ಸ್ವ ಇಚ್ಛೆಯಿಂದ ಇಸ್ಲಾಂ ಧರ್ಮ ಸ್ವೀಕರಿಸಿದ ಮಹಿಳೆಗೆ ರಕ್ಷಣೆ ಒದಗಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿದ ಹೈಕೋರ್ಟ್

0
595

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸ್ವ ಇಚ್ಛೆಯಿಂದ ಧಾರ್ಮಿಕ ಮತಾಂತರ ಹೊಂದಿದ ಉತ್ತರ ಪ್ರದೇಶದ ಶಹಜಹಾನ್ಪುರದ ಮಹಿಳೆಯೊಬ್ಬರು ರಕ್ಷಣೆ ಕೋರಿ ಸಲ್ಲಿಸಿರುವ ಅಪೀಲನ್ನು ಪರಿಗಣಿಸಿದ ದಿಲ್ಲಿ ಹೈಕೋರ್ಟ್ ಆಕೆಯ ಸುರಕ್ಷತೆ ಮತ್ತು ಭದ್ರತೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ದಿಲ್ಲಿ ಪೊಲೀಸರಿಗೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 22ರಂದು ನಡೆಯುವ ತನಕ ನ್ಯಾಯಾಲಯದ ಇಂದಿನ ಆದೇಶ ಊರ್ಜಿತದಲ್ಲಿರಲಿದೆ.

ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ರೇಣು ಗಂಗಾವರ್ ಎಂಬ ಮಹಿಳೆ ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದ ಬಳಿಕ ಸದ್ಯ ಆಯಿಷಾ ಎಂದು ಹೆಸರು ಬದಲಾಯಿಸಿದ್ದಾರೆ. ಈ ಮಹಿಳೆ ತನಗೆ ಹಾಗೂ ಕುಟುಂಬಕ್ಕೆ ರಕ್ಷಣೆಯೊದಗಿಸಬೇಕೆಂದು ಕೋರಿದ್ದರು. ಉತ್ತರ ಪ್ರದೇಶದ ಪೊಲೀಸರು, ಮಾಧ್ಯಮ ಹಾಗೂ ಕೆಲ ಸಂಘಟನೆಗಳು ತನ್ನ ಕುಟುಂಬದ ಹಿಂದೆ ಬಿದ್ದಿರುವುದರಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಆಕೆ ತನ್ನ ಅಪೀಲಿನಲ್ಲಿ ತಿಳಿಸಿದ್ದರು.

ಆದರೆ ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರ ವಾದವನ್ನು ಇನ್ನೂ ಆಲಿಸದೇ ಇರುವುದರಿಂದ ಅದಕ್ಕಿಂತ ಮುನ್ನ ಯಾವುದೇ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.