‘ಕ್ರಮವಿಧಾನಗಳನ್ನು ಅನುಸರಿಸದೆ ಮಸೀದಿಯೊಳಗಿನ ವಿದ್ಯುತ್ ಮತ್ತು ನೀರನ್ನು ಕಡಿತಗೊಳಿಸುವಂತಿಲ್ಲ’; ರೇಸ್ ಕೋರ್ಸ್ ಮಸೀದಿ ವಿಚಾರದಲ್ಲಿ ದೆಹಲಿ ಹೈಕೋರ್ಟ್ ನಿರ್ಣಾಯಕ ಹಸ್ತಕ್ಷೇಪ

0
167

ಸನ್ಮಾರ್ಗ ವಾರ್ತೆ

ನವದೆಹಲಿ: ದೆಹಲಿಯಲ್ಲಿರುವ ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸದ ಬಳಿಯಿರುವ ‘ರೇಸ್ ಕೋರ್ಸ್ ಮಸೀದಿ’ಯ ವಿದ್ಯುತ್ ಮತ್ತು ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿದ ಘಟನೆಯಲ್ಲಿ ದೆಹಲಿ ಹೈಕೋರ್ಟ್ ಪ್ರಮುಖ ವೀಕ್ಷಣೆ ಮಾಡಿದೆ. ಮುನ್ಸೂಚನೆ ಇಲ್ಲದೆ ವಿದ್ಯುತ್ ಮತ್ತು ನೀರಿನಂತಹ ಅತ್ಯಗತ್ಯ ಸೇವೆಗಳನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಸುಬ್ರಮಣಿಯಂ ನೇತೃತ್ವದ ಪೀಠವು ಈ ತೀರ್ಪು ನೀಡಿದೆ. ನೀರು ಮತ್ತು ವಿದ್ಯುತ್‌ನಂತಹ ಮೂಲಭೂತ ಅಗತ್ಯಗಳ ಕಡಿತದ ವಿರುದ್ಧ ಮಸೀದಿಯ ಇಮಾಮ್ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸುವಾಗ ನ್ಯಾಯಾಲಯವು ಈ ನಿರ್ಣಾಯಕ ವೀಕ್ಷಣೆಯನ್ನು ಮಾಡಿದೆ.

ಈ ಘಟನೆಯಲ್ಲಿ ನವದೆಹಲಿ ಮುನಿಸಿಪಲ್ ಕೌನ್ಸಿಲ್ (NDMC) ಮತ್ತು ದೆಹಲಿ ವಕ್ಫ್ ಮಂಡಳಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ನ್ಯಾಯಾಲಯ ಅವರಿಗೆ ಸೂಚಿಸಿದೆ. ಈ ಪ್ರಕರಣದ ವಿಚಾರಣೆ ಡಿಸೆಂಬರ್ 14 ರಂದು ಮತ್ತೆ ನಡೆಯಲಿದೆ.

ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಬಳಿಯಿರುವ ರೇಸ್ ಕೋರ್ಸ್ ಕ್ಲಬ್ ಸಂಕೀರ್ಣದ ಒಳಗಿರುವ ಮಸೀದಿಯ ವಿದ್ಯುತ್ ಮತ್ತು ನೀರು ಸರಬರಾಜನ್ನು ಅಕ್ಟೋಬರ್ 7 ರಂದು ಕಡಿತಗೊಳಿಸಲಾಗಿತ್ತು. ಮಸೀದಿಗೆ ಅತ್ಯಗತ್ಯ ಸೇವೆಗಳನ್ನು ತಕ್ಷಣವೇ ಮರುಸ್ಥಾಪಿಸುವಂತೆ ಕೋರಿದ ಹಿಂದಿನ ಅರ್ಜಿಯನ್ನು ತಾಂತ್ರಿಕ ಕಾರಣಗಳಿಗಾಗಿ ವಜಾಗೊಳಿಸಲಾಗಿದ್ದರೂ, ಯಾವುದೇ ಪೂರ್ವ ನೋಟಿಸ್ ನೀಡದೆ ಅಂತಹ ಅತ್ಯಗತ್ಯ ಸೇವೆಗಳನ್ನು ಏಕಪಕ್ಷೀಯವಾಗಿ ಕಡಿತಗೊಳಿಸಲು ಅಧಿಕಾರಿಗಳಿಗೆ ಯಾವುದೇ ಹಕ್ಕಿಲ್ಲ ಎಂದು ವಿಭಾಗೀಯ ಪೀಠವು ಕಟ್ಟುನಿಟ್ಟಾಗಿ ವೀಕ್ಷಿಸಿದೆ. ವಕ್ಫ್ ಮಂಡಳಿಯ ಅಡಿಯಲ್ಲಿದ್ದು ಗ್ರೇಡ್-2 ಪಾರಂಪರಿಕ ತಾಣವಾಗಿರುವ ರೇಸ್ ಕೋರ್ಸ್ ಮಸೀದಿಯು, ಕೇಂದ್ರ ಸರ್ಕಾರ ಮತ್ತು ಭೂಮಿ ಹಾಗೂ ಅಭಿವೃದ್ಧಿ ಕಚೇರಿಯಿಂದ ಭದ್ರತೆ ಮತ್ತು ಭೂಸ್ವಾಧೀನ ಪ್ರಕ್ರಿಯೆಗಳ ಕುರಿತು ಪ್ರಮುಖ ವಿವಾದಗಳಲ್ಲಿ ಸಿಲುಕಿಕೊಂಡಿದೆ.

ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನ ಮಂತ್ರಿಗಳ ನಿವಾಸದ ಬಳಿ 53 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ದೆಹಲಿ ರೇಸ್ ಕ್ಲಬ್‌ನ ಸಮೀಪದಲ್ಲಿ ಈ ಮಸೀದಿ ಇದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಭೂಮಿ ಮತ್ತು ಅಭಿವೃದ್ಧಿ ಕಚೇರಿಯು ಈ ಪ್ರದೇಶದಲ್ಲಿ ತನ್ನ ಭೂಸ್ವಾಧೀನದ ಭಾಗವಾಗಿ ಬೃಹತ್ ಪ್ರಮಾಣದ ತೆರವು ಕಾರ್ಯಾಚರಣೆಯನ್ನು ನಡೆಸುತ್ತಿದೆ. ರೇಸ್ ಕ್ಲಬ್ ಮತ್ತು ಜೈಪುರ ಪೋಲೋ ಗ್ರೌಂಡ್ ಹೊರತುಪಡಿಸಿ, ಸಮೀಪದ ಕೊಳೆಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಸುಮಾರು 700 ಕುಟುಂಬಗಳನ್ನು ಈಗಾಗಲೇ ಖಾಲಿ ಮಾಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಸೀದಿಯನ್ನೂ ಕೆಡವಬಹುದು ಎಂಬ ಕಳವಳ ವ್ಯಕ್ತವಾಗಿತ್ತು. ಮಸೀದಿಯ ವಿರುದ್ಧ ನಾಲ್ಕು ವಾರಗಳ ಕಾಲ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಕಳೆದ ವಾರ ದೆಹಲಿ ಹೈಕೋರ್ಟ್‌ಗೆ ಭರವಸೆ ನೀಡಿತ್ತು. ಈ ಮಧ್ಯೆ, ನೋಟಿಸ್ ನೀಡದೆ ವಿದ್ಯುತ್ ಮತ್ತು ನೀರು ಸರಬರಾಜು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಮಸೀದಿಯ ಇಮಾಮ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಯಾವುದೇ ಕಾನೂನಾತ್ಮಕ ಪ್ರಕ್ರಿಯೆಯನ್ನು ಅನುಸರಿಸದೆ ಮಸೀದಿಯ ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸಲಾಗಿದೆ ಎಂದು ಇಮಾಮ್ ಪರ ಹಾಜರಾದ ವಕೀಲ ಎಂ. ಸುಫಿಯಾನ್ ಸಿದ್ದಿಕಿ ನ್ಯಾಯಾಲಯದಲ್ಲಿ ವಾದಿಸಿದರು. ಹತ್ತಿರದ ಜುಗ್ಗಿ ಕ್ಲಸ್ಟರ್‌ಗಳು ಮತ್ತು ಕೊಳೆಚೆ ಪ್ರದೇಶಗಳ ತೆರವುಗೊಳಿಸುವಿಕೆಗೆ ಸಂಬಂಧಿಸಿದ ಹಿಂದಿನ ನ್ಯಾಯಾಲಯದ ಆದೇಶಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಎನ್‌ಡಿಎಮ್‌ಸಿ ಹೇಳುತ್ತವೆ. ಆದರೆ, ಮಸೀದಿಯು ಆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿರಲಿಲ್ಲ ಮತ್ತು ಮಸೀದಿಯು ವಕ್ಫ್ ಆಸ್ತಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಿದ್ಯುತ್ ಮತ್ತು ನೀರನ್ನು ಕಡಿತಗೊಳಿಸಲು ಅಧಿಕಾರಿಗಳಿಗೆ ನಿಜವಾಗಿ ಅಧಿಕಾರವಿದೆಯೇ ಎಂಬುದನ್ನು ಏಕಸದಸ್ಯ ಪೀಠವು ಪರಿಶೀಲಿಸಿಲ್ಲ ಎಂದು ಮೇಲ್ಮನವಿಯಲ್ಲಿ ಬೆಟ್ಟು ಮಾಡಲಾಗಿದೆ.

ಅಕ್ಟೋಬರ್ 7 ರಂದು ಕಡಿತಗೊಳಿಸಲಾದ ಮಸೀದಿಯ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕಗಳನ್ನು ಮರುಸ್ಥಾಪಿಸುವಂತೆ ಕೋರಿ ದೆಹಲಿ ವಕ್ಫ್ ಮಂಡಳಿಯು ಅಕ್ಟೋಬರ್ 19 ರಂದು ಎಲ್&ಡಿಒಗೆ (L&DO) ಪತ್ರ ಬರೆದಿತ್ತು. ಗ್ರೇಡ್ 2 ಪಾರಂಪರಿಕ ವಕ್ಫ್ ಆಸ್ತಿಯಾಗಿರುವ ಮಸೀದಿಯನ್ನು ಕೆಡವಬಹುದು ಎಂಬ ಕಳವಳವನ್ನೂ ಈ ಪತ್ರದಲ್ಲಿ ಎತ್ತಲಾಗಿತ್ತು. ನೆಲಸಮ ಮತ್ತು ಸೀಲಿಂಗ್‌ನಂತಹ ಕ್ರಮಗಳನ್ನು ಕೈಗೊಳ್ಳಬಾರದು ಮತ್ತು ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಅರ್ಜಿದಾರರು ಈ ಹಿಂದೆ ಪತ್ರ ಬರೆದಿದ್ದರು. ಈ ಪ್ರಕರಣದ ವಿಚಾರಣೆ ಡಿಸೆಂಬರ್ 14 ರಂದು ಮತ್ತೆ ನಡೆಯಲಿದೆ.