ಚೆನ್ನೈ, ಆ. 13: ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ರಜನೀಕಾಂತ್‍ರನ್ನು ತಮಿಳ್ನಾಡು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಸೋಮವಾರ ರನೀಕಾಂತ್ ವಿರುದ್ಧ ಕಾಂಗ್ರೆಸ್ ಧ್ವನಿಯೆತ್ತಿದ್ದು ರಜನೀಕಾಂತ್ ಮಹಾಭಾರತವನ್ನು ಸರಿಯಾಗಿ ಓದಲಿ ಎಂದಿದೆ. ರಜನಿಯಿಂದ ಇಂತಹ ಹೇಳಿಕೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ತಮಿಳ್ನಾಡು ಕಾಂಗ್ರೆಸ್‍ನ ಕೆಎಸ್ ಅಳಗಿರಿ ಹೇಳಿದ್ದಾರೆ. ಈಶಾನ್ಯ ಭಾರತದಲ್ಲಿ ವಿಶೇಷ ಅಧಿಕಾರ ಇದೆ. ಯಾಕೆ ಕೇಂದ್ರ ಸರಕಾರ ಈ ಹಕ್ಕನ್ನು ಕಿತ್ತುಕೊಂಡಿಲ್ಲ ಎಂದು ಅಳಗಿರಿ ಪ್ರಶ್ನಿಸಿದರು.
ಮುಸ್ಲಿಂ ಬಹುಸಂಖ್ಯಾತ ಪ್ರದೇಶ ಜಮ್ಮು ಕಾಶ್ಮೀರ. ಆದ್ದರಿಂದ ಅಲ್ಲಿಂದ ಸಂವಿಧಾನದ 370ನೆ ವಿಧಿಯನ್ನು ರದ್ದುಮಾಡಲಾಯಿತು. ಕಾಶ್ಮೀರಕ್ಕೆ ಒಂದು ನ್ಯಾಯ ಇತರ ರಾಜ್ಯಗಳಿಗೆ ಇನ್ನೊಂದು ನ್ಯಾಯ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಕೋಟ್ಯಂತರ ಜನರ ಹಕ್ಕುಗಳನ್ನು ಕಿತ್ತುಹಾಕಿದ ಮೋದಿ ಮತ್ತು ಶಾ ಹೇಗೆ ಕೃಷ್ಣಾರ್ಜುನರಾಗುತ್ತಾರೆ. ರಜನೀಕಾಂತ್ ಇನ್ನೊಮ್ಮೆ ಮಹಾಭಾರತವನ್ನು ಮನಸ್ಸಿಟ್ಟು ಓದಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಅಳಗಿರಿ ಹೇಳಿದರು.












