ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ದಂಡ ವಿಧಿಸಿದ ರಶೀದಿಯ ಫೋಟೋ
ಸನ್ಮಾರ್ಗ ವಾರ್ತೆ
ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯ ಬಂದರು ಪ್ರದೇಶ, ಸ್ಟೇಟ್ ಬ್ಯಾಂಕ್ ರಸ್ತೆ, ನೆಲ್ಲಿಕಾಯಿ ರಸ್ತೆ, ಅಝೀಝುದ್ದೀನ್ ರಸ್ತೆ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ ಮತ್ತವರ ತಂಡವು ಬೆಳಗ್ಗೆಯೇ ಫೀಲ್ಡ್ ಗೆ ಇಳಿದು ಉದ್ಯಮ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ, 5,000 ರೂ. ದಂಡ ವಿಧಿಸಿರುವ ರಶೀದಿಯ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ಬಳಿಕ ಎಚ್ಚೆತ್ತುಕೊಂಡಿರುವ ಹಲವಾರು ಸಾರ್ವಜನಿಕರು ಮಾಸ್ಕ್ ಹಾಕಿ ಮನೆಯಿಂದ ಹೊರಬರುತ್ತಿದ್ದಾರೆ.
ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸುವುದರ ಜೊತೆಗೆ ಉಲ್ಲಂಘಿಸಿದ ಕೆಲವು ಉದ್ಯಮ ಸಂಸ್ಥೆಗಳಿಗೆ ದಂಡ ವಿಧಿಸಲು ಸೂಚನೆ ನೀಡಿದರು. ತಮ್ಮ ಕಚೇರಿ ಆವರಣದಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಪ್ರವೇಶವಿಲ್ಲ, ಸರ್ಕಾರಿ ಸೇರಿದಂತೆ ಖಾಸಗಿ ಕಚೇರಿಗಳಿಗೂ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಮಾಸ್ಕ್ ನೀಡಿ ಎಚ್ಚರಿಕೆ ನೀಡಿದರು.
ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ಕೆಲವು ಖಾಸಗಿ ಬಸ್ಗಳು ಹಾಗೂ ಬೈಕ್ ಸವಾರರನ್ನು ತಡೆದು ಮಾಸ್ಕ್ ಧರಿಸುವಂತೆ ಹೇಳಿದರು. ಮಾಸ್ಕ್ ಇಲ್ಲದೇ ಬಸ್ನಲ್ಲಿ ಪ್ರಯಾಣಿಸುವ ಜನರಿಗೆ ಬಸ್ ಒಳಗಡೆ ಪ್ರವೇಶಿಸಲು ಬಿಡಬೇಡಿ ಎಂದು ಚಾಲಕ ಹಾಗೂ ಕಂಡಕ್ಟರ್ ಗೆ ಸೂಚನೆ ನೀಡಿದರು.
ನಗರದ ಬಂದರ್ ನ ಅತ್ತೂರ್ ಸ್ಟೀಲ್ಸ್ ನ ಮಾಲಕರು ಹಾಗೂ ಸಿಬ್ಬಂದಿಗಳು ಮಾಸ್ಕ್ ಧರಿಸದೇ ಇದ್ದುದನ್ನು ಕಂಡು ಮಾಲೀಕನಿಗೆ 5,000 ರೂ. ದಂಡ ವಿಧಿಸಿದ್ದಾರೆ. ಅಝೀಝುದ್ದೀನ್ ರಸ್ತೆಯ ಅಷ್ರಫ್ ಅಂಡ್ ಕಂಪನಿ ಮಳಿಗೆಗೆ ಭೇಟಿ ನೀಡಿ ಮಾಸ್ಕ್ ಧರಿಸದೇ ಇದ್ದವರಿಗೆ ತರಾಟೆಗೆ ತೆಗೆದುಕೊಂಡರು ಹಾಗೂ ಕಂಪನಿ ಮಾಲೀಕನಿಗೆ 5,000 ರೂ. ದಂಡ ವಿಧಿಸಲು ಸೂಚನೆ ನೀಡಿದರು. ಜೊತೆಗೆ ಕಂಪನಿಯ ಒಳಗೆ ಮಾಸ್ಕ್ ಧರಿಸದೇ ಕೆಲಸ ಮಾಡುವುದು ಕಂಡು ಬಂದರೆ ಕಂಪನಿಯನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಅದೇ ರಸ್ತೆಯ ಇನ್ನೊಂದು ಉದ್ಯಮ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಮಾಲೀಕ ಹಾಗೂ ಸಿಬ್ಬಂದಿಗಳು ಮಾಸ್ಕ್ ಧರಿಸದೇ ಕುಳಿತಿರುವುದನ್ನು ಕಂಡು ಅಂಗಡಿ ಮಾಲೀಕರಿಗೆ 5,000 ರೂ. ದಂಡ ವಿಧಿಸಲು ಸೂಚಿಸಿದ್ದು, ಗ್ರಾಹಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆಯಾ ಅಂಗಡಿ ಮಾಲೀಕರು ನಿಗಾ ವಹಿಸಬೇಕು ಇಲ್ಲದಲ್ಲಿ, ಮಾಲೀಕರಿಗೆ ದಂಡ ವಿಧಿಸಿ ಎಂದು ಎಚ್ಚರಿಸಿದರು. ಬಂದರಿನ ಮೊಹಮ್ಮದ್ ಅಲಿ ರಸ್ತೆಯ ಫಾರೂಕಿ ಅಂಡ್ ಸನ್ಸ್ ನ ಅಂಗಡಿಗೆ ಏಕಾಏಕಿ ದಾಳಿ ನಡೆಸಿ ಮಾಸ್ಕ್ ಧರಿಸದೇ ಕೆಲಸ ಮಾಡುತ್ತಿದ್ದ ಮಾಲೀಕನಿಗೆ ಕೂಡ ದಂಡ ವಿಧಿಸಲು ತಿಳಿಸಿದ ಅವರು, ಮತ್ತೊಮ್ಮೆ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳು ಕಂಡುಬಂದರೆ ಹೆಚ್ಚಿನ ದಂಡ ವಿಧಿಸಲಾಗುವುದು ಹಾಗೂ ಅಂಗಡಿಯನ್ನು ಮುಲಾಜಿಲ್ಲದೇ ಮುಚ್ಚಿಸಲಾಗುವುದು ಎಂದರು.
ಬಂದರು ಪ್ರದೇಶದ ಜೆ.ಎಂ ರಸ್ತೆಯ ಬಳಿ ಮಾಸ್ಕ್ ಧರಿಸದೇ ಅಟೋ ಚಾಲನೆ ಮಾಡುತ್ತಿದ್ದ ಚಾಲಕನ ವಾಹನ ಸಂಖ್ಯೆಯನ್ನು ನಮೂದಿಸಿ ದಂಡ ವಿಧಿಸಲು ತಿಳಿಸಿದರು ಹಾಗೂ ಕೋವಿಡ್ ನಿಯಮ ಉಲ್ಲಂಘನೆ ಮಾಡುವ ಪ್ರಯಾಣಿಕರನ್ನು ಅಟೋದಲ್ಲಿ ಹತ್ತಿಸಬಾರದು ಎಂದು ಸೂಚನೆ ನೀಡಿದರು.
ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ಕುಟುಂಬದ ರಕ್ಷಣೆಯನ್ನು ಮಾಡುವ ಜವಾಬ್ದಾರಿ ಹೊಂದಿರಬೇಕು. ಹೆಚ್ಚಿನ ಪ್ರಮಾಣದಲ್ಲಿ ಜನರು ಕೋವಿಡ್ ನಿಯಮಗಳ ಉಲಂಘನೆ ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ ದಿಢೀರ್ ದಾಳಿ ನಡೆಸಿ ದಂಡ ವಿಧಿಸುವುದರೊಂದಿಗೆ, ಆಯಾ ಅಂಗಡಿ, ವಾಹನಗಳ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು ಎಂದರು.
ಲಾಕ್ಡೌನ್ನಿಂದಾಗಿ ಅನೇಕ ತೊಂದರೆಗಳು ಎದುರಾಗುತ್ತದೆ ಹಾಗೂ ಜನರ ಜೀವನವೇ ಕಷ್ಟಕರವಾಗುತ್ತದೆ. ಕಳೆದ ಬಾರಿಯ ಲಾಕ್ಡೌನ್ನಿಂದಾದ ಪರಿಣಾಮಗಳನ್ನು ಪ್ರತಿಯೊಬ್ಬರು ಅನುಭವಿಸಿದ್ದಾರೆ. ಲಾಕ್ಡೌನ್ಗೆ ದಾರಿ ಮಾಡಿಕೊಡದೆ ಜನರಿಗೆ ಜಾಗೃತಿ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಉಪ ವಿಭಾಗ ಅಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಪಾಲಿಕೆ ಆರೋಗ್ಯಾಧಿಕಾರಿ ಮಂಜೇಶ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಕ್ಷಣಾಧಿಕಾರಿ ಜ್ಯೋತಿ, ಪಾಲಿಕೆಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.














