ಯಾರನ್ನು ಎನ್‌ಕೌಂಟರ್ ಮಾಡ್ತೀರಿ ಸಚಿವರೇ?

0
47

ಸನ್ಮಾರ್ಗ ಸಂಪಾದಕೀಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂರು ಹತ್ಯೆಗಳು ನಡೆದು ಇದೀಗ ವಾರಗಳು ಉರುಳಿವೆ. ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜನರು ಭಯದಿಂದ ಹೊರಬಂದು ಬದುಕು-ಭಾವದ ಬಗ್ಗೆ ಮಾತನಾಡತೊಡಗಿದ್ದಾರೆ. ಆದರೆ ಮಸೂದ್, ಪ್ರವೀಣ್ ಮತ್ತು ಫಾಝಿಲ್ ಕುಟುಂಬದವರನ್ನು ನಾವು ಈ ‘ಸಹಜಸ್ಥಿತಿ’ ಎಂಬ ವೃತ್ತದೊಳಗೆ ತರುವಂತಿಲ್ಲ. ಸಾರ್ವಜನಿಕವಾಗಿದ್ದ ಭಯ, ಆತಂಕ ಮತ್ತು ದುಃಖಗಳ ಸ್ಥಿತಿ ನಿಧಾನಕ್ಕೆ ಮರೆಯಾಗುತ್ತಿದ್ದು, ಅವು ಈಗ ಮೂರು ಮನೆಗಳ ಮೇಲೆ ನಿಧಾನಕ್ಕೆ ಸೀಮಿತಗೊಳ್ಳತೊಡಗಿದೆ.

ನಿಜವಾಗಿ, ಎಲ್ಲ ಕೋಮು ಹತ್ಯೆಗಳ ಬಳಿಕ ಉಂಟಾಗುವ ಶೂನ್ಯಸ್ಥಿತಿ ಇದು. ಕಳಕೊಂಡವರನ್ನು ಮರಳಿ ಪಡಕೊಳ್ಳಲಾಗದ ಹತಾಶೆ ಮತ್ತು ಬೇಗುದಿಯನ್ನು ಹಂಚಿಕೊಳ್ಳುವುದಕ್ಕೆ ಅಂತಿಮವಾಗಿ ರಾಜಕಾರಣಿಗಳೋ ಪೌರುಷದ ಮಾತಾಡಿದವರೋ ಯಾರೂ ಇರುವುದಿಲ್ಲ. ಅವರೆಲ್ಲ ಸಂತ್ರಸ್ತ ಮನೆಗೆ ಭೇಟಿ ಕೊಟ್ಟು ಮರಳಿ ಹೋದ ಬಳಿಕ ಉಂಟಾಗುವ ಮೌನಸ್ಥಿತಿಗೆ ಯಾವ ಪರಿಹಾರವೂ ಇಲ್ಲ. ಆದರೆ, ಇಂಥ ಸಂಕಟದ ಸ್ಥಿತಿ ಇನ್ನಾವ ಮನೆಗೂ, ಮನುಷ್ಯರಿಗೂ ಬರಬಾರದು ಎಂಬ ಸನ್ಮನಸ್ಸು ನಮ್ಮದೆಂದಾದರೆ, ಈ ಮೂರೂ ಹತ್ಯೆಗಳ ಸಂದರ್ಭದಲ್ಲಿ ಆಳುವವರು ಮತ್ತು ಆಳಿಸಿಕೊಳ್ಳುವವರು ನಡೆದುಕೊಂಡ ರೀತಿಯನ್ನು ವಿಶ್ಲೇಷಣೆಗೆ ಒಡ್ಡುವುದು ಒಳ್ಳೆಯದು. ಅಂದಹಾಗೆ,

ಯಾವುದೇ ಹತ್ಯೆಯನ್ನು ಅಥವಾ ಹತ್ಯೆಗೆ ಕಾರಣವಾಗುವ ಪ್ರಚೋದನೆಗಳನ್ನು ನಿಗ್ರಹಿಸುವ ಸಾಮರ್ಥ್ಯ ಇರುವುದು ಸರ್ಕಾರಕ್ಕೆ. ನಾಗರಿಕರೇನಿದ್ದರೂ ಸರ್ಕಾರದ ಆದೇಶಗಳನ್ನು ಪಾಲಿಸಲು ಬದ್ಧರೇ ಹೊರತು ಅವರೇ ಸರ್ಕಾರ ಅಲ್ಲ. ಆದ್ದರಿಂದ ಹತ್ಯೆ, ದರೋಡೆ, ಅತ್ಯಾಚಾರ, ದೌರ್ಜನ್ಯ ಇತ್ಯಾದಿ ಸಮಾಜ ವಿರೋಧಿ ಕೃತ್ಯಗಳನ್ನು ತಡೆಯುವ ಮತ್ತು ನಾಗರಿಕರಿಗೆ ನೆಮ್ಮದಿಯನ್ನು ಒದಗಿಸಿಕೊಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಸರ್ಕಾರ ಯಾವ ಪಕ್ಷದ್ದೇ ಆಗಿದ್ದರೂ ಈ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಈ ಆಧಾರದಲ್ಲೇ ಈ ಮೂರೂ ಹತ್ಯೆಗಳ ವಿಶ್ಲೇಷಣೆ ನಡೆಯಬೇಕಿದೆ. ದುರಂತ ಏನೆಂದರೆ,

ಈ ಮೂರೂ ಹತ್ಯೆಗಳ ಪೈಕಿ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಮಾತ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿತೇ ಹೊರತು ಉಳಿದೆರಡು ಹತ್ಯೆಗಳನ್ನು ಅತ್ಯಂತ ನಿಕೃಷ್ಟವಾಗಿ ಕಂಡಿತು. ಮೊದಲು ನಡೆದುದು ಮಸೂದ್ ಎಂಬ ತರುಣನ ಹತ್ಯೆ. ಆ ಬಳಿಕ ಪ್ರವೀಣ್ ಮತ್ತು ಆ ನಂತರ ಫಾಝಿಲ್. ಆದರೆ ಮಸೂದ್ ಮತ್ತು ಫಾಝಿಲ್‌ಗೆ ಸರ್ಕಾರ ಪರಿಹಾರ ಘೋಷಿಸುವುದು ಬಿಡಿ, ಆಡಳಿತ ಪಕ್ಷದ ಒಬ್ಬನೇ ಒಬ್ಬ ಜನಪ್ರತಿನಿಧಿಯಾಗಲಿ, ಸಚಿವರಾಗಲಿ ಸಂತ್ರಸ್ತರ ಮನೆಗೆ ಭೇಟಿ ಕೊಟ್ಟಿಲ್ಲ. ಈ ಮೂರು ಮನೆಗಳನ್ನು ವಿಧಾನ ಸಭೆಯಲ್ಲಿ ಪ್ರತಿನಿಧಿಸುತ್ತಿರುವುದು ಬಿಜೆಪಿ ಶಾಸಕರೇ. ಆದರೆ ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿಯಿಂದ ಹಿಡಿದು ಸ್ಥಳೀಯರಲ್ಲದ ಬಿಜೆಪಿ ಶಾಸಕರೂ ಭೇಟಿ ಕೊಟ್ಟರು. 25 ಲಕ್ಷ ರೂಪಾಯಿ ಪರಿಹಾರವನ್ನು ಸ್ವತಃ ಮುಖ್ಯಮಂತ್ರಿಯವರೇ ಸರ್ಕಾರದ ಪರವಾಗಿ ಘೋಷಿಸಿದರು. ಮಾತ್ರವಲ್ಲ, ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣರು ಸಮಸ್ತ ಕನ್ನಡಿಗರು ಮತ್ತು ಸಂವಿಧಾನವೇ ನಾಚುವಂಥ ಹೇಳಿಕೆಗಳನ್ನೂ ನೀಡಿದರು. ‘ಅಗತ್ಯ ಬಿದ್ದರೆ ಯೋಗಿ ಮಾದರಿಯನ್ನು ಅನುಸರಿಸಲಾಗುವುದು…’ ಎಂದು ಮುಖ್ಯಮಂತ್ರಿ ಹೇಳಿದ್ದರೆ, ‘ಎನ್‌ಕೌಂಟರ್ ನಡೆಸಲು ಸರ್ಕಾರ ಸಿದ್ಧ’ ಎಂಬ ಹೇಳಿಕೆಯನ್ನು ಸಚಿವ ಅಶ್ವತ್ಥ ನಾರಾಯಣ ನೀಡಿದರು. ಅಷ್ಟಕ್ಕೂ,

ಈ ಯೋಗಿ ಮಾದರಿ ಅಂದರೇನು? ಯಾವ ವಿಷಯದಲ್ಲಿ ಅವರು ಮಾದರಿ ಮತ್ತು ಏಕೆ ಮಾದರಿ? ಈ ಹಿಂದೆ ಗುಜರಾತ್ ಮಾದರಿ ಎಂಬ ಪದ ಚಾಲ್ತಿಯಲ್ಲಿತ್ತು. ಆ ಮಾದರಿಗೆ ಈಗ ಏನಾಗಿದೆ, ಅದೇಕೆ ಈಗ ಮಾರುಕಟ್ಟೆ ಕಳಕೊಂಡಿದೆ? ನಿಜವಾಗಿ,

ಈ ಎರಡೂ ಮಾದರಿಗಳ ಅಂತರಾಳದಲ್ಲಿರುವುದು ಮುಸ್ಲಿಮ್ ದ್ವೇಷ. 2002ರ ಗುಜರಾತ್ ಹತ್ಯಾಕಾಂಡದ ಬಳಿಕ ಠಂಕಿಸಲಾದ ಪದ ಗುಜರಾತ್ ಮಾದರಿಯಾದರೆ, ಮುಸ್ಲಿಮರ ಮನೆಗಳನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಲಾಗುತ್ತಿರುವುದನ್ನು ಹೇಳುವುದಕ್ಕೆ ಯೋಗಿ ಮಾದರಿ ಎಂದು ಕರೆಯಲಾಗುತ್ತದೆ. ಈ ಎರಡರಲ್ಲೂ ಇರುವುದು ಮುಸ್ಲಿಮ್ ದ್ವೇಷ ಮಾತ್ರ. ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌ಗಳು ಯಾಕೆ ಮುಸ್ಲಿಮ್ ಮನೆಗಳನ್ನು ಮಾತ್ರ ಹುಡುಕಿಕೊಂಡು ಹೋಗುತ್ತವೆ ಎಂಬ ಪ್ರಶ್ನೆಗೆ ದಿಲ್ಲಿಯಿಂದ ಹಿಡಿದು ಹಳ್ಳಿವರೆಗೂ ಉತ್ತರ ಗೊತ್ತಿದೆ.

ಆ ಬುಲ್ಡೋಜರ್ ಮುಸ್ಲಿಮರ ಹೊರತಾದ ಮನೆಗಳನ್ನು ಉರುಳಿಸುವುದಿಲ್ಲ. ಅಗ್ನಿಪಥ್ ವಿರೋಧಿ ಪ್ರತಿಭಟನೆಯಲ್ಲಿ 259 ಕೋಟಿ ರೂಪಾಯಿ ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಯಿತು. ಉತ್ತರ ಪ್ರದೇಶದ ಏಕೈಕ ವಿದ್ಯುತ್ ಚಾಲಿತ ಬಸ್ಸನ್ನೇ ಬೆಂಕಿಗಾಹುತಿ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಅತ್ಯಂತ ಹೆಚ್ಚು ನಾಶ-ನಷ್ಟ ಅನುಭವಿಸಿದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಆದರೆ, ಯೋಗಿ ಮಾದರಿಯ ಬುಲ್ಡೋಜರ್ ಈ ಪ್ರತಿಭಟನಾಕಾರರಲ್ಲಿ ಒಬ್ಬರ ಮನೆಯನ್ನೂ ಉರುಳಿಸಿಲ್ಲ. ಹತ್ರಾಸ್‌ನಲ್ಲಿ ದಲಿತ ಯುವತಿಯನ್ನು ಅತ್ಯಾಚಾರಗೈದು ಹತ್ಯೆಗೆ ಕಾರಣವಾದವರ ಮನೆಗಳು ಈಗಲೂ ಸುರಕ್ಷಿತವಾಗಿವೆ. ಅಂದರೆ, ಯೋಗಿ ಮಾದರಿಯಲ್ಲಿ ಮುಸ್ಲಿಮರು ಶಿಕ್ಷೆಗೆ ಒಳಗಾಗಬೇಕಾದವರು ಮತ್ತು ಉಳಿದವರು ರಕ್ಷಣೆ ಪಡೆಯಬೇಕಾದವರು ಎಂಬ ಅಲಿಖಿತ ನಿಯಮ ಇದ್ದಂತಿದೆ. ಗಲಭೆಕೋರರು, ಪ್ರತಿಭಟನಾಕಾರರು, ಅಕ್ರಮ ನಿವಾಸಿಗಳು, ಸಮಾಜ ಘಾತುಕ ಶಕ್ತಿಗಳು… ಎಂಬೆಲ್ಲ ಆರೋಪಗಳ ಮೂಲಕ ಅದು ಮುಸ್ಲಿಮರ ಮೇಲಿನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದೆ. ಅಷ್ಟಕ್ಕೂ,

ಈ ಅನೀತಿಯ ಹೊರತಾಗಿ ಮಾದರಿ ಎನ್ನಬಹುದಾದ ಯಾವ ಹೆಚ್ಚುಗಾರಿಕೆಯೂ ಉತ್ತರ ಪ್ರದೇಶದಲ್ಲಿಲ್ಲ. ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಪ್ರದೇಶ ಒಂದು ಕಳಪೆ ರಾಜ್ಯ. ಆರ್ಥಿಕವಾಗಿ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತು ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ತಾಂತ್ರಿಕ ಕ್ಷೇತ್ರದಲ್ಲಂತೂ ಬೆಂಗಳೂರು ಇತರೆಲ್ಲ ರಾಜ್ಯಗಳಿಗೆ ಮಾದರಿಯಂತಿದೆ. ಕ್ರೈಮ್ ರಾಜ್ಯವಾಗಿ ಗುರುತಿಸಿಕೊಂಡಿರುವ ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕ ಎಷ್ಟೋ ಪಾಲು ಉತ್ತಮ. ಜಾತಿ ದೌರ್ಜನ್ಯ ಮತ್ತು ತಾರತಮ್ಯದ ವಿಷಯದಲ್ಲಂತೂ ಉತ್ತರ ಪ್ರದೇಶವನ್ನು ಮೀರಿಸುವ ಇನ್ನೊಂದು ರಾಜ್ಯ ಇಲ್ಲ ಎಂಬAತಿದೆ. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿಯಿಂದ ಅತ್ಯುತ್ತಮ ಪರಿಕಲ್ಪನೆಗಳನ್ನು ಗರಿಷ್ಠ ಮಟ್ಟದಲ್ಲಿ ಪ್ರಯೋಗಿಸಿ ಯಶಸ್ವಿಯಾದ ರಾಜ್ಯ ಕರ್ನಾಟಕ. ಆದ್ದರಿಂದ, ಮುಖ್ಯಮಂತ್ರಿಯವರು ಯೋಗಿ ಮಾದರಿಯನ್ನು ಅನುಸರಿಸುತ್ತಾರೆಂದರೆ, ಮುಸ್ಲಿಮ್ ದ್ವೇಷವನ್ನು ನೀತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆಂದೇ ಅರ್ಥ. ಸುದೀರ್ಘ ಸಮಯ ಸಮಾಜವಾದಿಯಾಗಿ ರಾಜಕೀಯ ಆಯುಷ್ಯವನ್ನು ಕಳೆದ ಬೊಮ್ಮಾಯಿಯವರು ಹೀಗೆ ಹೇಳುತ್ತಾರೆಂದರೆ, ಏನರ್ಥ? ಪ್ರವೀಣ್ ನೆಟ್ಟಾರುಗೆ ಸ್ಪಂದಿಸಿದಷ್ಟೇ ತುರ್ತಾಗಿ ಮಸೂದ್ ಮತ್ತು ಫಾಝಿಲ್‌ಗೆ ಸ್ಪಂದಿಸುತ್ತಿಲ್ಲ ಎಂದರೆ ಏನರ್ಥ? ಅದೇವೇಳೆ,

‘ಎನ್‌ಕೌಂಟರ್‌ಗೂ ಸಿದ್ಧ’ ಎಂಬ ಅವರದೇ ಸಂಪುಟದ ಸಚಿವರ ಮಾತಿನ ಅರ್ಥವೇನು? ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಅವರು ನೀಡಿದ ಈ ಹೇಳಿಕೆಯ ಗುರಿ ಯಾರು? ಹತ್ಯೆಕೋರರನ್ನು ಎನ್‌ಕೌಂಟರ್ ನಡೆಸುವುದೇ ಅವರ ಮಾತಿನ ಉದ್ದೇಶವೆಂದಾದರೆ, ಮಸೂದ್ ಪ್ರಕರಣದಲ್ಲಿ ಬಂಧಿಗಳಾದ 8 ಮಂದಿ ಮತ್ತು ಫಾಝಿಲ್ ಪ್ರಕರಣದಲ್ಲಿ ಬಂಧನಕ್ಕೀಡಾದ 6 ಮಂದಿಯನ್ನು ಈಗಾಗಲೇ ಎನ್‌ಕೌಂಟರ್ ಮಾಡಿರಬೇಕಿತ್ತು. ಆದರೆ ಅದು ನಡೆದಿಲ್ಲ. ಮತ್ತೆ ಯಾರ ಎನ್‌ಕೌಂಟರ್‌ನ ಬಗ್ಗೆ ಅವರು ಮಾತಾಡುತ್ತಿದ್ದಾರೆ? ಅಷ್ಟಕ್ಕೂ,
ಅವರು ಬಳಸಿದ ಎನ್‌ಕೌಂಟರ್ ಎಂಬ ಪದ ಸಂವಿಧಾನ ಬದ್ಧವೇ? ಯಾವುದೇ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ತೀರ್ಮಾನಿಸುವ ಮತ್ತು ಶಿಕ್ಷೆ ವಿಧಿಸುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ಅಲ್ಲಿವರೆಗೆ ಬಂಧಿತ ವ್ಯಕ್ತಿ ಆರೋಪಿ ಮಾತ್ರ. ತಾನು ಸಂವಿಧಾನಕ್ಕೆ ಬದ್ಧ ಎಂದು ಪ್ರತಿಜ್ಞೆ ಸ್ವೀಕರಿಸಿರುವ ಸಚಿವರಿಗೆ ಈ ಸತ್ಯ ಗೊತ್ತಿಲ್ಲವೇ? ಅವರು ಎನ್‌ಕೌಂಟರ್ ಮಾಡುವುದು ಯಾರನ್ನು, ಆರೋಪಿಯನ್ನೋ, ಅಪರಾಧಿಯನ್ನೋ ಅಥವಾ ನಿರ್ದಿಷ್ಟ ಧರ್ಮದವರನ್ನೋ? ಇವು ಯಾವುವೇ ಆದರೂ ಇಂಥ ಕ್ರಮ ಕಾನೂನುಬಾಹಿರವಲ್ಲವೇ? ಒಂದುರೀತಿಯಲ್ಲಿ,

ರಾಜ್ಯದಲ್ಲಿ ಅರಾಜಕ ಸ್ಥಿತಿ ಉಂಟಾಗಿರುವುದು ರಾಜಧರ್ಮ ಪಾಲಿಸದ ಸರ್ಕಾರದಿಂದಾಗಿಯೇ ಹೊರತು ನಾಗರಿಕರಿಂದಲ್ಲ. ಹಿಜಾಬ್, ಹಲಾಲ್, ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ, ಮಸೀದಿಗಳ ಧ್ವನಿವರ್ಧಕ ನಿಷೇಧ… ಇತ್ಯಾದಿಗಳನ್ನು ಈ ಸರ್ಕಾರ ಮತ ಧ್ರುವೀಕರಣದ ದೃಷ್ಟಿಯಿಂದ ನೋಡಿತೇ ಹೊರತು ರಾಜಧರ್ಮದ ಆಧಾರದಲ್ಲಿ ಅಲ್ಲ. ಅನೈತಿಕ ಪೊಲೀಸ್‌ಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಸಮರ್ಥಿಸುವಷ್ಟರ ಮಟ್ಟಿಗೆ ರಾಜಧರ್ಮದ ಪಾಲನೆಯಲ್ಲಿ ಮುಖ್ಯಮಂತ್ರಿ ಎಡವಿದರು. ತಾನು ಸಮಾಜವಾದದಿಂದ ಕಳಚಿಕೊಂಡು ಬಿಜೆಪಿ ಧರ್ಮಕ್ಕೆ ನಿಷ್ಠನಾಗಿದ್ದಾನೆ ಎಂಬುದನ್ನು ಸಾಬೀತುಪಡಿಸಲೋ ಏನೋ ಮುಖ್ಯಮಂತ್ರಿ ಬೊಮ್ಮಾಯಿಯವರು ತನ್ನ ಅಧಿಕಾರದ ಉದ್ದಕ್ಕೂ ರಾಜಧರ್ಮಕ್ಕೆ ಬೆನ್ನು ಹಾಕಿದರು. ಇದು ಅತ್ಯಂತ ಆಘಾತಕಾರಿ ನೀತಿ. ಅಂದಹಾಗೆ, ರಾಜಧರ್ಮ ಎಂಬುದು ಪ್ರಕೃತಿ ಧರ್ಮ. ಪ್ರಕೃತಿ ಧರ್ಮವನ್ನು ನಿರ್ಲಕ್ಷಿಸುವುದೆಂದರೆ, ಅರಾಜಕ ಸ್ಥಿತಿಗೆ ಅಡಿಪಾಯ ಹಾಕುವುದೆಂದೇ ಅರ್ಥ.