ಮಕ್ಕಳನ್ನು ಇಂಟರ್ನೆಟ್‌ನಿಂದ ಸಂಪೂರ್ಣವಾಗಿ ದೂರವಿಡಲು ಸಾಧ್ಯವಿಲ್ಲ; ಇದು ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್

0
331

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಆನ್‌ಲೈನ್ ಲೈಂಗಿಕ ಶೋಷಣೆ, ಸೈಬರ್ ಬುಲ್ಲಿಯಿಂಗ್ (ಚಡಾಯಿಸುವುದು), ಅನುಚಿತ ವಿಷಯಗಳು ಮತ್ತು ಇಂಟರ್ನೆಟ್ ಮೂಲಕ ಮಕ್ಕಳನ್ನು ಯಾವುದೇ ಜಾಲಕ್ಕೆ ಸಿಲುಕಿಸುವಂತಹ ಅಪಾಯಗಳಿಂದ ರಕ್ಷಿಸಲು ಸೋಶಿಯಲ್ ಮೀಡಿಯಾ ಹಾಗೂ ಇಂಟರ್ನೆಟ್ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು ಎಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇಂಟರ್ನೆಟ್ ಬಳಕೆಯು ಮೂಲಭೂತ ಹಕ್ಕುಗಳ ಭಾಗವಾಗಿದ್ದು, ಇದರಲ್ಲಿ ಮಕ್ಕಳ ಹಕ್ಕುಗಳೂ ಸೇರಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಯಸ್ಸಿನ ಆಧಾರದ ಮೇಲೆ ಇಂಟರ್ನೆಟ್ ಬಳಕೆಯನ್ನು ನಿಷೇಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು ಕೆಲವು ಮಾರ್ಗದರ್ಶನಗಳನ್ನು ನೀಡಿದೆ.

ಮಕ್ಕಳನ್ನು ಇಂಟರ್ನೆಟ್‌ನಿಂದ ಸಂಪೂರ್ಣವಾಗಿ ತಡೆಯುವುದು, ಒಂದು ನಿರ್ದಿಷ್ಟ ವಯಸ್ಸಿಗಿಂತ ಚಿಕ್ಕ ಮಕ್ಕಳಿಗೆ ಅಭಿವ್ಯಕ್ತಿ ಸ್ವಾತಂತ್ರ‍್ಯ ಅಥವಾ ವಿವೇಚನೆ ಇರುವುದಿಲ್ಲ ಎಂದು ಹೇಳುವಷ್ಟೇ ಅಸಂಬದ್ಧವಾಗಿದೆ. ಮಕ್ಕಳ ರಕ್ಷಣೆ ಮತ್ತು ಅವರ ಸ್ವಾತಂತ್ರ‍್ಯ ಇವೆರಡೂ ಒಂದಕ್ಕೊಂದು ವಿರುದ್ಧವಲ್ಲ; ನಮ್ಮ ಮಕ್ಕಳು ಇವೆರಡಕ್ಕೂ ಅರ್ಹರಾಗಿದ್ದಾರೆ.

ಒಂದುವೇಳೆ ಕಾನೂನು ಜಾರಿಗೆ ತಂದು ನಿಷೇಧಿಸಿದರೂ ಮಕ್ಕಳು ಇಂಟರ್ನೆಟ್ ಬಳಕೆಯನ್ನು ನಿಲ್ಲಿಸುವುದಿಲ್ಲ. ಬದಲಾಗಿ, ಅವರು ಪೋಷಕರು ಮತ್ತು ಸಂಬಂಧ ಪಟ್ಟ ಹೊಣೆಗಾರರ ಗಮನಕ್ಕೆ ಸಿಗದಂತೆ ಇಂಟರ್ನೆಟ್ ಬಳಕೆಯನ್ನು ಮುಂದುವರಿಸುತ್ತಾರೆ. ಇದು ಹೆಚ್ಚು ಅಪಾಯಕಾರಿಯಾದ, ನಿಯಂತ್ರಣವಿಲ್ಲದ ವೇದಿಕೆಗಳಿಗೆ (ಪ್ಲಾಟ್‌ಫಾರ್ಮ್) ಅವರನ್ನು ತಲುಪಿಸಬಹುದು. ಅಲ್ಲದೆ, ಬೆದರಿಕೆ ಅಥವಾ ಆಮಿಷಕ್ಕೆ ಒಳಗಾಗುವ ಮಕ್ಕಳು ತಮ್ಮ ಪೋಷಕರಿಗೆ ಅಥವಾ ಹಿರಿಯರಿಗೆ ಈ ಬಗ್ಗೆ ತಿಳಿಸಲು ಹೆದರುತ್ತಾರೆ.

ಸ್ಪಷ್ಟ ಮಾರ್ಗದರ್ಶನಗಳಿದ್ದಾಗ್ಯೂ ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆಯ ವಿಷಯಗಳು ಪದೇ ಪದೇ ಕೋರ್ಟಿನ ಮುಂದೆ ಬರುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಂತಹ ವಿಷಯಗಳನ್ನು ಗುರುತಿಸಿ ತೆಗೆದುಹಾಕಲು ರಾಷ್ಟ್ರೀಯ ಹ್ಯಾಶ್ ಮತ್ತು ಯುಆರ್‌ಎಲ್ ಡೇಟಾಬೇಸ್ ರಚಿಸಲು ಹಾಗೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಶಿಕ್ಷಣ ಮತ್ತು ಜಾಗೃತಿ: ಮಕ್ಕಳಿಗೆ ಆನ್‌ಲೈನ್ ಸುರಕ್ಷತೆ, ಸಮ್ಮತಿ, ಶೋಷಣೆಯನ್ನು ಗುರುತಿಸುವುದು ಮತ್ತು ದೂರು ನೀಡುವ ವಿಧಾನಗಳ ಬಗ್ಗೆ ವಯಸ್ಸಿಗೆ ಸೂಕ್ತವಾದ ಶಿಕ್ಷಣ ನೀಡಲು ಸೂಚಿಸಲಾಗಿದೆ. ಜೊತೆಗೆ ಶಿಕ್ಷಕರ ತರಬೇತಿ ಮತ್ತು ಪೋಷಕರ ಜಾಗೃತಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ.

ಸುಪ್ರೀಂ ಕೋರ್ಟ್ ಮಕ್ಕಳಿಗಾಗಿ ಇರುವ ಎಲ್ಲಾ ವಯೋಆಧಾರಿತ ಸುರಕ್ಷತಾ ಕ್ರಮಗಳನ್ನು ರದ್ದುಗೊಳಿಸಿಲ್ಲ. ಇಂಟರ್ನೆಟ್ ಮೇಲೆ ಸಂಪೂರ್ಣ ನಿಷೇಧವನ್ನು ಮಾತ್ರ ವಿರೋಧಿಸಲಾಗಿದೆಯೇ ಹೊರತು, ಮಕ್ಕಳ ವಯಸ್ಸಿಗೆ ತಕ್ಕಂತೆ ಸೂಕ್ತ ನಿಯಂತ್ರಣಗಳು ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗಿದೆ. ವಯಸ್ಕರಿಗಾಗಿ ಇರುವ ವೆಬ್‌ಸೈಟ್‌ಗಳಂತಹ ಹಾನಿಕಾರಕ ಸೇವೆಗಳಿಗೆ ಮಕ್ಕಳ ಪ್ರವೇಶವನ್ನು ನಿಯಂತ್ರಿಸುವುದಕ್ಕೆ ಅವಕಾಶ ಇದೆ.