ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸಹಿತ ಹಲವರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ

0
162

ಸನ್ಮಾರ್ಗ ವಾರ್ತೆ

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿಡಂಬನಕಾರರ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದೆಹಲಿ ಪೊಲೀಸರು ದಾಳಿ ನಡೆಸಿದ್ದು, ವಿಚಾರಣೆಗಾಗಿ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆಗಸ್ಟ್ 17, 2023 ರಂದು ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನ್ಯೂಸ್‌ ಕ್ಲಿಕ್’ ಸಂಸ್ಥೆಯ ವಿರುದ್ಧ ದಾಖಲಿಸಿಕೊಳ್ಳಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ‘ದಿ ವೈರ್’ ವರದಿ ಮಾಡಿದೆ.

‘ನ್ಯೂಸ್ ಕ್ಲಿಕ್’ ಪೋರ್ಟಲ್ ಚೀನಾದ ಅಜೆಂಡಾವನ್ನು ಪ್ರಚಾರ ಮಾಡುವ ನೆಟ್‌ವರ್ಕ್‌ನಿಂದ ಹಣವನ್ನು ಪಡೆದಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಆಧರಿಸಿ ದಿಲ್ಲಿ ಪೊಲೀಸರು ಆಗಸ್ಟ್ 17ರಂದು ಎಫ್ಐಆರ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯೂಸ್‌ ಕ್ಲಿಕ್‌ ಸುದ್ದಿ ಪೋರ್ಟಲ್‌ಗೆ ಸೇರಿದ ಹಲವಾರು ಪತ್ರಕರ್ತರ ಮನೆಗಳಿಗೆ ದಿಲ್ಲಿ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ದೆಹಲಿ-ಎನ್‌ಸಿಆರ್‌ನ ಸುಮಾರು 20ಕ್ಕೂ ಸ್ಥಳಗಳಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್‌ನ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಕೆಲವು ಪತ್ರಕರ್ತರನ್ನು ವಿಚಾರಣೆಗಾಗಿ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ನ್ಯೂಸ್ ಕ್ಲಿಕ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಪತ್ರಕರ್ತರಾದ ಸಂಜಯ್ ರಾಜೌರಾ, ಭಾಷಾ ಸಿಂಗ್, ಊರ್ಮಿಲೇಶ್, ಪ್ರಬೀರ್ ಪುರ್ಕಾಯಸ್ಥ, ಅಭಿಶಾರ್ ಶರ್ಮಾ, ಔನಿಂದ್ಯೋ ಚಕ್ರವರ್ತಿ ಮತ್ತು ಸೊಹೈಲ್ ಹಶ್ಮಿ ಅವರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.