✍️ ಖದೀಜ ನುಸ್ರತ್
ಆಧುನಿಕ ಮನಶ್ಶಾಸ್ತ್ರದಲ್ಲಿ ಭಾವನಾತ್ಮಕ ಬುದ್ಧಿವಂತಿಕೆ (Emotional Intelligence) ಎಂದರೆ ಸ್ವತಃ ತಮ್ಮ ಹಾಗೂ ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ, ಗುರುತಿಸುವ, ಪ್ರಭಾವ ಬೀರುವ, ನಿರ್ವಹಿಸುವ ಕಲೆ ಮತ್ತು ಸಾಮರ್ಥ್ಯವಾಗಿದೆ. ಭಾವನೆಗಳನ್ನು ಅರ್ಥ ಮಾಡಿ ವರ್ತನೆ, ಮಾತು, ನಡವಳಿಕೆಯನ್ನು ನಿಯಂತ್ರಿಸುವವರೇ ಬುದ್ಧಿವಂತರಾಗಿರುತ್ತಾರೆ. ಇದು ಕೇವಲ ಎಲ್ಲರೊಂದಿಗೆ ಉತ್ತಮವಾಗಿ ಸ್ನೇಹಪರ ವಾಗಿರುವುದರಲ್ಲಿ ಸೀಮಿತವಾಗಿಲ್ಲ. ನಮ್ಮ ಭಾವನೆಗಳು ಚಿಂತನೆ, ವರ್ತನೆಗಳು ಇತರರ ಮೇಲೆ ಕೂಡಾ ಪ್ರಭಾವವನ್ನು ಬೀರುತ್ತದೆ.
ಎಲ್ಲ ಜನರ ಭಾವನೆ, ಮನಃಸ್ಥಿತಿಯಲ್ಲಿ ವ್ಯತ್ಯಾಸವಿರುತ್ತದೆ. ಅದು ಸಮಯ, ಪರಿಸ್ಥಿತಿಗೆ ತಕ್ಕಂತೆ ಏರಿಳಿತವೂ ಆಗುತ್ತಿರುತ್ತದೆ. ಪ್ರತಿಯೊಬ್ಬರೂ ಶಾಲೆ-ಕಾಲೇಜು, ಮಸೀದಿಯಲ್ಲಿ, ಸಂಬಂಧಿಕರು, ನೆರೆಮನೆಯರು, ಗೆಳೆಯ ಗೆಳತಿಯರು, ಸಹೋದ್ಯೋಗಿ, ವ್ಯಾಪಾರ ಕೇಂದ್ರ ಹಾಗೂ ನಮ್ಮನ್ನು ಇಷ್ಟ ಪಡದ ಶತ್ರುಗಳೊಂದಿಗೂ ವ್ಯವಹಾರ, ಮಾತುಕತೆ ನಡೆಸಬೇಕಾದ ಪರಿಸ್ಥಿತಿ ಬರುತ್ತದೆ. ಇಲ್ಲಿ ಇತರರು ನಮ್ಮೊಂದಿಗೆ ಯಾವ ರೀತಿ ವರ್ತಿಸುತ್ತಾರೆ ಎಂಬುದಕ್ಕಿಂತಲೂ ನಾವು ನಮ್ಮ ಭಾವನೆಗಳನ್ನು ಯಾವ ರೀತಿ ನಿಯಂತ್ರಿಸುತ್ತೇವೆ, ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕೋಪ, ಭಾವನೆಗಳನ್ನು ನಿಯಂತ್ರಿಸುವುದು ಸತ್ಯವಿಶ್ವಾಸದ ಲಕ್ಷಣವಾಗಿದೆ.
ಮನಸ್ಸು, ಹೃದಯ, ಆತ್ಮ, ವರ್ತನೆ, ನಡವಳಿಕೆ, ಸಚ್ಚಾರಿತ್ರ್ಯದ ಬಗ್ಗೆ ಹದಿನಾಲ್ಕು ಶತಮಾನಗಳ ಹಿಂದೆ ಇಸ್ಲಾಮ್ ಧರ್ಮ ಪ್ರಸ್ತಾಪಿಸುತ್ತದೆ. ಭಾವನಾತ್ಮಕವಾಗಿ ಬುದ್ಧಿವಂತರಾಗುವುದು ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿರುತ್ತದೆ. ಭಾವನೆಗಳು ಎಂಬುದು ಮನುಷ್ಯನ ಮನಸ್ಸಿನಲ್ಲಿರುವ ಚಿಂತನೆಗಳ ಪರಿಣಾಮವಾಗಿರುತ್ತದೆ. ಚಿಂತನೆಗಳು ಸಕಾರಾತ್ಮಕ, ಆಶಾವಾದಿ ಮತ್ತು ನಿರ್ಮಾಣಾತ್ಮಕವಾಗಿದ್ದರೆ ಭಾವನೆಗಳು ಸಹ ಸಕಾರಾತ್ಮಕವಾಗಿ ರೂಪುಗೊಳ್ಳುತ್ತವೆ. ಇದರಿಂದ ಮನಸ್ಸು ಶಾಂತವಾಗಿ, ಉತ್ಸಾಹ ತುಂಬಿ, ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಸುಲಭವಾಗಿ ಸಾಧ್ಯವಾಗುತ್ತವೆ.
ಆದರೆ ಚಿಂತನೆಗಳು ಕೆಟ್ಟದಾಗಿದ್ದರೆ ಅಂದರೆ ನಕಾರಾತ್ಮಕ, ಭಯಭೀತಿ ಅಥವಾ ಅಸೂಯೆಯಿಂದ ಕೂಡಿದ್ದರೆ, ಭಾವನೆಗಳೂ ನಕಾರಾತ್ಮಕವಾಗಿ ಪರಿವರ್ತನೆಯಾಗುತ್ತವೆ. ಇದು ಕೋಪ, ಆತಂಕ, ಖಿನ್ನತೆಯನ್ನು ಹೆಚ್ಚಿಸಿ ಸಂಬಂಧಗಳು ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಚಿಂತನೆಗಳನ್ನು ಸದಾ ಸಕಾರಾತ್ಮಕವಾಗಿ ನಿರ್ವಹಿಸುವುದು ಭಾವನಾತ್ಮಕ ಸಮತೋಲನ ಮತ್ತು ಸಂತೋಷಮಯ ಜೀವನಕ್ಕೆ ಅತ್ಯಗತ್ಯ. ಜೀವನದಲ್ಲಿ ಯಶಸ್ವಿಯಾಗಿ ಕೆಲಸಗಳನ್ನು ಮುನ್ನಡೆಸಲು, ವೃತ್ತಿ ಜೀವನ ವನ್ನು ತೃಪ್ತಿಕರವಾಗಿ ನಡೆಸಲು, ವೈವಾಹಿಕ ಜೀವನದ ವಿಜಯ ಹಾಗೂ ಸಾಮರಸ್ಯದಿಂದ ಕುಟುಂಬ ಜೀವನವನ್ನು ನಿರ್ವಹಿಸಲು ಪ್ರತಿಯೊಂದು ಕ್ಷೇತ್ರದಲ್ಲೂ ಭಾವನಾತ್ಮಕ ಬುದ್ಧಿವಂತಿಕೆ ಆವಶ್ಯಕವಾಗಿದೆ. ಎಷ್ಟೇ ವಿದ್ಯಾವಂತರಾಗಿದ್ದರೂ, ಬುದ್ಧಿವಂತರಾಗಿದ್ದರೂ ಭಾವನಾತ್ಮಕ ಬುದ್ಧಿವಂತಿಕೆಯಿಲ್ಲದಿದ್ದರೆ ಯಶಸ್ವಿಯಾಗಲು ಸಾಧ್ಯವಿಲ್ಲ.
ಪವಿತ್ರ ಕುರ್ಆನ್ನಲ್ಲಿ ಆರಂಭದಿಂದ ಅಂತ್ಯದವರೆಗೆ ಮಾನವನ ಭಾವನೆಗಳನ್ನು ಪ್ರಸ್ತಾಪಿಸಲಾಗಿದೆ. ಕೋಪ ನಿಯಂತ್ರಣ, ಭಯ ಹೋಗಲಾಡಿಸುವುದು, ಜನರನ್ನು ಕ್ಷಮಿಸುವುದು, ದುಃಖವನ್ನು ನಿಭಾಯಿಸುವುದು, ಮೃದುವಾಗಿ ಮಾತನಾಡುವುದು, ಸಹನೆಯ ಉಪದೇಶ ನೀಡುವುದು ಇತ್ಯಾದಿಗಳ ಬಗ್ಗೆ ಇಸ್ಲಾಂ ಧರ್ಮವು ಸರಿಯಾದ ಮಾರ್ಗದರ್ಶನ ನೀಡುತ್ತದೆ. ಎಲ್ಲ ಪ್ರವಾದಿಗಳೂ ಬೇರೆ ಬೇರೆ ರೀತಿಯಲ್ಲಿ ಪರೀಕ್ಷಿಸಲ್ಪಟ್ಟಿದ್ದರು. ಜನರಿಂದ ತಿರಸ್ಕಾರ, ಮನನೋಯುವ ಮಾತುಗಳು, ಕಿರುಕುಳವನ್ನು ಅನುಭವಿಸಿದ್ದರು. ಎಲ್ಲ ಸಂದಿಗ್ಧ ಸಂದರ್ಭಗಳಲ್ಲಿ ಅವರ ಉತ್ತಮ ಪ್ರತಿಕ್ರಿಯೆ ಮತ್ತು ಸಹನೆ ನಮಗೆ ಮಾದರಿಯಾಗಿರುತ್ತದೆ.
ಎಲ್ಲ ಪ್ರವಾದಿಗಳೂ ಸಹನಶೀಲರಾಗಿದ್ದರು ಎಂದು ಕುರ್ಆನ್ನಲ್ಲಿ ವರ್ಣಿಸಲಾಗಿದೆ. ಪ್ರವಾದಿ ಇಬ್ರಾಹೀಂ(ಅ) ಅವರು ಕೋಮಲ ಹೃದಯದವರಾಗಿದ್ದರು ಎಂದು ಪ್ರಸ್ತಾಪಿಸಲಾಗಿದೆ. ಸಣ್ಣ ಸಣ್ಣ ವಿಷಯಗಳಿಗೆ ಯುದ್ಧ ಮಾಡುತ್ತಿದ್ದ ಅರಬರು ಪ್ರವಾದಿ ಮುಹಮ್ಮದ್(ಸ)ರ ಆಗಮನದ ನಂತರ ವಿನಯಶೀಲರು, ಮನುಷ್ಯರನ್ನು ಪ್ರೀತಿಸುವ, ನಿಸ್ವಾರ್ಥ ಮತ್ತು ಪರಸ್ಪರರಿಗಾಗಿ ತ್ಯಾಗ ಮಾಡುವ ಸಹೋದರರಾಗಿ ಮಾರ್ಪಟ್ಟರು.
ಪ್ರವಾದಿ ಮುಹಮ್ಮದ್(ಸ) ಅವರ ಜೀವನವು ಭಾವನಾತ್ಮಕ ಬುದ್ಧಿವಂತಿಕೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಕರುಣೆ, ಸಹನೆ ಮತ್ತು ತ್ಯಾಗದ ಜೀವಂತ ಪ್ರತೀಕವಾಗಿದ್ದರು.
ಜೀವನದಲ್ಲಿ ಎಲ್ಲ ರೀತಿಯ ಮಾನವ ಭಾವನೆಗಳನ್ನು ಹೃದಯದಿಂದ ಅನುಭವಿಸಿದ್ದರು. ಜನಿಸುವಾಗಲೇ ತಂದೆಯ ಪ್ರೀತಿಯಿಲ್ಲದೇ ಬೆಳೆದರು. ಆರು ವರ್ಷವಾಗುವಾಗ ತಾಯಿಯು ಇಹಲೋಕವನ್ನು ತ್ಯಜಿಸಿದರು. ಪ್ರಥಮವಾಗಿ ದಿವ್ಯವಾಣಿ ಅವತೀರ್ಣವಾದಾಗ ಭಯ, ಆತಂಕದಿಂದ ನಡುಗಿದರು. ಪತ್ನಿಯ ಮರಣ, ತಮ್ಮ ಪೋಷಕರಾಗಿದ್ದ ಅಬೂ ತಾಲಿಬರ ಮರಣ, ವರ್ಷ ಕಳೆದಂತೆ ಮಕ್ಕಳು ಒಬ್ಬೊಬ್ಬರಾಗಿ ಮರಣ ಹೊಂದಿದರು. ಹೀಗೆ ಅನೇಕ ಮೃತದೇಹಕ್ಕೆ ಹೆಗಲು ಕೊಡುವ ಪರಿಸ್ಥಿತಿ ಎದುರಿಸಿದ್ದರು. ಪುತ್ರಿಯರ ವಿವಾಹ ವಿಚ್ಛೇದನ, ಸಂದೇಶ ಪ್ರಚಾರ ಸಮಯದಲ್ಲಿ ಅನೇಕ ವಿಧದ ದೌರ್ಜನ್ಯ, ಶತ್ರುಗಳಿಂದ ಆಕ್ರಮಣ, ಯುದ್ಧದಲ್ಲಿ ಸೋಲು, ಗೆಲುವು, ಸ್ವಂತ ಜನಾಂಗದಿಂದ ನಿರಾಕರಣೆ, ತಾಯ್ನಾಡು ತ್ಯಜಿಸಿ ಮದೀನಾಕ್ಕೆ ವಲಸೆ ಇಂತಹ ದುಃಖ, ಸಂಕಷ್ಟ, ಕಠಿಣ ಪರಿಸ್ಥಿತಿ ಎದುರಾದಾಗ ಕೋಪದ ಬದಲು ಕ್ಷಮೆ, ಕೃತಜ್ಞತೆ, ಸಹನೆ, ಪ್ರಾರ್ಥನೆಯೇ ಎದ್ದು ಕಾಣುತ್ತದೆ.
ಪ್ರವಾದಿ ಮುಹಮ್ಮದ್(ಸ)ರ ಜೀವನದ ಪ್ರತಿಯೊಂದು ಕ್ಷೇತ್ರವು ನಮಗೆ ಉತ್ತಮ ಮಾದರಿ, ಮಾರ್ಗದರ್ಶನ, ಸ್ಫೂರ್ತಿಯನ್ನು ನೀಡುತ್ತದೆ. ಕಿರಿಯರೊಂದಿಗೆ ಕರುಣೆ, ಹಿರಿಯರಿಗೆ ಗೌರವ ತೋರಲು ಉಪದೇಶಿರುವರು. ಓರ್ವ ನಾಯಕನಾಗಿದ್ದರೂ, ಎಲ್ಲಾ ವಿಷಯಗಳಲ್ಲಿ ಮಾರ್ಗದರ್ಶನವಾಗಿ ದಿವ್ಯವಾಣಿ ಅವತೀರ್ಣವಾಗುತ್ತಿದ್ದರೂ ತಮ್ಮ ಅನುಯಾಯಿಗಳೊಂದಿಗೆ ಅಭಿಪ್ರಾಯಗಳನ್ನು ಕೇಳುತ್ತಿದ್ದರು.
“(ಓ ಪೈಗಂಬರರೇ,) ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಮತ್ತು ಕಲ್ಲೆದೆಯವರಾಗಿರುತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತಮುತ್ತಲಿನಿಂದ ಚದರಿ ಹೋಗುತ್ತಿದ್ದರು.” (3:159)
ಭಾವನಾತ್ಮಕ ಬುದ್ಧಿವಂತಿಕೆಯಲ್ಲಿ ಐದು ಅಂಶಗಳು ಒಳಗೊಂಡಿದೆ.
1. ಸ್ವಯಂ ಅರಿವು-ಸ್ವತಃ ತಮ್ಮ ಭಾವನೆಗಳು ಮತ್ತು ಅದರ ಪ್ರಭಾವದ ಬಗ್ಗೆ ಅರಿವು ಇರಬೇಕು.
2. ಸ್ವಯಂ ನಿಯಂತ್ರಣ- ತಮ್ಮ ಭಾವನೆ, ಉದ್ವೇಗ, ಪ್ರಚೋದನೆ, ಪ್ರತಿಕ್ರಿಯೆಗಳನ್ನು ನಿಯಂತ್ರಿಸುವುದು. ಆಲೋಚನೆ ಮಾಡಿ, ನಿಧಾನವಾಗಿ ಪ್ರತಿಕ್ರಿಯಿಸುವುದು. ಕೋಪ, ಉದ್ವೇಗ, ದ್ವೇಷದ ಸಮಯದಲ್ಲಿ ತಮ್ಮ ಮನಸ್ಸನ್ನು ಶಾಂತ ಗೊಳಿಸುವ ಕಲೆಯನ್ನು ಅರಿತಿರಬೇಕು.
3. ಪ್ರೇರಣೆ -ನಕಾರಾತ್ಮಕ, ವ್ಯಕ್ತಿ, ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ಕಲೆ.
4. ಸಹಾನುಭೂತಿ- ಇತರರ ಭಾವನೆಗಳನ್ನು ಕೇವಲ ಕಿವಿಯಿಂದ ಮಾತ್ರವಲ್ಲ ಮನಸ್ಸಿನ ಅಂತರಾಳದಿಂದ ಅರ್ಥಮಾಡಿಕೊಳ್ಳುವುದು ಮತ್ತು ಸಹಾನುಭೂತಿಯಿಂದ ವರ್ತಿಸುವುದು.
5. ಸಾಮಾಜಿಕ ಕಲೆ- ಜನರೊಂದಿಗೆ ಸಂವಹನ ಮಾಡುವ, ಸಂಬಂಧಗಳನ್ನು ಸುಧಾರಿಸುವ, ನಿರ್ವಹಿಸುವ, ಸಂಘರ್ಷ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕಲೆ.
“ನಾವು ನಿಮ್ಮೆಲ್ಲರನ್ನೂ ಸುಸ್ಥಿತಿ- ದುಸ್ಥಿತಿಗಳಲ್ಲಿಟ್ಟು ಪರೀಕ್ಷಿಸುತ್ತಿದ್ದೇವೆ.” (21:35)
ಯಾವುದೇ ವಿಷಯದಲ್ಲಿ ಪರಿಪೂರ್ಣರಾದ, ಕುಂದುಕೊರತೆಗಳಿಲ್ಲದ ಮನುಷ್ಯರಿಲ್ಲ. ಪೋಷಕರಿಂದ ಆನುವಂಶಿಕವಾಗಿ ಬರುವ, ಬೆಳೆಯುವ ವಾತಾವರಣ, ಕಲಿಯುವ ಶಾಲೆ, ಸುತ್ತಮುತ್ತಲಿನ ವಾತಾವರಣ, ಸ್ನೇಹಿತರು, ಮನುಷ್ಯನ ಪ್ರಜ್ಞಾಸ್ಥಿತಿಯೊಳಗೆ ಇರುವ ಕೆಲವು ನೆನಪುಗಳು ಕೂಡಾ ಮಾತು, ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬ, ನೆರೆಕರೆ, ಸಮಾಜದವರೊಂದಿಗೆ ದಯೆ, ಕರುಣೆ, ಅನುಕಂಪ ಹಾಗು ಉತ್ತಮವಾಗಿ ವರ್ತಿಸಲು ಪ್ರೇರೇಪಿಸುತ್ತದೆ. ಜನರು ನಮ್ಮೊಂದಿಗೆ ಯಾವ ರೀತಿ ವರ್ತಿಸಬೇಕೆಂದು ನಿರೀಕ್ಷಿಸುತ್ತೇವೆಯೋ ಅದೇ ರೀತಿ ನಾವೂ
ಅವರೊಂದಿಗೆ ವರ್ತಿಸಬೇಕು.
ಒಂದು ನಗುಮುಖದಿಂದ ಜನರನ್ನು ಭೇಟಿಯಾಗುವುದನ್ನು ದಾನವಾಗಿರುತ್ತದೆ. ಏಕೆಂದರೆ ನಗು ಸಕಾರಾತ್ಮಕ ಭಾವನೆಗಳನ್ನು ಉತ್ತೇಜಿಸುತ್ತದೆ. ಸಂತೋಷ, ದುಃಖ, ಕೋಪ, ಭಯ, ಆಶ್ಚರ್ಯ ಇತ್ಯಾದಿಗಳು ಮಾನವನ ಮೂಲಭೂತ ಭಾವನೆಗಳಾಗಿವೆ. ಸಂತೋಷ ಅನುಭವಿಸಲು ಸಿಗುವ ಸಂದರ್ಭಗಳಲ್ಲಿ ಅದನ್ನು ಪೂರ್ಣವಾಗಿ ಅನುಭವಿಸಬೇಕು. ಇಲ್ಲದಿದ್ದರೆ ಕೋಪ, ಭಯ, ದುಃಖ ಮಾತ್ರ ಅನುಭವಿಸುತ್ತಾ ಜೀವನದಲ್ಲಿ ಕ್ರೂರಿಗಳಾಗಿ ಮಾರ್ಪಡುವ ಸಾಧ್ಯತೆಗಳಿರುತ್ತವೆ.
ಎಲ್ಲ ಸಮಯ, ಪರಿಸ್ಥಿತಿ ಮತ್ತು ವ್ಯಕ್ತಿಯೊಂದಿಗೆ ಸರಿಯಾದ ರೀತಿಯಲ್ಲಿ ಮಾತು, ಕಣ್ಣಿನ ಸಂಪರ್ಕ, ಶರೀರ ಭಾಷೆಯಲ್ಲಿ ಪ್ರತಿಕ್ರಿಯಿಸುವ ಕಲೆಯಿರಬೇಕು. ಒಬ್ಬರ ಮೇಲಿರುವ ಕೋಪವನ್ನು ಇನ್ನೊಬ್ಬರ ಮೇಲೆ ಪ್ರಕಟಿಸಬಾರದು. ಬೇರೆ ಬೇರೆ ರೀತಿಯ ಸಂಕೀರ್ಣ ಪರಿಸ್ಥಿತಿಗಳು, ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಿದಂತೆ ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಸ್ಥಿರತೆ ವರ್ಧಿಸುತ್ತದೆ. ನಮ್ಮ ಮನಸ್ಸಿನ ಶಾಂತಿ, ನೆಮ್ಮದಿಯು ಇತರರು ನಮ್ಮೊಂದಿಗೆ ಯಾವ ರೀತಿ ವರ್ತಿಸುತ್ತಾರೆ, ಮಾತನಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರಬಾರದು.
ಬದಲಾಗಿ ನಮ್ಮ ಹೃದಯಲ್ಲಿರುವ ದೇವಭಯ, ದೇವನೊಂದಿಗಿರುವ ನಿಕಟ ಸಂಬಂಧ, ಮರಣಾನಂತರ ಸಿಗುವ ಪ್ರತಿಫಲದ ನಿರೀಕ್ಷೆಯಲ್ಲಿರಬೇಕು. ಜನರು ನಿಮ್ಮನ್ನು ನಿರಾಶೆಗೊಳಿಸುವರು, ಕೆಲವೊಂದು ಸಂಗತಿ ನಾವು ನಿರೀಕ್ಷಿಸಿದಂತೆ ನಡೆಯಲಾರದು, ಮನನೋಯುವ ಮಾತನ್ನು ಕೇಳಬೇಕಾಗಬಹುದು, ನಿಮ್ಮ ಅಭದ್ರತೆಯ ಕುರಿತು ಭೀತಿಯುಂಟುಮಾಡುವರು, ಸುಳ್ಳು, ವಂಚನೆ, ಅನ್ಯಾಯವನ್ನೆ ದುರಿಸಬೇಕಾಗಬಹುದು. ಯಾರದೇ ಚುಚ್ಚು ಮಾತು, ಕೆಟ್ಟ ವರ್ತನೆ ನಮ್ಮಲ್ಲಿ ಕೋಪಕ್ಕೆ ಪ್ರಚೋದನೆಯಾಗಬಾರದು. ಎಲ್ಲಾ ಜನರು ಯಾವಾಗಲೂ ನಮ್ಮೊಂದಿಗೆ ಉತ್ತಮವಾಗಿ ವರ್ತಿಸಬೇಕೆಂದು ನಿರೀಕ್ಷಿಸುವುದು ಅವಾಸ್ತವಿಕತೆಯಾಗಿದೆ. ಇಸ್ಲಾಮ್ ಧರ್ಮವು ಬಾಹ್ಯ ನೋಟ ಮತ್ತು ಭೌತಿಕ ಸಂಪತ್ತಿಗಿಂತ ಹೆಚ್ಚು ನಮ್ಮ ಆಂತರಿಕ ಸ್ವಭಾವ, ಹೃದಯದ ಸ್ಥಿತಿಗೇ ಪ್ರಾಮುಖ್ಯತೆ ನೀಡುತ್ತದೆ. ಶಾರೀರಿಕ ಶಕ್ತಿಗಿಂತ ಭಾವನಾತ್ಮಕ ಶಕ್ತಿಯನ್ನೇ ಶೇಷ್ಠವಾಗಿ ಪರಿಗಣಿಸುತ್ತದೆ.
“ಕೋಪವನ್ನು ನುಂಗಿಕೊಳ್ಳುತ್ತಾರೆ ಮತ್ತು ಇತರರ ಅಪರಾಧಗಳನ್ನು ಕ್ಷಮಿಸುತ್ತಾರೆ. ಇಂತಹ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು.” (ಪವಿತ್ರ ಕುರ್ಆನ್- 3: 134)












