ಕಾಶ್ಮೀರಿ ವಿದ್ಯಾರ್ಥಿಗಳಿಗೆ ದಿಲ್ಲಿ ಹೊಟೆಲ್‍ನಲ್ಲಿ ಕೋಣೆ ನಿರಾಕರಣೆ: ಬರೆದು ಕೊಡಿ ಎಂದಾಗ….

0
765

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 17: ಕಾಶ್ಮೀರಿ ವಿದ್ಯಾರ್ಥಿಗಳಿಗೆ ದಿಲ್ಲಿಯ ಹೊಟೇಲಿನಲ್ಲಿ ಕೋಣೆ ನಿರಾಕರಿಸಲಾಗಿದೆ ಎಂದು ದೂರು ಕೇಳಿಬಂದಿದೆ. ಒಯೊ ಮೂಲಕ ಆನ್‍ಲೈನ್ ಬುಕ್ಕಿಂಗ್ ಮಾಡಿದ ವಿದ್ಯಾರ್ಥಿ ನುಐಮನ್ ರಫೀಖ್ ಹೊಟೇಲ್‍ಗೆ ಬಂದಾಗ ಕಾಶ್ಮೀರಿ ಎಂದು ಗುರುತಿಸಿ ಕೋಣೆ ಕೊಡಲು ನಿರಾಕರಿಸಲಾಗಿದೆ. ಕಾಶ್ಮೀರಿಗಳಿಗೆ, ಬಾಂಗ್ಲಾದೇಶಿ, ಪಾಕಿಸ್ತಾನಿಯರಿಗೆ ಕೋಣೆ ಕೊಡುವುದಿಲ್ಲ ಎಂದು ಹೊಟೇಲ್ ಮ್ಯಾನೇಜರ್ ಹೇಳಿದ್ದಾನೆ ಎಂದು ವಿದ್ಯಾರ್ಥಿ ತಿಳಿಸಿದನು. ಫೆಬ್ರುವರಿ 15ರಿಂದ 17ರವರೆಗೆ ಉತ್ತರ ದಿಲ್ಲಿಯ ವಿಜಯನಗರದ ಆಶ ರೆಸಿಡೆನ್ಸಿಯಲ್ಲಿ ನುಐಮನ್ ರಫೀಕ್ ಕೋಣೆ ಬುಕ್ ಮಾಡಿದ್ದನು. ಕಾಶ್ಮೀರಿಗಳಿಗೆ ಕೋಣೆ ಕೊಡಲಾಗುವುದಿಲ್ಲ ಎಂದು ಬರೆದು ಕೊಡಿ ಎಂದಾಗ ಅದಕ್ಕೆ ಹೊಟೇಲಿನವರು ತಯಾರಾಗಲಿಲ್ಲ. ನಂತರ ಒಯೊ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕ್ಷಮೆ ಯಾಚಿಸಿದ ಅವರು ಬೇರೊಂದು ಹೊಟೇಲಿನಲ್ಲಿ ವಸತಿಗೆ ವ್ಯವಸ್ಥೆ ಮಾಡುವ ಭರವಸೆ ಕೊಟ್ಟರು ಎಂದು ನುಐಮನ್ ಹೇಳಿದರು.

ಪೌರತ್ವ ಕಾನೂನು ವಿರುದ್ಧ ನಡೆಯುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಶ್ಮೀರ, ಲಡಾಕ್‍ನಿಂದ ಬಂದವರಿಗೆ ಹೊಟೇಲು ಕೋಣೆ ನೀಡಬಾರದೆಂದು ದಿಲ್ಲಿ ಪೊಲೀಸರು ಮೌಖಿಕ ಸೂಚನೆ ನೀಡಿದ್ದಾರೆ ಎಂದು ಹೊಟೇಲ್ ಮ್ಯಾನೇಜರ್ ರಾಹುಲ್ ಗೌತಂ ಹೇಳಿದ್ದರು. ಪೊಲೀಸರು ಬಾಯಿಮಾತಲ್ಲಿ ಹೇಳಿದ್ದು ಅದನ್ನು ಏಜೆನ್ಸಿಗೆ ತಿಳಿಸಲಾಗಿದೆ. ಅವರು ಈ ವಿಷಯವನ್ನು ವೆಬ್ ಸೈಟ್‍ನಲ್ಲಿ ಅಪ್‍ಲೋಡ್ ಮಾಡಿಲ್ಲ. ನಾವು ಕಾಶ್ಮೀರಿಗಳಿಗೆ ವಿರುದ್ಧವಲ್ಲ ಎಂದು ಹೊಟೇಲ್ ಮ್ಯಾನೇಜರ್ ದಿ ಪ್ರಿಂಟ್‍ಗೆ ತಿಳಿಸಿದ್ದಾರೆ. ಈ ರೀತಿ ನಾವು ಯಾವುದೇ ಸೂಚನೆ ನೀಡಿಲ್ಲ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.