ಬೈರೂತ್ ಭೀಕರ ಸ್ಫೋಟ: 70ಕ್ಕೂ ಹೆಚ್ಚು ಬಲಿ; 4 ಸಾವಿರ ಗಾಯಾಳು

0
671

2750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟ!

ಸನ್ಮಾರ್ಗ ವಾರ್ತೆ

ಬೈರೂತ್: ಲೆಬನಾನಿನ ರಾಜಧಾನಿ ಬೈರೂತ್‌ ನಗರದ ಮಧ್ಯ ಭಾಗದಲ್ಲಿ ಸಂಭವಿಸಿದ ಎರಡು ಬೃಹತ್ ಸ್ಫೋಟಗಳಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸುಮಾರು 4000 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ (ಸ್ಥಳೀಯ ಸಮಯ ಸಂಜೆ 6.10 ರ ಸುಮಾರಿಗೆ) ಈ ಭೀಕರ ಸ್ಫೋಟವು ನಡೆದಿದ್ದು, ನಗರದಾದ್ಯಂತ ಕಟ್ಟಡಗಳನ್ನು ಅಲ್ಲಾಡಿಸಿ ತೀವ್ರ ಹಾನಿ ಮತ್ತು ಸಾವು-ನೋವುಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.

ಸಾವುನೋವುಗಳ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಬೈರೂತ್ ಬಂದರಿನಲ್ಲಿ ಕೃಷಿ ಹಾಗೂ ಕೈಗಾರಿಕೆಗಳಿಗೆ ಬಳಸಲು ಸಂಗ್ರಹಿಸಿಡಲಾಗಿದ್ದ ಸ್ಫೋಟಕದ ರಾಸಾಯನಿಕಗಳು ಈ ಘಟನೆಗೆ ಕಾರಣವಾಗಿದೆ ಎಂದು ಲೆಬನಾನ್ ಆಂತರಿಕ ಸಚಿವ ಮೊಹಮ್ಮದ್ ಫಹ್ಮಿ ಹೇಳಿದ್ದಾರೆ.

ಮಂಗಳವಾರ ಬೈರೂತ್ ಬಂದರು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಿದ್ದರಿಂದ ಲೆಬನಾನಿನ ರಾಜಧಾನಿಯ ದೊಡ್ಡ ಭಾಗಗಳನ್ನು ಧ್ವಂಸಗೊಳಿಸಿದೆ ಎಂದು ಪ್ರಧಾನಿ ಹಸನ್ ದಿಯಾಬ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

“ಆರು ವರ್ಷಗಳಿಂದ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ 2,750 ಟನ್ ಅಮೋನಿಯಂ ನೈಟ್ರೇಟ್‌ನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟಿರುವುದು ಸ್ವೀಕಾರಾರ್ಹವಲ್ಲ” ಎಂದು ರಕ್ಷಣಾ ಮಂಡಳಿಯ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ಕ್ರಮವು ಸ್ವೀಕಾರಾರ್ಹವಲ್ಲ. ನಾವು ಈ ಕುರಿತು ಮೌನವಾಗಿರುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ವೈರಲ್ ಆದ ವೀಡಿಯೋ:
ಬೈರೂತ್ ಸ್ಫೋಟವನ್ನು ಹಲವಾರು ಮಂದಿ ತಮ್ಮ ಮೊಬೈಲ್ ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್, ಟ್ವಿಟ್ಟರ್, ಇನ್ ಸ್ಟಾ ಗ್ರಾಂ ಸೇರಿದಂತೆ ಇತರೆಡೆ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಸ್ಫೋಟದ ತೀವ್ರತೆಯನ್ನು ನೋಡಿದ ನಂತರ ಹಲವಾರು ಟ್ವೀಟಿಗರು ಈ ಘಟನೆ ನಮಗೆ ಜಪಾನ್ ನ ಹಿರೋಷಿಮಾ ಮತ್ತು ನಾಗಸಾಕಿಯ ಘಟನೆ ನೆನೆಪಿಸಿತು ಎಂದು ತಿಳಿಸಿದ್ದಾರೆ.
ಅಲ್ಲದೇ, ಬೈರೂತ್ ನ ಜನರಿಗೆ ಪ್ರಾರ್ಥನೆ ಮಾಡಿ ಎಂದು ಹಲವಾರು ಮಂದಿ ಕೋರಿಕೊಂಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.