ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಧರ್ಮ

0
119

✍️ ಅಬೂ ಆಫಿಯಾ

ನಮ್ಮ ದೇಶವನ್ನು ಜಗತ್ತಿನ ಅತಿ ದೊಡ್ಡ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಲಾಗುತ್ತದೆ. ಏನಿದರ ಅರ್ಥ? ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಎಂಬ ಈ ಎರಡು ಪದಗಳು Secular ಮತ್ತು Democracy ಎಂಬ ಆಂಗ್ಲ ಪದಗಳಿಂದ ಎರವಲು ಪಡೆದವುಗಳು. ಸೆಕ್ಯುಲರ್ ಎಂದರೆ ಆಡಳಿತ, ನೀತಿ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಧರ್ಮ ಮತ್ತು ಜಾತಿಗಳಿಗೆ ಯಾವುದೇ ಸ್ಥಾನ ಇರುವುದಿಲ್ಲ. ಅದೇ ರೀತಿ ಪ್ರಜೆಗಳಿಂದ ಆಳಲ್ಪಡುವುದು ಎಂಬುದು ಡೆಮಾಕ್ರೆಸಿಯ ತಾತ್ಪರ್ಯ.

ಜಗತ್ತಿನಲ್ಲಿ ನಾವು ಎರಡು ರೀತಿಯ ಜಾತ್ಯತೀತ ಪ್ರಜಾಪ್ರಭುತ್ವವನ್ನು ಕಾಣುತ್ತೇವೆ. ಮೊದಲನೆಯದು ಸಾರ್ವಜನಿಕವಾಗಿ ಯಾವುದೇ ರೀತಿಯಲ್ಲೂ ಧರ್ಮಕ್ಕೆ ಆಸ್ಪದವಿಲ್ಲದ ವ್ಯವಸ್ಥೆ. ಈ ವ್ಯವಸ್ಥೆಯಡಿ ಧಾರ್ಮಿಕ ಆಚರಣೆಗಳು ಜನರ ವೈಯಕ್ತಿಕ ವಿಷಯಗಳಾಗಿದ್ದು, ತಂತಮ್ಮ ಮನೆಯೊಳಗೆ ಆಚರಿಸುವುದಕ್ಕೆ ಅಡ್ಡಿಯಿಲ್ಲ. ಸಾರ್ವಜನಿಕವಾಗಿ ಇದು ಅಪರಾಧ. ಯೂನಿಯನ್ ಆಫ್ ಸೋವಿಯಟ್ ಸೋಶಿಯಲಿಸ್ಟ್ ರಿಪಬ್ಲಿಕ್ (USSR) ಇದಕ್ಕೆ ಸ್ಪಷ್ಟ ಉದಾಹರಣೆ. (ಅದೀಗ ಒಡೆದು ಚೂರಾಗಿ ರಷ್ಯಾ ಮಾತ್ರ ಹೆಸರಿಗೆ ಉಳಿದಿದೆ ಎಂಬುದು ಬೇರೆ ವಿಷಯ.) ಅಂದು ಸೋವಿಯೆಟ್ ರಷ್ಯಾದಲ್ಲಿ ಮಸೀದಿ, ಚರ್ಚುಗಳನ್ನೆಲ್ಲ ಮುಚ್ಚಿಬಿಡಲಾಗಿತ್ತು.

ಎರಡನೆಯದು ಅಮೇರಿಕ, ಫ್ರಾನ್ಸ್ ಮುಂತಾದ ರಾಷ್ಟ್ರಗಳಲ್ಲಿ ಕಾಣುವಂತಹುದು. ರಾಷ್ಟ್ರದ ಆಡಳಿತ, ನೀತಿ ನಿರೂಪಣೆಯಲ್ಲಿ ಜಾತ್ಯತೀತತೆ ಅಂದರೆ ಧರ್ಮಕ್ಕೆ ಯಾವುದೇ ಆಸ್ಪದವಿಲ್ಲ. ಆದರೆ ಜನರು ವೈಯಕ್ತಿಕವಾಗಿಯೂ ಸಾರ್ವಜನಿಕವಾಗಿಯೂ ತಂತಮ್ಮ ಧರ್ಮಗಳ ಆಚರಣೆಗಳನ್ನು ಮಾಡಿಕೊಳ್ಳಬಹುದು. ಜನರಿಗೆ ತಮ್ಮ ಧರ್ಮದ ಪ್ರಚಾರ, ಪ್ರಸಾರದ ಹಕ್ಕು ಇರುವುದು. ತಮ್ಮದೇ ಧಾರ್ಮಿಕ ಶಾಲೆಗಳನ್ನು, ಮದ್ರಸಾಗಳನ್ನು ಸ್ಥಾಪಿಸಿಕೊಳ್ಳಬಹುದು.

ಈ ಎರಡೂ ವ್ಯವಸ್ಥೆಗಳಲ್ಲಿ ಇರುವ ಒಂದು ಸಾಮ್ಯತೆ ಎಂದರೆ ಸಾಮೂಹಿಕ ವ್ಯವಸ್ಥೆಯಲ್ಲಿ ಧರ್ಮ ನಿರಪೇಕ್ಷತೆ ಇರಬೇಕು ಎಂಬುದಾಗಿದೆ. ಮಾನವನು ತನ್ನ ಅನುಭವಗಳ ಬೆಳಕಿನಲ್ಲಿ, ಬುದ್ಧಿ ಬಳಸಿ ಸಾರ್ವತ್ರಿಕ ತೀರ್ಮಾನಗಳನ್ನು ತಳೆಯಬೇಕಾಗಿದೆಯೇ ಹೊರತು ದೈವಿಕ ಗ್ರಂಥಗಳ ಆಧಾರದಲ್ಲಿ ಅಲ್ಲ.

ಆದರೆ ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ. ಬಹುಸಂಸ್ಕೃತಿ ಮತ್ತು ಬಹುಧರ್ಮೀಯ ರಾಷ್ಟ್ರದಲ್ಲಿ ಪ್ರತಿಯೊಂದು ಧರ್ಮದ ಅನುಯಾಯಿಗಳಿಗೆ ತಂತಮ್ಮ ಧರ್ಮದ ಆಚರಣೆಗಳನ್ನು ಪಾಲಿಸಲು ಸಂಪೂರ್ಣ ಸ್ವಾತಂತ್ರ್ಯ ಇದೆಯೇ? ಆಡಳಿತವು ನಿಷ್ಪಕ್ಷತೆ ಪಾಲಿಸುತ್ತದೆಯೇ ಅಥವಾ ಒಂದು ನಿರ್ದಿಷ್ಟ ಧರ್ಮದ ಆಚರಣೆಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಇನ್ನೊಂದು ಧರ್ಮದ ಆಚರಣೆಗಳಿಗೆ ಅಡ್ಡಿಪಡಿಸುವ ಮೂಲಕ ಪಕ್ಷಪಾತ ಮೆರೆಯುತ್ತದೆಯೇ?

ಭಾರತವು ಆರಂಭದಲ್ಲಿ ಹೇಳಿದಂತೆ ಒಂದು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿಯೂ ಸಾಮೂಹಿಕ ವ್ಯವಹಾರಗಳಲ್ಲಿ ಆಡಳಿತವು ಯಾವುದೇ ಧರ್ಮ ಅಥವಾ ಧಾರ್ಮಿಕ ಗ್ರಂಥಕ್ಕೆ ಬದ್ಧವಲ್ಲ. ಅದರ ಸಕಲ ಕಾನೂನುಗಳು, ನೀತಿ ನಿಯಮಗಳು ಮಾನವ ನಿರ್ಮಿತವಾಗಿದ್ದು, ಬಹುಮತದ ಆಧಾರದಲ್ಲಿ ತಳೆಯಲ್ಪಡುತ್ತವೆ. ಧರ್ಮಕ್ಕೆ ಸಂಬಂಧಪಟ್ಟಂತೆ, ಅದು ಜನರ ವೈಯಕ್ತಿಕ ವಿಷಯವಾಗಿದ್ದು, ತಂತಮ್ಮ ಧರ್ಮದಂತೆ ಬಾಳುವ ಸ್ವಾತಂತ್ರ್ಯ ಸಕಲ ಭಾರತವಾಸಿಗಳಿಗೂ ಇದೆ. ಭಾರತೀಯರಿಗೆ ತಮ್ಮಿಷ್ಟದ ಧರ್ಮವನ್ನು ಸ್ವೀಕರಿಸುವ, ಅದರಂತೆ ಆರಾಧಿಸುವ, ಅದರಂತೆ ಬಾಳುವ ಸ್ವಾತಂತ್ರ್ಯ ಇದೆ. ಅಷ್ಟೇ ಅಲ್ಲ, ತಂತಮ್ಮ ಧರ್ಮದ ಪ್ರಚಾರವನ್ನೂ ಮಾಡುವ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನವು ಸಕಲ ಭಾರತೀಯರಿಗೂ ನೀಡಿದೆ. ಆದರೆ ಈ ಧಾರ್ಮಿಕ ಆಚರಣೆಗಳು ಇತರ ಧರ್ಮಾವಲಂಬಿಗಳಿಗೆ ತೊಂದರೆಯನ್ನುಂಟು ಮಾಡುವಂತೆ ಇರಬಾರದು.

ಸಂವಿಧಾನವು ಜನರಿಗೆ ತಮ್ಮಿಷ್ಟದ ಧಾರ್ಮಿಕ ಆಚಾರಗಳನ್ನು ಅನುಷ್ಠಾನಿಸುವ ಸ್ವಾತಂತ್ರ್ಯ ನೀಡಿರುವುದರ ಜತೆಗೆ ಅದರ ಪ್ರಚಾರ-ಪ್ರಸಾರದ ಸ್ವಾತಂತ್ರ್ಯವನ್ನೂ ನೀಡಿದೆ. ಆದರೆ ಬಲವಂತದ ಮತಾಂತರ ಸಲ್ಲದು. ದೇಶವು ಜಾತ್ಯತೀತ ಅಥವಾ ಧರ್ಮನಿರಪೇಕ್ಷವಾಗಿರಬೇಕೆಂದು ಹೇಳುತ್ತದೆ. ಜತೆಗೆ ಧಾರ್ಮಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿಷ್ಪಕ್ಷವಾಗಿರಬೇಕು ಎಂದೂ ಸಾರುತ್ತದೆ. ಪ್ರತಿಯೊಂದು ಧರ್ಮದ ಅನುಯಾಯಿಗಳಿಗೂ ದೇಶದ ಪ್ರಜೆಗಳೆಂಬ ನೆಲೆಯಲ್ಲಿ ಸಮಾನ ಹಕ್ಕು, ಸಮಾನ ಸ್ವಾತಂತ್ರ್ಯ, ಸಮಾನ ಅಧಿಕಾರ ಇರಬೇಕು ಎಂದು ಹೇಳುತ್ತದೆ.

ಒಟ್ಟಿನಲ್ಲಿ ಭಾರತದ ಆಡಳಿತ ವ್ಯವಹಾರಗಳಲ್ಲಿಯೂ ಧರ್ಮಕ್ಕೆ ಸ್ಥಾನವಿಲ್ಲ. ಸರಕಾರ ರಚನೆ, ನ್ಯಾಯ-ನೀತಿ ನಿರೂಪಣೆ, ಕಾನೂನು ನಿರ್ಮಾಣ ಇತ್ಯಾದಿ ಸಕಲ ಸಾರ್ವಜನಿಕ ವ್ಯವಹಾರಗಳಲ್ಲಿ ಮಾನವರದೇ ಅಧಿಕಾರವಿರುವುದು. ದೇವನಿಗೆ ಅಥವಾ ದೇವರಿಗೆ ಯಾವುದೇ ಅಧಿಕಾರವಿರುವುದಿಲ್ಲ. ಜಾತ್ಯತೀತತೆ ಅಥವಾ ಧರ್ಮ ನಿರಪೇಕ್ಷತೆ ಎಂಬುದರ ಅರ್ಥವೇ ಆಡಳಿತ ವ್ಯವಹಾರಗಳಲ್ಲಿ ಧರ್ಮಕ್ಕೆ ಯಾವುದೇ ಆಸ್ಪದ ಇಲ್ಲ ಎಂದಾಗಿದೆ. ಪ್ರಜಾಪ್ರಭುತ್ವ ಎಂದರೆ ಪ್ರಭುತ್ವ ಪ್ರಜೆಗಳದಾಗಿರುವುದು. ಎಲ್ಲ ಸಾರ್ವಜನಿಕ ವ್ಯವಹಾರಗಳೂ ಜನರ ಬಹುಮತದ ಆಧಾರದಲ್ಲಿ ನಿರ್ಧರಿಸಲ್ಪಡುವುದು. ಇದರಲ್ಲಿ ಜನರ ಸಾಮೂಹಿಕ ನಿರ್ಧಾರವೇ ಪ್ರಮುಖವಾಗಿರುತ್ತದೆ. ಯಾವ ವ್ಯಕ್ತಿ, ಕುಟುಂಬ ಅಷ್ಟೇ ಅಲ್ಲ, ಧರ್ಮವೂ ಇದರ ಮೇಲೆ ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ ಜನರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಆಡಳಿತ ನಡೆಸುತ್ತಾರೆ. ಇದರಲ್ಲಿಯೂ ಯಾರದೇ ವೈಯಕ್ತಿಕ, ಕೌಟುಂಬಿಕ ಅಥವಾ ಧಾರ್ಮಿಕ ಸಾರ್ವಭೌಮತೆ ಇರುವುದಿಲ್ಲ. ಅಂತೆಯೇ ಪ್ರಜಾಪ್ರಭುತ್ವದಲ್ಲಿ ವಿಚಾರ ಸ್ವಾತಂತ್ರ್ಯ, ಆಚಾರ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಎಲ್ಲವೂ ಮೂಲಭೂತ ಹಕ್ಕು-ಸ್ವಾತಂತ್ರ್ಯದಡಿ ಎಲ್ಲರಿಗೂ ಸಮಾನವಾಗಿರುತ್ತದೆ. ಕಾನೂನಿನ ಮುಂದೆ ಸಕಲರೂ ಸಮಾನರು. ಪ್ರತಿಯೊಬ್ಬರಿಗೂ ಪ್ರಗತಿ ಹೊಂದುವ ಸಮಾನ ಅವಕಾಶಗಳಿವೆ. ಜತೆಗೆ ತಾವೇ ಚುನಾಯಿಸಿದ ಜನಪ್ರತಿನಿಧಿಗಳನ್ನು ಪ್ರಶ್ನಿಸುವ, ಆಡಳಿತದ ಕಾರ್ಯವೈಖರಿಗಳನ್ನು ಅವಲೋಕಿಸುವ ಸಂಪೂರ್ಣ ಸ್ವಾತಂತ್ರ್ಯ ಪ್ರಜೆಗಳಿಗೆ ಇರುತ್ತದೆ. ಅಂತೆಯೇ ಒಂದು ಅವಧಿಯ ಬಳಿಕ ಚುನಾವಣೆಯ ಮೂಲಕ ಆಡಳಿತ ಪಕ್ಷವನ್ನು ಬದಲಿಸುವ ಅಧಿಕಾರವೂ ಪ್ರಜೆಗಳಿಗಿರುತ್ತದೆ.

ಇಸ್ಲಾಮೀ ಆಡಳಿತ ವ್ಯವಸ್ಥೆಯೂ ಇದನ್ನೇ ಹೇಳುತ್ತದೆ. ಇದರಲ್ಲೂ ಜನರಿಂದ ಚುನಾಯಿತರಾದವರು ಆಡಳಿತ ನಡೆಸುತ್ತಾರೆ. ಇಸ್ಲಾಮೀ ವ್ಯವಸ್ಥೆಯಲ್ಲಿ ಎಲ್ಲ ಧರ್ಮೀಯರಿಗೂ ತಂತಮ್ಮ ಧರ್ಮದ ಆಚಾರದಂತೆ ಬಾಳುವ ಸ್ವಾತಂತ್ರ್ಯವಿದೆ. ಜನರಿಗೆ ಆಡಳಿತಗಾರರ ಕಾರ್ಯವೈಖರಿಯನ್ನು ಪ್ರಶ್ನಿಸುವ ಹಕ್ಕಿದೆ. ಆಚಾರ-ವಿಚಾರ, ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಇಲ್ಲೊಂದು ವ್ಯತ್ಯಾಸ ಇದೆ. ಇಸ್ಲಾಮೀ ಆಡಳಿತದಲ್ಲಿ ಜನರ ಪ್ರಭುತ್ವ ಇರುವುದಿಲ್ಲ. ಜನರಿಂದ ಚುನಾಯಿತ ವ್ಯಕ್ತಿಯನ್ನು ‘ಖಲೀಫಾ’ ಎಂದು ಕರೆಯಲಾಗುತ್ತದೆ. ಅಂದರೆ ಪ್ರತಿನಿಧಿ ಎಂದರ್ಥ. ಇಸ್ಲಾಮೀ ದೃಷ್ಟಿಕೋನದಂತೆ ಮನುಷ್ಯನು ಭೂಮಿಯಲ್ಲಿ ದೇವನ ಪ್ರತಿನಿಧಿಯಾಗಿದ್ದಾನೆ. ಅಂದರೆ ಅವನು ದೇವ ನಿರ್ಮಿತ ಲೋಕದಲ್ಲಿ ದೇವದತ್ತ ಅಧಿಕಾರಗಳನ್ನು ಬಳಸುವವನಾಗಿದ್ದಾನೆ.

ಇಸ್ಲಾಮೀ ಜೀವನ ವ್ಯವಸ್ಥೆ ಎಂಬ ಕೃತಿಯಲ್ಲಿ ಸಯ್ಯದ್ ಮೌದೂದಿಯವರು ಇಸ್ಲಾಮೀ ರಾಜಕೀಯ ವ್ಯವಸ್ಥೆಯ ಕುರಿತು ಲೇಖನಿಗಿಳಿಸಿದ ಕೆಲವು ಅಂಶಗಳನ್ನು ಇಲ್ಲಿ ನಿಮ್ಮ ಮುಂದೆ ವಿಶದಪಡಿಸಬಯಸುತ್ತೇನೆ. ಇದರಿಂದ ಇಸ್ಲಾಮೀ ಪ್ರಜಾಸತ್ತೆ ಮತ್ತು ಇತರ ಪ್ರಜಾಸತ್ತೆಗಳ ನಡುವಿನ ಸಾಮ್ಯತೆ ಹಾಗೂ ವ್ಯತ್ಯಾಸಗಳ ಅರಿವು ಉಂಟಾಗಬಹುದು.

ಖಲೀಫನು ದೇವನ ಭೂಮಿಯಲ್ಲಿ ದೇವನ ಇಂಗಿತದಂತೆ ಆಡಳಿತ ನಡೆಸಬೇಕು, ಅವನ ನಿರ್ದೇಶನದ ಪ್ರಕಾರ ವ್ಯವಹರಿಸಬೇಕು, ಅವನು ನಿಗದಿಪಡಿಸಿರುವ ಮಿತಿಗೆ ಬದ್ಧವಾಗಿರಬೇಕು.

ಇಸ್ಲಾಮೀ ರಾಜಕೀಯ ಸಿದ್ಧಾಂತವು ಖಿಲಾಫತ್‌ನ ಹೊಣೆಗಾರಿಕೆಯನ್ನು ಕೇವಲ ಒಬ್ಬ ವ್ಯಕ್ತಿ, ಒಂದು ಕುಟುಂಬ ಅಥವಾ ಒಂದು ಜನಾಂಗಕ್ಕೆ ಮಾತ್ರ ವಹಿಸಿ ಕೊಡುವುದಿಲ್ಲ. ಅದು ಏಕದೇವಾಧಿಪತ್ಯ ಮತ್ತು ಪ್ರವಾದಿತ್ವದ ಮೂಲ ತತ್ವಗಳನ್ನು ಅಂಗೀಕರಿಸಿ, ಪ್ರಾತಿನಿಧ್ಯದ ಉಳಿದ ಬೇಡಿಕೆಗಳನ್ನೆಲ್ಲ ಈಡೇರಿಸಬಲ್ಲ ಒಟ್ಟು ಸಮಾಜಕ್ಕೆ ಖಿಲಾಫತ್‌ನ ಹೊಣೆಯನ್ನು ಕೊಡುತ್ತದೆ.

ರಾಷ್ಟ್ರದ ಆಡಳಿತವನ್ನು ಯಾರು ನಡೆಸಬೇಕೆಂಬುದನ್ನು ಜನರೇ ತಮ್ಮ ಇಚ್ಛೆಗೆ ಅನುಸಾರ ತೀರ್ಮಾನಿಸುವರು. ಆಡಳಿತಗಾರರ ಆಯ್ಕೆಯು ಜನಾಭಿಪ್ರಾಯದಂತೆ ನಡೆಯುವುದು. ಆಡಳಿತ ನಿರ್ವಹಣೆ ಕೂಡ ಜನತೆಯೊಂದಿಗೆ ಸಮಾಲೋಚಿಸಿ ನಡೆಯಬೇಕು. ಜನತೆಯ ವಿಶ್ವಾಸ ಗಳಿಸಿದವರು ಮಾತ್ರ ಅವರ ಪರವಾಗಿ ಖಿಲಾಫತ್‌ನ ಹೊಣೆಯನ್ನು ನಿರ್ವಹಿಸಬಹುದು. ಜನತೆಯ ವಿಶ್ವಾಸ ಕಳೆದುಕೊಂಡವರು ಆ ಹುದ್ದೆಯನ್ನು ಬಿಟ್ಟು ಕೊಡಬೇಕಾಗುವುದು.

ಹೀಗೆ ಇಸ್ಲಾಮೀ ಪ್ರಜಾಸತ್ತೆಯು ಬೇರೆ ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಷ್ಟೇ ಸಂಪೂರ್ಣ ಪ್ರಜಾಸತ್ತೆಯಾಗಿರುತ್ತದೆ. ಆದರೆ ಇದರಲ್ಲಿ ಪ್ರಮುಖವಾದೊಂದು ವ್ಯತ್ಯಾಸವಿದೆ. ಇತರ ರಾಜಕೀಯ ವ್ಯವಸ್ಥೆಯು ‘ಪ್ರಜಾಸತ್ತಾತ್ಮಕ ಸರ್ವಾಧಿಪತ್ಯ’ವನ್ನು ಪ್ರತಿಪಾದಿಸುತ್ತದಾದರೆ, ಇಸ್ಲಾಮ್ ‘ಪ್ರಜಾಸತ್ತಾತ್ಮಕ ಖಿಲಾಫತ್’ ಅರ್ಥಾತ್ ಪ್ರಾತಿನಿಧ್ಯವನ್ನು ಪ್ರತಿಪಾದಿಸುತ್ತದೆ.

ಒಂದರಲ್ಲಿ ಜನರೇ ಅಧಿಪತಿಗಳಾಗಿರುತ್ತಾರೆ, ತಮ್ಮ ಸಂವಿಧಾನವನ್ನು ತಾವೇ ರಚಿಸುತ್ತಾರೆ, ಜನರ ಇಚ್ಛೆಗಳ ಈಡೇರಿಕೆಗಳೇ ಸರಕಾರದ ಕರ್ತವ್ಯವಾಗಿರುತ್ತದೆ. ಇನ್ನೊಂದರಲ್ಲಿ ಆಧಿಪತ್ಯ ದೇವನಿಗೆ ಸಲ್ಲುತ್ತದೆ, ದೇವನು ಪ್ರವಾದಿಯ ಮೂಲಕ ನೀಡಿದ ಸಂವಿಧಾನವನ್ನು ಜನರು ಅಂಗೀಕರಿಸುತ್ತಾರೆ, ದೇವನ ಇಚ್ಛೆಯೇ ಸರಕಾರದ ಕರ್ತವ್ಯವಾಗಿರುತ್ತದೆ.

ಒಟ್ಟಿನಲ್ಲಿ ಲೌಕಿಕ ಪ್ರಜಾಪ್ರಭುತ್ವದಲ್ಲಿ ಜನರದೇ ಪ್ರಭುತ್ವವಿದ್ದು, ತಮ್ಮ ಇಚ್ಛೆಗೆ ತಕ್ಕಂತೆ ಕಾನೂನು ರಚಿಸುವ ಮತ್ತು ಅದನ್ನು ಬೇಕಾದಂತೆ ಬದಲಿಸುವ ಅಧಿಕಾರ ಹೊಂದಿರುತ್ತಾರೆ. ಇಸ್ಲಾಮೀ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ದೇವನ ಪ್ರಭುತ್ವ ಇರುವುದು. ಜನರು ತಮ್ಮ ಅಧಿಕಾರವನ್ನಲ್ಲ, ಪ್ರಾತಿನಿಧ್ಯವನ್ನು ದೇವನ ಇಂಗಿತದಂತೆ, ದೇವನ ಮಾರ್ಗದರ್ಶನ ಪ್ರಕಾರ, ಅವನು ನಿಶ್ಚಯಿಸಿದ ಮೇರೆಗಳೊಳಗಿದ್ದು ಅಧಿಕಾರ ಚಲಾಯಿಸುತ್ತಾರೆ.

ಇಸ್ಲಾಮೀ ರಾಷ್ಟ್ರದ ಅಧಿಕಾರ ಚುಕ್ಕಾಣಿಯು ಒಬ್ಬ ಚುನಾಯಿತ ನಾಯಕನ ಕೈಯಲ್ಲಿರುವುದು. ಅವನಿಗೆ ಒಂದು ಪ್ರಜಾಸತ್ತಾತ್ಮಕ ರಾಷ್ಟ್ರದ ಮುಖ್ಯಸ್ಥನ ಸ್ಥಾನವಿರುವುದು. ಈ ನಾಯಕನ ಆಯ್ಕೆಯಲ್ಲಿ ಪಾಲ್ಗೊಳ್ಳಲು, ಸಂವಿಧಾನದ ತತ್ವಗಳನ್ನು ಅಂಗೀಕರಿಸುವ ಪ್ರತಿಯೊಬ್ಬ ಪ್ರಬುದ್ಧ ಸ್ತ್ರೀ-ಪುರುಷರಿಗೂ ಹಕ್ಕಿರುವುದು. ಯಥಾರ್ಥ ಇಸ್ಲಾಮೀ ಜ್ಞಾನ, ಸಚ್ಚಾರಿತ್ರ್ಯ, ದೇವಭಕ್ತಿ ಮತ್ತು ಮುತ್ಸದ್ಧಿತನಗಳೇ ಆಯ್ಕೆಯ ಮಾನದಂಡವಾಗಿರುವುದು.

ನ್ಯಾಯಾಧೀಶರನ್ನು ಸರಕಾರವೇ ನೇಮಿಸುತ್ತದಾದರೂ ನ್ಯಾಯಾಂಗವು ಆಡಳಿತಾರೂಢ ಸರಕಾರಕ್ಕೆ ಬದ್ಧವಾಗಿರುವುದರ ಬದಲು ನೇರವಾಗಿ ದೇವನ ಪ್ರತಿನಿಧಿಯಾಗಿರುವುದು. ಇಸ್ಲಾಮಿನಲ್ಲಿ ಆಡಳಿತ ಸರಕಾರವು ಪ್ರಶ್ನಾತೀತವಲ್ಲ. ನ್ಯಾಯಾಲಯದ ಮುಂದೆ ಸರಕಾರವೂ ದಾವೆದಾರನಾಗಿಯೋ ಆರೋಪಿಯಾಗಿಯೋ ಹಾಜರಾಗಲೇ ಬೇಕು.

ಇದು ಲೌಕಿಕ ಪ್ರಜಾಪ್ರಭುತ್ವ ಮತ್ತು ಇಸ್ಲಾಮೀ ಪ್ರಜಾಸತ್ತೆಯ ಕುರಿತಾದ ಸಂಕ್ಷಿಪ್ತ ತುಲನಾತ್ಮಕ ಪರಿಚಯ. ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಧರ್ಮ ನಿರಪೇಕ್ಷ ವ್ಯವಸ್ಥೆಯಿರುವಲ್ಲಿ ವೈಯಕ್ತಿಕವಾಗಿ ತಮ್ಮಿಷ್ಟದ ಧರ್ಮದಂತೆ ಬಾಳಲು ಅನುಮತಿ ಇದೆಯಾದರೂ ಇಸ್ಲಾಮೀ ಶಿಕ್ಷಣಗಳ ಆಧಾರದಲ್ಲಿ ಸಮಾಜ ಮತ್ತು ರಾಷ್ಟ್ರವನ್ನು ರೂಪಿಸುವ ಅನುಮತಿ ಈ ಧರ್ಮ ನಿರಪೇಕ್ಷ ವ್ಯವಸ್ಥೆ ನೀಡಬಲ್ಲುದೇ? ಉತ್ತರ ಇಲ್ಲವೆಂದೇ ಹೇಳಬೇಕಷ್ಟೆ.

ಆದರೆ ಇಂದು ಹಳಸಿದ ವರ್ಣವ್ಯವಸ್ಥೆಯನ್ನು ನಾಡಿನಾದ್ಯಂತ ಜಾರಿಗೊಳಿಸಲು ಕಾತರಿಸುತ್ತಿರುವ ಒಂದು ಸಂಘದ ರಾಜಕೀಯ ಪಕ್ಷವೇ ಭಾರತದಂತಹ ಜಾತ್ಯತೀತ ಪ್ರಜಾಪ್ರಭುತ್ವ ಇರುವ ದೇಶಕ್ಕೆ ಅಡರಿಕೊಂಡಿದೆ. ಒಂದು ದೇಶ ಒಂದು ಸಂಸ್ಕೃತಿ ಎಂಬ ಸುಂದರ ಹೆಸರಿನೊಂದಿಗೆ ಜನರನ್ನು ಯಾಮಾರಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಇಸ್ಲಾಮಿನಂತಹ ಜನಸ್ನೇಹಿ, ಸಮಾಜೋದ್ಧಾರಕ ರಾಜಕೀಯ ವ್ಯವಸ್ಥೆಯನ್ನು ಪರಿಚಯಿಸಬೇಕಾದ ಅನಿವಾರ್ಯತೆ ಇದೆ. ಆದರೆ ಧಾರ್ಮಿಕ ಆಚರಣೆಗೆ ಸಂವಿಧಾನ ಸಂಪೂರ್ಣ ಹಕ್ಕು ನೀಡಿದ್ದರೂ ಪ್ರಸ್ತುತ ಸಂಘ ಮತ್ತು ಅದರ ರಾಜಕೀಯ ಪಕ್ಷದ ದೆಸೆಯಿಂದ ಜನಮಾನಸದಲ್ಲಿ ಇಸ್ಲಾಮಿನ ಕುರಿತು ಒಂದು ರೀತಿಯ ಭೀತಿಯು ಹರಡಿಕೊಂಡಿದೆ.

ಇಂತಹ ಸ್ಥಿತಿಯಲ್ಲಿ ಸಂವಿಧಾನಕ್ಕೆ ಬದ್ಧವಾಗಿದ್ದುಕೊಂಡು, ಪ್ರಜಾಸತ್ತಾತ್ಮಕ ನೆಲೆಯಲ್ಲಿ ಸಾಮಾಜಿಕ ಶಾಂತಿಯನ್ನು ಕಾಪಾಡಿಕೊಂಡು ಬರುವ ಉದ್ದೇಶ ಹೊಂದಿರುವ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು ಅಥವಾ ಅಂತಹ ಒಂದು ಪಕ್ಷವನ್ನು ರಚಿಸಿ ಅದನ್ನು ಬೆಳೆಸುವುದು ದೇಶ ಮತ್ತು ಸಮುದಾಯದ ಹಿತದೃಷ್ಟಿಯಿಂದ ಉತ್ತಮ ಎಂಬುದು ನನ್ನ ಅನಿಸಿಕೆ. ಬಹುಧರ್ಮೀಯ ಸಮಾಜದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಬಾಳಲು ಇಸ್ಲಾಮೀ ಇತಿಹಾಸದಲ್ಲಿ ಬಹಳಷ್ಟು ಉದಾಹರಣೆಗಳು ದೊರೆಯುತ್ತವೆ.

ಪ್ರವಾದಿವರ್ಯರು(ಸ) ಮಕ್ಕಾದಲ್ಲಿ ಏಕದೇವತ್ವದ ಕರೆ ನೀಡಲು ಆರಂಭಿಸಿದ ವೇಳೆ ಮಕ್ಕಾದ ಕಅಬಾಲಯದಲ್ಲಿ ಮುನ್ನೂರಕ್ಕೂ ಮಿಕ್ಕಿದ ವಿಗ್ರಹಗಳಿದ್ದುವು. ಅವಲ್ಲದೆಯೂ ಇನ್ನೂ ಅನೇಕ ರೀತಿಯ ಮೂರ್ತಿಪೂಜೆಗಳು ಅಲ್ಲಿ ನಡೆಯುತ್ತಿದ್ದವು. ಆದಾಗಿಯೂ ಪ್ರವಾದಿವರ್ಯರು(ಸ) ಮಕ್ಕಾದಲ್ಲಿ ಹದಿಮೂರು ವರ್ಷ ಮತ್ತು ಮದೀನಕ್ಕೆ ವಲಸೆ ಹೋದ ಮೇಲೂ ಏಳೆಂಟು ವರ್ಷಗಳ ವರೆಗೆ ಅದೇ ಕಅಬಾಲಯಕ್ಕೆ ಮುಖ ಮಾಡಿ ನಮಾಝ್ ಮಾಡಿದ್ದರು, ಕಅಬಾ ಸಂದರ್ಶಿಸಿ ಹಜ್ ಕರ್ಮವನ್ನೂ ನಿರ್ವಹಿಸಿದ್ದರು.

ಅಂದು ಗೋತ್ರಗಳ ಆಳ್ವಿಕೆ ನಡೆಯುತ್ತಿದ್ದುವು. ಆ ಕಾಲದಲ್ಲಿ ಅರೇಬಿಯ ಮಾತ್ರವಲ್ಲ, ಭಾರತ ಉಪಖಂಡದಲ್ಲೂ ಅಲ್ಲಲ್ಲಿ ಬೇರೆ ಬೇರೆ ಕುಟುಂಬಗಳ ಮತ್ತು ವರ್ಗಗಳ ಆಡಳಿತ ನಡೆಯುತ್ತಿದ್ದುವು. ಇಂದು ಪ್ರಜಾಪ್ರಭುತ್ವ ಇದೆ. ಹಾಗಾಗಿ ಸಮುದಾಯದ ಹಿತಚಿಂತನೆಯಿಂದ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಸಂವಿಧಾನ ಬದ್ಧವಾಗಿ ಚುನಾವಣೆಗಳಲ್ಲಿ ಭಾಗವಹಿಸುವುದು ಒಂದು ಕಡೆಯಾದರೆ, ಉತ್ತಮ ಅಥವಾ ಇರುವುದರಲ್ಲಿ ಕಡಿಮೆ ಅಪಾಯಕಾರಿಯಾಗಿ ಕಾಣುವಂತಹ ಪಕ್ಷಗಳಿಗೆ ಬೆಂಬಲ ನೀಡಿ ಅವುಗಳಿಗೆ ಮತ ಹಾಕುವುದು ಇನ್ನೊಂದು ವಿಧಾನವನ್ನು ಅನುಸರಿಸಬಹುದಾಗಿದೆ. ಈ ಮೂಲಕ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮ ಪ್ರಾತಿನಿಧ್ಯವನ್ನು ಬಲಪಡಿಸಲು ಸಹಕಾರಿಯಾಗಬಲ್ಲುದು.

ನಾವು ಬಾಳುತ್ತಿರುವ ಈ ದೇಶಕ್ಕೆ ಇದರ ಸಂವಿಧಾನಕ್ಕೆ ಬದ್ಧವಾಗಿರುತ್ತಾ ಇದರ ಕಾನೂನುಗಳನ್ನು ಪಾಲಿಸುತ್ತಾ ಸರಕಾರ ನಿಶ್ಚಯಿಸಿದ ಸುಂಕ(ಟ್ಯಾಕ್ಸ್)ಗಳನ್ನೂ ಪಾವತಿಸುತ್ತಿದ್ದೇವೆ. ಇಲ್ಲಿ ಶಾಂತಿ ಸಮಾಧಾನದ ಬೇಡಿಕೆಗಳನ್ನು ಈಡೇರಿಸುತ್ತಿದ್ದೇವೆ. ಹೀಗೆ ಮಾಡುವುದು ಧಾರ್ಮಿಕವಾಗಿಯೂ ಅಗತ್ಯವೆಂದು ಭಾವಿಸುತ್ತೇವೆ. ಏಕೆಂದರೆ ಭೂಮಿಯಲ್ಲಿ ಕ್ಷೋಭೆ ಹರಡಬೇಡಿರಿ ಎಂದು ಪವಿತ್ರ ಕುರ್‌ಆನ್ ತಾಕೀತು ಮಾಡಿದೆ. ಹೀಗೆ ಈ ಎಲ್ಲ ನೀತಿ ನಿಯಮಗಳ ಪಾಲನೆಯಿಂದ ಪ್ರಜಾಸತ್ತಾತ್ಮಕ ಹಕ್ಕುಗಳನ್ನ ಈಡೇರಿಸುತ್ತಿರುವಾಗ ಧರ್ಮ ಮತ್ತು ಸಮುದಾಯದ ಹಿತರಕ್ಷಣೆಗಾಗಿ ಚುನಾವಣೆಯಲ್ಲಲಿ ಸ್ಪರ್ಧಿಸುವುದರಲ್ಲಿ ಯಾವುದೇ ಅಡ್ಡಿ ಇರಲಾರದಷ್ಟೇ.

ಒಟ್ಟಿನಲ್ಲಿ ಭಾರತದಂತಹ ಸೆಕ್ಯುಲರ್ ಡೆಮೋಕ್ರಟಿಕ್ ರಾಷ್ಟ್ರದಲ್ಲಿ ನಮ್ಮ ಧಾರ್ಮಿಕ ಆಚಾರ-ಸಂಪ್ರದಾಯಗಳನ್ನು ಪಾಲಿಸುತ್ತಾ ಬದುಕುವುದರಲ್ಲಿ ಅಡ್ಡಿಯಿಲ್ಲ. ಅಂತೆಯೇ ಸಂದೇಶ ಪ್ರಚಾರದಂತಹ ಸಂವಿಧಾನದತ್ತ ಹಕ್ಕನ್ನು ಬಳಸುವುದಕ್ಕೂ ಅಡ್ಡಿಯಿಲ್ಲ. ಹೀಗಿರುತ್ತಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೆಕ್ಯುಲರ್ ವಿಧಾನದಲ್ಲೇ ಧಾರ್ಮಿಕ ಮೌಲ್ಯಗಳನ್ನು ಪಾಲಿಸುತ್ತಾ ಜನಸ್ನೇಹಿ ಆಡಳಿತ ನಡೆಸಿ ಮಾದರಿಯಾಗಲು ಸಾಧ್ಯವಿದೆ.