ಸನ್ಮಾರ್ಗ ವಾರ್ತೆ
ರಿಯಾದ್: ಈಗಾಗಲೇ ಸೌದಿಯಲ್ಲಿರುವವರು ಹಜ್ ನಿರ್ವಹಿಸ ಬಯಸುವುದಾದರೆ ಜೂನ್ 25ರ ಒಳಗೆ ಅರ್ಜಿ ಹಾಕಬೇಕು ಎಂದು ಸೌದಿಯ ಹಜ್ಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ. ನುಸುಕ್ ಅಪ್ಲಿಕೇಶನ್ನ ಮೂಲಕ ಅಥವಾ ಸಚಿವಾಲಯದ ವೆಬ್ಸೈಟ್ನ ಮೂಲಕ ಹಜ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ನಿರ್ದಿಷ್ಟ ಸಮಯಕ್ಕೂ ಮೊದಲು ನಿಗದಿತ ಕೋಟ ಮುಗಿದರೆ ಆ ಬಳಿಕ ಅರ್ಜಿ ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸ್ವೀಕೃತವಾದರೆ ಅಪೇಕ್ಷಿತರಿಗೆ ಮೊಬೈಲ್ ಮೂಲಕ ಸಂದೇಶ ತಲುಪಿಸಲಾಗುವುದು. ಜೊತೆಗೆ ವೆಬ್ಸೈಟ್ ಮೂಲಕ ಕೂಡ ಮಾಹಿತಿ ನೀಡಲಾಗುವುದು.
3984 ರಿಯಾಲ್ ನಿಂದ 11435 ರಿಯಾಲ್ ವರೆಗಿನ ನಾಲ್ಕು ಪ್ಯಾಕೇಜುಗಳನ್ನು ಘೋಷಿಸಲಾಗಿದೆ. ಈ ಹಣವನ್ನು ಒಂದೇ ಬಾರಿಗೆ ಅಥವಾ ಮೂರು ಹಂತಗಳಲ್ಲಿ ಪಾವತಿ ಮಾಡಬಹುದು. ಹಣ ಪಾವತಿ ಮಾಡಿದ ಬಳಿಕ ಇತರರನ್ನು ಸೇರಿಸುವ ಹಾಗಿಲ್ಲ. ಬುಕ್ಕಿಂಗ್ಗಾಗಿ ಅರ್ಜಿ ಸಲ್ಲಿಸಿದ ಬಳಿಕ ಆನ್ ಲೈನ್ ನಲ್ಲಿ ಅದನ್ನು ರದ್ದುಗೊಳಿಸಲೂ ಸಾಧ್ಯವಿಲ್ಲ. ಹಜ್ ನಿರ್ವಹಿಸಬೇಕಾದರೆ ಹಜ್ ವೀಸಾ ಅಥವಾ ಸೌದಿ ಅರೇಬಿಯಾದ ಇಕಾಮ ಬೇಕಾಗಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.












