ಸನ್ಮಾರ್ಗ ವಾರ್ತೆ
ಬೆಂಗಳೂರು, ಸೆ. 10: ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಸರಕಾರವು ಡಾ. ತಾಹಾ ಮತೀನ್ರಿಗೆ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.
ಕೊರೋನಾ ಪೀಡಿತರ ಅಂತ್ಯಸಂಸ್ಕಾರ ನಡೆಸುವ ಉದ್ದೇಶದಿಂದ ರಚಿಸಲಾದ ಮರ್ಸಿ ಎಂಜೆಲ್ಸ್ ಎಂಬ ಸೇವಾದಳದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ಇವರು ಜನಜನಿತರಾಗಿದ್ದರು.
ಇವರು ಪ್ರಸ್ತುತ ಬೆಂಗಳೂರಿನ ಎಚ್ ಬಿ ಎಸ್ ಆಸ್ಪತ್ರೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಮೆಡಿಕಲ್ ಸರ್ವಿಸ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿ ಮತ್ತು ಡಾಕ್ಟರ್ಸ್ ಫಾರ್ ಹುಮಾನಿಟಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಎಂ ಬಿ ಬಿ ಎಸ್, ಎಂ ಎಸ್, ಎಂ ಡಿ ಪದವೀಧರರಾಗಿರುವ ಇವರು 2006ರಲ್ಲಿ ಜಮಾಆತೆ ಇಸ್ಲಾಮಿ ಹಿಂದ್ ನ ಸದಸ್ಯರಾದರು. ಇವರ ಹೆತ್ತವರಿಬ್ಬರೂ ಜಮಾಅತ್ ನ ಕಾರ್ಯಕರ್ತರಾಗಿದ್ದಾರೆ. ಹಾಗೆಯೇ ತಾಹಾ ಮತೀನ್ ಅವರು ಸದ್ಯ ಜಮಾಅತೆ ಇಸ್ಲಾಮಿ ಹಿಂದ್ ನ ಕೇಂದ್ರ ಪ್ರತಿನಿಧಿ ಸಭೆಯ ಸದಸ್ಯರಾಗಿಯೂ ರಾಜ್ಯ ಜಮಾಅತ್ ನ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಈ ಮೊದಲು ಇವರು ಜಮಾಅತೆ ಇಸ್ಲಾಮಿ ಹಿಂದ್ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷರಾಗಿ ಮತ್ತು ಬೆಂಗಳೂರು ಮೆಟ್ರೋದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಹಾಗೆಯೇ ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ, ಮಲೇಶಿಯಾ, ಮೆಕ್ಸಿಕೋ, ಕೆನಡಾ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ.
ಇದೇವೇಳೆ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಅಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್ ಅವರು ಡಾ. ತಾಹಾ ಮತೀನ್ ರನ್ನು ಅಭಿನಂದಿಸಿದ್ದಾರೆ.


ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












