ಮಲ್ಪೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಿಂದ ಮೀನುಗಾರರ ಸಮಸ್ಯೆಗಳ ಕುರಿತು ಸಮಾಲೋಚನಾ ಸಭೆ

0
303

ಸನ್ಮಾರ್ಗ ವಾರ್ತೆ

ಮಲ್ಪೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಡಿ.ಕೆ ಶಿವ ಕುಮಾರ್ ಮಲ್ಪೆ ಬಂದರಿಗೆ ಆಗಮಿಸಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಮೀನುಗಾರಿಕೆಗೆ ಸಂಬಂಧಿತ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಮುಖ್ಯವಾಗಿ ಸಾಗರ ಮಾಲ ಯೋಜನೆ, ಹೂಳೆತ್ತುವಿಕೆ, ಒಣ ಮೀನು ಜಾಗದ ಲೀಝ್ ಸಮಸ್ಯೆ, ಮೀನುಗಾರ ಕಾರ್ಮಿಕರ ಸಮಸ್ಯೆ, ಮತ್ಸ್ಯ ಕ್ಷಾಮ ವಿಚಾರ, ಡಿಸೇಲ್ ಸಬ್ಸಿಡಿ ಸೇರಿದಂತೆ ಸರಕಾರದಿಂದ ಕೆಲವಾರು ವರ್ಷದಿಂದ ವಂಚಿತರಾಗಿರುವ ವಿಚಾರಗಳನ್ನು ಮೀನುಗಾರರ ಪ್ರತಿನಿಧಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.

ಎಲ್ಲರ ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡಿದ ಡಿಕೆ ಶಿವಕುಮಾರ್, ನಾನು ಒಂದು ವರ್ಷದಿಂದ ಮೀನುಗಾರರ ಸಮಸ್ಯೆ ಆಲಿಸಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಆದರೆ ಕೋರೊನಾದ ಕಾರಣ ಸಾಧ್ಯವಾಗಿರಲಿಲ್ಲ‌. ಇದೀಗ ಅವರ ಸಮಸ್ಯೆಗಳನ್ನು ಆಲಿಸಲು ಇಲ್ಲಿ ಬಂದಿದ್ದೇನೆ ಎಂದು ಹೇಳಿದರು.

ನಾನು ಮೀನುಗಾರರ ಸಮಸ್ಯೆ ಆಲಿಸಲು ಬಂದ ಮುಖ್ಯ ಕಾರಣ ಒಬ್ಬ ಮೀನುಗಾರನ ಹಿಂದೆ ಹತ್ತು ಜನರ ಕುಟುಂಬ ಜೀವಿಸುತ್ತದೆ. ಅವರು ಪ್ರಾಣದ ಹಂಗು ತೊರೆದು ಜೀವಿಸುತ್ತಿದ್ದಾರೆ. ಮೀನುಗಾರರು ಸರಕಾರದ ಜೊತೆ ಪಾಲುದಾರರು ಎಂಬ ವಿಚಾರ ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.

ಮೀನುಗಾರಿಕೆ ದೊಡ್ಡ ಚೈನ್ ಲಿಂಕ್ ಆಗಿದ್ದು ಅವರ ಸಮಸ್ಯೆಗಳಿಗೆವಯಾವ ರೀತಿ ಧವನಿಯಾಗಬಹುದೆಂದು ಆಲಿಸಲು ಇವತ್ತು ಇಲ್ಲಿ ಬಂದಿದ್ದೇನೆ. ರಾಜಕಾರಣಿ ಎನಿಸಿಕೊಂಡ ನಾವು ಎಲ್ಲ ವರ್ಗದ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು. ಎಷ್ಟೇ ಕಷ್ಟ ಬಂದರು ಮಹಾಲಕ್ಷ್ಮಿ ದೇವಸ್ತಾನ ಕಟ್ಟುತ್ತಿರುವುದು ಶ್ಲಾಘನೀಯ. ಅದು ದೇವಸ್ಥಾನ ಅಲ್ಲ ಸುಪ್ರೀಮ್ ಕೋರ್ಟ್ ಎಂದರು.

ಎಲ್ಲ ಗುಣಕ್ಕಿಂತ ದೊಡ್ಡ ಗುಣ ನಂಬಿಕೆ. ಆತ್ಮಧೈರ್ಯದಿಂದ ನಿಮ್ಮ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವ ನಿಮಗೆ ಸೃಷ್ಟಾಂಗ ನಮಸ್ಕಾರ ಎಂದು ಹುರಿದುಂಬಿಸಿದರು.

ಸರಕಾರ ಯಾಕೆ ಡಿಸೇಲ್ ಸಬ್ಸಿಡಿ ಕೊಡುತ್ತಿಲ್ಲ ನನಗೆ ಅರ್ಥವಾಗುತ್ತಿಲ್ಲ. ಸರಕಾರಕ್ಕೆ ಕಿವಿ ಮೂಗು ಬಾಯಿಯಿಲ್ಲ. ಸಬ್ಸಿಡಿ ಕೊಡಲು ಏನು ಕಷ್ಟ ನಿಮಗೆ? ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು‌.

ಕುಲಕಸುಬು ನಡೆಸುವ ಮೀನುಗಾರರ ಕುರಿತು ಅಲೋಚನೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿ ಅವರು, ಮೀನು ಉಳಿಸುವ ಕುರಿತು ಕೂಡ ಕಾರ್ಯಕ್ರಮವನ್ನು ಮಾಡಬೇಕು. ಸಾರ್ವಜನಿಕ ವಿತರಣೆಯ ಸೀಮೆ ಎಣ್ಣೆಯನ್ನು ಕೂಡ ನಿಲ್ಲಿಸಿದ್ದಾರೆ. ಸಣ್ಣ ಸಣ್ಣ ವಿಚಾರದಲ್ಲಿ ನಂಬಿಕೆಯಿಲ್ಲದ ಸರಕಾರ ಇದರ ಕುರಿತು ಚರ್ಚಿಸಿ ಮೀನುಗಾರರ ಪರ ನಿಲ್ಲಬೇಕು‌. ನಾಲ್ಕು ವರ್ಷದಿಂದ ಉಳಿತಾಯ ಪರಿಹಾರ ನಿಧಿಯನ್ನು ಕೂಡ ಕೇಂದ್ರ, ರಾಜ್ಯ ಸರಕಾರ ನೀಡಿಲ್ಲ ಎಂದು ಹೇಳಿದರು.

ಕೇರಳದಲ್ಲಿ ಮೀನುಗಾರರ ನಿವೃತ್ತಿಯ ನಂತರ ಪಿಂಚಣಿ ನೀಡಲಾಗುತ್ತಿದೆ. ಇದರ ಕುರಿತು ಚರ್ಚೆ ನಡೆಸಿ ಮೀನುಗಾರರಿಗೂ ಪಿಂಚಣಿ ನೀಡುವಂತಗಾಬೇಕು. ಈ ವಿಚಾರದಲ್ಲಿ ಮೀನುಗಾರರಿಗೆ ನಿವೃತ್ತಿ ನಂತರ ಪಿಂಚಣಿಯ ವ್ಯವಸ್ಥೆ ಕಾಂಗ್ರೆಸ್ ಸರಕಾರ ಮಾಡಲಿದೆ ಎಂದು ಭರವಸೆ ನೀಡಿದರು. ಮಲ್ಪೆ ಬಂದರಿಗೆ ಅದಷ್ಟು ಶೀಘ್ರ ಅಂಬ್ಯುಲೆನ್ಸ್ ನ್ನು ವ್ಯವಸ್ಥೆ ಮಾಡುತ್ತೇವೆ. ಸಿ.ಆರ್.ಝಡ್, ಹನ್ನೆರಡು ನಾಟಿಕಲ್ ದೂರಲ್ಲಿ ನೆರೆ ರಾಜ್ಯದ ಕಿರುಕುಳ ಸೇರಿದಂತೆ ಹಲವು ವಿಚಾರಗಳ ಕುರಿತು ಸರಕಾರದ ಗಮನಕ್ಕೆ ತರುತ್ತೇವೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿಜಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ,ಯುವ ಕಾಂಗ್ರೆಸ್’ನ ಮಿಥುನ್ ರೈ ಮೀನುಗಾರ ಮುಖಂಡರಾದ ಮದನ್ ಕುಮಾರ್, ಪ್ರಭಾಕರ್ ಕೋಟ್ಲೆಕರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರೀಶ್ ಕಿಣಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.