ದೇಶದಲ್ಲಿರುವ ಗೋ ಶಾಲೆಗಳು ಹೇಗಿವೆ? ಬೆಚ್ಚಿಬೀಳಿಸುವ ಅಧ್ಯಯನ ವರದಿ

0
1179

ಇತ್ತೀಚೆಗಿನ ವರ್ಷಗಳ ಬೆಳವಣಿಗೆಯಿಂದಾಗಿ ಗೋವುಗಳ ಸಂರಕ್ಷಣೆಗಾಗಿ ನಿರ್ಮಿಸಲಾದ ಗೋ ಶಾಲೆಗಳ ಕುರಿತು ಪ್ರಾಣಿ ಹಕ್ಕುಗಳ ಸಂಘಟನೆಯಾದ ಫೆಡರೇಷನ್ ಆಫ್ ಇಂಡಿಯನ್ ಎನಿಮಲ್ ಪ್ರೊಟೆಕ್ಷನ್ ಆರ್ಗನೈಝೇಶನ್ ( FIAPO ) ಸೆಪ್ಟೆಂಬರ್ 4 ರಂದು “ಗೋ ಗಾಥಾ” ಎಂಬ ವರದಿಯೊಂದನ್ನು ಬಿಡುಗಡೆ ಗೊಳಿಸಿದೆ. ಸರಿಸುಮಾರು 13 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಗೋಶಾಲೆಗಳನ್ನು ಸಂಘಟನೆಯು ಅಧ್ಯಯನಕ್ಕೊಳಪಡಿಸಿದ್ದು ಗೋಶಾಲೆಗಳ ಕ್ರೂರ ರಹಸ್ಯಗಳನ್ನು ಬಹಿರಂಗಗೊಳಿಸಿದೆ.

ಪ್ರಾಣಿಗಳ ಸಂರಕ್ಷಣೆಯ ಹೆಸರಿನಲ್ಲಿ ನಿರ್ಮಿಸಲಾದ ಗೋಶಾಲೆಗಳಲ್ಲಿ ಹಸುಗಳನ್ನು ಯಂತ್ರಗಳಂತೆ ಉಪಯೋಗಿಸಲಾಗುತ್ತಿದೆ. ಅನುಭವಸ್ಥ ಕೆಲಸಗಾರರು ಇಲ್ಲದಿರುವುದು ಗೋವುಗಳನ್ನು ಇನ್ನಷ್ಟು ಸಂಕಷ್ಟಕ್ಕೆ ಒಳಪಡಿಸಿದಂತಿದೆ. ಗೋ ಶಾಲೆಗಳಲ್ಲಿ 66% ಹಸುಗಳಿಂದ ಅವುಗಳ ಕರುಗಳನ್ನು ಬೇರ್ಪಡಿಸಲಾಗಿದೆ. 26% ಹಸುಗಳ ಕಾಲುಗಳನ್ನು ಕಾಲುಗಳನ್ನು ಕಟ್ಟಿಹಾಕಿಯೇ ಹಾಲನ್ನು ಕರೆಯಲಾಗುತ್ತದೆ. 50% ಹಸುಗಳಿಗೆ 1 ಮೀಟರ್ ಉದ್ದವೂ ಇಲ್ಲದ ಹಗ್ಗಗಳಿಂದ ಕಟ್ಟಲಾಗಿದ್ದು ಹಸುಗಳಿಗೆ ತಮ್ಮ ತಲೆಯನ್ನು ಮೇಲಕ್ಕೆತ್ತಲೂ ಆಗುವುದಿಲ್ಲ. 76% ಹಸುಗಳನ್ನು ದಿನವಿಡೀ ಹಗ್ಗ ಕಟ್ಟಿಯೇ ಇಡಲಾಗುತ್ತದೆ. ಅವುಗಳನ್ನು ಸ್ವತಂತ್ರ್ಯವಾಗಿ ಓಡಾಡಲು ಬಿಡುವುದಿಲ್ಲ.

ಇದಲ್ಲದೇ, 50% ಹಸುವಿನ ಸೆಗಣಿ ಮತ್ತು ಮೂತ್ರವನ್ನು ಉಪಯೋಗಿಸದೇ ಇರುವುದರಿಂದ ಹಸುಗಳು ನೈರ್ಮಲ್ಯವನ್ನು ಕಳೆದುಕೊಂಡಿವೆ. ಸರಕಾರದಿಂದ ಗೋ ಶಾಲೆಗಳಿಗೆ ಅತ್ಯಲ್ಪ ಸೌಲಭ್ಯಗಳಿವೆ. ಇದಲ್ಲದೇ ಕೆಲವೊಂದು ಧಾರ್ಮಿಕ ಸಂಘಟನೆಗಳಿಂದ ಲಭಿಸುವ ಸಹಾಯ ಧನವು ಗೋ ಶಾಲೆಗಳಿಗೆ ಆಧಾರವಾಗಿದೆ ಎಂದು ಬಾಹ್ಯವಾಗಿ ಹೇಳಿಕೊಳ್ಳುತ್ತಿದ್ದಾರಾದರೆ ಗೋ ಶಾಲಾ ನಿರ್ವಾಹಕರು ಹಸುವಿನ ಹಾಲನ್ನು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರುವುದನ್ನೇ ಉದ್ಯಮವಾಗಿಸಿಕೊಂಡು ಬಿಟ್ಟಿದ್ದಾರೆ. ಗೋವುಗಳು ಗೋ ಶಾಲೆಗಳಲ್ಲಿ ಸುರಕ್ಷಿತವಾಗಿವೆಯೇ ಎಂಬುದನ್ನು ಸರಕಾರವು ಮತ್ತೊಮ್ಮೆ ಪರಿಶೀಲನೆಗೊಳಪಡಿಸಬೇಕಾದ ಅಗತ್ಯತೆ ಇದೆ.ಎಂದು ವರದಿಯು ತಿಳಿಸಿದೆ.

ಫೆಡರೇಷನ್ ಆಫ್ ಇಂಡಿಯನ್ ಎನಿಮಲ್ ಪ್ರೊಟೆಕ್ಷನ್ ಆರ್ಗನೈಝೇಶನಿನ ಕಾರ್ಯನಿರ್ವಾಹಕ ನಿರ್ದೇಶಕರಾದ ವರ್ದಾ ಮೆಹ್ರೋತ್ರಾರವರು  “ಗೋವಿನ ಸಂರಕ್ಷಣೆಗಾಗಿ ರೂಪುಪಡೆದಿರುವ ಗೋ ಶಾಲೆಗಳು ಡೈರಿ ಕಾರ್ಯನಿರ್ವಾಹಕರಿಗಿಂತಲೂ ಕ್ರೂರವಾಗಿ ಗೋವುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸರಕಾರದ ಬೆಂಬಲ ಪಡೆದ ಗೋ ಶಾಲೆಗಳಲ್ಲಿ ಸಾವಿರಾರು ಗೋವುಗಳು ನಿರ್ವಾಹಕರ ಕ್ರೂರ ದೌರ್ಜನ್ಯಕ್ಕೆ ಗುರಿಯಾಗುತ್ತಿವೆ” ಎಂದು ತಿಳಿಸಿದ್ದಾರೆ.