ಅಸುರಕ್ಷಿತತೆಯಲ್ಲಿ ಹೆಣ್ಣು ಜಗತ್ತು

0
271

ಸನ್ಮಾರ್ಗ ಸಂಪಾದಕೀಯ

ದೇಶದಲ್ಲಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ಎಗ್ಗಿಲ್ಲದೇ ವರದಿಯಾಗುತ್ತಿದೆ. ಖ್ಯಾತ ಕುಸ್ತಿಪಟು ವಿನೇಶ್ ಪೊಗಾಟ್ ಅವರು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್‌ರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವುದು ಇದರ ಒಂದು ತುದಿಯಾದರೆ, ಅತ್ಯಾಚಾರ ಮತ್ತು ಹತ್ಯೆಯ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೀಡಾಗಿದ್ದ 11 ಮಂದಿಯನ್ನು ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿರುವುದು ಇದರ ಇನ್ನೊಂದು ತುದಿ. ಈ ಎರಡರ ನಡುವೆ ಪ್ರತಿದಿನ ಹೆಣ್ಣು ಲೈಂಗಿಕ ಹಿಂಸೆ, ಅತ್ಯಾಚಾರ ಮತ್ತು ಹತ್ಯೆಗಳಿಗೆ ಗುರಿಯಾಗುತ್ತಲೇ ಇದ್ದಾಳೆ. 2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (NCRB) ಹೇಳಿದೆ. ಅಂದರೆ ಪ್ರತಿದಿನ 86 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಇವೆಲ್ಲ ಪೊಲೀಸು ಠಾಣೆಯಲ್ಲಿ ದಾಖಲಾದ ಪ್ರಕರಣಗಳು. ಇದೇ ವೇಳೆ, ಹೀಗೆ ಕೇಸು ದಾಖಲಾಗದೇ ಮತ್ತು ಹೊರ ಜಗತ್ತಿಗೆ ಗೊತ್ತೂ ಆಗದೇ ನಡೆದು ಹೋಗುತ್ತಿರುವ ಅತ್ಯಾಚಾರ ಪ್ರಕರಣಗಳು ಈ ದಾಖಲಾದ ಪ್ರಕರಣಕ್ಕಿಂತ ಐದಾರು ಪಟ್ಟು ಹೆಚ್ಚಿವೆ ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರೇ ಹೇಳುತ್ತಾರೆ. ಹಾಗೆಯೇ, ಪ್ರತಿ ಗಂಟೆಗೆ 49 ಅಪರಾಧ ಪ್ರಕರಣಗಳು ಹೆಣ್ಣಿನ ಮೇಲೆ ನಡೆಯುತ್ತಿವೆ ಎಂದೂ ಕೂಡಾ NCRB ಹೇಳಿದೆ. 2021ರಲ್ಲಿ ಹೆಣ್ಣಿನ ಮೇಲೆ 4,28,278 ಅಪರಾಧ ಪ್ರಕರಣಗಳು ದಾಖಲಾಗಿವೆ. ಇವೆಲ್ಲ ಅಧಿಕೃತ ಲೆಕ್ಕಗಳು. ಅನಧಿಕೃತ ಲೆಕ್ಕಗಳು ಇದಕ್ಕಿಂತ ಎಷ್ಟೋ ಪಟ್ಟು ಅಧಿಕವಿದೆ. 2020ರಲ್ಲಿ ಈ ಅಪರಾಧ ಪ್ರಕರಣಗಳ ಸಂಖ್ಯೆ 3,71,503 ಆದರೆ, 2019ರಲ್ಲಿ ಇವುಗಳ ಸಂಖ್ಯೆ 4,05,326. ಅತ್ಯಾಚಾರ, ಅತ್ಯಾಚಾರ ಮತ್ತು ಹತ್ಯೆ, ವರದಕ್ಷಿಣೆ, ಆ್ಯಸಿಡ್ ಆಕ್ರಮಣ, ಆತ್ಮಹತ್ಯೆಗೆ ಪ್ರಚೋದನೆ, ಅಪಹರಣ, ಬಲವಂತದ ಮದುವೆ, ಮಾನವ ಕಳ್ಳ ಸಾಗಾಣಿಕೆ, ಆನ್‌ಲೈನ್ ಹಿಂಸೆ… ಇತ್ಯಾದಿಗಳು ಹೆಣ್ಣಿನ ಮೇಲಿನ ಅಪರಾಧ ಪ್ರಕರಣಗಳಲ್ಲಿ ಸೇರುತ್ತವೆ. ಇದೇವೇಳೆ, 2020ರಲ್ಲಿ 28,046 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2019ರಲ್ಲಿ 32,033 ಪ್ರಕರಣಗಳು ದಾಖಲಾಗಿವೆ. ಹಾಗಂತ, 2022ರ ವರದಿ ಇನ್ನೂ ಬಿಡುಗಡೆಗೊಂಡಿಲ್ಲ. ಅಂದಹಾಗೆ,

ಹೆಣ್ಣಿನ ಮೇಲೆ 2005ರಿಂದ 2021ರ ವರೆಗಿನ ಅಪರಾಧ ಪ್ರಕರಣಗಳನ್ನು ಪರಿಶೀಲಿಸಿದರೆ ಆತಂಕ ಮತ್ತು ಭಯಪಡಬೇಕಾದ ಫ ಲಿತಾಂಶಗಳು ದೊರಕುತ್ತವೆಯೇ ಹೊರತು ಇನ್ನೇನಲ್ಲ. ವರ್ಷದಿಂದ ವರ್ಷಕ್ಕೆ ಹೆಣ್ಣಿನ ಮೇಲಿನ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಅತ್ಯಾಚಾರ ಪ್ರಕರಣಗಳೂ ಮಾಮೂಲಿ ಅನ್ನಿಸತೊಡಗಿವೆ. ಸಂಸದರು ಮತ್ತು ಶಾಸಕರೇ ಇಂಥ ಹೀನ ಕೃತ್ಯಗಳ ಆರೋಪಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಸ್ವತಃ ರಾಜೀನಾಮೆ ನೀಡುವುದು ಬಿಡಿ, ಯಾವ ಪಶ್ಚಾತ್ತಾಪಭಾವವೂ ಇಲ್ಲದೇ ತಿರುಗಾಡುತ್ತಿರುತ್ತಾರೆ. ಅವರ ಪಕ್ಷವೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ‘ರಾಜಕೀಯ ಸಂಚು’ ಎಂಬ ಹೇಳಿಕೆಯನ್ನು ಕೊಟ್ಟು ಹೆಣ್ಣನ್ನೇ ಕಟಕಟೆಯಲ್ಲಿ ನಿಲ್ಲಿಸುವ ಕಲೆಯನ್ನೂ ಅವರು ಕಲಿತಿದ್ದಾರೆ. ಗುಜರಾತ್‌ನಲ್ಲಂತೂ ಇಡೀ ಸರ್ಕಾರವೇ ಅತ್ಯಾಚಾರಿಗಳ ಬೆನ್ನಿಗೆ ನಿಂತ ಆಘಾತಕಾರಿ ಘಟನೆಯೇ 2022ರ ಆಗಸ್ಟ್ನಲ್ಲಿ ನಡೆಯಿತು. ಬಿಲ್ಕಿಸ್ ಬಾನು ಸಹಿತ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಅಪರಾಧಕ್ಕಾಗಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿಯನ್ನು ಸ್ವತಃ ಸರ್ಕಾರವೇ ಮುಂದೆ ನಿಂತು ಬಿಡುಗಡೆಗೊಳಿಸಿತು. ಈ ಬಿಡುಗಡೆಗೆ ಅನುಮತಿ ನೀಡಿದ್ದು ಕೇಂದ್ರ ಸರ್ಕಾರ. ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು ಸೇರಿಕೊಂಡು ಅತ್ಯಾಚಾರಿ ಅಪರಾಧಿಗಳನ್ನು ಬಿಡುಗಡೆಗೊಳಿಸುವುದೆಂದರೆ, ಅದು ಇತರ ಅತ್ಯಾ ಚಾರಿ ಮನಸ್ಥಿತಿಯವರಿಗೆ ನೀಡುವ ಸಂದೇಶವೇನು? ಅತ್ಯಾಚಾರ ಮತ್ತು ಹೆಣ್ಣಿನ ಮೇಲೆ ಅಪರಾಧ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದನ್ನೇ ಅಲ್ಲವೇ? ನಿಜವಾಗಿ,

ಸ್ಮಾರ್ಟ್‌ ಫೋನ್‌ಗಳ ಈ ಯುಗದಲ್ಲಿ ಯುವಸಮೂಹವನ್ನು ಪ್ರಚೋದನೆಗೊಳಿಸುವುದಕ್ಕೆ ಬೇಕಾದ ಎಲ್ಲವೂ ಬೆರಳ ತುದಿಯಲ್ಲೇ ಲಭ್ಯವಾಗುತ್ತಿವೆ. ದಿನವಿಡೀ ವೀಕ್ಷಿಸಿಯೂ ಮುಗಿಯದಷ್ಟು ರೀಲ್ಸ್ಗಳು, ವೀಡಿಯೋಗಳು, ಸಿನಿಮಾಗಳು, ಸೈಟ್‌ಗಳು, ಬರಹಗಳು ಸಿಗುತ್ತಿವೆ. ದೈಹಿಕವಾಗಿ ಬೆಳೆದಿದ್ದರೂ ಮಾನಸಿಕವಾಗಿ ಇನ್ನೂ ಪ್ರಬುದ್ಧರಾಗದ ಯುವ ಪೀಳಿಗೆಯನ್ನು ಲೈಂಗಿಕವಾಗಿ ಪ್ರಚೋದಿಸುವುದಕ್ಕೆ ಬೇಕಾದುದೆಲ್ಲವನ್ನೂ ಸ್ಮಾರ್ಟ್ ಫೋನ್‌ಗಳು ಲಭ್ಯಗೊಳಿಸುತ್ತಲೂ ಇವೆ. ಹೆತ್ತವರ ಗಮನಕ್ಕೆ ಬಾರದಂತೆ ಮಕ್ಕಳು ಈ ಸ್ಮಾರ್ಟ್ ಜಗತ್ತಿನಲ್ಲಿ ಸುತ್ತಾಡುತ್ತಲೂ ಇರುತ್ತಾರೆ. ಸದ್ಯದ ಜಗತ್ತು ಇದು. ಆದ್ದರಿಂದ,

ಈ ಜಗತ್ತಿನಲ್ಲಿರುವ ಮಕ್ಕಳ ಮನಸ್ಸನ್ನು ಅರಿತುಕೊಳ್ಳುವ ಮತ್ತು ಅವರು ದಾರಿ ತಪ್ಪದಂತೆ ಕಾವಲು ನಿಲ್ಲಬೇಕಾದ ಶ್ರಮ ಹೆತ್ತವರಿಂದ ತೊಡಗಿ ಶಿಕ್ಷಕರವರೆಗೆ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಸ್ಮಾರ್ಟ್ ಜಗತ್ತಿನ ಅಪಾಯಗಳನ್ನು ವಿವರಿಸುವ ತರಗತಿಗಳು ಆಗಾಗ್ಗೆ ನಡೆಯುತ್ತಿರಬೇಕಾದ ಅನಿವಾರ್ಯತೆಯಿದೆ. ತಜ್ಞರಿಂದ ಇಂಥ ಕ್ಲಾಸ್‌ಗಳನ್ನು ಮಕ್ಕಳಿಗೆ ನೀಡುವುದರ ಜೊತೆಗೇ ಹೆತ್ತವರನ್ನೂ ಎಜುಕೇಟ್ ಮಾಡುವ ಪ್ರಯತ್ನಗಳೂ ನಡೆಯಬೇಕು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಾದ ರೀತಿ-ನೀತಿಗಳನ್ನು ಹೆತ್ತವರು ಕಲಿತುಕೊಳ್ಳಬೇಕಾದ ಅಗತ್ಯವಿದೆ. ಹೆತ್ತವರು ತಮ್ಮನ್ನು ನೋಡುತ್ತಿದ್ದಾರೆ ಮತ್ತು ಪ್ರಶ್ನಿಸುತ್ತಾರೆ ಎಂಬ ಪ್ರಜ್ಞೆಯೊಂದು ಮಕ್ಕಳಲ್ಲಿ ಸದಾ ಇರುವ ವಾತಾವರಣವನ್ನು ಹೆತ್ತವರು ಮನೆಯಲ್ಲಿ ಬೆಳೆಸಬೇಕು. ಶಿಕ್ಷಕರಿಗೂ ಇಲ್ಲಿ ಜವಾಬ್ದಾರಿಯಿದೆ. ಶಾಲೆ-ಕಾಲೇಜುಗಳಿಗೆ ಮೊಬೈಲ್ ತರಬಾರದು ಎಂಬ ನಿಯಮ ಮಾಡುವಲ್ಲಿಗೆ ತಮ್ಮ ಹೊಣೆಗಾರಿಕೆ ಮುಗಿಯಿತು ಎಂದು ಅವರು ಭಾವಿಸಬಾರದು. ಅದರಾಚೆಗೆ ಮಕ್ಕಳನ್ನು ಒಳ್ಳೆಯ ಪ್ರಜೆಗಳಾಗಿ ಪರಿವರ್ತಿಸುವ ಜವಾಬ್ದಾರಿಯೂ ಅವರ ಮೇಲಿದೆ. ಸಾಕಷ್ಟು ಮಕ್ಕಳು ತಮ್ಮ ಮೊಬೈಲನ್ನು ಕಾಲೇಜಿನ ಹತ್ತಿರದ ಶಾಪ್‌ನಲ್ಲಿಟ್ಟು ತರಗತಿಗೆ ತೆರಳಿ ಮರಳಿ ಹೋಗುವಾಗ ಕೊಂಡು ಹೋಗುವುದಿದೆ. ಮಕ್ಕಳು ನಿಧಾನಕ್ಕೆ ಮೊಬೈಲ್ ಚಟಕ್ಕೆ ಬೀಳುತ್ತಿರುವುದರ ಲಕ್ಷಣ ಇದು. ಶಿಕ್ಷಕರು ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಇಂಥ ಬೆಳವಣಿಗೆಯನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಮಾತ್ರವಲ್ಲ, ಈ ಬಗ್ಗೆ ಆಯಾ ಪೋಷಕರ ಗಮನಕ್ಕೆ ತರುವುದಕ್ಕೂ ಸಾಧ್ಯವಿದೆ. ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮೊಬೈಲ್ ಗೀಳಿಗೆ ಬೀಳದಂತೆ ನೋಡಿಕೊಳ್ಳಬೇಕಾದ ಅಗತ್ಯ ಹೆತ್ತವರು ಮತ್ತು ಶಿಕ್ಷಕರ ಮೇಲಿದೆ. ಆರಂಭದಲ್ಲೇ ಈ ಬಗ್ಗೆ ನಿಗಾ ವಹಿಸಿದರೆ, ದೊಡ್ಡ ಫಲಿತಾಂಶ ಲಭ್ಯವಾದೀತು.

ಹೆಣ್ಣನ್ನು ದೈವತ್ಯಕ್ಕೆ ಏರಿಸಿರುವ ದೇಶದಲ್ಲಿ ಹೆಣ್ಣನ್ನು ಅತ್ಯಂತ ಅಪಾಯಕಾರಿಯಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ನಾಚಿಕೆ ಪಟ್ಟುಕೊಳ್ಳಬೇಕಾದ ಸಂಗತಿ. ಡಿಜಿಟಲ್ ಜಗತ್ತೊಂದೇ ಇದಕ್ಕೆ ಕಾರಣವಲ್ಲ, ಪುರುಷ ಜಗತ್ತಿನ ಅಹಂಕಾರ, ಮೇಲರಿಮೆ ಮತ್ತು ತೋಳುಬಲವೂ ಇದಕ್ಕೆ ಕಾರಣ. ಉನ್ನತ ಶಿಕ್ಷಣ ಪಡೆದವರೇ ಹೆಣ್ಣಿನ ಮೇಲೆ ಹಿಂಸೆಯೆಸಗುತ್ತಿದ್ದಾರೆ. ಶಿಕ್ಷಿತ ಮಂದಿಯೇ ಅತ್ಯಾಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಧರ್ಮವನ್ನು ಅರೆದು ಕುಡಿದವರು ಮತ್ತು ನೆಲದ ಕಾನೂನನ್ನು ಬಲ್ಲವರೇ ಹೆಣ್ಣನ್ನು ಇನ್ನಿಲ್ಲದಂತೆ ಕಾಡಿಸಿ ಪೀಡಿಸುತ್ತಾರೆ. ಶಿಕ್ಷಕರೇ ಶಿಕ್ಷಕಿಯ ಮೇಲೆ ಹಿಂಸೆ-ದೌರ್ಜನ್ಯ ಮತ್ತು ಅತ್ಯಾಚಾರ ಎಸಗುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲೇ ಮಹಿಳಾ ಪೊಲೀಸರ ಮೇಲೆ ಲೈಂಗಿಕ ಹಿಂಸೆಯಾಗುತ್ತಿದೆ. ಕ್ರೀಡಾರಂಗವನ್ನೂ ಈ ಕ್ರೌರ್ಯ ಬಿಟ್ಟಿಲ್ಲ. ವೈದ್ಯಕೀಯ ರಂಗದಲ್ಲೂ ಹೆಣ್ಣು ಸುರಕ್ಷಿತಳಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹೆಣ್ಣು ಸವಾಲುಗಳನ್ನು ಎದುರಿಸುತ್ತಾ ಅಸುರಕ್ಷಿತ ಭಾವದಲ್ಲೇ ಬದುಕುತ್ತಿದ್ದಾಳೆ. ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರ ಮೇಲೆಯೇ ವರ್ಷಗಳ ಹಿಂದೆ ಲೈಂಗಿಕ ಹಿಂಸೆಯ ಆರೋಪ ಕೇಳಿಬಂದಿತ್ತು.

ಹೆಣ್ಣನ್ನು ಅಸುರಕ್ಷಿತಾವಸ್ಥೆಯಲ್ಲಿಟ್ಟು ಯಾವ ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವ ದೇಶದಲ್ಲಿ ಸುಖ-ನೆಮ್ಮದಿ ನೆಲೆಸಲೂ ಸಾಧ್ಯವಿಲ್ಲ. ಯಾವುದೇ ದೇಶ ಮಹಿಳಾ ಸ್ನೇಹಿಯಾದರೆ ಅದು ಸರ್ವರಿಗೂ ಸುರಕ್ಷಿತ ಎಂದು ಗುರುತಿಸಿಕೊಳ್ಳುತ್ತದೆ. ಈ ದೇಶವನ್ನು ಸದ್ಯ ಮಹಿಳಾ ಸ್ನೇಹಿಯಾಗಿ ಪರಿವರ್ತಿಸುವ ಅಗತ್ಯವಿದೆ. ಅದಕ್ಕೆ ಬೇಕಾದ ತುರ್ತು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಯಾವುದೇ ಪುರುಷನ ಹುಟ್ಟಿನಲ್ಲಿ ಓರ್ವ ಹೆಣ್ಣಿನ ಪಾತ್ರವಿದೆ. ಈ ಭೂಮಿಯಲ್ಲಿ ನಾವಿರುವುದು ಓರ್ವ ಹೆಣ್ಣಿನ ಔದಾರ್ಯದಿಂದಾಗಿ. ಆಕೆ ಬಯಸದೆ ಇದ್ದರೆ ಒಂದು ನರಪಿಳ್ಳೆಯೂ ಈ ಭೂಮಿಯಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಈ ಭೂಮಿಯನ್ನು ಮನುಷ್ಯರಿಂದ ತುಂಬಿಸುವ ಹೆಣ್ಣಿನ ಬಗ್ಗೆ ನಿಷ್ಕಾಳಜಿ ಮತ್ತು ಅಗೌರವ ಎಂದೂ ಸಲ್ಲದು. ಹೆಣ್ಣು ಎಷ್ಟು ಅಮೂಲ್ಯ ಎಂಬ ಪಾಠವನ್ನು ಎಳವೆಯಲ್ಲೇ ಮಕ್ಕಳಿಗೆ ಮನೆ ಮತ್ತು ಶಾಲೆಯಲ್ಲಿ ವಿವರಿಸುವ ಕೆಲಸಗಳಾಗಬೇಕು. ಹೆಣ್ಣಿನ ಮೇಲೆ ಹಿಂಸೆಯೆಸಗುವುದರನ್ನು ಅಪರಾಧವಾಗಿ ಮತ್ತು ಧರ್ಮ ವಿರೋಧಿಯಾಗಿ ಮಕ್ಕಳ ಮನಸ್ಸಲ್ಲಿ ದೃಢವಾಗಿ ಮೂಡಿಸಬೇಕು. ಜೊತೆಗೇ ಸ್ಮಾರ್ಟ್ ಫೋನ್‌ಗಳನ್ನು ಬಳಸುವ ಬಗ್ಗೆಯೂ ಮಕ್ಕಳಲ್ಲಿ ತಿಳುವಳಿಕೆಯನ್ನು ಉಂಟು ಮಾಡಬೇಕು. ಪ್ರೀತಿ-ಪ್ರೇಮಗಳ ಇತಿ-ಮಿತಿ, ಅಗತ್ಯ-ಅನಗತ್ಯಗಳನ್ನು ತಿಳಿಹೇಳುವ ಕೆಲಸಗಳೂ ಆಗಬೇಕು.