ಬಂಡುಕೋರ ಶಾಸಕರನ್ನು ಭೇಟಿಯಾಗಲು ಬಂದ ಡಿಕೆಶಿಯವರನ್ನು ತಡೆದ ಪೊಲೀಸರು, ಭೇಟಿಯಾಗದೆ ಹಿಂತಿರುಗಲ್ಲ, ಡಿಕೆಶಿ

0
562

ಮುಂಬೈ, ಜು. 10: ಅತೃಪ್ತ ಶಾಸಕರನ್ನು ಭೇಟಿ ಮಾಡಲು ಬಂದ ಸಚಿವ ಡಿ.ಕೆ.ಶಿವಕುಮಾರ್ ರನ್ನು ಹೊಟೇಲ್ ಪ್ರವೇಶಿಸದಂತೆ ಪೊಲೀಸರು ತಡೆದಿದ್ದಾರೆ. ಹೊಟೇಲ್‍ನ ಒಳಗೆ ಮತ್ತು ಹೊರಗೆ ಡಿಕೆಶಿಯವರು ಹೊಟೇಲು ಪ್ರವೇಶಿಸದಂತೆ ತಡೆಯಲು ಪೊಲೀಸ್ ಪಡೆಯೇ ಕಾದು ನಿಂತಿದೆ. ಹೊಟೇಲ್‍ಗೆ ಹೋಗಿ ಸ್ನೇಹಿತರನ್ನು ಭೇಟಿಯಾಗದೆ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಡಿಕೆಶಿವಕುಮಾರ್ ಹಟ ಹಿಡಿದು ಪೊಲೀಸರೊಂದಿಗೆ ಹೇಳುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ನಯಿ ಚಲೇಗಿ ನಯಿ ಚಲೇಗಿ ತಾನಶಾಹಿ ನಹಿ ಚಲೇಗಿ ಎಂದು ಘೋಷಣೆ ಕೂಗಿ ಡಿಕೆಶಿ ವಾಪಾಸು ಹೋಗಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದು ಒಂದು ಹೊಟೇಲು, ಇಲ್ಲಿ ನನ್ನ ಸ್ನೇಹಿತರು ಇದ್ದಾರೆ, ಅವರನ್ನು ಭೇಟಿಯಾಗದೆ ಹೋಗುವ ಪ್ರಶ್ನೆಯಿಲ್ಲ. ಯಾರೂ ಯಾವ ಪ್ರತಿಭಟನೆಯನ್ನು ಮಾಡಲಿ. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ಯಾರಿಗೂ ಬೆದರಿಕೆ ಹಾಕಲು ಬಂದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ. ಅವರ ನಿರ್ಧಾರ ನೋಡುವಾಗ ಶಾಸಕರನ್ನು ಭೇಟಿಯಾಗದೆ ಹಿಂದಿರುಗುವುದಿಲ್ಲ ಎಂಬಂತೆ ಕಂಡು ಬರುತ್ತಿದೆ. ಒಟ್ಟಿನಲ್ಲಿ ಮುಂಬೈನ ರಿನೈಸೆನ್ಸ್ ಹೊಟೇಲ್ ಮುಂದೆ ಹೈಡ್ರಾಮ ನಡೆಯುತ್ತಿದೆ.