ಮತಾಂತರದ ಹೆಸರಲ್ಲಿ ಗೂಂಡಾಗಿರಿ: ಹಿಂದುತ್ವ ಗೂಂಡಾಗಳ ಥಳಿತಕ್ಕೆ ಗರ್ಭಪಾತಕ್ಕೊಳಗಾದ 8 ತಿಂಗಳ ಗರ್ಭಿಣಿ

0
1913
ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಬುಡಕಟ್ಟು ಹಕ್ಕುಗಳ ಗುಂಪಿನ ಸದಸ್ಯರು

ಸನ್ಮಾರ್ಗ ವಾರ್ತೆ

ನವದೆಹಲಿ: ಹಿಂದುತ್ವ ಹೆಸರಲ್ಲಿ ಗೂಂಡಾಗಿರಿ ನಡೆಸಿದ್ದ ಗುಂಪೊಂದು ಎಂಟು ತಿಂಗಳ ಗರ್ಭಿಣಿಯ ಹೊಟ್ಟೆಗೆ ಥಳಿಸಿದ್ದರಿಂದ ಆಕೆ ಗರ್ಭಪಾತಕ್ಕೊಳಗಾದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯ ದೇವಾಡಾ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಹಿಂದುತ್ವದ ಕಾರ್ಯಕರ್ತರು ಎಂದು ಹೇಳಿಕೊಂಡು ಬಂದಿದ್ದ ಗುಂಪೊಂದು ಕೈಯ್ಯಲ್ಲಿ ಮರದ ಲಾಠಿಗಳನ್ನು ಹಿಡಿದುಕೊಂಡು ಸ್ಥಳೀಯರು ಹಾಗೂ ಕ್ರೈಸ್ತರಿದ್ದ ಗುಂಪಿನ ಮೇಲೆ ಹಲ್ಲೆ ನಡೆಸಿದೆ. ಆದರೆ ಕ್ರೈಸ್ತರಿದ್ದ ಗುಂಪು ಸ್ಥಳೀಯ ಬುಡಕಟ್ಟು ಜನರೊಂದಿಗೆ ಹೊಸ ವರ್ಷವನ್ನು ಆಚರಿಸಲು ತಯಾರಿ ನಡೆಸುತ್ತಿದ್ದರು ಎಂದು ಮಾರ್ನಿಂಗ್ ಸ್ಟಾರ್ ನ್ಯೂಸ್ ವರದಿ ಮಾಡಿದೆ.

ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯ ದೇವಾಡಾ ಗ್ರಾಮದಲ್ಲಿ ಎಂಟು ತಿಂಗಳ ಗರ್ಭಿಣಿ ಲೀಲಾ ಬಾಯಿ ಹಿಂದುತ್ವ ಗೂಂಡಾಗಳಿಂದ ಹಲ್ಲೆಗೊಳಗಾದ ನಂತರ ಗರ್ಭಪಾತಕ್ಕೆ ಒಳಗಾಗಿದ್ದು, ಉದ್ರೀಕ್ತ ಗುಂಪು ಅವಳನ್ನು ಕೆಳಕ್ಕೆ ತಳ್ಳಿತು ಮತ್ತು ಲೀಲಾ ಬಾಯಿಗೆ ಪ್ರಜ್ಞೆ ತಪ್ಪುವವರೆಗೂ ಹೊಟ್ಟೆಗೆ ಒದೆಯಿತು ಎಂಬುದಾಗಿ ತಿಳಿದು ಬಂದಿದೆ. ಅದೇ ದಿನ ಸಂಜೆ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ದಾರಿಯಲ್ಲಿ ಗರ್ಭಪಾತವಾಯಿತು. ಆದರೆ, ಆಸ್ಪತ್ರೆಯು ಆಕೆಗೆ ಬೇಕಾದ ಆರೈಕೆಯನ್ನು ನೀಡಲು ನಿರಾಕರಿಸಲಾಯಿತು ಎಂದು ವಾಸ್ಕೆಲೆ ಎಂಬವರು ಹೇಳಿದರು.

“ನಾನು ಅವರ ಥಳಿತದಿಂದಾಗಿ ಬೋರಲಾಗಿ ಕೆಳಗೆ ಬಿದ್ದೆ” ಎಂದ ಲೀಲಾ ಬಾಯಿ, “ನನಗೆ ಮೂರ್ಛೆ ತಪ್ಪಿದ ಅನುಭವವಾಗುತ್ತಿತ್ತು. ಆದರೆ ಆ ಜನರ ಗುಂಪು ನನ್ನ ಹೊಟ್ಟೆಗೆ ಒದೆಯಲು ಪ್ರಾರಂಭಿಸಿದರು. ನನಗೆ ಪ್ರಜ್ಞೆ ತಪ್ಪಿದ್ದರಿಂದ ಎಷ್ಟು ಹೊತ್ತಿನವರೆಗೆ ಅವರು ನನ್ನನ್ನು ಒದ್ದರೆಂಬುದು ನನಗೆ ಗೊತ್ತಿಲ್ಲ ಎಂದು ಲೀಲಾ ಬಾಯಿ ಹೇಳಿದರು.

ಗೂಂಡಾಗಳು ಸ್ತಳದಲ್ಲಿದ್ದ ಎಲ್ಲಾ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನೂ ಕೂಡ ಥಳಿಸಿರುವುದಾಗಿ ವಾಸ್ಕಲೆ ಹೇಳಿದ್ದಾರೆ.

ಬುಡಕಟ್ಟು ಜನರನ್ನು ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿ, 30 ಮಂದಿ ಇದ್ದ ಹಿಂದುತ್ವದ ಗೂಂಡಾಗಳು ಮರದ ಲಾಠಿ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲ್ಲೆ ನಡೆಸಿದವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸದಸ್ಯರೆಂದೂ ಆಡಳಿತದಲ್ಲಿರುವ ಬಿಜೆಪಿಯ ಕೃಪಾಪೋಷಣೆ ಇರುವವರೆಂದು ಬುಡಕಟ್ಟು ಕ್ರಿಶ್ಚಿಯನ್ನರು ಆರೋಪಿಸಿದ್ದಾರೆ. ಬಾರ್ವಾನಿ, ಇಂದೋರ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕ್ರಿಶ್ಚಿಯನ್ ನಾಯಕರು ತಮ್ಮ ದೂರನ್ನು ದಾಖಲಿಸಬೇಕೆಂದು ಒತ್ತಾಯಿಸಿ ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬುಡಕಟ್ಟು ಹಕ್ಕುಗಳ ಗುಂಪುಗಳ ಸದಸ್ಯರ ಜೊತೆ ಹೊಟ್ಟೆಯಲ್ಲಿದ್ದ ಮಗುವನ್ನು ಕಳಕೊಂಡ ಸಂತ್ರಸ್ತೆ ಲೀಲಾ ಬಾಯಿ ತಮ್ಮ ಅನಾರೋಗ್ಯದ ಸ್ಥಿತಿಯಲ್ಲಿಯೂ ಭಾಗಿಯಾಗಿದರು.

“ಹಲ್ಲೆಕೋರರೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಂತೆ ಅಥವಾ ಅವರ ವಿರುದ್ಧ ನೀಡಲಾದ ದೂರನ್ನು ಹಿಂಪಡೆಯುವಂತೆ ಪೊಲೀಸರು ಸಂತ್ರಸ್ತರಿಗೆ ಒತ್ತಡ ಹೇರಿದ್ದಾರೆ ಎಂದು ಬುಡಕಟ್ಟು ಹಕ್ಕುಗಳ ಗುಂಪಿನ ಸದಸ್ಯರಾದ ರಾಜು ಪಟೇಲ್ ಹೇಳಿರುವುದಾಗಿ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.