ಜೆಎನ್‍ಯು ಹಿಂಸಾಚಾರಕ್ಕೆ ಒಂದು ವರ್ಷ: ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಂದ ಪ್ರತಿಭಟನೆ

0
391

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಳೆದ ವರ್ಷ ಜನವರಿ 5 ರಂದು  ಭುಗಿಲೆದ್ದಿದ್ದ ಹಿಂಸಾಚಾರವನ್ನು ಖಂಡಿಸಿ  ಜೆಎನ್‌ಯು ಕ್ಯಾಂಪಸ್‌ನ ಸಬರಮತಿ ಟಿ-ಪಾಯಿಂಟ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಜನವರಿ 5 ರಂದು ಸುಮಾರು 100ರಷ್ಟು ಮಾಸ್ಕ್ ಧಾರಿಗಳು ಜೆಎನ್‍ಯು ಕ್ಯಾಂಪಸ್‍ಗೆ ನುಗ್ಗಿ ಹಿಂಸಾಚಾರ ನಡೆಸಿದ ಘಟನೆಯ ಬಗ್ಗೆ ಪೊಲೀಸ್ ತನಿಖೆ ಸ್ವಲ್ಪವೇ ಪ್ರಗತಿಯನ್ನು ಕಂಡಿದೆ. ಆದರೆ, ವಿಶ್ವವಿದ್ಯಾಲಯದ ಆಂತರಿಕ ತನಿಖೆಯನ್ನು ಸ್ಥಗಿತಗೊಳಿಸಲಾಗಿದೆ. ತನಿಖೆ ಎಲ್ಲಿಗೂ ತಲುಪದೆ ಕುಂಟುತ್ತಿದೆ. ಯಾರು ಆರೋಪಿಗಳೆಂದು ಸೂಚನೆ ಸಿಕ್ಕಿದ್ದರೂ ಇದುವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ.

ಕಳೆದ ವರ್ಷ ಜನವರಿ ಐದರಂದು ದೇಶದ ಅಂತಃಕರಣವನ್ನು ನಡುಗಿಸಿದ ಮಾಸ್ಕ್‌ಧಾರಿ ದುಷ್ಕರ್ಮಿಗಳು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ನೌಕರರಿಗೆಲ್ಲ ಮಾರಣಾಂತಿಕವಾಗಿ ಹೊಡೆದಿದ್ದರು. ವಿಶ್ವವಿದ್ಯಾಲಯದ ಪೀಠೋಪಕರಣಗಳನ್ನು ಪುಡಿಗುಟ್ಟಿದ್ದರು. 36 ವಿದ್ಯಾರ್ಥಿಗಳು, ಹಲವು ಅಧ್ಯಾಪಕರು, ಸಿಬ್ಬಂದಿಗಳು ಗಾಯಗೊಂಡಿದ್ದರು. ನಾಲ್ಕು ದಿವಸದ ನಂತರ ಪತ್ರಿಕಾಗೋಷ್ಠಿ ಕರೆದು ಆರೋಪಿಗಳಾದ ಒಂಬತ್ತು ವಿದ್ಯಾರ್ಥಿಗಳ ಹೆಸರನ್ನು ಓದಿದರು. ಅದರಲ್ಲಿ ಇಬ್ಬರು ಮಾತ್ರ ಎಬಿವಿಪಿಯವರಿದ್ದರು. ಆಗಲೂ ಸಂಘಟನೆಯ ಹೆಸರನ್ನು ಪೊಲೀಸರು ಹೇಳಿರಲಿಲ್ಲ. ಉಳಿದವರು ಎಡಪಕ್ಷಗಳ ಬೆಂಬಲಿಗರಾಗಿದ್ದರು.

ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ತನಿಖೆ ಶುರು ಆಗಿತ್ತು. 20 ಮಂದಿಯ ವಿಶೇಷ ಪೊಲೀಸ್ ತಂಡವನ್ನು ನೇಮಕಗೊಳಿಸಲಾಯಿತು. ಫೆಬ್ರುವರಿಯಲ್ಲಿ ಇದಕ್ಕೆ ಸಮಾನವಾದ ಘಟನೆ ಈಶಾನ್ಯ ದಿಲ್ಲಿಯಲ್ಲಿಯೂ ನಡೆದಿತ್ತು. ಇದೇ ಪೊಲೀಸ್ ತಂಡ ತನಿಖೆ ನಡೆಸಲು ಹೊಣೆ ಹೊರಿಸಲಾಯಿತು. ಇದೇ ತಂಡಕ್ಕೆ ಕೊರೋನ ಕಾಲದಲ್ಲಿ ಕೋಲಾಹಲ ಸೃಷ್ಟಿಸಿದ ನಿಝಾಮುದ್ದೀನ್ ಮರ್ಕಝ್ ಕೇಸ್ ತನಿಖೆಯ ಹೊಣೆ ವಹಿಸಿಕೊಡಲಾಗಿತ್ತು.

ಜೆಎನ್‍ಯು ಪ್ರಕರಣದಲ್ಲಿ 88 ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಗಳು, ಅಧ್ಯಾಪಕರು ಸುರಕ್ಷಾ ಸಿಬ್ಬಂದಿಗಳನ್ನು ಭೇಟಿ ಮಾಡಿದ್ದೇವೆ ಎಂದು ಪೊಲೀಸರು ಹೇಳಿದರೂ ಅವರು ನಮ್ಮನ್ನು ಪೊಲೀಸರು ಭೇಟಿಯಾಗಿಲ್ಲ ಎಂಬುದಾಗಿ ನಿರಾಕರಿಸಿದ್ದರು.

ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ನಾಯಕಿ ಐಶ್ ಘೋಷ್‍ರ ತಲೆಗೆ ಹದಿನಾರು ಹೊಲಿಗೆ ಹಾಕಬೇಕಾಗಿತ್ತು. ಒಮ್ಮೆಯೂ ಕೂಡ ತನಿಖಾ ತಂಡ ನನ್ನಲ್ಲಿ ಹಲ್ಲೆಯ ವಿವರ ಕೇಳಿ ತಿಳಿದುಕೊಂಡಿಲ್ಲ ಐಶ್ ಹೇಳಿದ್ದಾರೆ. ಪ್ರೊ. ಸುಚರಿತಾ ಸೈನಿಯವರ ತಲೆಗೆ ನಾಲ್ಕು ಹೊಲಿಗೆ ಹಾಕಲಾಗಿತ್ತು. ಪೊಲೀಸರು ಅವರನ್ನು ಘಟನೆಯ ಬಗ್ಗೆ ಕೇಳಲು ಭೇಟಿಯಾಗಿಲ್ಲ.