ಬಟ್ಟೆಯ ಬಣ್ಣವೂ ಧರ್ಮ ಜಿಜ್ಞಾಸೆಗೊಳಪಡುವ ದೇಶದಲ್ಲಿ ಅತ್ಯಾಚಾರವೇಕೆ ಧರ್ಮ ವಿರೋಧಿಯಾಗುವುದಿಲ್ಲ?

0
238

ಸನ್ಮಾರ್ಗ ಸಂಪಾದಕೀಯ

ಸಿನಿಮಾದಲ್ಲಿ ನಟಿಯೋರ್ವರು ಧರಿಸಿದ ಬಟ್ಟೆಯ ಬಣ್ಣದಿಂದಾಗಿ ಧರ್ಮಕ್ಕೆ ಅವಮಾನವಾಗಿದೆಯೆಂದು ಪ್ರತಿಭಟನೆ ನಡೆಸುವ, ಕೇಸು ದಾಖಲಿಸುವ ಮತ್ತು ಸಿನಿಮಾದ ಬಹಿಷ್ಕಾರಕ್ಕೆ ಕರೆ ಕೊಡುವ ದೇಶದಲ್ಲಿ; ಅತ್ಯಾಚಾರದ ವಿರುದ್ಧ ಇಂಥ ಆಕ್ರೋಶಗಳು ವ್ಯಕ್ತವಾಗಿರುವುದು ಬಹಳ ಕಡಿಮೆ. ಅಲ್ಲೊಂದು ಇಲ್ಲೊಂದು ವಿಶೇಷ ಪ್ರಕರಣಗಳಲ್ಲಿ ಗಮನಾರ್ಹ ಪ್ರತಿಭಟನೆ ನಡೆದಿರುವುದನ್ನು ಬಿಟ್ಟರೆ ಉಳಿದಂತೆ ಗಾಢ ಮೌನವೊಂದು ಸಾಮಾಜಿಕವಾಗಿ ನೆಲೆಸಿದೆ. ಸಿನಿಮಾ ಎಂಬುದು ಪೂರ್ಣವಾಗಿ ದೃಶ್ಯ ವೈಭವ. ಅಲ್ಲಿ ಕತೆಯನ್ನು ಅಭಿ ನಯಿಸಲಾಗುತ್ತದೆಯೇ ಹೊರತು ವಾಸ್ತವವಾಗಿ ಅವು ನಡೆದಿರುವುದಿಲ್ಲ. ಸಿನಿಮಾದಲ್ಲಿ ನಡೆಯುವ ಹತ್ಯೆ, ಅತ್ಯಾಚಾರ, ಪ್ರೇಮ, ವಿರಹ ಎಲ್ಲವೂ ಅಭಿನಯವೇ ಹೊರತು ನಿಜ ಅಲ್ಲ. ಅಲ್ಲಿ ಧರಿಸಲಾಗುವ ಬಟ್ಟೆ ಮತ್ತು ಅದರ ಬಣ್ಣವೂ ಅಲ್ಲಿಗೆ ಸೀಮಿತ. ಆದರೆ ಇಂಥದ್ದೊಂದು ದೃಶ್ಯ ವೈಭವದಲ್ಲೂ ಧಾರ್ಮಿಕ ಚ್ಯುತಿಯನ್ನು ಕಾಣುವ ದೇಶಕ್ಕೆ ಅತ್ಯಾಚಾರದಲ್ಲಿ ಧರ್ಮದ್ರೋಹತನ ಕಾಣದಿರುವುದು ನಿಜಕ್ಕೂ ಆಶ್ಚರ್ಯಕರ. ಒಂದುವೇಳೆ,

ಅತ್ಯಾಚಾರವನ್ನು ಈ ದೇಶ ಗಂಭೀರವಾಗಿ ಪರಿಗಣಿಸಿರುತ್ತಿದ್ದರೆ, ಪ್ರತಿಭಟನೆಯೇ ಈ ದೇಶದ ಪ್ರತಿದಿನದ ಮುಖ್ಯ ಸುದ್ದಿಯಾಗಿರುತ್ತಿತ್ತು. ಅತ್ಯಾಚಾರಕ್ಕೆ ಸಂಬಂಧಿಸಿ ಕಳೆದವಾರ ಕೇಂದ್ರ ಗೃಹ ಸಚಿವಾಲಯ ಲೋಕಸಭೆಯಲ್ಲಿ ಅಂಕಿಅಂಶಗಳನ್ನು ಮಂಡಿಸಿದೆ. ಅದರ ಪ್ರಕಾರ, ಗುಜರಾತ್‌ನಲ್ಲಿ ಪ್ರತಿ ತಿಂಗಳು 45 ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. 2019 ಮತ್ತು 2021ರ ಅವಧಿಯಲ್ಲಿ ಗುಜರಾತ್‌ನಲ್ಲಿ 2156 ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ. 2019ರಲ್ಲಿ ರಾಜಸ್ತಾನ ಅತ್ಯಾಚಾರದ ರಾಜ್ಯವಾಗಿ ಗುರುತಿಸಿಕೊಂಡಿತ್ತು. ಒಟ್ಟು 5997 ಪ್ರಕರಣಗಳು ದಾಖಲಾಗಿದ್ದುವು. ಉತ್ತರ ಪ್ರದೇಶದಲ್ಲಿ 3065 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದುವು. 2021ರಲ್ಲಿ ಈ ದೇಶದಲ್ಲಿ ಒಟ್ಟು 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇವೆಲ್ಲ ಪೊಲೀಸು ಠಾಣೆಯಲ್ಲಿ ಅಧಿಕೃತವಾಗಿ ದಾಖಲಾದ ಪ್ರಕರಣಗಳು. ಇ ನ್ನು, ಪೊಲೀಸ್ ಠಾಣೆ ಹತ್ತದ ಮತ್ತು ಹತ್ತಿದರೂ ಅಲ್ಲೇ ರಾಜಿಯಲ್ಲಿ ಕೊನೆಗೊಳ್ಳುವ ಪ್ರಕರಣಗಳು ಈ ದಾಖಲಾದ ಪ್ರಕರಣಗಳ ಹಲವು ಪಟ್ಟು ಇರಬಹುದು. 31,677 ಪ್ರಕರಣಗಳು ಅಂದರೆ, ದಿನದಲ್ಲಿ ಸರಾಸರಿ 86 ಪ್ರಕರಣಗಳು ಎಂದರ್ಥ. 2020ರಲ್ಲಿ 28,046 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2019ರಲ್ಲಿ 32,033 ಪ್ರಕರಣಗಳು ದಾಖಲಾಗಿದ್ದುವು. ಅಂದಹಾಗೆ,

ಈ ದೇಶದಲ್ಲಿ ಪ್ರತೀ 15 ನಿಮಿಷಗಳಿಗೊಮ್ಮೆ ಅತ್ಯಾಚಾರ ಪ್ರಕರಣ ಅಧಿಕೃತವಾಗಿ ದಾಖಲಾಗುತ್ತಿದ್ದರೂ ಅದೇಕೆ ಧರ್ಮದ್ರೋಹಿಯಾಗಿ, ಧರ್ಮಕ್ಕೆ ಎಸಗುವ ಅವಮಾನವಾಗಿ ಚರ್ಚಿತವಾಗುತ್ತಿಲ್ಲ? ಜಾತ್ರೋತ್ಸವದ ವೇಳೆ ದೇವಸ್ಥಾನದ ಆವರಣದಲ್ಲಿ ಮುಸ್ಲಿಮರು ವ್ಯಾಪಾರ ಮಾಡುವುದು ತಪ್ಪು, ಹಲಾಲ್ ಆಹಾರ ಕ್ರಮ ತಪ್ಪು, ಹಿಜಾಬ್ ತಪ್ಪು, ಆಝಾನ್ ತಪ್ಪು… ಹೀಗೆ ತಪ್ಪುಗಳ ಪಟ್ಟಿಯನ್ನೇ ಬಿಡುಗಡೆಗೊಳಿಸಿ ಪ್ರತಿಭಟನೆ ನಡೆಯುತ್ತಿರುವ ಈ ದೇಶದಲ್ಲಿ ಅತ್ಯಾಚಾರವೇಕೆ ಇಂಥದ್ದೇ ಪ್ರತಿಭಟನಾ ಬಿಸಿಯನ್ನು ಎದುರಿಸುತ್ತಿಲ್ಲ? ಅತ್ಯಾಚಾರದ ಆರೋ ಪವನ್ನು ಹೊತ್ತು ಧಾರ್ಮಿಕ ನೇತಾರರೇ ಜೈಲು ಪಾಲಾಗುತ್ತಿರುವುದರ ಹೊರತಾಗಿಯೂ ಅವರ ಬಗ್ಗೆ ಸಮಾಜ ಮೌನವಾಗುತ್ತಿರುವುದರ ಉದ್ದೇಶವೇನು? ಅಂದಹಾಗೆ,

ಸಾಮಾನ್ಯ ಕ್ರಿಮಿನಲ್ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಈ ದೇಶದಲ್ಲಿ ನಾಲ್ಕನೇ ಸ್ಥಾನವಿದೆ. ದರೋಡೆ, ವಂಚನೆ, ಹತ್ಯೆಯಂಥ ಸಾಮಾನ್ಯ ಪ್ರಕರಣವಾಗಿ ಅತ್ಯಾಚಾರವೂ ಈ ದೇಶದಲ್ಲಿ ಪರಿಗಣಿತವಾಗಿದೆ ಎಂಬುದು ಇದರರ್ಥ. ಹೆಣ್ಣನ್ನು ದೈಹಿಕ ಮತ್ತು ಮಾನಸಿಕವಾಗಿ ಇರಿಯುವ ಅತ್ಯಾಚಾರ ಪ್ರಕರಣವು ಹೆಣ್ಣನ್ನು ದೇವತೆ ಎಂದು ಪೂಜಿಸುವ ದೇಶದಲ್ಲಿ ಸಾಮಾನ್ಯವೆಂಬಷ್ಟು ಸಹಜವಾಗಿ ಮಾರ್ಪಡಾಗಲು ಏನು ಕಾರಣ? ಯಾಕೆ ಇದು ಧರ್ಮದ ಮೇಲಿನ ಹಲ್ಲೆಯಾಗಿ, ಧರ್ಮಕ್ಕೆ ಮಾಡುವ ಅಪಚಾರವಾಗಿ ಗುರುತಿಗೀಡಾಗುತ್ತಿಲ್ಲ? ಸಿನಿಮಾವೊಂದರ ಬಟ್ಟೆ ಉಂಟು ಮಾಡುವ ಧಾರ್ಮಿಕ ಆಕ್ರೋಶದ ಒಂದು ಶೇಕಡಾದಷ್ಟೂ ಆಕ್ರೋಶ ಅತ್ಯಾಚಾರದ ವಿರುದ್ಧ ಯಾಕೆ ಉಂಟಾಗುತ್ತಿಲ್ಲ? ನಿಜವಾಗಿ,

ಈ ದೇಶದಲ್ಲಿ ಧರ್ಮದ ಹೆಸರಲ್ಲಿ ಆಗುತ್ತಿರುವ ಪ್ರತಿಭಟನೆ-ಹೇಳಿಕೆ, ಆಕ್ರೋಶಗಳು ಎಷ್ಟು ಪ್ರಾಮಾಣಿಕ ಎಂಬುದನ್ನು ಅಳೆಯುವುದಕ್ಕೆ ಈ ಅತ್ಯಾಚಾರ ಪ್ರಕರಣಗಳೇ ಧಾರಾಳ ಸಾಕು. ಇಲ್ಲಿ ‘ಧರ್ಮಕ್ಕೆ ಅವಮಾನವಾಗಿದೆ’ ಎಂಬ ಹೆಸರಲ್ಲಿ ನಡೆಯುವ ಯಾವುದೇ ಪ್ರತಿಭಟನೆಯು ನಿಜಾರ್ಥದಲ್ಲಿ ಧಾರ್ಮಿಕ ಅವಮಾನದ ಉದ್ದೇಶದಿಂದಾಗಿ ಉಂಟಾಗುವುದಿಲ್ಲ. ರಾಜಕೀಯ ಲಾಭದ ಉದ್ದೇಶವೇ ಅಂಥ ಪ್ರತಿಭಟನೆಗಳಿಗೆ ಪ್ರೇರಣೆಯಾಗಿರುತ್ತದೆ. ಆದರೆ, ಬರೇ ರಾಜಕೀಯ ಉದ್ದೇಶದ ಪ್ರತಿಭಟನೆಗೆ ಒಟ್ಟು ಸಮಾಜವನ್ನು ಒಪ್ಪಿಸುವ ಸಾಮರ್ಥ್ಯ ಇರುವು ದಿಲ್ಲವಲ್ಲ. ಆದರೆ, ಅದೇ ಪ್ರತಿಭಟನೆಯನ್ನು ಧರ್ಮದ ಅಗತ್ಯವಾಗಿ ಬಿಂಬಿಸಿದಾಗ ಅಂಥ ಪ್ರತಿಭಟನೆಯನ್ನು ಸಮಾಜ ತನ್ನದೆಂದು ಭಾವಿಸುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಂಥ ಪ್ರತಿಭಟನೆಯ ಪರವಹಿಸಿ ಮಾತಾಡುತ್ತದೆ. ಆದ್ದರಿಂದಲೇ, ಸಿನಿಮಾದ ಬಟ್ಟೆ, ಹಲಾಲ್ ಆಹಾರ ಕ್ರಮ, ಆಝಾನ್, ಹಿಜಾಬ್, ಮುಸ್ಲಿಮರ ವ್ಯಾಪಾರ… ಇತ್ಯಾದಿಗಳಿಗೆ ಧಾರ್ಮಿಕ ಬಣ್ಣ ಕೊಟ್ಟು ನಾಗರಿಕ ಮನಸ್ಸನ್ನು ಕಲುಷಿತಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ,
ಅತ್ಯಾಚಾರ ಪ್ರಕರಣ ಹೀಗಲ್ಲ. ಈ ದೇಶದಲ್ಲಿ ಅತ್ಯಂತ ಹೆಚ್ಚು ಅತ್ಯಾಚಾರಿ ಸಂತ್ರಸ್ತರು ಮತ್ತು ಆರೋಪಿಗಳು ಯಾರು ಎಂಬುದು ಹೀಗೆ ಪ್ರತಿಭಟನೆ ಮಾಡುವವರಿಗೆ ಚೆನ್ನಾಗಿ ಗೊತ್ತು. ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರೇ ಅತ್ಯಾಚಾರ ಆರೋಪವನ್ನು ಹೊತ್ತುಕೊಂಡು ತಿರುಗಾಡುತ್ತಿದ್ದಾರೆ. ಕೆಲವರು ಜೈಲಿಗೂ ಹೋಗಿದ್ದಾರೆ. ಒಂದುವೇಳೆ, ಈ ಅತ್ಯಾಚಾರವನ್ನು ಧರ್ಮದ್ರೋಹವಾಗಿಯೋ ಅವಮಾನವಾಗಿಯೋ ಪರಿಗಣಿಸಿ ಪ್ರತಿಭಟನೆಗಿಳಿದರೆ ಅದರಿಂದ ರಾಜಕೀಯ ಲಾಭ ಹುಟ್ಟದು ಎಂಬುದು ಇವರಿಗೆ ಗೊತ್ತು. ಇದರ ಬದಲು ಅತ್ಯಾಚಾರದ ಆರೋಪಿ ಮುಸ್ಲಿಮ್ ಆದರೆ, ತಕ್ಷಣ ಈ ಮಂದಿ ಎದ್ದು ನಿಲ್ಲುತ್ತಾರೆ. ಶ್ರದ್ಧಾ ವಾಲ್ಕರ್ ಹತ್ಯಾ ಪ್ರಕರಣದ ಆರೋಪಿಯ ಹೆಸರು ಅಫ್ತಾಬ್ ಪೂನಾವಾಲ ಎಂದು ಬಹಿರಂಗವಾದ ಕೂಡಲೇ ಹೇಳಿಕೆಗಳ ಮೇಲೆ ಹೇಳಿಕೆಗಳು ಬಿಡುಗಡೆಯಾಗುತ್ತವೆ. ಲವ್ ಜಿಹಾದ್ ಎಂಬ ಚರ್ಚೆ ನಡೆಯುತ್ತದೆ. ಟ್ವಿಟರ್‌ನಲ್ಲಿ ಚರ್ಚೆ ಟ್ರೆಂಡಿಂಗ್ ಆಗುತ್ತದೆ. ಅಲ್ಲಲ್ಲಿ ಲವ್ ಜಿಹಾದ್ ವಿರುದ್ಧ ಪೋಸ್ಟರ್‌ಗಳೂ ಕಾಣಿಸಿಕೊಳ್ಳುತ್ತದೆ. ಆದರೆ, ಆ ಬಳಿಕ ಅಂಥ ಡಝನ್‌ಗಟ್ಟಲೆ ಹತ್ಯಾ ವರದಿಗಳು ಪ್ರಕಟವಾದರೂ ಆ ಬಗ್ಗೆ ಒಂದೇ ಒಂದು ಪೋಸ್ಟರ್ ಆಗಲಿ, ಟ್ವಿಟರ್ ಅಭಿಯಾನವಾಗಲಿ, ಧರ್ಮ ಜಿಜ್ಞಾಸೆಯಾಗಲಿ ನಡೆಯುವುದಿಲ್ಲ. ಇದೀಗ ಸೀರಿಯಲ್ ನಟಿ ತುನಿಷ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ ಪುನಃ ಲವ್ ಜಿಹಾದ್ ಚರ್ಚೆ ಮುನ್ನೆಲೆಗೆ ಬಂದಿದೆ. ಯಾಕೆಂದರೆ, ಆಕೆಯ ಗೆಳೆಯನ ಹೆಸರು ಝೀಶಾನ್ ಖಾನ್. ಅಂದಹಾಗೆ,

ಧರ್ಮದ ಮುಖವಾಡವನ್ನು ಧರಿಸಿಕೊಂಡು ಮಾಡುವ ರಾಜಕೀಯ ಉದ್ದೇಶದ ಯಾವುದೇ ಹೇಳಿಕೆ, ಪ್ರತಿಭಟನೆಗಳು ಅಂತಿಮವಾಗಿ ಧರ್ಮವನ್ನು ದುರ್ಬಲಗೊಳಿಸುತ್ತದೆಯೇ ಹೊರತು ಇನ್ನೇನನ್ನೂ ಅಲ್ಲ. ರಾಜಕಾರಣಿಗಳಿಗೆ ಅಧಿಕಾರ ಮಾತ್ರ ಮುಖ್ಯವಾಗಿರುತ್ತದೆ. ಆ ಅಧಿಕಾರಕ್ಕಾಗಿ ಅವರು ಲಭ್ಯವಿರುವ ಎಲ್ಲ ಆಧಾರಗಳನ್ನೂ ಬಳಸಬಲ್ಲರು. ಅವರಿಗೆ ಕ್ರಿಮಿನಲ್‌ಗಳೂ ಬೇಕು. ಭ್ರಷ್ಟ ಅಧಿಕಾರಿಗಳೂ ಬೇಕು. ಅತ್ಯಾಚಾರಿಗಳೂ ಬೇಕು. ಆದರೆ ಇಂಥ ಸಂದರ್ಭದಲ್ಲಿ ನಾಗರಿಕ ಸಮಾಜ ಅವನ್ನು ಲಘುವಾಗಿ ಪರಿಗಣಿಸಿದರೆ ಕೊನೆಗೆ ಧರ್ಮವನ್ನು ಅವರೇ ವ್ಯಾಖ್ಯಾನ ಮಾಡಲು ಪ್ರಾರಂಭಿಸುತ್ತಾರೆ. ಧರ್ಮದ ಹೆಸರಲ್ಲಿ ಸಮಾಜವನ್ನು ಪ್ರಚೋದಿಸಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಾರೆ. ಇಂದಿನ ಭಾರತ ಈ ಸ್ಥಿತಿಗೆ ಉತ್ತಮ ಉದಾಹರಣೆಯಾಗಿದೆ. ಯಾವುದನ್ನು ಖಂಡಿಸಬೇಕೋ ಮತ್ತು ಪ್ರತಿಭಟಿಸಬೇಕೋ ಆ ವಿಷಯಕ್ಕೆ ಸಂಬಂಧಿಸಿ ದೀರ್ಘ ಮೌನ ಪಾಲಿಸುತ್ತಿರುವವರು, ಬಹುತ್ವದ ಭಾರತದಲ್ಲಿ ತೀರಾ ಸಹಜವಾಗಿರುವ ಆಝಾನ್, ಹಿಜಾಬ್, ಹಲಾಲ್ ಆಹಾರ ಕ್ರಮಗಳ ವಿರುದ್ಧ ದನಿ ಎತ್ತುತ್ತಿದ್ದಾರೆ.

ದರೋಡೆ, ಭ್ರಷ್ಟಾಚಾರ, ಮೋಸ ಇತ್ಯಾದಿಗಳಂತೆ ಅತ್ಯಾಚಾರವೂ ಈ ದೇಶದಲ್ಲಿ ಸಾಮಾನ್ಯವಾಗಿರುವ ಬಗ್ಗೆ ಆತಂಕಪಡಬೇಕಾದ ನಾವೆಲ್ಲ ಏನೂ ಆಗಿಲ್ಲವೆಂಬಂತೆ ಸಹಜವಾಗಿ ಬದುಕುತ್ತಿದ್ದೇವಲ್ಲ, ಅದುವೇ ಬಹುದೊಡ್ಡ ದುರಂತ. ಈ ದೇಶದಲ್ಲಿ ಪ್ರತೀ 15 ನಿಮಿಷಕ್ಕೊಮ್ಮೆ ಅಧಿಕೃತವಾಗಿ ಯಾವನೋ ಓರ್ವ ಕ್ರೂರಿ ಓರ್ವ ಹೆಣ್ಣು ಮಗಳನ್ನು ಹರಿದು ಮುಕ್ಕುತ್ತಾನಲ್ಲ- ಇದು ಧರ್ಮಕ್ಕೆ ಮಾಡುವ ಅತಿದೊಡ್ಡ ಅವಮಾನ. ಆದರೆ ಧರ್ಮದ್ವೇಷದ ಪೊರೆ ಕವಿದಿರುವ ನಾಡಿಗೆ ಇದು ಅರ್ಥವಾಗುವುದು ಹೇಗೆ?