ಕೊರೋನದ ಮಧ್ಯೆ ಮಲೆನಾಡಿನ ಜನರ ಬವಣೆ ಮರೆತ ಸರಕಾರ: ಇನ್ನಾದರೂ ಸ್ವಲ್ಪ ಗಮನ ಹರಿಸಲಿ

0
424

ಲೇಖನ: ಕೃಷಿಕ ಎ ವಿ ಶಿವಮೊಗ್ಗ

ನಾಡಿನೆಲ್ಲೆಡೆ ಕೊರೋನ ಪಿಡುಗು ವ್ಯಾಪಿಸಿ ಸಾಕಷ್ಟು ಜೀವಹಾನಿಗೆ ಕಾರಣವಾಗಿರುವ ವಿಚಾರ ನಿಮಗೆಲ್ಲಾ ತಿಳಿದಿದೆ. ಪೇಟೆಯಲ್ಲಿ ಆಧುನಿಕ ಆರೋಗ್ಯ ಸೇವೆಗೆ ವ್ಯವಸ್ಥೆಗಳು ಜನರಿಗೆ ಲಭ್ಯವಿದ್ದು ಮಾಧ್ಯಮಗಳು ಕೂಡ ಹೆಚ್ಚು ಗಮನ ಕೊಡುವುದರಿಂದ ಆರೋಗ್ಯ ಸೇವೆಗಳು ಒಂದು ಹಂತದಲ್ಲಿ ಸಾಧಾರಣ ಮಟ್ಟದಲ್ಲಿ ಜನರಿಗೆ ಸಿಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದ ನಮ್ಮಂತಹ ಮಲೆನಾಡು ಭಾಗದಲ್ಲಿ ಯಾವುದೇ ಆಧುನಿಕ ಸೌಲಭ್ಯಗಳ ಆಸ್ಪತ್ರೆ, ಪ್ರಯೋಗಾಲಯ ವ್ಯವಸ್ಥೆ, ವೈದ್ಯರು ವೈದ್ಯಕೀಯ ಸಿಬ್ಬಂದಿ ಇರುವುದಿಲ್ಲ, ಇದ್ದರೂ ಎಷ್ಟು ಬೇಕಿತ್ತೋ ಅಷ್ಟು ಇಲ್ಲ.

ನಮ್ಮಲ್ಲಿ ಕಡಿಮೆ ಖರ್ಚು ಹಾಗೂ ತುರ್ತಾಗಿ ಆಧುನಿಕ ಸೌಲಭ್ಯದ ಆಸ್ಪತ್ರೆ ಸ್ಥಾಪಿಸುವ ಅಗತ್ಯವಿದೆ ಹಾಗೂ ಅವಕಾಶವೂ ಇದೆ. ಇಲ್ಲವಾದಲ್ಲಿ ಮೂರನೇಯ ಕೊರೊನ ಅಲೆಗೆ ಸಾಕಷ್ಟು ಹಾನಿ ಖಂಡಿತ ಆಗಬಹುದು.

ನಿಮ್ಮಲ್ಲಿ ಹಲವರಿಗೆ ಗೊತ್ತಿರಬಹುದು, ಕುದುರೆಮುಖ ಪೇಟೆ ಸುಮಾರು 40 ವರ್ಷಗಳ ಹಿಂದೆ ಆಧುನಿಕವಾಗಿ ಯೋಜನಾ ಬದ್ಧವಾಗಿ ಕಟ್ಟಿರುವಂಥದ್ದು. ಅದು ಬಹುತೇಕ 2005ರಿಂದ ಈಚೆಗೆ ಖಾಲಿ/ಪಾಳು ಬಿದ್ದಿದೆ. ಒಕ್ಕೂಟ ಸರಕಾರದ ಪೂರ್ತಿ ನಿಯಂತ್ರಣದ ಕಂಪನಿ ಗಣಿಗಾರಿಕೆ ನಿಲ್ಲಿಸಿದ ಮೇಲೆ ಗಣಿಗಾರಿಕೆಗೆ ಕಟ್ಟಿದ ಕಾರ್ಖಾನೆಯ ಯಂತ್ರಗಳನ್ನು ಕಿತ್ತು ಸಾಗಿಸಿ ಪೇಟೆಯನ್ನು ಹಾಗೆಯೇ ಬಿಟ್ಟಿದೆ.

ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶವಾಗಿದ್ದ ಕಾರಣ, ರೆಸಾರ್ಟ್ ಮಾಡಲು ಕಂಪನಿ ಪ್ರಯತ್ನಿಸಿ ಅದಕ್ಕೆ ಪೇಟೆ ಪರಿಸರವಾದಿಗಳ ವಿರೋಧದಿಂದ ಕೇಂದ್ರೀಯ ಪರಿಸರ ಇಲಾಖೆಯ ಅನುಮತಿ ಸಿಗಲಿಲ್ಲ. ಆಮೇಲೆ ಹಾಗೆ ಇದ್ದ ಪೇಟೆಯ ಕಂದಾಯ ಭೂಮಿಯನ್ನು, ಅಂಕೋಲಾದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೈಲು ನಿರ್ಮಿಸುವ ಯೋಜನೆಗೆ ನಾಶವಾಗುವ ಅರಣ್ಯ ಭೂಮಿಗೆ ಬದಲಾಗಿ ಕೊಡಲು ಯೋಜನೆ ಮಾಡಲಾಯಿತು. ಆದರೆ ಅಂಕೋಲಾ ರೈಲು ಮಾರ್ಗಕ್ಕೆ ಅನುಮತಿ ಸಿಗದೆ ಯೋಜನೆ ಹಾಗೆಯೇ ಉಳಿಯಿತು.

ನಮ್ಮ ಯಾವ ಭಾಗದಲ್ಲಿ ಕುದುರೆಮುಖದಲ್ಲಿ ಕಟ್ಟಿದಂತೆ ಪೇಟೆ ಇಲ್ಲ. ಆಸ್ಪತ್ರೆ, ಕೇಂದ್ರೀಯ ಪಠ್ಯ ಶಾಲೆ, ಆಟದ ಮೈದಾನ, ವಿಶಾಲ ರಸ್ತೆ, ಸಂತೆ ಪ್ರದೇಶ ಬೇರೆ ಬೇರೆ ರೀತಿಯ ಮನೆಗಳು ಇತ್ಯಾದಿ. ಅದೆಲ್ಲವನ್ನು ಹಾಗೆಯೇ ಉಳಿಸಿ ಕಳಸದ ನಿರಾಶ್ರಿತರು, ಕಂಪನಿ ಇದ್ದಾಗ ದಿನಗೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗೂ ಗಣಿಗಾರಿಕೆಗೆ ಒಕ್ಕಲೆಬ್ಬಿಸಿದ ಕುಟುಂಬಗಳಿಗೆ ಪೇಟೆಯ ಮನೆಗಳನ್ನು ಕೊಟ್ಟು ಕುದುರೆಮುಖವನ್ನು ಜೀವಂತವಾಗಿ ಇಡುವ ಪ್ರಯತ್ನ ಮಾಡಲಾಯಿತು. ಜನಬೆಂಬಲದ ಕೊರತೆ, ರಾಜಕೀಯ ಇಚ್ಚಾಶಕ್ತಿಯ ಕೊರತೆಯ ಕಾರಣ ಅದು ಸಾಧ್ಯವಾಗಲಿಲ್ಲ.

ಕುದುರೆಮುಖ ಪ್ರದೇಶ ಒಂದು ಕಾಲದಲ್ಲಿ ಸಿನೆಮಾ/ಧಾರಾವಾಹಿ ಚಿತ್ರೀಕರಣಕ್ಕೆ ಮೆಚ್ಚಿನ ತಾಣವಾಗಿತ್ತು. ಕನ್ನಡ ಚಿತ್ರರಂಗದ ದಿಗ್ಗಜರ 70-90ರ ದಶಕದ ಚಿತ್ರಗಳ ಕನಿಷ್ಠ ಒಂದು ಹಾಡು ಆದ್ರು ಇಲ್ಲಿಯ ಪರಿಸರದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಕುದುರೆಮುಖದಲ್ಲಿ ಒಂದು ಖಾಯಂ ಚಿತ್ರನಗರಿ ಮಾಡಿ ಅಲ್ಲಿ ಚಿತ್ರೀಕರಣದ ಚಟುವಟಿಕೆ ಆಗುವಂತೆ ಮಾಡಿದ್ರೆ ಈ ಭಾಗದ ಜನರಿಗೆ ಅರ್ತಿಕವಾಗಿಯೂ ಲಾಭವಾಗುವುದು ಹಾಗೂ ನಮ್ಮಲ್ಲಿನ ಪ್ರಕೃತಿ ಸೌಂದರ್ಯವನ್ನು ಬಳಸಿಕೊಂಡು ಚಿತ್ರ ನಿರ್ಮಾಣಕ್ಕೂ ಸಹಾಯ ಆಗುವುದು ಎಂದು ಚಿತ್ರನಗರಿ ನಿರ್ಮಾಣ ಮಾಡಿರೆಂದು ಮನವಿ ಮಾಡಿದೆವು. ಆದರೆ ಸರಕಾರ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.

ಪರಿಸರವಾದಿಗಳು ಹಾಗೂ ಅರಣ್ಯ ಇಲಾಖೆ ಚೆಂದದ ಪೇಟೆಯನ್ನು ಮುರಿದು ಕಾಡು ಬೆಳೆಸಲು ಯೋಜಿಸಿದೆ. ಮಲೆನಾಡಿನಲ್ಲಿ ಪೇಟೆ/ಜನವಸತಿಗಿಂತ ಜಾಸ್ತಿ ಕಾಡು ಇದೆ. ಪರಿಸರ ಸೂಕ್ಷ್ಮ ಪ್ರದೇಶ ಅಂತ ಹೊಸ ಪೇಟೆ ಕಟ್ಟಲು ವಿಸ್ತರಣೆ ಮಾಡಲು ನಿರ್ಬಂಧವಿದೆ. ಇಲ್ಲಿ ಬೇರೆ ಯಾವುದೇ ಆರ್ಥಿಕ ಚಟುವಟಿಗೂ ಅವಕಾಶ ಇಲ್ಲ. ಹಾಗಾಗಿ ಯೋಜನಾಬದ್ಧವಾಗಿ ಕಟ್ಟಿದ ಪೇಟೆಯನ್ನು ಇರುವ ಸ್ವಲ್ಪವೇ ಕಂದಾಯ ಭೂಮಿಯನ್ನು ನಾವು ಕಳೆದುಕೊಂಡರೆ ಮುಂದೆ ಗತಿಯೇನು ಎಂಬ ಪ್ರಶ್ನೆ ಬರುತ್ತದೆ.

ಹಾಗಾಗಿ ಪೇಟೆ ಉಳಿಯಬೇಕು, ಇಲ್ಲಿನ ಜನರಿಗೆ ಸಹಾಯ ಆಗಬೇಕು ಹಾಗೂ ಪರಿಸರಕ್ಕೆ ಪೂರಕವೂ ಆಗಬೇಕು. ಅದಕ್ಕೆ ಕೊರೋನ ಪಿಡುಗು ಅವಕಾಶ ಕೊಟ್ಟಿದೆ.

ನಮ್ಮ ಮಲೆನಾಡಿನಲ್ಲಿ ಆಧುನಿಕ ಆಸ್ಪತ್ರೆಯ ಕೊರತೆ ಇದೆ. ಜನ ಕಮ್ಮಿಯಿದ್ದು ದೂರ ದೂರ ವಾಸವಾಗಿದ್ದಾರೆ. ಇರುವ ತಾಲೂಕು ಆಸ್ಪತ್ರೆ, ಗ್ರಾಮೀಣ ಆಸ್ಪತ್ರೆಯಲ್ಲಿ ಬೇಕಾದಷ್ಟು ವೈದ್ಯರಿಲ್ಲ, ಸಹಾಯಕರು ಇಲ್ಲ ಹಾಗೂ ಆಧುನಿಕ ಸೌಲಭ್ಯವೂ ಇಲ್ಲ. ಹಾಗಾಗಿ ಮಲೆನಾಡಿನ ನಾವು ಮಂಗಳೂರು ಮಣಿಪಾಲ ಶಿವಮೊಗ್ಗ ಬೆಂಗಳೂರನ್ನು ಆರೋಗ್ಯ ಸೇವೆಗೆ ನೆಚ್ಚಿಕೊಂಡಿದ್ದೇವೆ.

ಚಿಕ್ಕಮಗಳೂರಿನಲ್ಲಿ ಜಿಲ್ಲಾಸ್ಪತ್ರೆ ಇದ್ದರೂ ಅದರ ಬಳಕೆ ನಮಗೆ ಇಲ್ಲ. ಈಗ ವೈದ್ಯಕೀಯ ಕಾಲೇಜು ಜಿಲ್ಲೆಗೆ ಮಂಜೂರು ಆಗಿರುವುದು ಕೂಡ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಆಗ್ತಿದೆ. ಅದನ್ನು ಆದ್ರು ಕುದುರೆಮುಖದಲ್ಲಿ ಸ್ಥಾಪಿಸಿ ಪೇಟೆಯಲ್ಲಿ ಇರುವ ಸೌಲಭ್ಯ ಬಳಸಬಹುದಿತ್ತು. ಆದ್ರೆ ಉಸ್ತುವಾರಿ ಸಚಿವರ ಪ್ರಯತ್ನ, ಕೇಂದ್ರೀಕರಣದ ಒಲವಿನ ವ್ಯವಸ್ಥೆ ಕಾಲೇಜನ್ನು ಜಿಲ್ಲಾ ಕೇಂದ್ರದಲ್ಲೇ ಸ್ಥಾಪಿಸಿತು.

ಮಲೆನಾಡು ಒಂದು ಕಾಲದಲ್ಲಿ ಮಲೇರಿಯಾ ಬೀಡು ಆಗಿತ್ತು. ಈಗ ಮಲೇರಿಯಾ ಇಲ್ಲದಿದ್ದರೂ ಮಂಗನ ಖಾಯಿಲೆ(ಕ್ಯಾಸನೂರು ಕಾಡಿನ ಕಾಯಿಲೆ) ತರಹದ ಸೊಂಕು ಇದೆ. ಕೇರಳದಲ್ಲಿ 3ವರ್ಷದ ಹಿಂದೆ ಕಾಣಿಸಿಕೊಂಡ ನಿಫಾ, ಈಗ ಬಂದಿರೋ ಕೊರೋನ ಇವೆಲ್ಲವೂ ಕಾಡಿನ ಪ್ರಾಣಿಗಳಿಂದ(ಬಾವಲಿ) ಮನುಷ್ಯರಿಗೆ ದಾಟಿರುವ ಸೋಂಕುಗಳು ಅಂತ ಬಹುತೇಕ ಸಂಶೋಧನೆಗಳು ಗುರುತಿಸಿವೆಯಾದರೂ ನೈಜ ಸಂಗಾತಿಯ ಬಗ್ಗೆ ಇನ್ನೂ ಜನರಲ್ಲಿ ಅನುಮಾನ ಇರುವುದು ಸುಳ್ಳಲ್ಲ. ಕಾಡಿನ ಜೊತೆಯಲ್ಲಿ ಬದುಕುವ ನಾವು ಇಂತಹ ಸೋಂಕುಗಳಿಗೆ ಹೆಚ್ಚು ತೆರೆದುಕೊಂಡಿರುತ್ತೇವೆ. ಒಂದು ಅಂದಾಜಿನ ಪ್ರಕಾರ ಬಾವಲಿಯಲ್ಲಿ ಇನ್ನು ಗುರುತಿಸದ ಮನುಷ್ಯರಿಗೆ ಸೋಂಕು ಹಬ್ಬಿಸುವ ಸಾಕಷ್ಟು ವೈರಾಣು ಇದೆ. ಆದರೆ ನಮ್ಮ ಭಾಗದಲ್ಲಿ ಸೋಂಕು ಪತ್ತೆಗೆ ಪರೀಕ್ಷೆ ಮಾಡುವ ಪ್ರಯೋಗಾಲಯವೇ ಇಲ್ಲ. ಮಂಗನ ಖಾಯಿಲೆ ಇರಲಿ ನಿಫಾ ಇರಲಿ ಪರೀಕ್ಷೆಗೆ ಪುಣೆ ವೈರಾಣು ಸಂಶೋಧನೆ ಕೇಂದ್ರದ ಸಹಕಾರ ಬೇಕು. ಮುಂದಿನ ದಿನದಲ್ಲಿ ಎಂತಹ ಸೋಂಕುಗಳು ನಮ್ಮನ್ನು ಬಾಧಿಸಬಹುದು ಗೊತ್ತಿಲ್ಲ.

ಹಾಗಾಗಿ ನಮ್ಮ ಮಲೆನಾಡಿನಲ್ಲಿ ಹಿಂದಿನ ಬೇಡಿಕೆಯಂತೆ ಒಂದು ಆಧುನಿಕ ಸಂಶೋಧನ ಕೇಂದ್ರ/ಪ್ರಯೋಗಾಲಯ ಪುಣೆ ವೈರಾಣು ಸಂಶೋಧನಾ ಕೇಂದ್ರದಂತೆ ಅಂತಾರಾಷ್ಟ್ರೀಯ ಗುಣಮಟ್ಟದ ಸಂಸ್ಥೆ ಬೇಕು. ಬಿ.ಎಸ್.ಎಲ್.-4(ಕರ್ನಾಟಕದಲ್ಲಿ ಒಂದೂ ಇಲ್ಲ) ಗುಣಮಟ್ಟದ ಪ್ರಯೋಗಾಲಯ, ವಿಜ್ಞಾನಿಗಳ ತಂಡ ಹಳೆ-ಹೊಸ ಸೋಂಕುಗಳ ಅಧ್ಯಯನ, ಮದ್ದು ಹುಡುಕುವುದು ಮಾಡಬೇಕು ಹಾಗೂ ಹೊಂದಿಕೊಂಡಂತೆ ಆಧುನಿಕ ಸೌಕರ್ಯದ ಸೋಂಕು ರೋಗಗಳ ಆಸ್ಪತ್ರೆ ಸ್ಥಾಪಿಸಬೇಕು. ಕುದುರೆಮುಖ ಪೇಟೆ ಈ ಸಂಸ್ಥೆ ಸ್ಥಾಪಿಸಲು ಸೂಕ್ತವಾಗಿದೆ. ಹೆಚ್ಚು ಜನ ವಾಸಿಸುವ ಜಾಗ ಇದಲ್ಲ ಹಾಗಾಗಿ ಏನೇ ಅಪಘಾತ(ಎಲ್ಲಾ ದಿಕ್ಕುಗಳಿಂದ ಆಲೋಚನೆ ಮಾಡಿರುವುದನ್ನು ತೋರಿಸಲು ಇದನ್ನ ಸೇರಿಸಲಾಗಿದೆ. ಅಪಘಾತ ಆಗದಂತೆ ಆದರೂ ಯಾರಿಗೂ ತೊಂದರೆ ಅಗದಂತೆ ವಿನ್ಯಾಸ ಮಾಡಲಾಗಿರುತ್ತದೆ) ಆದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ, ಪೇಟೆಯಲ್ಲಿ ಈಗಾಗಲೇ ಕಟ್ಟಡಗಳು ಇದೆ, ಹೊಸ ಕಟ್ಟಡಕ್ಕೆ ಜಾಗವು ಖಾಲಿ ಇದೆ ಹಾಗಾಗಿ ಕಡಿಮೆ ಹಣದಲ್ಲಿ ದೊಡ್ಡ ಸಂಸ್ಥೆ ಸ್ಥಾಪಿಸಬಹುದು.

ಹಾಗಾಗಿ ಕುದುರೆಮುಖ ಪೇಟೆಯಲ್ಲಿ ಆಧುನಿಕ ಸೋಂಕು ಸಂಶೋಧನಾ ಕೇಂದ್ರ, ಸೋಂಕು ರೋಗಗಳ ವಿಶೇಷ ಆಸ್ಪತ್ರೆ ಸ್ಥಾಪಿಸಬೇಕು. ಈ ಬೇಡಿಕೆ ಒಪ್ಪುವುದಾದರೆ ಹೆಸರು ಸೇರಿಸಿ ಅಥವಾ ಹೆಸರಿಲ್ಲದೆ ಎಲ್ಲರೊಂದಿಗೆ ಹಂಚಿಕೊಳ್ಳಿ. ಜನಪ್ರತಿನಿಧಿಗಳಿಗೆ ವಿಚಾರ ಮುಟ್ಟಿಸಿ. ಬೇಡಿಕೆ ಕುರಿತು ಕೆಲಸ ಮಾಡಲು ಒತ್ತಡ ಹೇರಿ. ಈ ಯೋಜನೆ ಅನುಷ್ಠಾನ ಅದಲ್ಲಿ ಮಾಲ್ನಡಿಗರಿಗೆ ಭವಿಷ್ಯ ಸುರಕ್ಷಿತವಾದಂತೆ. ಹಾಗೂ ಈ ಸಂಸ್ಥೆಯಲ್ಲಿ ಆಗುವ ಸಂಶೋಧನೆ ನಾಡಿಗೆ ಇಡಿಯ ಪ್ರಪಂಚಕ್ಕೂ ಮನುಕುಲಕ್ಕೆ ಅನುಕೂಲ.

ವೈಜ್ಞಾನಿಕ ಸಂಶೋಧನೆ/ಸಾರ್ವಜನಿಕ ಆರೋಗ್ಯ ಸೇವೆಗಳ ಕೇಂದ್ರಗಳ ಸ್ಥಾಪನೆ ಮಾಡುವುದು ಸರ್ಕಾರಕ್ಕೆ ಇಷ್ಟವಿಲ್ಲದ ಕೆಲಸಗಳು. ಅದಕ್ಕೆ ಬೇಕಾದ ಹಣ ಸಹಕಾರ ಇಷ್ಟು ವರುಷಗಳು ಮಾಡದೆ ಕೊರೋನ ಸಾಂಕ್ರಾಮಿಕಕ್ಕೆ ಜನ ನರಳುವಂತೆ ಆಯಿತು. ಕೊರೋನ ಜಾಗತಿಕ ಪಿಡುಗು ಕೊನೆಯ ಪಿಡುಗು ಅಲ್ಲ, ಇಂತಹ ಹಲವು ಪಿಡುಗು ಹಿಂದೆಯೂ ಬಂದಿದೆ, ಮುಂದೆಯೂ ಬರಬಹುದು. ಹಾಗಾಗಿ ನಾವು ಉಳಿಯಲು ಹೆಚ್ಚು ಅಧ್ಯಯನ, ಸಂಶೋಧನೆ ಆಗಬೇಕು. ನಮ್ಮ ಪರಿಸರವನ್ನು ಹೆಚ್ಚು ಆಳವಾಗಿ ನಾವು ತಿಳಿಯಬೇಕು ಹಾಗೂ ಪರಿಸರ ಸಮತೋಲನ ಹಾಳು ಮಾಡದೆ ಮಿತಿಗಳನ್ನ ಹಾಕಿಕೊಂಡು ಬದುಕಬೇಕು.