ಸಿಎಎ, ಎನ್‍ಆರ್ ಸಿ ವಿಷಯದಲ್ಲಿ ಸರಕಾರದ ಜೊತೆ ನಿಲ್ಲಿ: ವೈದ್ಯರಿಂದ ದಿಲ್ಲಿ ಗಾಯಾಳುಗಳಿಗೆ ಸಲಹೆ- ಆರೋಪ; ಉಚಿತ ಚಿಕಿತ್ಸೆ ನೀಡಿದ ಅಲ್ ಶಿಫಾ ಆಸ್ಪತ್ರೆಗೆ ಮೆಚ್ಚುಗೆ

0
1603

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.3: ಹೊಸದಿಲ್ಲಿ ಗಲಭೆಯಲ್ಲಿ ಗುಂಡೇಟಿಗೀಡಾದವರ ಸಹಿತ ಗಾಯಗೊಂಡವರಿಗೆ ಸರಿಯಾಗಿ ಚಿಕಿತ್ಸೆ ನೀಡದೇ ಕಳುಹಿಸಿರುವ ಬಗ್ಗೆ ದೂರುಗಳು ಬಂದಿವೆ. ಗಾಯಾಳುಗಳಾಗಿ ಬಂದ ಮುಸ್ಲಿಮರನ್ನು ಭಯೋತ್ಪಾದಕರು, ತೀವ್ರವಾದಿಗಳೆಂದು ಹೇಳಿ, ಸಿಎಎ, ಎನ್‍ಆರ್ ಸಿ ವಿಷಯದಲ್ಲಿ ಸರಕಾರದ ಜೊತೆ ನಿಲ್ಲಲು ವೈದ್ಯರು ಸಲಹೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳುಗಳನ್ನು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗವು ಭಯೋತ್ಪಾದಕರು ಮತ್ತು ತೀವ್ರವಾದಿಗಳೆಂದು ಕರೆದು ಆಕ್ಷೇಪಿಸುವುದು ವ್ಯಾಪಕಗೊಂಡದ್ದರಿಂದ ದಿಲ್ಲಿ ಸರಕಾರಿ ಆಸ್ಪತ್ರೆಗೆ ಹೋಗದಿರಲು ಗಾಯಾಳುಗಳು ನಿರ್ಧರಿಸಿದ್ದಾರೆಂದು ಗಾಯಾಳುಗಳಿಗೆ ಮತ್ತು ಗಲಭೆ ಪೀಡಿತರ ನೆರವಿಗೆ ಮುಂದೆ ಬಂದಿರುವ ವೈದ್ಯರು ಪತ್ರಿಕಾಗೋಷ್ಠಿ ಕರೆದು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕಬೀರ್ ನಗರದಲ್ಲಿ ಪೊಲೀಸರ ರಕ್ಷಣೆಯಲ್ಲಿ ಸಂಘಪರಿವಾರ ನಡೆಸಿದ ಗುಂಡು ಹಾರಾಟದಿಂದ ತೋಳಿಗೆ ತಗುಲಿರುವ ಗುಂಡನ್ನು ತೆಗೆಯಬೇಕಾಗಿಲ್ಲ ಎಂದು ಜಿಟಿಬಿ ಆಸ್ಪತ್ರೆಯ ವೈದ್ಯರು ಹೇಳಿದರೆಂದು ಕಬೀರ್ ನಗರದ ಆಮಿರ್ ಎಂಬ 16 ವರ್ಷದ ಬಾಲಕ ಪತ್ರಿಕೆಗೆ ತಿಳಿಸಿದ್ದಾನೆ. ಗುಂಡು ತೆಗೆದರೆ ಹಾನಿಯಾಗಬಹುದು ಎಂದು ಮರು ದಿವಸವೇ ಆಸ್ಪತ್ರೆಯಿಂದ ಹೊರಕಳುಹಿಸಲಾಗಿದೆ. ಮನೆಗೆ ಬಂದಾಗ ಉಸಿರಾಡಲು ಮತ್ತು ಮಾತಾಡಲು ಸಾಧ್ಯವಿಲ್ಲದಾಯಿತು. ಓಕ್ಲಾದ ಅಲ್ ಶಿಫಾ ಆಸ್ಪತ್ರೆಯ ಮೊಬೈಲ್ ಯುನಿಟ್ ಕಬೀರ್ ನಗರದಲ್ಲಿ ನಡೆಸಿದ ಆರೋಗ ತಪಸಾಣೆಯಲ್ಲಿ ಗುಂಡು ತೆಗೆಯದಿದ್ದರೆ ಅಪಾಯ ಎಂದು ಮನವರಿಕೆಯಾಗಿದೆ. ನಂತರ ಅವರು ಮುಂದೆ ಬಂದು ಅಲ್ ಶಿಫಾ ಆಸ್ಪತ್ರೆಗೆ ದಾಖಲಿಸಿ ಗುಂಡನ್ನು ಹೊರತೆಗೆದರು ಎಂದು ಆಮಿರ ಹೇಳಿದರು.

ಜಿಟಿಬಿ ಆಸ್ಪತ್ರೆಯಂತಹದೇ ಅನುಭವ ದಿಲ್ಲಿಗೇಟ್‍ನ ಎಲ್‍ಎನ್‍ಜಿಪಿ ಆಸ್ಪತ್ರೆಯಲ್ಲಿ ಎದುರಾಯಿತೆಂದು ಗಲಭೆ ಪೀಡಿತರನ್ನು ಆಸ್ಪತ್ರೆಗೆ ತಲುಪಿಸಲು ಪ್ರಯತ್ನಿಸುತ್ತಿರುವ ಡಾ. ಹರ್ಜಿತ್ ಸಿಂಗ್ ಭಾಟಿ ಹೇಳಿದರು. ಚಿಕಿತ್ಸೆ ನಿರಾಕರಿಸಿ ಹಲವರನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಲಾಗುತ್ತಿದೆ. ಆದ್ದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಗಲಭೆ ಆರಂಭಗೊಂಡ ದಿವಸ 102ಕ್ಕೆ ಕರೆ ಮಾಡಿದಾಗ ಆಂಬುಲೆನ್ಸ್ ನೀಡಲಿಲ್ಲ. ಗಲಭೆ ಪೀಡಿತ ಸ್ಥಳಗಳಿಗೆ ಬಂದ ಆಂಬುಲೆನ್ಸ್ ಗಳನ್ನು ಪೊಲೀಸರು ತಡೆದು ಚಾಲಕರಿಗೆ ಹೊಡೆದರು. ಗೋಕುಲ್ ಪುರಿಯಲ್ಲಿ ಗುಂಡೇಟಿಗೀಡಾದ ವ್ಯಕ್ತಿಯನ್ನು ಕರೆದುಕೊಂಡು ಎಲ್‍ಎನ್‍ಜಿಪಿಗೆ ತನ್ನೊಂದಿಗೆ ಬಂದ ಸಂಬಂಧಿಕರನ್ನು ಅಂಬುಲೆನ್ಸ್ ನಿಂದ ಇಳಿಸಿದರು. ನಂತರ ಐದು ಸ್ಥಳಗಳಲ್ಲಿ ಪೊಲೀಸರು ಆಂಬುಲೆನ್ಸ್ ತಡೆದರು. ಗುಂಡೇಟಿನಿಂದಾಗಿ ತಲೆಗೆ ಕಟ್ಟಿದ ಬ್ಯಾಂಡೇಜನ್ನು ಬಿಡಿಸಿ ನೋಡಿ ಆಂಬುಲೆನ್ಸನ್ನು ಮುಂದೆ ಕಳುಹಿಸಿದರು. ಏಮ್ಸ್, ಎಲ್‍ಎನ್‍ಜೆಪಿ ಮೊದಲಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವಿದ್ದವರನ್ನು ಕರೆದುಕೊಂಡು ಹೋಗಲು ಈಗಲೂ ಪೊಲೀಸರು ಬಿಡುತ್ತಿಲ್ಲ.

ಆರೋಗ್ಯ ತಪಾಸಣೆ, ಚಿಕಿತ್ಸೆಯ ವೇಳೆ ವೈದ್ಯರು, ಸಿಬ್ಬಂದಿಗಳು ಭಯೋತ್ಪಾದಕರೆಂದು ಕರೆಯುತ್ತಿದ್ದಾರೆ ಎಂದು ಜಿಟಿಬಿ, ಎಲ್‍ಎನ್‍ಜೆಇ ಆಸ್ಪತ್ರೆಯಲ್ಲಿರುವವರು ದೂರು ಹೇಳಿದ್ದಾರೆ ಎಂದು ಜನ್ ಸ್ವಾಸ್ಥ್ಯ ಅಭಿಯಾನ್ ಸದಸ್ಯ ಇನಾಯತ್ ಕಾಕರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದರು. ಜಿಟಿಬಿ ಆಸ್ಪತ್ರೆಯ ಹೆಲ್ಪ್ ಡೆಸ್ಕ್ ಕೆಲಸ ಮಾಡುತ್ತಿಲ್ಲ. ಕಾಣೆಯಾದವರನ್ನು ಹುಡುಕುತ್ತಿರುವವರಿಗೆ ಮೃತಪಟ್ಟಿರುವವರು ಮತ್ತು ಗಾಯಾಳುಗಳ ವಿವರ ನೀಡುತ್ತಿಲ್ಲ. ಈ ಎಲ್ಲ ವಿಷಯಗಳನ್ನು ದಿಲ್ಲಿಯ ಆರೋಗ್ಯ ಮಂತ್ರಿಗೆ ತಿಳಿಸಿದ್ದೇನೆ. ನೋಡಲ್ ಅಧಿಕಾರಿಗಳನ್ನು ನೇಮಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದು ಇನಾಯತ್ ಸಿಂಗ್ ತಿಳಿಸಿದರು. ಮುಸ್ತಫಾಬಾದಿನ ಅಲ್‍ಹಿಂದ್ ಆಸ್ಪತ್ರೆ ಓಖ್ಲಾದ ಅಲ್‍ಶಿಫಾ ಆಸ್ಪತ್ರೆ ನೀಡಿದ ಉಚಿತ ಚಿಕಿತ್ಸೆ ಗಾಯಾಳುಗಳಿಗೆ ಸಾಕಷ್ಟು ನೆರವಾಯಿತು ಎಂದು ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.