ನಾನು ಮೂರು ಬಾರಿ ಅಯೋಧ್ಯೆಗೆ ಹೋಗಿದ್ದೆ…

0
826

ಸನ್ಮಾರ್ಗ ವಾರ್ತೆ

ದಿನೇಶ್ ಅಮೀನ್ ಮಟ್ಟು

ನಾನು ಮೂರು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದೆ, 2002, 2007 ಮತ್ತು 2012. ಈ ಮೂರು ಭೇಟಿಗಳ ಮೂರೂ ಚಿತ್ರಗಳು ನನ್ನ ಕಣ್ಣ ಮುಂದಿವೆ. ಸುಳ್ಳು ಹೇಳಲಾರೆ, ಆ ಮೂರೂ ಭೇಟಿಗಳಲ್ಲಿಯೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕಾರ್ಯವನ್ನು ಬಿಜೆಪಿ ಕೈಗೆತ್ತಿಕೊಳ್ಳಬಹುದೆಂದು ನನಗೆ ಖಂಡಿತ ಅನಿಸಿರಲಿಲ್ಲ. ನನ್ನ ನಿರೀಕ್ಷೆ ಸುಳ್ಳಾಗಿದೆ.

ಮೊದಲ ಬಾರಿ ನಾನು ಅಯೋಧ್ಯೆಗೆ ಭೇಟಿ ನೀಡಿದ್ದು ಹದಿನೆಂಟು ವರ್ಷಗಳ ಹಿಂದೆ, 2002ರ ಫೆಬ್ರವರಿ ತಿಂಗಳಲ್ಲಿ. ಆಗ ಹೋಗಿದ್ದು ಉತ್ತರಪ್ರದೇಶದ ವಿಧಾನಸಭಾ ಚುನಾವಣಾ ಸಮೀಕ್ಷೆಗೆ. ಆಗಲೂ ಅಯೋಧ್ಯೆ ಎಷ್ಟು ಪ್ರಕ್ಷುಬ್ಧವಾಗಿತ್ತೆಂದರೆ ಅಲ್ಲಿ ಉಳಿದುಕೊಳ್ಳಲು ಹೊಟೇಲ್ ರೂಮ್ ಕೂಡಾ ಸಿಕ್ಕಿರಲಿಲ್ಲ. ಈ ಪ್ರಕ್ಷುಬ್ಧತೆಗೆ ಕಾರಣ ಮಾರ್ಚ್ 15ಕ್ಕೆ ‘ಹನ್ನೆರಡು ಲಕ್ಷ ರಾಮಸೇವಕರ ಸಮಾವೇಶ ನಡೆಸುವುದಾಗಿ ವಿಶ್ವಹಿಂದೂ ಪರಿಷತ್ ಮಾಡಿದ್ದ ಘೋಷಣೆ.

ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿರುವುದರಿಂದ ರೊಚ್ಚಿಗೆದ್ದಿದ್ದ ವಿಎಚ್ ಪಿ ಇಂತಹದ್ದೊಂದು ಸಮಾವೇಶಕ್ಕೆ ಕರೆನೀಡಿತ್ತು. ಆ ದಿನ ರಾಮಸೇವಕರು ರಾಮಮಂದಿರ ನಿರ್ಮಾಣಕ್ಕಾಗಿ ಕೆತ್ತಿಟ್ಟಿದ್ದ ಎರಡು ಶಿಲಾಸ್ಥಂಭಗಳನ್ನು ತಂದು ಅಲ್ಲಿ ಹಸ್ತಾಂತರ ಮಾಡಲಿದ್ದರು.

ನಾನು ಅಲ್ಲಿಗೆ ಹೋದ ದಿನ ಮಂದಿರ ನಿರ್ಮಾಣ ಯೋಜನೆಯ ಕಂಟ್ರೋಲ್ ರೂಮ್ ಇರುವ ಕರಸೇವಕಪುರದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಲ್ ಬಿಡಾರ ಹೂಡಿದ್ದರು. ಏನೋ ಕಸರತ್ತು ಮಾಡಿ ಅವರದ್ದೊಂದು ಪುಟ್ಟ ಸಂದರ್ಶನ ಮಾಡಿದ್ದೆ. ಸಿಟ್ಟಿನಿಂದ ಅವರ ಮುಖ ದುಮುಗುಡುತ್ತಿತ್ತು.

“ರಾಜೀವ್ ಗಾಂಧಿ ಕಾಲದಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಲಾಯಿತು, ಪಿ.ವಿ.ನರಸಿಂಹರಾವ್ ಕಾಲದಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಲಾಯಿತು, ಈ ವಾಜಪೇಯಿಯವರಿಗೇನಾಗಿದೆ? ಇವರ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು, ಅವರು ಕೂತಿರುವ ಸ್ಥಾನ ರಾಮಮಂದಿರ ಚಳುವಳಿಯ ಕೊಡುಗೆ’’ ಎಂದ ಅವರ ಮಾತಿನಲ್ಲಿ ವಾಜಪೇಯಿ ಬಗ್ಗೆ ತೀವ್ರವಾದ ಅಸಮಾಧಾನ ಇತ್ತು.
ಕೊನೆಗೆ ಮಾರ್ಚ್ 15ರಂದು ಏನೂ ನಡೆಯಲಿಲ್ಲ. ಪೊಲೀಸರು ತಡೆದ ಕಾರಣ 500 ಕರಸೇವಕರು ಬಂದು ಎರಡು ಶಿಲಾಸ್ಥಂಭಗಳನ್ನು ಅರ್ಪಿಸಿ ಹೋಗಿದ್ದರು.

***********************************

2007ರಲ್ಲಿ ನಾನು ಮತ್ತೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆ ಹೋದವ ಅಯೋಧ್ಯೆಗೆ ಹೋಗಿದ್ದೆ.
ಆ ದಿನ ನನ್ನ ಹಿಂದೆಯೇ ಓಡೋಡಿ ಬಂದಿದ್ದ ದೇವೇಂದ್ರ ಎಂಬ ಹುಡುಗನ ಮುಖ ಮತ್ತು ಅವನ ಬಾಯಿಯಿಂದ ಹೊರಬಿದ್ದ ಮಾತುಗಳನ್ನು ನಾನೆಂದೂ ಮರೆಯಲಾರೆ. ಬಿಹಾರದ ಚಂಪಾರಣ್ ನಿಂದ ಹೊಟ್ಟೆಪಾಡಿಗಾಗಿ ಓಡಿಬಂದ ಈ ಅನಕ್ಷರಸ್ಥ ಹುಡುಗ ರಾಮಲಲ್ಲಾನ ಪೋಟೊಗಳು ಮತ್ತು ಪುಸ್ತಕಗಳನ್ನು ಮಾರುತ್ತಿದ್ದ. ಅವನನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗುತ್ತಿದ್ದಾಗ ಅವನು ಅಳು ಮುಖ ಮಾಡಿ ‘’ ಆಜ್ ಕಲ್ ಯೇ ದಂದಾ ನಹೀಂ ಚಲ್ ರಹಾ ಹೈ ಸಾಬ್, ಏಕ್ ಪೋಟೊ ಲೀಜಿಯೇ’’ ಎಂದು ಅಂಗಲಾಚಿದ್ದ.

ಅವನ ಮಾತಿನ ಮೇಲಿನ ಕುತೂಹಲದಿಂದ ಹತ್ತಿರ ಕರೆದಿದ್ದೆ. ಅವನ ಕೈಯಲ್ಲಿದ್ದ ಪೋಸ್ಟ್ ಕಾರ್ಡ್ ನಲ್ಲಿ ದೇವಾಲಯದ ಚಿತ್ರ ಇತ್ತು. ‘ ಅಯೋಧ್ಯೆಯಲ್ಲಿದ್ದ 704ನೇ ರಾಮ ದೇವಾಲಯ’’ ಎಂದು ಅದರಲ್ಲಿ ಬರೆದಿತ್ತು. ಅವನ ಕೈಯಲ್ಲಿದ್ದ ರಾಮ್ ಜನ್ಮ್ ಕಾ ಇತಿಹಾಸ್ ‘ ಎಂಬ ಹಿಂದಿ ಪುಸ್ತಕದಲ್ಲಿ ’90,000 ವರ್ಷಗಳ ಹಿಂದೆ ಇದೇ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಹುಟ್ಟಿದ’’ ಎಂದು ಬರೆದಿತ್ತು. ಇದರ ಜೊತೆಗೆ ರಾಮಜನ್ಮಭೂಮಿಗಾಗಿ ಬಿಜೆಪಿ ಮಾಡಿದ ತ್ಯಾಗ ಬಲಿದಾನಗಳ ವೀರಗಾಥೆ ಇತ್ತು.

ಇಲ್ಲಿಗೆ ಭೇಟಿ ನೀಡುವ ಕುರುಡು ಭಕ್ತರ ಕೈಗೆ ಇಂತಹ ತಿರುಚಿದ ಇತಿಹಾಸದ ಪುಸ್ತಕ ಸಿಕ್ಕರೆ ಗತಿ ಏನು ಎಂದು ಯೋಚನೆ ಬಂದು ಆ ಹುಡುಗನಿಗೆ ಬೈಯ್ಯಬೇಕೆನಿಸುವಷ್ಟರಲ್ಲಿ ಎದುರಿಗೆ ಗೋಡೆಯಲ್ಲಿ ಕೈಮುಗಿದು ಮತ ಕೇಳುತ್ತಿದ್ದ ವಾಜಪೇಯಿ ಮತ್ತು ಅಡ್ವಾಣಿ ಯವರ ಪೋಟೊಗಳ ಪೋಸ್ಟರ್ ಕಾಣಿಸ್ತು. ಈ ನಾಯಕರು ರಾಮಮಂದಿರ ಪೋಟೋ ತೋರಿಸಿಯೇ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವಾಗ ಈ ಬಡಹುಡುಗ ಅದೇ ಪೋಟೋ ತೋರಿಸಿ ಎರಡು ಹೊತ್ತು ಊಟ ಸಂಪಾದನೆ ಮಾಡಿದರೆ ಹೇಗೆ ತಪ್ಪಾಗುತ್ತದೆ ಎಂದು ಅನಿಸಿ ಆ ಹುಡುಗನ ಕೈಗೆ ದುಡ್ಡುಕೊಟ್ಟು ಪೋಟೊ ಪುಸ್ತಕ ಖರೀದಿಸಿ ಬಂದು ಬಿಟ್ಟಿದ್ದೆ.

ಆಗಲೂ ಈ ಬಿಜೆಪಿಯವರು ರಾಮಮಂದಿರ ನಿರ್ಮಾಣ ಮಾಡುವುದೇ ಇಲ್ಲ ಎಂದು ನನಗೆ ಬಲವಾಗಿ ಅನಿಸಿತ್ತು. ಇದಕ್ಕೆ ಕಾರಣ 2002ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಮತ್ತು 2004ರ ಲೋಕಸಭಾ ಚುನಾವಣೆಗಳೆರಡರಲ್ಲಿಯೂ ಬಿಜೆಪಿ ರಾಮಮಂದಿರ ನಿರ್ಮಾಣದ ವಿಷಯವನ್ನು ಅಜೆಂಡಾವನ್ನಾಗಿ ಮಾಡಿಕೊಂಡರೂ ಸೋತುಹೋಗಿತ್ತು.

2004ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರು ಪ್ರಚಾರಕ್ಕೆ ಹೋಗಿದ್ದಾಗ ಅಯೋಧ್ಯೆಯ ಸಭೆಯಲ್ಲಿ ಖಾಲಿ ಕುರ್ಚಿಗಳು ದೊಡ್ಡ ಸುದ್ದಿಯಾಗಿತ್ತು. ಬಾಬರಿ ಮಸೀದಿಯ ಧ್ವಂಸದ ರೂವಾರಿಗಳಲ್ಲೊಬ್ಬರಾದ ವಿನಯ ಕಟಿಯಾರ್ ಫೈಜಾಬಾದ್ ಕ್ಷೇತ್ರದಿಂದ ಲಕೀಮ್ ಪುರಕ್ಕೆ ಓಡಿಹೋಗಿದ್ದರು.

ಈ ಕಾರಣಕ್ಕಾಗಿಯೇ ಹುಡುಗ ದೇವೇಂದ್ರನ “ ಆಜ್ ಕಲ್ ಯೇ ದಂದೆ ನಹೀ ಚಲ್ ರಹಾ ಹೈ ಸಾಬ್ ‘ ಎಂಬ ಮಾತು ಬೇರೆಯೇ ಅರ್ಥವನ್ನು ನನಗೆ ಧ್ವನಿಸಿತ್ತು.

*****************************

ನಾನು ಕೊನೆಯ ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದು 2012ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ.

“ ಎಲ್ಲರೂ ಸಾಲಾಗಿ ಬನ್ನಿ, ಗಂಡಸರು ಈ ಕಡೆ, ಹೆಂಗಸರು ಆ ಕಡೆ, ‘ಪೋರ್ಸ್’ ನವರು ಮಾತ್ರ ನನ್ನ ಹಿಂದೆ ಬನ್ನಿ” ಎಂದು ಅಲ್ಲಿದ್ದ ಇನ್ ಸ್ಪೆಕ್ಟರ್ ನಾರಾಯಣ್ ಹರಿಸಿಂಗ್ ಶೋಲೆ ಚಿತ್ರದ ಜೈಲರ್ ಅಸ್ರಾನಿ ಶೈಲಿಯಲ್ಲಿ ಡೈಲಾಗ್ ಹೊಡೆದಿದ್ದ. ಇನ್ನೇನು ಒಳಗೆ ಹೊರಟಿದ್ದ ಭಕ್ತರು ಅಲ್ಲಿಯೇ ಕುಕ್ಕರಗಾಲಿನಲ್ಲಿ ಕೂತುಬಿಟ್ಟಿದ್ದರು. ‘ಮೊಬೈಲ್, ಕೀಚೈನ್, ಬೆಲ್ಟ್,ಪರ್ಸ್ ಎಲ್ಲವನ್ನೂ ಇಲ್ಲಿಯೇ ಜಮಾ ಮಾಡಿ’’ ಎಂದವನೇ ‘’ದುಡ್ಡು ಒಳಗೆ ಕೊಂಡುಹೋಗಬಹುದು’’ ಎಂದು ಪ್ರತ್ಯೇಕವಾಗಿ ಒತ್ತು ಕೊಟ್ಟು ಹೇಳಿದ.

ಅಲ್ಲಿದ್ದ ಭಕ್ತರು ತಮ್ಮ ಅಂಗಿ ಮತ್ತು ಚಡ್ಡಿಯ ಕಿಸೆಯೊಳಗೆ ಕೈಹಾಕಿ ಒಳಗಿದ್ದುದನ್ನು ತೆಗೆದು ಹೊರಹಾಕಿದರು. ಅಲ್ಲಿದ್ದದ್ದು ಒಂದಷ್ಟು ಚಿಲ್ಲರೆ ದುಡ್ಡು ಮತ್ತು ಬಗೆಬಗೆಯ ಗುಟ್ಕಾ ಪಾಕೇಟುಗಳು, ‘ಉಸ್ಕೊ ಬಿ ನಹೀಂ ಲೇಕೆ ಜಾ ಸಕ್ತಾ’’ ಎಂದು ಇನ್ ಸ್ಪೆಕ್ಟರ್ ಗುಡುಗಿದಾಗ ಅವರೆಲ್ಲ ಬಾಯಿಗೆ ಗುಟ್ಕಾ ಪ್ಯಾಕೆಟ್ ಸುರುವಿಕೊಂಡರು.

ವಿಚಿತ್ರವೆಂದರೆ ಗೊಂಡಾದಿಂದ ರಾಮ್ ಲಲ್ಲನಾ ದರ್ಶನಕ್ಕೆ ಬಂದಿದ್ದ ಅವರ ಕೈಯಲ್ಲಿ ಹೂ-ಹಣ್ಣು,ಕುಂಕುಮ ಯಾವುದೂ ಇರಲಿಲ್ಲ. ಅವರಲ್ಲಿ ಹೆಚ್ಚಿನವರು ಆಗತಾನೇ ಹೊಲದ ಲ್ಲಿ ಕೆಲಸ ಮುಗಿಸಿ ನೇರವಾಗಿ ಬಂದಂತಿದ್ದರು. ಮಾಸಿದ ಅಂಗಿ,ಪಂಚೆ, ಬರಿಗಾಲು ಬಳಲಿದ ಮುಖ. ಮತದಾನದ ಹಿಂದಿನ ದಿನವೇ ಇವರೆಲ್ಲ ಯಾಕೆ ಬಂದರು ಎಂದು ಕೇಳಲು ಪ್ರಯತ್ನ ಪಟ್ಟಾಗಲೆಲ್ಲ ಅವರನ್ನು ಕರೆದುಕೊಂಡು ಬಂದಿದ್ದ ‘’ಠೇಕೆದಾರ್’ ಮಧ್ಯಪ್ರವೇಶಿಸಿ ವಿವರಣೆ ಕೊಡುತ್ತಿದ್ದ.

ಗೋಂಡಾ ಜಿಲ್ಲೆಯಲ್ಲಿ ಮರುದಿನ ಮತದಾನ ಇದ್ದರೂ ಇವರೆಲ್ಲ ಯಾಕೆ ಬಂದಿದ್ದರು? ಯಾರು ಇಷ್ಟೊಂದು ಆಸಕ್ತಿಯಿಂದ ಅವರ ಮತದಾನ ತಪ್ಪಿಸಿ ಇಲ್ಲಿಗೆ ಕರೆದುಕೊಂಡು ಬಂದವರು ಎನ್ನುವುದನ್ನೆಲ್ಲ ಊಹಿಸಿಕೊಳ್ಳುವುದು ಕಷ್ಟ ಆಗಿರಲಿಲ್ಲ. ರಾಮಜನ್ಮಭೂಮಿ ಚಳುವಳಿಯಲ್ಲಿ ಭಾಗಿಯಾಗಲು ಅಯೋಧ್ಯೆಗೆ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಿದ್ದ ಭಕ್ತರೆಲ್ಲಿ? ಇದೊಂದು ಕೂಲಿ ಕೆಲಸ ಎಂಬಂತೆ ಠೇಕೆದಾರ್ ಕೊಡುವ ದುಡ್ಡಿನ ಆಸೆಗಾಗಿ ಬಂದಿರುವ ಕೂಲಿ ಕಾರ್ಮಿಕರೆಲ್ಲಿ?

ಕೊನೆಗೆ ಆ ವಿಧಾನಸಭಾ ಚುನಾವಣೆಯಲ್ಲಿಯೂ ಉತ್ತರಪ್ರದೇಶದಲ್ಲಿ ಬಿಜೆಪಿ ಸೋತಿತ್ತು.

ಹೀಗಿರುವಾಗ ರಾಮಜನ್ಮಭೂಮಿ ಬಿಜೆಪಿ ಪಾಲಿಗೆ ಬತ್ತಿ ಹೋದ ಕೆಚ್ಚಲಿನ ಹಸುವಾಗಿರುವ ಕಾರಣ ಇವರು ರಾಮಮಂದಿರ ನಿರ್ಮಾಣಕ್ಕೆ ಮುಂದಾಗಲಾರರು ಎಂದು ಅಂದುಕೊಂಡಿದ್ದೆ.

*********************************

ಆದರೆ ಅಷ್ಟರಲ್ಲಿ ನಾವೆಲ್ಲ ನಿರೀಕ್ಷಿಸಿರದ ರೀತಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ಬಂತು. “ ರಾಮಜನ್ಮಭೂಮಿ ಎನ್ನುವುದು ಕಾನೂನಿನ ಪ್ರಶ್ನೆ ಅಲ್ಲ, ಅದು ಹಿಂದೂಗಳ ನಂಬಿಕೆಯ ಪ್ರಶ್ನೆ” ಎಂದೆಲ್ಲ ಹೇಳುತ್ತಿದ್ದ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಇದ್ದಕ್ಕಿದ್ದ ಹಾಗೆ ಪ್ಲೇಟ್ ಬದಲಾಯಿಸಿ “ ಕಾನೂನಿಗೆ ತಲೆಬಾಗುವೆವು” ಎಂದು ಹೇಳುತ್ತಾ ತಿರುಗಾಡತೊಡಗಿದ್ದರು.. ಕಾನೂನು ತಲೆ ಬಗ್ಗಿಸಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.