ತನ್ನ ತಂದೆ ಮೃತಪಟ್ಟದ್ದು, ಅವರ ಮೃತದೇಹವನ್ನು ದಫನ ಮಾಡಿದ್ದು ಯಾವುದೂ ಪಕ್ಕದ ಕೋಣೆಯಲ್ಲಿದ್ದ ಈ ಮಗನಿಗೆ ಗೊತ್ತೇ ಇರಲಿಲ್ಲ…: ಒಂದು ನಿಜಾಮುದ್ದೀನ್ ಕತೆ

0
2206

ಸನ್ಮಾರ್ಗ ವಾರ್ತೆ

ಹಸನುಲ್ ಬನ್ನಾ

70 ವರ್ಷದ ಮಜೀದ್ ಮುಸ್ತಫಾ ತನ್ನ ಮಗನ ಜೊತೆ ದೆಹಲಿಗೆ ಹೊರಡುವಾಗ ಅವರಿಗೆ ಯಾವ ಅನಾರೋಗ್ಯ ಸಮಸ್ಯೆಯೂ ಇರಲಿಲ್ಲ. ಆದರೆ ಲಾಕ್ಡೌನ್ ಕಾರಣದಿಂದಾಗಿ ನಿಜಾಮುದ್ದೀನ್ ಮರ್ಕಜ್ ನಲ್ಲಿ ಅವರು ಸಿಲುಕಿಕೊಂಡರು. ಬಳಿಕ ಅವರನ್ನು ಅಲ್ಲಿಂದ ಬೇರೆ ಕೇಂದ್ರಕ್ಕೆ (ಕ್ವಾರಂಟೈನ್) ಸ್ಥಳಾಂತರಿಸಲಾಯಿತು. ಆಗಲೂ ಅವರಲ್ಲಿ ಕೊರೋನಾದ ಯಾವ ಲಕ್ಷಣಗಳೂ ಕಾಣಿಸಿರಲಿಲ್ಲ. ಅವರ ಜೊತೆಗೆ 49 ವಯಸ್ಸಿನ ಅವರ ಮಗ ರಹಮತ್ತುಲ್ಲಾರನ್ನು ಕೂಡ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆ ಬಳಿಕ ಈ ಮಜೀದ್ ಮುಸ್ತಫಾರನ್ನು ತೀವ್ರ ನಿಗಾ ವಿಭಾಗಕ್ಕೆ ಕಳುಹಿಸಲಾಯಿತು. ಆದರೆ,

ಆ ನಂತರ ಆ ತಂದೆ ಮೃತಪಟ್ಟಿದ್ದು ಮತ್ತು ಅವರ ಮೃತದೇಹವನ್ನು ಪಡೆದುಕೊಳ್ಳಲು ಜನರಿಲ್ಲದೆ ಮೂರು ದಿನಗಳ ಕಾಲ ಆಸ್ಪತ್ರೆಯ ಶವಾಗಾರದಲ್ಲಿ ಇದ್ದದ್ದು ಯಾವುದೂ ಈ ಮಗ ರಹ್ಮತುಲ್ಲಾರಿಗೆ ಗೊತ್ತಿಲ್ಲ. ಆಸ್ಪತ್ರೆಗೆ ಸಂಬಂಧಿಸಿದ ಯಾರು ಕೂಡ ಈ ಮಗನನ್ನು ಸಂಪರ್ಕಿಸಿಲ್ಲ. ಯಾವುದೋ ಅನಾಥ ಮೃತದೇಹವನ್ನು ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ದಫನ ಮಾಡಲಾಗಿದೆ ಅನ್ನುವುದು ಮತ್ತು ಆ ಮೃತದೇಹ ತನ್ನ ತಂದೆಯದ್ದು ಎಂದು ಊರಿನವರಿಗೆ ಕರೆ ಮಾಡಿದಾಗಲೇ ಗೊತ್ತಾಗಿತ್ತು.

ಕೋರೋನಾ ಸಂಬಂಧಿಸಿ ಐಸೋಲೇಶನ್ ನಲ್ಲಿದ್ದ ತಮಿಳ್ನಾಡಿನ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆಂದೂ ಅವರ ಜೊತೆಗೆ ಬಂದವರಾರೂ ಸಂಪರ್ಕಕ್ಕೆ ಸಿಗದಿರುವುದರಿಂದ ಮೃತ ಶರೀರವು ಎಂ ಎನ್ ಜೆ ಪಿ ಆಸ್ಪತ್ರೆಯಲ್ಲಿ ಅನಾಥವಾಗಿ ಇದೆಯೆಂದೂ ಮತ್ತು ಈ ಮೃತದೇಹವನ್ನು ದಫನ ಮಾಡಲು ನೆರವು ನೀಡಬೇಕೆಂದೂ ಕೋರಿ ಮೂರು ದಿನಗಳಿಂದ ಡೆಲ್ಲಿಯ ಸ್ವಯಂಸೇವಕರ ಮೊಬೈಲ್ ನಲ್ಲಿ ಸಂದೇಶವೊಂದು ಹರಿದಾಡುತ್ತಿರುವುದರ ಬೆನ್ನುಹತ್ತಿ ಹೋದಾಗ ಅದೇ ಆಸ್ಪತ್ರೆಯಲ್ಲಿರುವ ಮಗನಿಗೂ ತಿಳಿಸದೇ ಆ ತಂದೆಯನ್ನು ದಫನ ಮಾಡಿದ ಕಥೆ ಬಹಿರಂಗವಾಯಿತು.

ತಬ್ಲೀಗಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲೆಂದು ಮಾರ್ಚ್ ಇಪ್ಪತ್ತಕ್ಕೆ ತಮಿಳ್ನಾಡಿನಿಂದ ಮಜೀದ್ ಮುಸ್ತಫಾ ಹೊರಟಿದ್ದರು. ಅವರ ನೆರವಿಗಾಗಿ ಅವರ ಮಗ ರಹ್ಮತುಲ್ಲಾ ಕೂಡಾ ಹೊರಟಿದ್ದರು. ಮಾರ್ಚ್ 24ಕ್ಕೆ ಹಿಂದಿರುಗಿ ಬರಲು ರೈಲ್ವೆ ಟಿಕೆಟ್ ಅನ್ನೂ ಮಾಡಿಸಿಕೊಂಡಿದ್ದರು. ಆದರೆ 24ರಂದು ರೈಲು ಸೇವೆ ರದ್ದಾದ ಕಾರಣ ಮಾರ್ಚ್ 25ಕ್ಕೆ ವಿಮಾನ ಟಿಕೆಟ್ ಅನ್ನು ಮಾಡಲಾಯಿತು. ಆದರೆ ಅದೂ ರದ್ದಾಯಿತು. ಇದರಿಂದಾಗಿ ಒಂದು ವಾರದ ತನಕ ನಿಜಾಮುದ್ದೀನ್ ಮರ್ಕಜ್ ನಲ್ಲಿ ಉಳಿದ ಬಳಿಕ ಮಾರ್ಚ್ 31ರಂದು ಇವರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು.

ರೋಗಲಕ್ಷಣಗಳು ಇಲ್ಲದಿದ್ದರೂ 60 ವಯಸ್ಸಿಗಿಂತ ಮೇಲಿನವರು ಎಂಬ ನೆಲೆಯಲ್ಲಿ ಮಜೀದ್ ಮುಸ್ತಫಾರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದಾಗ, ತಾನು ತಂದೆಯ ಉಪಚಾರಕ್ಕೆ ಬಂದಿರುವುದರಿಂದ ತನ್ನನ್ನೂ ಅವರ ಜೊತೆ ಸೇರಿಸಬೇಕು ಎಂದು ಮಗ ಕೇಳಿಕೊಂಡಿದ್ದರು. ಹೀಗೆ ಇವರು ಲೋಕನಾಯಕ್ ಆಸ್ಪತ್ರೆಗೆ ತಲುಪಿದಾಗ ಅಲ್ಲಿ ಕೊರೋನಾ ಬಾಧಿತರು ಮತ್ತು ಬಾಧಿತರಲ್ಲದವರನ್ನು ಜೊತೆಯಾಗಿಯೇ ಇರಿಸಲಾಗಿತ್ತು. ಏಪ್ರಿಲ್ 8ರಂದು ಮಜೀದ್ ಮುಸ್ತಫಾರನ್ನು ಐಸಿಯುಗೆ ವರ್ಗಾಯಿಸಲಾಯಿತು. ಆದರೆ, ಆ ಬಳಿಕದ ಯಾವ ಮಾಹಿತಿಯೂ ಮಗ ರಹ್ಮತ್ತುಲ್ಲಾರ ಬಳಿ ಇಲ್ಲ.

ಏಪ್ರಿಲ್ ಎಂಟರ ರಾತ್ರಿ ಮತ್ತು ಏಪ್ರಿಲ್ 9ರ ಬೆಳಿಗ್ಗೆ ಐಸಿಯುವಿನ ಕಿಂಡಿಯಲ್ಲಿ ರಹ್ಮತುಲ್ಲಾ ಅವರು ತನ್ನ ತಂದೆಯನ್ನು ನೋಡಿದ್ದರು. ಮಧ್ಯಾಹ್ನದ ಬಳಿಕ ತಂದೆ ಕಾಣದಾದಾಗ ತಂದೆಗೆ ಏನಾಯಿತೆಂದು ಪ್ರತಿಯೊಬ್ಬರಲ್ಲೂ ವಿಚಾರಿಸಿದ್ದರು. ಏಪ್ರಿಲ್ 10ರಂದು ಊರಿನಲ್ಲಿರುವ ಬಂಧುಗಳ ಮೊಬೈಲ್ ಸಂಖ್ಯೆ ನೀಡಬೇಕೆಂದು ಆಸ್ಪತ್ರೆಯ ಅಧಿಕಾರಿಗಳು ಅವರ ಬಳಿಗೆ ಬಂದಿದ್ದರು. ಇವರು ನಂಬರನ್ನೂ ಕೊಟ್ಟಿದ್ದರು. ಆದರೆ, ತಂದೆ ಮೃತಪಟ್ಟ ವಿಚಾರ ಅವರಿಗೆ ತಿಳಿದಿರಲಿಲ್ಲ.

ಲೋಕನಾಯಕ ಆಸ್ಪತ್ರೆಯಲ್ಲಿ ಅನಾಥ ಮೃತದೇಹವಿದ್ದುದು, ಮೃತದೇಹದ ಅಂತಿಮ ಸಂಸ್ಕಾರಕ್ಕಾಗಿ ಸ್ವಯಂಸೇವಕರ ನಡುವೆ ಚರ್ಚೆ ನಡೆದುದು ಇವ್ಯಾವೂ ಈ ಮಗನಿಗೆ ಗೊತ್ತಿಲ್ಲ. ಮೃತದೇಹವನ್ನು ಸ್ವಯಂಸೇವಕರು ನಿಜಾಮುದ್ದೀನ್ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಿದ ಬಳಿಕ ಈ ಮಗನಿಗೆ ವಿಷಯ ಗೊತ್ತಾಯಿತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.