✍️ ಅಮಾನ್
ನಾವು ಎಂತೆಂಥ ಖತರ್ನಾಕ್ ಜನಪ್ರತಿನಿಧಿಗಳ್ನ ಹೊಂದಿದ್ದೇವೆ ಅನ್ನುವುದಕ್ಕೆ ಒಂದು ಉದಾಹರಣೆ ದೆಹಲಿ ಸರ್ಕಾರದ ಈಗಿನ ಸಚಿವ ಕಪಿಲ್ ಮಿಶ್ರ. 2020ರಲ್ಲಿ ದೆಹಲಿಯಲ್ಲಿ ಕೋಮು ಸಂಘರ್ಷ ನಡೆದಿತ್ತು. ಎನ್ ಆರ್ ಸಿ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದ ಸಮಯ. ಶಾಹೀನ್ ಬಾಗ್ನಲ್ಲಿ ಎನ್ಆರ್ಸಿ ವಿರೋಧಿ ಪ್ರತಿಭಟನಾ ಟೆಂಟ್ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಆಪ್ ಸರಕಾರ ದೆಹಲಿಯಲ್ಲಿ ಆಡಳಿತ ನಡೆಸ್ತಾ ಇತ್ತು.
ಬಿಜೆಪಿ ಮತ್ತು ಅದರ ಬೆಂಬಲಿಗ ಗುಂಪು ಈ ಪ್ರತಿಭಟನೆಯನ್ನು ವಿರೋಧಿಸಿ ಪ್ರತಿಕ್ರಿಯೆಯನ್ನು ಕೊಡುತ್ತಿತ್ತು. ಈ ಸಂದರ್ಭದಲ್ಲಿ ಕಪಿಲ್ ಮಿಶ್ರ ಅವರು ಅತ್ಯಂತ ಪ್ರಚೋದನೆಕಾರಿ ಭಾಷಣಗಳನ್ನು ಮಾಡಿದ್ರು. ಪ್ರತಿಭಟನಾಕಾರರ ವಿರುದ್ಧ ದಂಗೆ ಏಳುವುದಕ್ಕೆ ಪೂರಕವಾಗಿ ನಡೆದುಕೊಂಡಿದ್ದರು. ತನ್ನ ಬೆಂಬಲಿಗರನ್ನು ಅದಕ್ಕೆ ಪ್ರಚೋದಿಸಿದ್ದರು ಅನ್ನುವ ಆರೋಪ ಆಗ ಕೇಳಿ ಬಂದಿತ್ತು. ಅದಕ್ಕೆ ಪೂರಕ ವಿಡಿಯೋ ದಾಖಲೆಗಳು ಕೂಡ ಇತ್ತು.
ಗಲಭೆಯ ಸ್ಥಳದಲ್ಲಿ ಕಪಿಲ್ ಮಿಶ್ರಾ ಅವರು ಇದ್ದರು ಅನ್ನುವುದಕ್ಕೆ ಆಗಿನ ಸಂದರ್ಭದ ವಿಡಿಯೋಗಳು ಕೂಡ ಹೇಳ್ತಾ ಇತ್ತು. 2024 ಆಗಸ್ಟ್ನಲ್ಲಿ ಯಮುನಾ ವಿಹಾರ್ ನಿವಾಸಿ ಮೊಹಮ್ಮದ್ ಇಲ್ಯಾಸ್ ಈ ಬಗ್ಗೆ ಪೋಲೀಸರಿಗೆ ದೂರು ಸಲ್ಲಿಸಿದ್ದರು. ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಅಂತ ಕೋರಿದ್ದರು.
2020 ಫೆಬ್ರವರಿ 23ರಂದು ಮಿಶ್ರ ಮತ್ತು ಅವರ ಸಂಗಡಿಗರು ಕರ್ದಂ ಪುರಿಯಲ್ಲಿ ರಸ್ತೆ ತಡೆಯುವುದನ್ನು ಮತ್ತು ಬೀದಿ ವ್ಯಾಪಾರಿಗಳ ಗಾಡಿಗಳನ್ನು ಪುಡಿಗೈಯುವುದನ್ನು ನಾನು ನೋಡಿದ್ದೇನೆ ಎಂದು ಇಲ್ಯಾಸ್ ತನ್ನ ದೂರಿನಲ್ಲಿ ಹೇಳಿದ್ದರು ಆದರೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದರು. ಈ ಕಾರಣದಿಂದ ಮೊಹಮ್ಮದ್ ಇಲ್ಯಾಸ್ ಅವರು ನ್ಯಾಯಾಲಯಕ್ಕೆ ದೂರು ನೀಡಿದರು. ಇದೀಗ ದೆಹಲಿಯ ನ್ಯಾಯಾಲಯಕಪಿಲ್ ಮಿಶ್ರ ವಿರುದ್ಧ ಹೆಚ್ಚುವರಿ ತನಿಖೆಗೆ ಆದೇಶಿಸಿದೆ.
ಆದರೆ ಈ ಕಪಿಲ್ ಮಿಶ್ರ ಎಂತಹ ಹೊಣೆಗೇಡಿ ಅನ್ನೋದನ್ನು ಇಸ್ಮತ್ ಆರಾ ಎಂಬ ಯುವತಿ ನಡೆಸಿದ ಸಂದರ್ಶನದಲ್ಲಿ ಗೊತ್ತಾಗುತ್ತೆ. ಇದನ್ನು ದಿ ವೈರ್ ಜಾಲತಾಣ ಪ್ರಕಟಿಸಿದೆ. ಕಪಿಲ್ ಮಿಶ್ರ ಅವರನ್ನು ಕೂರಿಸಿಕೊಂಡು ಇಸ್ಮತ್ ಆರಾ ಪ್ರಶ್ನೆಗಳನ್ನು ಕೇಳುತ್ತಾರೆ. 2020 ರಲ್ಲಿ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೀವು ಪ್ರಚೋದನೆಕಾರಿ ಘೋಷಣೆಗಳನ್ನು ಕೂಗಿದ್ದೀರಿ.
ಜಾಮಿಯಾ ಗಡ್ಡರೊಂಕೋ ಗೋಲಿ ಮಾರೋ ಜೆಎನ್ಯು ಗದ್ದಾರೋಂಕೊ ಗೋಲಿ ಮಾರೋ ಎಂದು ಹೇಳಿದ್ದೀರಿ ಎಂದು ಆಕೆ ಹೇಳ್ತಾರೆ. ಆಗ ಕಪಿಲ್ ಮಿಶ್ರ ನಾನು ಹಾಗೆ ಹೇಳಿಯೇ ಇಲ್ಲ ಅಂತ ಹೇಳುತ್ತಾರೆ. ಮತ್ತೆ ಮತ್ತೆ ವಾದಿಸ್ತಾರೆ ಆಗ ಇಸ್ಮತ್ ಆರಾ ಆ ಹಿಂದಿನ ವಿಡಿಯೋವನ್ನು ತೋರಿಸುತ್ತಾರೆ ಆಗ ಅವರು ರಾಗ ಬದಲಾಯಿಸ್ತಾರೆ.
ಒಂದು ಕಡೆ ಸಂಘರ್ಷಕ್ಕೆ ಪ್ರಚೋದನೆ ಕೊಡೋದು, ಸಂಘರ್ಷದಲ್ಲಿ ಭಾಗಿಯಾಗೋದು ಮತ್ತು ಪ್ರಶ್ನಿಸಿದ್ರೆ ನಾನು ಹಾಗೆ ಹೇಳಿಲ್ಲ ಅಂತ ಹೇಳೋದು, ದಾಖಲೆ ತೋರಿಸಿದಾಗ ರಾಗ ಬದಲಾಯಿಸುವುದು… ಇದುವೇ ಕಪಿಲ್ ಮಿಶ್ರ. ಇವರೀಗ ದೆಹಲಿ ಸರಕಾರದಲ್ಲಿ ಸಚಿವರಾಗಿ ಹೊಣೆ ನಿಭಾಯಿಸುತ್ತಿದ್ದಾರೆ.
ಹಿಂದೂ ಮುಸ್ಲಿಂ ಘರ್ಷಣೆಗೆ ಪ್ರಚೋದನೆ ನೀಡಿದ ವ್ಯಕ್ತಿಯೋರ್ವ ಸಚಿವನಾದರೆ ಅವರು ಜನರಿಗೆ ಯಾವ ಬಗೆಯ ರಕ್ಷಣೆಯನ್ನು ಕೊಡಬಲ್ಲರು? ಕನಿಷ್ಠ ತಾನು ಹೇಳಿದ ಮಾತನ್ನು ಒಪ್ಪಿಕೊಳ್ಳದೆ ದಾಖಲೆ ನೀಡುವವರೆಗೆ ಸುಳ್ಳು ಹೇಳಿದ ವ್ಯಕ್ತಿಯಿಂದ ಜನರು ಏನನ್ನು ನಿರೀಕ್ಷಿಸಬಹುದು? ಇಂಥವರನ್ನು ಜೈಲಿಗೆ ತಳ್ಳದಿದ್ದರೆ ನಾಗರಿಕ ಸಮಾಜಕ್ಕೆ ಸಿಗುವ ಸಂದೇಶ ಏನು?












