ಸನ್ಮಾರ್ಗ ಸಂಪಾದಕೀಯ
ರಾಜ್ಯ ಸರ್ಕಾರ ಮಂಡಿಸಿರುವ, ‘ದ್ವೇಷ ಭಾಷಣ ತಡೆ ವಿಧೇಯಕದ ಮೇಲೆ ಚರ್ಚೆ ಮಾಡುತ್ತಾ ಶಾಸಕರಾದ ಹರೀಶ್ ಪೂಂಜಾ ಮತ್ತು ಸಿಟಿ ರವಿಯವರು ಕುರ್ಆನಿನ ಮೇಲೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಕುರ್ಆನ್ನಲ್ಲಿ ದ್ವೇಷ ಬಿತ್ತುವ ನೂರಾರು ವಚನಗಳಿವೆ’ ಎಂದು ಹರೀಶ್ ಪೂಂಜಾ ಹೇಳಿದ್ದಾರೆ. ಕುರ್ಆನನ್ನು ಬ್ಯಾನ್ ಮಾಡುತ್ತೀರಾ ಎಂದೂ ಸರಕಾರವನ್ನು ಪ್ರಶ್ನಿಸಿದ್ದಾರೆ. ಮುಖ್ಯವಾಗಿ, ಕುರ್ಆನಿನ 9ನೇ ಅಧ್ಯಾಯದ 5ನೇ ವಚನವನ್ನು ಉಲ್ಲೇಖಿಸಿ ಅವರು ಈ ಪ್ರಶ್ನೆ ಎತ್ತಿದ್ದಾರೆ. ಸಿ.ಟಿ. ರವಿಯವರು ಕುರ್ಆನಿನ ವಚನ ಸಂಖ್ಯೆಯನ್ನು ನೇರವಾಗಿ ಉಲ್ಲೇಖಿಸದೇ ಇದ್ದರೂ, ಕುರ್ಆನಿನಲ್ಲಿ ಕಾಫಿರರನ್ನು ಕೊಲ್ಲಿರಿ ಎಂದು ಇದೆ ಎಂದೂ ಹೇಳಿದ್ದಾರೆ. ಹಾಗಂತ,
ಕುರ್ಆನಿನ ಮೇಲೆ ಆಕ್ಷೇಪ ವ್ಯಕ್ತಪಡಿಸುವುದು ಅಪರಾಧ ಅಲ್ಲ. ಈ ದೇಶದ ಪ್ರತಿಯೋರ್ವ ನಾಗರಿಕರಿಗೂ ಈ ಸ್ವಾತಂತ್ರ್ಯ ಇದೆ. ಕುರ್ಆನ್ ಎಂದಲ್ಲ, ಯಾವುದೇ ಗ್ರಂಥವನ್ನು ಪರಾಮರ್ಶೆಗೆ ಒಡ್ಡುವುದೂ ಸ್ವಾಗತಾರ್ಹವೇ ಹೊರತು ಆಕ್ಷೇಪಾರ್ಹ ಅಲ್ಲ. ಆದರೆ, ಈ ವಿಮರ್ಶೆಯು ಪೂರ್ವ ನಿರ್ಧರಿತ ಉದ್ದೇಶದೊಂದಿಗೆ ಆಗಿರಬಾರದು. ಪೂರ್ವಗ್ರಹ ಮತ್ತು ದುರುದ್ದೇಶವಿಲ್ಲದೇ ಮುಕ್ತ ಮನಸ್ಸಿನಿಂದ ಮಾಡುವ ಯಾವುದೇ ವಿಮರ್ಶೆಯೂ ಯಾವುದೇ ಗ್ರಂಥದ ಪಾಲಿಗೂ ಪ್ರಯೋಜನಕಾರಿ. ಆದರೆ,
ಧಾರ್ಮಿಕ ಗ್ರಂಥಗಳನ್ನು ವಿಮರ್ಶೆಗೆ ಎತ್ತಿಕೊಳ್ಳುವಾಗ ಒಂದಿಷ್ಟು ಎಚ್ಚರಿಕೆ ಮತ್ತು ಸೂಕ್ಷ್ಮತೆಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಎರಡು ಮುಖ್ಯ ಅಂಶಗಳೆಂದರೆ, “ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖವಾಗಿರುವ ವಚನಕ್ಕೂ ಈಗಿನ ಕಾಲಮಾನಕ್ಕೂ ನಡುವೆ ಇರುವ ವಯಸ್ಸಿನ ಅಂತರ ಎಷ್ಟು? 2. ಗ್ರಂಥದಲ್ಲಿ ಉಲ್ಲೇಖವಾಗಿರುವ ವಚನಗಳ ಹಿನ್ನಲೆ ಏನು?
ಹರೀಶ್ ಪೂಂಜಾ ಮತ್ತು ಸಿ.ಟಿ. ರವಿಯವರ ಆಕ್ಷೇಪ ಮುಖ್ಯವಾಗುವುದೇ ಇಲ್ಲಿ. ಶಾಸಕ ಹರೀಶ್ ಪೂಂಜಾ ಉಲ್ಲೇಖಿಸಿರುವ ಪವಿತ್ರ ಕುರ್ಆನಿನ 9ನೇ ಅಧ್ಯಾಯದ 5ನೇ ವಚನ ಹೀಗಿದೆ:
‘ನಿಷೇಧಿತ ಮಾಸಗಳು ಕಳೆದ ಬಳಿಕ ಬಹುದೇವ ವಿಶ್ವಾಸಿಗಳನ್ನು ಸಿಕ್ಕಲ್ಲಿ ವಧಿಸಿರಿ. ಅದನ್ನು ಸೆರೆ ಹಿಡಿಯಿರಿ. ಮುತ್ತಿಗೆ ಹಾಕಿರಿ. ಬೇಹು ನಡೆಸುವಲ್ಲೆಲ್ಲಾ ಅವರನ್ನು ಹೊಂಚು ಹಾಕುತ್ತಾ ಕುಳಿತುಕೊಳ್ಳಿರಿ..’ ಅಂದಹಾಗೆ,
ಈ ವಚನಕ್ಕಿಂತ ಮೊದಲಿನ 4ನೇ ವಚನವನ್ನು ಓದಿದರೆ, ಈ 5ನೇ ವಚನಕ್ಕೆ ಬಾಹ್ಯವಾಗಿ ಕಾಣುವ ಅರ್ಥಕ್ಕಿಂತ ಆಚೆಗಿನ ಅರ್ಥ ಮತ್ತು ಹಿನ್ನೆಲೆಗಳಿವೆ ಎಂಬುದು ಗೊತ್ತಾಗುತ್ತದೆ. ಆ 4ನೇ ವಚನ ಹೀಗಿದೆ:
ನೀವು ಒಪ್ಪಂದ ಮಾಡಿಕೊಂಡಿದ್ದು ತಮ್ಮ ಒಪ್ಪಂದ ಪಾಲನೆಯಲ್ಲಿ ನಿಮ್ಮೊಂದಿಗೆ ಯಾವತ್ತೂ ಲೋಪವೆಸಗದಿದ್ದರೆ, ಹಾಗೂ ನಿಮ್ಮ ವಿರುದ್ಧ ಯಾರಿಗೂ ಸಹಾಯ ಮಾಡದಿದ್ದರೆ, ಈ ಬಹುದೇವ ವಿಶ್ವಾಸಿಗಳು ಇದಕ್ಕೆ ಹೊರತಾಗಿದ್ದಾರೆ. ಇಂಥವರೊಂದಿಗೆ ನೀವೂ ಅವಧಿಯವರೆಗೆ ಒಪ್ಪಂದವನ್ನು ಪಾಲಿಸಿರಿ. ಯಾಕೆಂದರೆ ಅಲ್ಲಾಹನು ಧರ್ಮನಿಷ್ಠರನ್ನು ಮೆಚ್ಚುತ್ತಾನೆ..’
ಒಂದುವೇಳೆ, ಬಹುದೇವ ವಿಶ್ವಾಸಿಗಳನ್ನು ಅವರ ವಿಶ್ವಾಸದ ಕಾರಣಕ್ಕಾಗಿ ಹತ್ಯೆ ನಡೆಸುವುದೇ ವಚನ 5ರ ಉದ್ದೇಶವೆಂದಾಗಿದ್ದರೆ, ‘ನಿಷೇಧಿತ ಮಾಸಗಳು ಕಳೆದ ಬಳಿಕ…’ ಎಂಬ ಪದಪ್ರಯೋಗದ ಅಗತ್ಯವಾದರೂ ಏನಿತ್ತು? ಮಾಸ ಯಾವುದರೇನು, ಬಹುದೇವ ವಿಶ್ವಾಸಿಗಳನ್ನು ಕೊಂದರೆ ಸಾಕಗುವುದಿಲ್ಲವೇ? ಅಲ್ಲದೆ, ಬಹುದೇವ ವಿಶ್ವಾಸ ಎಂಬುದೇ ಹತ್ಯೆಗೆ ಕಾರಣ ಎಂದಾದರೆ, ನಿಷೇಧಿತ ಮಾಸಗಳು ಕಳೆದ ಬಳಿಕ...' ಎಂಬ ಪದ ಪ್ರಯೋಗದ ಬದಲುಬಹುದೇವ ವಿಶ್ವಾಸವನ್ನು ಕೈ ಬಿಡದಿದ್ದರೆ ಅವರನ್ನು ಸಿಕ್ಕಲ್ಲಿ ವಧಿಸಿರಿ…’ ಎಂಬ ನೇರ ಪದವನ್ನೇ ಬಳಸಬಹುದಿತ್ತಲ್ಲವೇ? ವಧಿಸಲು ಕರೆಕೊಡು ವಷ್ಟು ಧೈರ್ಯ ಇರುವ ದೇವನಿಗೆ ಅದನ್ನು ನೇರವಾಗಿ ಹೇಳಲು ಏನು ತೊಡಕಿತ್ತು?
ಇವು ಮತ್ತು ಇಂಥ ಇನ್ನೂ ಅನೇಕ ಪ್ರಶ್ನೆಗಳೇ ಈ ವಚನವನ್ನು ಅರ್ಥೈಸಬೇಕಾದ ರೀತಿ ಇದಲ್ಲ ಎಂಬುದನ್ನು ಸೂಚಿಸುತ್ತದೆ. ಮಾತ್ರವಲ್ಲ, ನಾಲ್ಕನೇ ವಚನವನ್ನು ಪೂರ್ವಾಗ್ರಹವಿಲ್ಲದೆ ಓದಿದರೆ, ಈ 5ನೇ ವಚನದ ಬಗ್ಗೆ ಆಕ್ಷೇಪಕ್ಕಿಂತ ಕುತೂಹಲವೇ ಹೆಚ್ಚಾಗುತ್ತದೆ.
ಮಕ್ಕಾದಲ್ಲಿ ಹುಟ್ಟಿದ ಪ್ರವಾದಿ ಮುಹಮ್ಮದ್(ಸ)ರು 40ನೇ ಪ್ರಾಯದಲ್ಲಿ ಆ ಸಮಾಜದ ರೂಢಿಗತ ಆಚರಣೆಗಳಿಗೆ ಸರಿಹೊಂದದ ವಿಚಾರಧಾರೆಗಳನ್ನು ಪ್ರಚಾರ ಮಾಡತೊಡಗಿದರು. ಹೀಗೆ 13 ವರ್ಷಗಳ ಕಾಲ ಮಕ್ಕಾದಲ್ಲಿದ್ದುಕೊಂಡು ಅವರು ತನ್ನ ವಿಚಾರಧಾರೆಯನ್ನು ಹಂಚಿಕೊಂಡರು. ಆದರೆ, ಮಕ್ಕಾದ ಮಂದಿ ಮಾನಸಿಕ ಮತ್ತು ದೈಹಿಕ ಹಿಂಸೆಯೊಂದಿಗೆ ಅವರ ಈ ವಿಚಾರಧಾರೆಯನ್ನು ಸ್ವಾಗತಿಸಿದರು. ಹಲ್ಲೆ ನಡೆಸಿದರು. 3 ವರ್ಷಗಳ ಕಾಲ ಸಾಮಾಜಿಕ ಬಹಿಷ್ಕಾರ ಹೇರಿದರು. ಅವರ ಅನುಯಾಯಿಗಳನ್ನು ಹಿಂಸಿಸಿ ಸಾಯಿಸಿದರು. ಕೊನೆಗೆ ಪ್ರವಾದಿಯವರು(ಸ) ಮಕ್ಕಾದಿಂದ 450 ಕಿ.ಮೀ. ದೂರದ ಮದೀನಾಕ್ಕೆ ವಲಸೆ ಹೋದರು. ಆದರೆ, ಅಲ್ಲಿಯೂ ನೆಮ್ಮದಿಯಾಗಿರುವುದಕ್ಕೆ ಈ ಮಕ್ಕಾದ ಮಂದಿ ಬಿಡಲಿಲ್ಲ. ಮೂರು ಬಾರಿ ಮದೀನಾದ ಮೇಲೆ ದಂಡೆತ್ತಿ ಹೋದರು. ಇದಾದ ಬಳಿಕ ಪ್ರವಾದಿಯವರು(ಸ) ತನ್ನ 1400 ಅನುಯಾಯಿಗಳೊಂದಿಗೆ ಮಕ್ಕಾದ ಕಾಬಾ ಸಂದರ್ಶನಕ್ಕೆ ಹೊರಟರು. ಆದರೆ,
ಮಕ್ಕಾದ ಮಂದಿ ಅದಕ್ಕೂ ಅವಕಾಶ ಕೊಡಲಿಲ್ಲ. ಮಕ್ಕಾ ಸಮೀಪದ ಹುದೈಬಿಯಾ ಎಂಬಲ್ಲಿ ತಡೆದು ನಿಲ್ಲಿಸಿದರು. ಬಳಿಕ ಪ್ರವಾದಿಯವರು(ಸ) ಮತ್ತು ಮಕ್ಕಾದ ವಿವಿಧ ಬಹುದೇವಾರಾಧಕ ಬುಡಕಟ್ಟುಗಳನ್ನು ಹೊಂದಿದ್ದ ನಿಯೋಗದೊಂದಿಗೆ ಒಂದು ಒಪ್ಪಂದಕ್ಕೆ ಬಂದರು. ಅದರ ಪ್ರಕಾರ, ‘ಮುಂದಿನ ಹತ್ತು ವರ್ಷಗಳ ವರೆಗೆ ಯುದ್ಧ ನಿಷೇಧ ನೀತಿ ಜಾರಿಯಲ್ಲಿರುತ್ತದೆ ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ಎರಡೂ ಗುಂಪುಗಳು ಒಪ್ಪಂದವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು..’ ಎಂಬುದು ಒಪ್ಪಂದದ ಪ್ರಮುಖ ಅಂಶವಾಗಿತ್ತು. ಆದರೆ,
ಈ ಒಪ್ಪಂದಕ್ಕೆ 3 ವರ್ಷಗಳು ತುಂಬಿದ ಸಮಯದಲ್ಲಿ ಪ್ರವಾದಿಯ(ಸ) ಪ್ರಬಲ ವಿರೋಧಿಯಾಗಿದ್ದ ಮಕ್ಕಾದ ಕುರೈಶ್ ಮತ್ತು ಬನೂಬಕ್ರ್ ಎಂಬೆರಡು ಬುಡಕಟ್ಟುಗಳು ಬನೂ ಕುಝಾಅ ಎಂಬ ಬುಡಕಟ್ಟಿನ ವಿರುದ್ಧ ಯುದ್ಧ ಸಾರಿದುವು. ನಿಜವಾಗಿ, ಈ ಮೂರೂ ಬುಡಕಟ್ಟುಗಳು ಯುದ್ಧ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರುವ ಬುಡಕಟ್ಟುಗಳಾಗಿದ್ದುವು. ಮಾತ್ರವಲ್ಲ, ಬನೂ ಕುಝಾಅ ಬುಡಕಟ್ಟು ಮದೀನಾದಲ್ಲಿರುವ ಪ್ರವಾದಿಯವರ(ಸ) ಬಗ್ಗೆ ಮೈತ್ರಿಭಾವವನ್ನು ಹೊಂದಿತ್ತು. ಈ ನಿಲುವೇ ಉಳಿದೆರಡು ಬುಡಕಟ್ಟುಗಳ ಯುದ್ಧ ಘೋಷಣೆಗೆ ಕಾರಣವಾಗಿತ್ತು. ಹೀಗೆ ಒಪ್ಪಂದವನ್ನು ಮುರಿಯಲಾಯಿತು. ಒಪ್ಪಂದವನ್ನು ಮುರಿಯುವುದೆಂದರೆ, ಯುದ್ಧ ಘೋಷಣೆ ಮಾಡಿದಂತೆ. 5ನೇ ವಚನದಲ್ಲಿ ಸೂಚಿಸಿರುವುದು ಇದನ್ನೇ. ‘ನಿಮ್ಮೊಂದಿಗೆ ಯುದ್ಧ ಘೋಷಿಸಿದ ಬಹುದೇವ ವಿಶ್ವಾಸಿಗಳ ಮೇಲೆ ಇನ್ನು ಕರುಣೆ ತೋರಬೇಕಾಗಿಲ್ಲ,
ಯುದ್ಧದಲ್ಲಿ ಅವರು ಎದುರಾದರೆ ಯುದ್ಧ ನೀತಿಯಂತೆ ಅವರನ್ನು ವಧಿಸಬಹುದು. ಅವರ ಬಗ್ಗೆ ಬೇಹುಗಾರಿಕೆ ನಡೆಸಬಹುದು..’ ಎಂಬುದನ್ನೇ 5ನೇ ವಚನ ಹೇಳುತ್ತದೆ. ಆದರೆ ಅದಕ್ಕಿಂತ ಮೊದಲಿನ 4ನೇ ವಚನದಲ್ಲಿ, ‘ಒಪ್ಪಂದವನ್ನು ಉಲ್ಲಂಘಿಸದ ಬಹುದೇವ ವಿಶ್ವಾಸಿಗಳು ಈ ಯುದ್ಧನೀತಿಗೆ ಒಳಪಡುವುದಿಲ್ಲ ಮತ್ತು ಅವರ ಮೇಲೆ ಕೈ ಎತ್ತುವ ಅಧಿಕಾರ ನಿಮಗಿಲ್ಲ..’ ಎಂಬುದನ್ನೇ ಸ್ಪಷ್ಟಪಡಿಸಲಾಗಿದೆ.
ಇಲ್ಲಿ ಒಪ್ಪಂದವನ್ನು ಉಲ್ಲಂಘಿಸಿದವರು ಮತ್ತು ಉಲ್ಲಂಘಿಸದೇ ಇರುವವರು- ಇಬ್ಬರೂ ಬಹುದೇವ ವಿಶ್ವಾಸಿಗಳೇ ಆಗಿದ್ದಾರೆ. ಒಪ್ಪಂದವನ್ನು ಉಲ್ಲಂಘಿಸಿ ಯುದ್ಧಕ್ಕೆ ಸಿದ್ಧರಾದವರ ಜೊತೆ ಹೇಗೆ ನಡಕೊಳ್ಳಬೇಕು ಮತ್ತು ಒಪ್ಪಂದವನ್ನು ಪಾಲಿಸಿದವರ ಜೊತೆ ಹೇಗೆ ನಡಕೊಳ್ಳಬೇಕು ಎಂಬುದನ್ನು 4 ಮತ್ತು 5ನೇ ವಚನಗಳಲ್ಲಿ ಹೇಳಲಾಗಿದೆ. ಒಂದುವೇಳೆ,
‘ಬಹುದೇವ ವಿಶ್ವಾಸಿಗಳನ್ನು ಕಂಡಕಂಡಲ್ಲಿ ವಧಿಸಿರಿ..’ ಎಂಬ 5ನೇ ವಚನಕ್ಕೆ ಅವರ ಬಹುದೇವ ವಿಶ್ವಾಸವೇ ಕಾರಣ ಎಂದಾಗಿದ್ದರೆ, ‘ಒಪ್ಪಂದವನ್ನು ಉಲ್ಲಂಘಿಸದ ಬಹುದೇವ ವಿಶ್ವಾಸಿಗಳು ಈ ಆದೇಶಕ್ಕೆ ಹೊರತಾಗಿದ್ದಾರೆ..’ ಎಂಬ 4ನೇ ವಚನದ ಅಗತ್ಯವೇ ಬೀಳುವುದಿಲ್ಲ. ಅಂದಹಾಗೆ,
ಕತೆ, ಕಾದಂಬರಿಗಳನ್ನು ಓದಿದಂತೆ ಯಾವುದೇ ಧರ್ಮಗ್ರಂಥವನ್ನು ಓದುವುದು ಆಯಾ ಧರ್ಮಗ್ರಂಥಗಳಿಗೆ ಮಾಡುವ ಅವಮಾನ. ಭಗವದ್ಗೀತೆಗಾಗಲಿ, ಬೈಬಲ್ಗಾಗಲಿ ಎಲ್ಲಕ್ಕೂ ಅವುಗಳದೇ ಆದ ಹಿನ್ನೆಲೆ ಮತ್ತು ಕಾಲಮಾನದ ಇತಿಹಾಸ ಇದೆ. ಅವುಗಳನ್ನು ಪರಿಗಣಿಸದೇ ಧರ್ಮಗ್ರಂಥಗಳ ವಚನಗಳಿಗೆ ಅರ್ಥವನ್ನು ಕಲ್ಪಿಸುವುದರಲ್ಲಿ ದುರುದ್ದೇಶವಷ್ಟೇ ಕಾಣುತ್ತದೆ. ಕೇವಲ ಧರ್ಮಗ್ರಂಥ ಎಂದಲ್ಲ, ಯಾವುದೇ ಬರಹದ ಒಂದು ವಾಕ್ಯವನ್ನು ಅದರ ಹಿಂದು-ಮುಂದನ್ನು ಉಲ್ಲೇಖಿಸದೇ ಎತ್ತಿ ಹೇಳಿ ವಿವಾದಾಸ್ಪದ ಮಾಡಲು ಯಾರಿಂದಲೂ ಸಾಧ್ಯ ಇದೆ. ಸದ್ಯ ಶಾಸಕರಾದ ಹರೀಶ್ ಪೂಂಜಾ ಮತ್ತು ಸಿ.ಟಿ. ರವಿಯವರು ಮಾಡಿರುವುದೂ ಇದನ್ನೇ. 114 ಅಧ್ಯಾಯಗಳು ಮತ್ತು 6200ಕ್ಕಿಂತಲೂ ಅಧಿಕ ವಚನಗಳ ಗುಚ್ಚದಿಂದ ಅವರು ಒಂದು ವಚನವನ್ನು ಎತ್ತಿಕೊಂಡು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಆದರೆ ಅದರ ಹಿಂದಿನ ಮತ್ತು ಮುಂದಿನ ವಚನವನ್ನು ಉಲ್ಲೇಖಿಸದೇ ಅವರು ತಪ್ಪು ಸಂದೇಶವನ್ನು ರವಾನಿಸಿದ್ದಾರೆ. ಜನಪ್ರತಿನಿಧಿಗಳಾಗಿ ಅವರು ಹೀಗೆ ಮಾಡಬಾರದಿತ್ತು.












