ್ಲಿ ಕೈಕಟ್ಟಿ ಮತಾಂಧ ಬಲಪಂಥೀಯರ ಬಳಿ ಪ್ರಾಣ ಭಿಕ್ಷೆ ಬೇಡುವ, ಹಲ್ಲೆಗೆ ಒಳಗಾಗುವ, ಜೀವಂತವಾಗಿ ದಹನಕ್ಕೊಳಗಾಗುವ ದುಃಸ್ಥಿತಿ ಬಂದಿದೆ ಎಂದರೆ ಅದಕ್ಕೆ ವ್ಯವಸ್ಥೆಯೊಂದಿಗೆ ಮುಸ್ಲಿಮ್  ಸಮುದಾಯದ ಭೌತಿಕ ದಿವಾಳಿತನವೂ ಕಾರಣವಾಗಿದೆ.

1947 ಆಗಸ್ಟ್ 15 ರಂದು ಭಾರತ ಸ್ವತಂತ್ರಗೊಳ್ಳುವ ಮುನ್ನ ನಡೆದ ಐತಿಹಾಸಿಕ ವಿಭಜನೆಯು ಕೇವಲ ಎರಡು ದೇಶವನ್ನು ಮಾತ್ರ  ಹುಟ್ಟು ಹಾಕಿದ್ದಲ್ಲ, ಅದರೊಂದಿಗೆ ಭಾರತೀಯ ಮುಸ್ಲಿಮರಿಗೆ ಬೆಟ್ಟದಷ್ಟು ಸವಾಲುಗಳನ್ನು ಹುಟ್ಟು ಹಾಕಿತು. ಪ್ರಥಮತಃ ಅವರ ದೇಶ ಪ್ರೇಮದ ಮೇಲೆ ಪ್ರಶ್ನೆ ಎತ್ತಲಾಯಿತು, ಈ ದೇಶಕ್ಕಾಗಿ ರಕ್ತ ಬಸಿದ ಸಮುದಾಯದ ಜನರನ್ನು ಕಟಕಟೆಯಲ್ಲಿ ನಿಲ್ಲಿಸಿ ಅವರನ್ನು ಪಾಕಿಸ್ತಾನ ನಿರ್ಮಾಣದ ಕರ್ತರನ್ನಾಗಿಸುವ ಪ್ರಯತ್ನಗಳು ನಡೆದವು.

ಎಂ.ಎಸ್. ಗೋಲ್ವಲ್ಕರ್‌ರಂತಹ ಬಲಪಂಥೀಯ ಲೇಖಕ ತನ್ನ  ಪುಸ್ತಕ ಬಂಚ್ ಆಫ್ ಥೋಟ್ಸ್’ನ “ಅಂತರಿಕ ಬೆದರಿಕೆಗಳು” ಎಂಬ ಅಧ್ಯಾಯದಲ್ಲಿ ಮುಸ್ಲಿಮರನ್ನು ಮೊದಲ ಸ್ಥಾನದಲ್ಲಿ ಉಲ್ಲೇಖಿಸುತ್ತಾರೆ. ಅವರನ್ನು ಪಾಕಿಸ್ತಾನದ  ಏಜೆಂಟ್‌ಗಳಾಗಿ ಬಿಂಬಿಸುವ ಪ್ರಯತ್ನಗಳು ಪುಸ್ತಕದಲ್ಲಿ ನಡೆಯುತ್ತದೆ, ವಾಸ್ತವದಲ್ಲಿ ಭಾರತೀಯ ಮುಸ್ಲಿಮರು ನವ ಭಾರತದ ಬೆಳವಣಿಗೆಯಲ್ಲಿ ಅತ್ಯಂತ ನಿಷ್ಠರಾಗಿ ಪಾಲ್ಗೊಂಡಿರುವುದು ಇತಿಹಾಸ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ರಕ್ಷಣೆ ಇಲ್ಲದಿದ್ದರೆ  ಮುಸ್ಲಿಮರು ಮತ್ತಷ್ಟು ಭೀಕರವಾಗಿ ಈ ಸಮಸ್ಯೆಯ ದಾಳವಾಗುತ್ತಿದ್ದರು ಎಂಬುವುದರಲ್ಲಿ ಎರಡು ಮಾತಿಲ್ಲ.

ಮುಸ್ಲಿಮರು ಈ ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹಿಂದುಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಭಾರತ ದೇಶದ ನೆಲ ಅವರ ಸ್ವಂತದ್ದು. ಈ ನೆಲಕ್ಕಾಗಿ ಮೌಲವಿಗಳು, ಮದ್ರಸಾದ ವಿದ್ಯಾರ್ಥಿಗಳು, ಸಾಮಾನ್ಯ ಮುಸ್ಲಿಮರು ತಮ್ಮ ಎದೆಯ ಮೇಲೆ  ಬ್ರಿಟಿಷರ ಗುಂಡು ಸ್ವೀಕರಿಸಿದ್ದು ಇತಿಹಾಸದಲ್ಲಿ ದಾಖಲಾದ ಸತ್ಯ. ಅಂತಹ ಧೀಮಂತ ಸಮುದಾಯದ ಪರಿಸ್ಥಿತಿ ಬಹಳಷ್ಟು ಶೋಚ ನೀಯವಾಗಿರುವುದು 2006 ರಲ್ಲಿ ಮಂಡಿಸಲ್ಪಟ್ಟ ಸಾಚಾರ್ ವರದಿಯಲ್ಲಿ ಸಾಬೀತಾಗಿದೆ. ಭಾರತದಲ್ಲಿ ಮುಸ್ಲಿಮರ ಸ್ಥಿತಿ ದಲಿತ ಸಮುದಾಯಕ್ಕಿಂತ ಕೆಳ ಸ್ಥರದಲ್ಲಿ ಇದೆ ಎಂಬ ವಿಚಾರದ ಕುರಿತು ಜಸ್ಟೀಸ್ ರಾಜೀಂದರ್ ಸಾಚಾರ್ ಅವರ ನೇತೃತ್ವದ ಸಮಿತಿ ನೀಡಿದ ವರದಿ ಬೆಳಕು ಚೆಲ್ಲುತ್ತದೆ.

ಇಷ್ಟೊಂದು ಹೀನಾಯ ಸ್ಥಿತಿಯಲ್ಲಿರುವ ಸಮುದಾಯವನ್ನು ಮೇಲೆತ್ತಬೇಕಾದ ಜಾವಾಬ್ದಾರಿಯ ಸಂದರ್ಭದಲ್ಲಿ ಅವರನ್ನು ಮತ್ತಷ್ಟು ಶೋಷಿಸಲಾಗುತ್ತಿದೆ. ಮುಸ್ಲಿಮರು ದೇಶದಲ್ಲಿ ಉದ್ಯೋಗ, ಶಿಕ್ಷಣ, ವಸತಿ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ತಾರತಮ್ಯ ಎದುರಿಸುತ್ತಿದ್ದಾರೆ. ಧಾರ್ಮಿಕ ಹಕ್ಕುಗಳ ಮೇಲೆ ದಾಳಿಗಳು ನಡೆಯುತ್ತಿವೆ. ಈ ಮೇಲೆ ಎಣಿಸಿದ ಸಮಸ್ಯೆಗಳು 2014 ರಲ್ಲಿ ಮೋದಿ ಸರಕಾರ ಬಂದ ನಂತರ ಉದ್ಭವಿಸಿದ್ದಲ್ಲ ಬದಲಾಗಿ ಕಳೆದ ಹಲವು ದಶಕಗಳಿಂದ ಮುಸ್ಲಿಮ್ ಸಮುದಾಯವನ್ನು ಪೆಂಡಭೂತದಂತೆ  ಕಾಡುತ್ತಿದೆ.

ಆದರೆ ಈ ಸಮಸ್ಯೆಗಳು 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಾಂಸ್ಥಿಕ ರೂಪ ಪಡೆದು ವ್ಯವಸ್ಥಿತವಾಗಿ ಮುಸ್ಲಿಮರನ್ನು ಶೋಷಿಸುವ ಮಟ್ಟಿಗೆ ಬೆಳೆದಿದೆ. ಬಹುಸಂಖ್ಯಾತರ ಮತ ಬ್ಯಾಂಕ್ ಗಟ್ಟಿಗೊಳಿಸಲು ಮುಸ್ಲಿಮರನ್ನು ಗುರಿಯಾಗಿಸಿ ವಿವಿಧ ಕಾನೂನುಗಳನ್ನು ಪರಿಚಯಿಸಲಾಗುತ್ತದೆ. ಸಿ.ಎ.ಎ., ಎನ್.ಆರ್.ಸಿ.ಯಂತಹ ಅಸಂವಿಧಾನಿಕ ಕಾನೂನುಗಳನ್ನು ತಂದು ಮುಸ್ಲಿಮರ ಪೌರತ್ವದ ಮೇಲೆ ಪ್ರಶ್ನೆ ಎತ್ತಲಾಗುತ್ತದೆ. ಯುಎಪಿಯನಂತಹ ಕರಾಳ ಕಾನೂನುಗಳ ಮುಖಾಂತರ ಸರಕಾರದ ಜನ ವಿರೋಧಿ ನೀತಿಗಳನ್ನು ಪ್ರಶ್ನಿಸುವ ಯುವಕರನ್ನು ಬಂಧಿಸಿ ಜೈಲಿನಲ್ಲಿಡಲಾಗುತ್ತದೆ. ತ್ರಿಪಲ್ ತಲಾಕ್, ಮತಾಂತರ ಕಾಯಿದೆಗಳನ್ನು ಪರಿಚಯಿಸಿ ಮುಸ್ಲಿಮ್ ಸಮುದಾಯದಲ್ಲಿ ಆತಂಕದ ವಾತಾವರಣ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಸಮಾನ ನಾಗರಿಕ ನೀತಿ ಸಂಹಿತೆ ಕಾನೂನಿನ ಕುರಿತು ಉಲ್ಲೇಖಿಸಿ ಮುಸ್ಲಿಮರ ಆತ್ಮ ಸ್ಥೈರ್ಯ ಕುಗ್ಗಿಸಿ ಹಿಂದೂ ಮತ ಬ್ಯಾಂಕ್ ಸೆಳೆಯುವ ಹುನ್ನಾರಗಳು ಕೂಡ ನಡೆಯುತ್ತಿವೆ.

ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲೂ ಮುಸ್ಲಿಮ್ ಸಮುದಾಯವನ್ನು ಭಾರತದ ಬಹುತೇಕ ಪಕ್ಷಗಳು ಕಡೆಗಣಿಸಿವೆ. ಬಿಜೆಪಿಯಂತೂ ತನ್ನ ಪಕ್ಷದಲ್ಲಿ ಒಂದೇ ಒಂದು ಮುಸ್ಲಿಮ್ ಸಂಸದನನ್ನು ಲೋಕ ಸಭೆಗೆ ಕಳುಹಿಸದೆ ತನ್ನ ಮುಸ್ಲಿಮ್ ವಿರೋಧಿ ನೀತಿಯನ್ನು ಸಾಬೀತು ಮಾಡಿದೆ. ಇನ್ನು ದೇಶದ ದೊಡ್ಡ ಜಾತ್ಯತೀತ ಪಕ್ಷ ಕಾಂಗ್ರೆಸ್ ಕೂಡ ಮುಸ್ಲಿಮರ ಜನಸಂಖ್ಯೆಯ ಅನುಗುಣವಾಗಿ ಪ್ರಾತಿನಿಧ್ಯ ನೀಡಲು  ಸೋತಿದೆ.
ಶೈಕ್ಷಣಿಕವಾಗಿ ತೀರಾ ಹಿಂದುಳಿದ ಅಪವಾದ ಹೊತ್ತ ಸಮುದಾಯದ ಜನರು ಶ್ರೈಕ್ಷಣಿಕವಾಗಿ ದಾಪುಗಾಲು ಇಡಲು  ಪ್ರಯತ್ನಿಸುತ್ತಿರುವಾಗಲೇ ಮುಸ್ಲಿಮ್ ವಿದ್ಯಾರ್ಥಿನಿಯರು ತಮ್ಮ ಸಂವಿಧಾನ ಬದ್ಧವಾಗಿ ಹಿಜಾಬ್ ಧರಿಸಿ ಶಾಲಾ-ಕಾಲೇಜಿಗೆ ಬರಲು  ತೊಡಗಿದರೆ ಅವರನ್ನು ವ್ಯವಸ್ಥಿತವಾಗಿ ತಡೆಯುವ ಹುನ್ನಾರಗಳು ನಡೆಯುತ್ತಿವೆ. ಶಿಕ್ಷಣದಿಂದ ವಂಚಿತರಾಗುವ ಸಂದರ್ಭಗಳು ಇದ್ದರೂ ಸರಕಾರಗಳು ಈ ಕುರಿತು ಗಮನಹರಿಸದೆ ಅದರಲ್ಲೂ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲಾಗುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ  ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಕೂಡ ನಿರ್ದಿಷ್ಟ ಸಮುದಾಯದ ಪರ ಕೆಲಸ ಮಾಡಿರುವುದು “ಕಾಮನ್ ಕ್ವಾಸ್  ಸಂಸ್ಥೆ” ಹೊರ ತಂದ ವರದಿಗಳಿಂದ ಸಾಬೀತಾಗಿದೆ. ಮುಸ್ಲಿಮ್ ಯುವಕರನ್ನು ವಿವಿಧ ಪ್ರಕರಣದಲ್ಲಿ ಸಿಲುಕಿಸಿ ವರ್ಷಾನುಗಟ್ಟಲೇ ಜೈಲಿನಲ್ಲಿ ಕೊಳೆಯಿಸುವ ಹುನ್ನಾರಗಳು ವ್ಯಾಪಕವಾಗುತ್ತಿರುವುದು ಕಂಡು ಬಂದಿದೆ. ದಶಕಗಳ ಕಾಲ ಜೈಲಿನಲ್ಲಿದ್ದು ತಮ್ಮ ಯೌವನವನ್ನು ಬಂಧಿಖಾನೆಯಲ್ಲಿ ಕಳೆದ ನಂತರ ನಿರಪರಾಧಿಯೆಂದು ಬಿಡುಗಡೆ ಆದ ಹಲವು ಉದಾಹರಣೆಗಳು ಇವೆ.

ಇಸ್ಲಾಮಿನ ಕುರಿತು ವ್ಯಾಪಕವಾದ ಅಪಪ್ರಚಾರ ಮಾಡಿ ಜನರಲ್ಲಿ ಮುಸ್ಲಿಮ್ ಸಮುದಾಯದ ಕುರಿತು ದ್ವೇಷ ಹುಟ್ಟು ಹಾಕಲಾಗುತ್ತಿದೆ. ಲವ್ ಜಿಹಾದ್, ಭಯೋತ್ಪಾದನೆ ಮತಾಂತರ, ಗೋಕಳ್ಳತನದ ಹೆಸರಿನಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ದಾಳಿಗಳು ನಡೆಯುತ್ತಿದ್ದು ಇದನ್ನು ತಡೆಯುವಲ್ಲಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ಬಿಡಿ ಪ್ರಕರಣಗಳನ್ನು ಮುಂದಿಟ್ಟುಕೊಂಡು ಇಡೀ ಸಮುದಾಯವನ್ನು  ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಂಘಪರಿವಾರದ ಐಟಿ ಸೆಲ್ ಸುಳ್ಳುಗಳನ್ನು ಬಿತ್ತರಿಸಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತದೆ.

ದೌರ್ಜನ್ಯ, ಹಿಂಸೆ ನಿರಂತರವಾಗಿ ಮುಸ್ಲಿಮ್ ಸಮುದಾಯದ ಆತ್ಮವಿಶ್ವಾಸವನ್ನು ಕಸಿದುಕೊಳ್ಳುತ್ತಿದ್ದು ಸಮುದಾಯದ ದೊಡ್ಡ ಭಾಗ ಈ ಬೆಳವಣಿಗೆಯಿಂದ ನಿರಾಶರಾಗಿದ್ದಾರೆ. ಆದರೆ ಈ ಸಮಸ್ಯೆಗಳಿಂದ ಹೊರ ಬರಲು ಮುಸ್ಲಿಮ್ ಸಮುದಾಯ ಕೂಡ ಅಂತರಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದು ಅವುಗಳಿಂದ ಹೊರ ಬರುವ ಅವಶ್ಯಕತೆ ಖಂಡಿತ ಇದೆ.

ಈ ಬಾಹ್ಯ ಸವಾಲುಗಳೊಂದಿಗೆ ಮುಸ್ಲಿಮ್ ಸಮುದಾಯ ಅಂತರಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸಿತ್ತ ಬಂದಿದೆ. ಭಾರತದಲ್ಲಿರುವ ವಿವಿಧ ಜಾತಿ, ಪಂಗಡಗಳು ತಮ್ಮ ಅಸ್ತಿತ್ವದ ವಿಚಾರ ಬಂದಾಗ ಅದು ಒಗ್ಗಟ್ಟಾಗಿ ಆಳುವ ವರ್ಗದ ಜನ ವಿರೋಧಿ ನೀತಿಯ ವಿರುದ್ಧ ಹೋರಾಡಿ ನ್ಯಾಯ ಪಡೆದುಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಮುಸ್ಲಿಮ್ ಸಮುದಾಯವೂ ಏಕದೇವತ್ವದ ವಿಶ್ವಾಸ, ಪ್ರವಾದಿ  ಮುಹಮ್ಮದ್(ಸ)ರ ಅನುಯಾಯಿಗಳಾಗಿರುವ ಹೊರತಾಗಿಯೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಹಲವು ವೇದಿಕೆಗಳು ರೂಪು ಕೊಂಡಿದ್ದರೂ ಇನ್ನು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕಾದ ಜವಾಬ್ದಾರಿ ಮುಸ್ಲಿಮ್ ಸಮುದಾಯ ದಲ್ಲಿದೆ. ಸಮುದಾಯದಲ್ಲಿ ಪ್ರಬಲ ನಾಯಕತ್ವದ  ಕೊರತೆಯೊಂದಿಗೆ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಬಹುತೇಕ ರಾಜಕೀಯ ನಾಯಕರ ಸ್ವಾರ್ಥ, ಅವಕಾಶವಾದದ ಪರಿಣಾಮವಾಗಿ ಸಮುದಾಯದ ಸಬಲೀಕರಣಕ್ಕೆ ದೊಡ್ಡ ಹೊಡೆತ ಬಿದ್ದಿರುವು ಸುಳ್ಳಲ್ಲ. ಅದರೊಂದಿಗೆ ಮುಸ್ಲಿಮ್ ಸಮುದಾಯವೂ ರಾಜಕೀಯವಾಗಿ ಸಬಲೀಕರಣಗೊಂಡು ರಾಜಕೀಯ ಪ್ರಾತಿನಿಧ್ಯ ಕೇಳುವಷ್ಟರ ಮಟ್ಟಿಗೆ ಪ್ರಬಲವಾಗಬೇಕಾದ ಅನಿವಾರ್ಯತೆ ಇದ್ದು ಈ ಕುರಿತು ಸಮುದಾಯದ ಪ್ರಬಲ ಸಂಘಟನೆಗಳು ಕೆಲಸ ಮಾಡಬೇಕಾದ ಆವಶ್ಯಕತೆಯಿದೆ.

ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸಮುದಾಯದ ಪೂರ್ವಜರು ಹಿಂದೂಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ಹೊರತಾಗಿಯೂ ಮುಸ್ಲಿಮರನ್ನು ಅನ್ಯರಂತೆ ಕಾಣುವ ಮನಸ್ಥಿತಿಗಳ ನಿರೂಪಣೆಗಳಿಗೆ ಸವಾಲೊಡ್ಡ ಬಲ್ಲ ಪ್ರಬಲವಾದ ಐತಿಹಾಸಿಕ  ಸಾಕ್ಷ್ಯಗಳನ್ನು ಜನರ ಮುಂದಿಟ್ಟು ಈ ನೆಲ ನಮ್ಮ ಸ್ವಂತ ನೆಲ ಹೊರತು ನಾವು ಇಲ್ಲಿ ಬಾಡಿಗೆದಾರರಲ್ಲ ಎಂಬುವುದನ್ನು ಅತ್ಯಂತ ಆತ್ಮ ವಿಶ್ವಾಸದೊಂದಿಗೆ ಹೇಳಬಲ್ಲ ವಿದ್ವಾಂಸರನ್ನು ಈ ಸಮುದಾಯ ಹುಟ್ಟು ಹಾಕಬೇಕಿದೆ. ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡುವ ಹಣವನ್ನು ಈ ಸಮುದಾಯದ ವಿದ್ಯಾರ್ಥಿ ಯುವಜನರ ಮೇಲೆ ಖರ್ಚು ಮಾಡುವ ಅವರ ಪ್ರತಿಭೆಗಳನ್ನು ಬೆಳೆಸುವ, ಪ್ರತಿಷ್ಠಿತ ವಿಶ್ವಾವಿದ್ಯಾಲಯಗಳಲ್ಲಿ ಅವರನ್ನು ಓದಿಸುವ ಕುರಿತು ಚಿಂತಸಬೇಕಾಗಿದೆ.

ಮುಸ್ಲಿಮರು ಸ್ಥಾಪಿಸುವ ಶ್ರೈಕ್ಷಣಿಕ ಸಂಸ್ಥೆಗಳು“ಮುಸ್ಲಿಮ್ ಗೆಟೋಝ್”ಗಳಾಗಿ ಬದಲಾಗುತ್ತಿರುವುದು ಕೂಡ ಸಮುದಾಯದ ಭವಿಷ್ಯದ  ನಿಟ್ಟಿನಲ್ಲಿ ಮಾರಕವಾಗಿದೆ. ಇಂತಹ ಮನಸ್ಥಿತಿಯಿಂದ ಹೊರಬಂದು ಎಲ್ಲರನ್ನು ಒಳಗೊಳ್ಳುವ ಶ್ರೈಕ್ಷಣಿಕ ಸಂಸ್ಥೆಗಳ ಉಗಮವಾಗಬೇಕಿದೆ. ಈ ದೇಶದ ಬಹುತ್ವದ ಸಂಸ್ಕೃತಿಯನ್ನು ಪ್ರತಿಫಲಿಸುವ, ಪರಸ್ಪರರನ್ನು ಅರಿಯುವ ತಾಣಗಳಾಗಿ ಬದಲಾಯಿಸಬೇಕಾದ ತುರ್ತು ಅವಶ್ಯಕತೆಯಿದ್ದು ಸಮುದಾಯ ಇದರ ಕುರಿತು ಯೋಚಿಸಬೇಕು.

ಮುಸ್ಲಿಮ್ ಸಮುದಾಯ ಏಕದೇವ ತ್ವದ ಮೇಲೆ ವಿಶ್ವಾಸ ಇಡುವ ಸಮುದಾಯ. ಅದರ ಬಳಿ ಪ್ರಬಲವಾದ ಜೀವನ ವ್ಯವಸ್ಥೆ ಇದೆ.  ಅದು ಧರ್ಮವನ್ನು ತನ್ನ ಅನುಯಾಯಿಗಳಿಗೆ ಕೇವಲ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿಸಿಲ್ಲ. ಅದು ಜಗತ್ತಿನಲ್ಲಿರುವ ಎಲ್ಲ ಸಿದ್ಧಾಂತಗಳಿಗೆ ಪರ್ಯಾಯವಾದ ಸಿದ್ಧಾಂತವನ್ನು ಪರಿಚಯ ಪಡಿಸುತ್ತದೆ. ಮನುಷ್ಯರ ರಕ್ತ ಹೀರುವ ಎಲ್ಲ ವ್ಯವಸ್ಥೆಗಳನ್ನು ಕೊನೆಗಾಣಿಸಿ ಮಾನವೀಯ ಸ್ಪಂದನೆ ಇರುವ ಸಮಾಜದ ನಿರ್ಮಾಣಕ್ಕೆ ಬೇಕಾಗಿರುವ ಎಲ್ಲ ಮೌಲ್ಯಗಳು ಅದರಲ್ಲಿ ಅಡಕವಾಗಿದೆ, ಆದರೆ,  ಅದರ ಅನುಯಾಯಿಗಳು ಅದರ ನೈಜ ಸಂದೇಶದಿಂದ ದೂರವಾಗಿ ಅದನ್ನು ಕೆಲವೇ ಕೆಲವು ಆರಾಧನೆಗಳಿಗೆ ಸೀಮಿತವಾಗಿಸಿದ್ದು  ಸಮುದಾಯದ ಈಗಿನ ದುಃಸ್ಥಿತಿಗೆ ಪ್ರಮುಖ ಕಾರಣ. ಇದರ ಪರಿಣಾಮವಾಗಿ ಸಮುದಾಯದಲ್ಲಿನ ಯುವಕರು ಮಾದಕ ದ್ರವ್ಯ, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ಬದುಕಿಗೊಂದು ಗುರಿ, ಉದ್ದೇಶ ಇಲ್ಲದಾಗಿದೆ. ಭೌತಿಕವಾದ ಅವರನ್ನು ಆವರಿಸಿಕೊಂಡಿದೆ. ಅವರು ಎಲ್ಲಿಯೂ ಸಲ್ಲದವರಾಗಿ ಮಾರ್ಪಡುತ್ತಿದ್ದಾರೆ. ಸಮುದಾಯವು ಮೊತ್ತ ಮೊದಲು ತಮ್ಮ ಮೂಲತತ್ವ,  ಇತಿಹಾಸ ಅರಿತು ದೈವಿಕ ಮಾರ್ಗದರ್ಶನದ ಕಡೆಗೆ ಮರಳಬೇಕಾಗಿದೆ. ಇದರ ಹೊರತಾಗಿ ಮುಸ್ಲಿಮ್ ಸಮುದಾಯ ತನ್ನ ಇತ್ತೀಚಿನ ಸ್ಥಿತಿಯಿಂದ ಮೇಲೇಳಲು ಸಾಧ್ಯವೇ ಇಲ್ಲ. ಇಸ್ಲಾಮ್ ಮುಸ್ಲಿಮರಿಗೆ ಘನತೆಯ ಬದುಕನ್ನು ಬದುಕಲು ಕಲಿಸುತ್ತದೆ. ಆದರೆ ಆ ಘನತೆಯ ಬದುಕನ್ನು ಪಡೆಯಲು ಮತ್ತೆ ಮುಸ್ಲಿಮರು ಇಸ್ಲಾಮಿನ ಕಡೆ ಮರಳಬೇಕಾಗಿದೆ. ಅದರ ಹೊರತು ಮುಸ್ಲಿಮರ ಸ್ಥಿತಿ ಬದಲಾಗಲು ಸಾಧ್ಯವೇ ಇಲ್ಲ.

ಆ ಕಾರಣಕ್ಕಾಗಿ ಕುರ್‌ಆನ್ ಮುಸ್ಲಿಮರನ್ನು ಅಭಿಸಂಬೋಧಿಸಿ ಹೀಗೆ ಹೇಳುತ್ತದೆ, “ವಾಸ್ತವದಲ್ಲಿ ಒಂದು ಜನಾಂಗವು ಸ್ವತಃ ತಾನೇ ತನ್ನ  ಸ್ಥಿತಿಯನ್ನು ಬದಲಾಯಿಸಿ ಕೊಳ್ಳುವರೆಗೆ ಅಲ್ಲಾಹ್ ಅದರ ಸ್ಥಿತಿಯನ್ನು ಬದಲಾಯಿಸುವುದಿಲ್ಲ”.

(ಲೇಖಕರು ಸಾಲಿಡಾರಿಟಿ ಕರ್ನಾಟಕದ ಸಲಹಾ ಸಮಿತಿ ಸದಸ್ಯ)