ಖಿನ್ನತೆ ಮತ್ತು ದುಃಖ: ವ್ಯತ್ಯಾಸ ಮತ್ತು ಪರಿಹಾರ

0
594

ಸನ್ಮಾರ್ಗ ವಾರ್ತೆ

ದುಃಖ ಮತ್ತು ಖಿನ್ನತೆಯ ನಡುವಿನ ಮೂಲಭೂತ ವ್ಯತ್ಯಾಸವನ್ನು ನಾವು ಗುರುತಿಸಬೇಕಾಗಿದೆ. ದುಃಖವು ಮಾನವನ ಒಂದು ಭಾವನೆಯಾಗಿದೆ. ಯಾವ ಜೀವಿಗೂ ಅದು ಅಪರಿಚಿತವಲ್ಲ. ಪ್ರವಾದಿಗಳು ಕೂಡಾ ಅನೇಕ ಸಂಕಷ್ಟಗಳನ್ನು ನೋವು, ದುಃಖವನ್ನು ಅನುಭವಿಸಿದ್ದಾರೆ. ಆದ್ದರಿಂದ ದುಃಖವೆಂಬುದು ಬಲಹೀನತೆಯ ಅಥವಾ ದೌರ್ಬಲ್ಯದ ಲಕ್ಷಣವಲ್ಲ. ಆದರೆ ಅದು ನಿರಾಶೆ ಮತ್ತು ಖಿನ್ನತೆಯಾಗಿ ಬದಲಾಗದಂತೆ ನೋಡಿಕೊಳ್ಳಬೇಕು.

ಎಷ್ಟೇ ನೋವು, ಸಂಕಷ್ಟ ಎದುರಾದರೂ ಒಮ್ಮೆಯೂ ಶುಭ ನಿರೀಕ್ಷೆಯನ್ನು ಕೈಬಿಡುವುದಿಲ್ಲವೆಂಬುದು ಓರ್ವ ಸತ್ಯವಿಶ್ವಾಸಿಯ ವಿಶೇಷತೆಯಾಗಿದೆ. ಇಸ್ಲಾಮಿನ ಮೂಲಭೂತ ಸಂವಿಧಾನವೇ ನಮ್ಮನ್ನು ಖಿನ್ನತೆ ಮತ್ತು ನಿರಾಶೆಯಿಂದ ಮುಕ್ತರಾಗಲು ಸಿದ್ಧಗೊಳಿಸುತ್ತದೆ. ಇಸ್ಲಾಮಿನ ಮನಃಶಾಸ್ತ್ರದ ವಿಧಾನವನ್ನು ನೋಡೊಣ.

ಒಬ್ಬರಿಗೂ ಹೊರಲಾಗದ ಹೊರೆಯನ್ನು ಹೊರಿಸುವುದಿಲ್ಲ
ಒಬ್ಬ ವ್ಯಕ್ತಿಯ ಸಾಮರ್ಥ್ಯಕ್ಕೆ ಮೀರಿದ ಹೊಣೆಯನ್ನು ಹೊರಿಸುವುದಿಲ್ಲ. (ಪವಿತ್ರ ಕುರ್‌ಆನ್- 2: 286) ನಮ್ಮಿಂದ ಎದುರಿಸಲು ಸಾಧ್ಯವಿಲ್ಲವೆಂದು ತೋರಿದರೂ ನಾವು ಅದನ್ನು ಎದುರಿಸಿದರೆ ನಮಗೆ ಯಶಸ್ವಿಯಾಗಲು ಸಾಧ್ಯವಿದೆಯೆಂಬ ವಿಶ್ವಾಸ ಇರಬೇಕು- ಏಕೆಂದರೆ ಅಲ್ಲಾಹನು ನಮ್ಮನ್ನು ನಮಗಿಂತಲೂ ಚೆನ್ನಾಗಿ ತಿಳಿದಿದ್ದಾನೆ. ನಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳನ್ನು ನಿಭಾಯಿಸಲು ಅವನು ನಮಗೆ ಶಕ್ತಿ ಸಾಮರ್ಥ್ಯವನ್ನು ನೀಡಿದ್ದಾನೆ ಎಂಬ ವಿಶ್ವಾಸ ನಮ್ಮಲ್ಲಿ ಇರಬೇಕು.

ಕಷ್ಟದೊಂದಿಗೆ ಸುಲಭ
“ನಿಶ್ಚಯವಾಗಿಯೂ ಸಂಕೀರ್ಣತೆಯೊಂದಿಗೆ ವೈಶಾಲ್ಯವೂ ಇದೆ” (ಪವಿತ್ರ ಕುರ್‌ಆನ್- 94: 5) ಎಂದು ಅಲ್ಲಾಹನು ವಾಗ್ದಾನ ಮಾಡಿದ್ದಾನೆ. ಅಲ್ಲಾಹನ ವಚನಗಳಲ್ಲಿ ದೃಢವಾದ ವಿಶ್ವಾಸವಿರಿಸಬೇಕು ಮತ್ತು ನಮ್ಮನ್ನು ನಿರಂತರವಾಗಿ ಸಂಕಷ್ಟಗಳು ಕಾಡಿದರೂ, ಅವುಗಳ ಭಾರದಿಂದ ನಾವು ಕುಸಿದು ಹೋದರೂ ಅಲ್ಲಾಹನ ಮೇಲಿನ ಭರವಸೆಯನ್ನು ಬಿಡಬಾರದು. ಏಕೆಂದರೆ ಕಷ್ಟ-ನಷ್ಟಗಳು ಶಾಶ್ವತವಲ್ಲ. ಅದರ ಬಳಿಕ ನಮಗೆ ಉತ್ತಮ ಸಂತಸದ ದಿನಗಳು ಬರಬಹುದು. ಅದಕ್ಕಾಗಿ ಸುಖವಾದ ಅಂತ್ಯವನ್ನು ಅಲ್ಲಾಹನು ನಿಶ್ಚಯಿಸಿರಬಹುದು. ಅಲ್ಲಾಹನ ಮೇಲಿನ ಭರವಸೆ ಮತ್ತು ವಿಶ್ವಾಸವನ್ನು ಬಲಪಡಿಸಿಕೊಂಡು ಮತ್ತು ಕಷ್ಟದ ಸಂದರ್ಭಗಳಲ್ಲಿ ಸಹನೆ ವಹಿಸುವ ವಿಶ್ವಾಸಿಗಳಿಗೆ ಯಾವುದೇ ರೀತಿಯ ಸಂದಿಗ್ಧತೆಯ ನ್ನು ನಿಭಾಯಿಸಲು ಸಾಧ್ಯವಿದೆ. ಅದರೊಂದಿಗೆ ದೇವನಿಂದ ಅಗಣಿತ ಪ್ರತಿಫಲವೂ ದೊರೆಯುತ್ತದೆ.

ಎಲ್ಲವನ್ನೂ ನಿಯಂತ್ರಿಸುವವನು ಅಲ್ಲಾಹನೇ ಹೊರತು ನಾವಲ್ಲ
ಖಿನ್ನತೆ ಎಂಬುದು ಸಾಮಾನ್ಯವಾಗಿ ನಿರಾಶೆಯಿಂದ ಉದ್ಭವಿಸುತ್ತದೆ. ನಮ್ಮ ನಿಯಂತ್ರಣದಲ್ಲಿ ಏನೂ ಇಲ್ಲ ಎಂಬ ಅಸಹಾಯಕತೆಯ ಭಾವವು ಇದಕ್ಕೆ ಕಾರಣ. ಆದರೆ ಎಲ್ಲವೂ ಅಲ್ಲಾಹನ ನಿಯಂತ್ರಣದಲ್ಲಿದೆ ಎಂಬ ಸತ್ಯವನ್ನು ನಾವು ತಿಳಿದುಕೊಳ್ಳಬೇಕು. ಅಲ್ಲಾಹನೇ ನಿಯಂತ್ರಣದಲ್ಲಿ ಅತ್ಯಂತ ಶ್ರೇಷ್ಠನು ಮತ್ತು ಆತನು ನಮ್ಮೊಂದಿಗೆ ಅತ್ಯಧಿಕ ಕರುಣೆಯುಳ್ಳವನು ಎಂಬುದನ್ನು ತಿಳಿದಿರಬೇಕು. ನಮ್ಮ ಜೀವನವನ್ನು ಅಲ್ಲಾಹನಿಗೆ ಅರ್ಪಿಸಿ. ಅವನ ಯೋಜನೆಗಳನ್ನು ಸ್ವಾಗತಿಸುವುದು ಅಂತಿಮವಾಗಿ ನಮ್ಮ ಮನಸ್ಸು, ಶರೀರ ಮತ್ತು ಆತ್ಮದ ಪುಷ್ಠೀಕರಣಕ್ಕೆ ಕಾರಣವಾಗುತ್ತದೆ.

ನಿಮ್ಮಿಂದಾಗುವಷ್ಟು ಮಾಡಿ, ಉಳಿದದ್ದನ್ನು ಅಲ್ಲಾಹನಿಗೆ ಬಿಡಿ
ಮಾನವನ ಜವಾಬ್ದಾರಿಯು ಕೆಲವು ಗಡಿಗಳಲ್ಲಿ ಸೀಮಿತವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅಲ್ಲಾಹನು ನಾವು ನಮ್ಮ ಕರ್ತವ್ಯಗಳನ್ನು ಪೂರೈಸಬೇಕು ಮತ್ತು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಧ್ಯವಾದಷ್ಟು ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಬಯಸುತ್ತಾನೆ. ಮತ್ತು ಉಳಿದವುಗಳನ್ನು ಅಲ್ಲಾಹನಿಗೆ ಬಿಟ್ಟುಬಿಡಬೇಕು ಎಂಬುದೇ ಅಲ್ಲಾಹನ ನಿರೀಕ್ಷೆ. ನಮಗೆ ನಮ್ಮ ಚಟುವಟಿಕೆಗಳನ್ನು ಮಾತ್ರ ನಿಯಂತ್ರಿಸಲು ಸಾಧ್ಯ. ಅದರ ಫಲಿತಾಂಶವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಪ್ರವಾದಿಗಳಿಗೂ ಅದರ ಫಲಿತಾಂಶಗಳಲ್ಲಿ ನಿಯಂತ್ರಣವಿರಲಿಲ್ಲ. ಓರ್ವ ವಿಶ್ವಾಸಿಗೆ ಅವರ ಪ್ರಯತ್ನದ ಆಧಾರದಲ್ಲಿ ಪ್ರತಿಫಲ ದೊರೆಯುತ್ತದೆ. ಆದ್ದರಿಂದ ನಾವು ನಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಬೇಕು. ಉಳಿದದ್ದನ್ನು ಅಲ್ಲಾಹನಿಗೆ ಬಿಟ್ಟು ಬಿಡಬೇಕು.

ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞತೆ
ನಾವು ಸಂಕಷ್ಟಗಳ ಸಮಯಗಳಲ್ಲಿ ನಮ್ಮ ಸುತ್ತಲಿರುವ ಅನುಗ್ರಹಗಳನ್ನು ಮರೆಯುತ್ತೇವೆ. ಅದಕ್ಕೆ ಬದಲು ನಮಗೆ ಸಂಭವಿಸುವ ಆಪತ್ತಿನ ವಿಷಯಗಳಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ. ಇದು ಮಾನವ ಸಹಜ ಗುಣ. ನಿರಾಶೆ ಮತ್ತು ಖಿನ್ನತೆಯ ಪಾತಾಳಕ್ಕೆ ತಾನು ಎಸೆಯಲ್ಪಡುತ್ತಿದ್ದೇನೆಂದು ಅನಿಸುವಾಗಲೂ, ನಾವು ಕೃತಜ್ಞರಾಗಿರಲು ಹಲವು ಅನುಗ್ರಹಗಳು ನಮ್ಮ ಮೇಲಿದೆ ಎಂಬುದನ್ನು ಸ್ವಯಂ ನೆನಪಿಸಿಕೊಳ್ಳಬೇಕು. ನಮಗೆ ದೊರೆತಿರುವ ಹಲವು ಅನುಗ್ರಹಗಳು ದೊರೆಯದಂತಹ ಅಸಂಖ್ಯಾತ ವ್ಯಕ್ತಿಗಳು ನಮ್ಮ ಸುತ್ತಮುತ್ತಲು ಇದ್ದಾರೆಂಬುದನ್ನು ನಾವು ನೆನಪಿಗೆ ತಂದುಕೊಳ್ಳಬೇಕು. ಇದುವೇ ನಾವು ಖಿನ್ನತೆ ನಿರಾಶೆಗೆ ಸಾಗದಿರಲು ದೊಡ್ಡ ಪ್ರತಿರೋಧ ಔಷಧಿ.