ಕಾವಲುಗಾರನನ್ನು ಕೊರೋನಾ ಪೀಡಿತ ಎಂದು ದೂಷಿಸಿ ಕೇಸು ದಾಖಲಾಗುವಂತೆ ನೋಡಿಕೊಂಡ ಕುಟುಂಬಕ್ಕೆ ಕೊರೋನಾ: ಕಾವಲುಗಾರ ನೆಗೆಟಿವ್: ದೆಹಲಿಯಲ್ಲೊಂದು ವಿಚಿತ್ರ ಘಟನೆ

0
1270

ಸನ್ಮಾರ್ಗ ವಾರ್ತೆ

ನವದೆಹಲಿ ಏಪ್ರಿಲ್ 17- ಕೊರೋನಾ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಡಿಫೆನ್ಸ್ ಕಾಲನಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಈ ಕಾಲನಿಯ ಕಾವಲುಗಾರನನ್ನು ಮೂವರ ಕುಟುಂಬವೊಂದು ಕೊರೋನಾ ಸೋಂಕು ಪೀಡಿತನೆಂದು ದೂರಿತ್ತು. ಆದರೆ ಆತನ ಪರೀಕ್ಷೆ ಮಾಡಲಾದಾಗ ನೆಗೆಟಿವ್ ಫಲಿತಾಂಶ ಬಂದಿದೆ ಮತ್ತು ಆತನ ಮೇಲೆ ಆರೋಪ ಹೊರಿಸಿದ ಕುಟುಂಬದ ಮೂವರಲ್ಲಿ 80 ವರ್ಷದ ಹಿರಿಯರು ಕೊರೋನಾ ಪೀಡಿತರಾಗಿ ಸಾವಿಗೀಡಾಗಿದ್ದಾರೆ ಮತ್ತು ಮಗ ವೆಂಟಿಲೇಟರ್ ನಲ್ಲಿದ್ದಾರೆ. ಅವರ ಪತ್ನಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕಳೆದ ತಿಂಗಳು ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ತಬ್ಲೀಗ್ ಜಮಾಅತ್ ನ ಸಭೆಗೆ ಈ ಕಾವಲುಗಾರ ಹೋಗಿದ್ದ ಎಂದು ಕುಟುಂಬ ಆರೋಪಿಸಿತ್ತು. ಅದರನ್ವಯ ಆತನ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು. ಪೊಲೀಸರ ಪ್ರಕಾರ ಆತನ ಮೊಬೈಲ್ ದಾಖಲೆಗಳು ನಿಜಾಮುದ್ದೀನ್ ಏರಿಯಾದಲ್ಲಿ ಕಂಡು ಬಂದಿದ್ದು, ಆತ ತಬ್ಲೀಗಿ ಸಭೆಗೆ ಹೋಗಿರುವ ಸಾಧ್ಯತೆ ಇದೆ ಮತ್ತು ಸದ್ಯ ಆತ ತಪ್ಪಿಸಿಕೊಂಡಿದ್ದಾನೆ ಎಂದು ಕಾಲನಿ ನಿವಾಸಿಗಳಿಗೆ ಎಚ್ಚರಿಕಾ ಸಂದೇಶವನ್ನು ರವಾನಿಸಿದ್ದರು. ಅಲ್ಲದೆ, ಕಳೆದೊಂದು ವಾರದಲ್ಲಿ ಈ ಕಾವಲುಗಾರ ಎಲ್ಲಿದ್ದಾನೆ ಎಂಬ ಮಾಹಿತಿಯೂ ಬಂದಿರಲಿಲ್ಲ.

ಒಂದು ಮಾಹಿತಿಯಂತೆ, ಪೊಲೀಸರೇ ಆತನನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿದ್ದರು ಎಂದು ಹೇಳಲಾಗುತ್ತದೆ. ಆದರೆ ತಾನು ತನ್ನ ಮಾಲೀಕನ ಒಂಟಿಕೋಣೆಯಲ್ಲಿ ಕ್ವಾರಂಟೈನ್ ನಲ್ಲಿ ಇರುವುದಾಗಿ ಆತ ಎನ್ ಡಿಟಿವಿಗೆ ತಿಳಿಸಿದ್ದಾನೆ. ತನ್ನ ಯಜಮಾನ RML ಆಸ್ಪತ್ರೆಯಿಂದ ಕರೆಯೊಂದನ್ನು ಸ್ವೀಕರಿಸಿದ್ದು ಅದರ ಪ್ರಕಾರ ತನ್ನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಫಲಿತಾಂಶ ನೆಗೆಟಿವ್ ಬಂದಿದೆ ಎಂದೂ ಆತ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ

ನಿನ್ನ ಫಲಿತಾಂಶ ನೆಗಟಿವ್ ಆಗಿದ್ದು ನೀನು ಚಿಂತಿಸುವ ಅಗತ್ಯ ಇಲ್ಲ ಎಂದು ಫೋನ್ ಮುಖಾಂತರ ಆಸ್ಪತ್ರೆಯಿಂದ ತನಗೆ ತಿಳಿಸಲಾಗಿದೆ ಎಂದು ಕಾವಲುಗಾರ ಹೇಳಿದ್ದಾನೆ. ಮಾತ್ರವಲ್ಲ ತಾನು ನಿಜಾಮುದ್ದೀನ್ ಸಮ್ಮೇಳನಕ್ಕೆ ಹೋಗಿಲ್ಲ. ನಿಜಾಮುದ್ದೀನ್ ಮಸೀದಿಗಿಂತ 20 ಮೀಟರ್ ದೂರ ಇರುವ ಮಸೀದಿಗೆ ನಾನು ನಮಾಜ್ ಗಾಗಿ ಹೋಗುತ್ತಲಿದ್ದು, ಈ ಮಸೀದಿಯು ನಿರ್ದಿಷ್ಟ ಸಮಯದಲ್ಲಿ ತೆರೆದು ನಮಾಝಿನ ಬಳಿಕ ಮುಚ್ಚುವ ಮಸೀದಿಯಾಗಿದೆ ಮತ್ತು ನಾನೆಂದು ಕೂಡ ಅಲ್ಲಿ ತಂಗಿಲ್ಲ ಎಂದು ಆತ ಹೇಳಿದ್ದಾನೆ ಎನ್ ಡಿಟಿವಿ ವರದಿ ಮಾಡಿದೆ. ಪೊಲೀಸರು ಕೂಡ ಆತನ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿರುವುದನ್ನು ಎನ್ ಡಿಟಿವಿಗೆ ಸ್ಪಷ್ಟಪಡಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.