ಗೋ ಆಶ್ರಮದಲ್ಲಿ ದನಗಳು ಸತ್ತ ಘಟನೆ: ಉತ್ತರ ಪ್ರದೇಶದಲ್ಲಿ ಎಂಟು ಅಧಿಕಾರಿಗಳ ಅಮಾನತು

0
546

ಲಕ್ನೊ, ಜು. 15: ಅಯೋಧ್ಯೆಯಲ್ಲಿ ಮತ್ತು ಮಿರ್ಝಾಪುರದಲ್ಲಿ ಗೋ ಸಂರಕ್ಷಣಾ ಕೇಂದ್ರದಲ್ಲಿ ದನಗಳು ಸತ್ತ ಘಟನೆಯಲ್ಲಿ ಉತ್ತರಪ್ರದೇಶ ಸರಕಾರ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಸರಕಾರಿ ಗೋ ಆಶ್ರಮದಲ್ಲಿ ಹಲವಾರು ಜಾನುವಾರುಗಳು ಮೇವಿಲ್ಲದೆ ಹಸಿದು ಮತ್ತು ಅನಾರೋಗ್ಯದಿಂದ ಸತ್ತಿದ್ದವು. ನಂತರ ನಡೆಸಲಾದ ತನಿಖೆಯಲ್ಲಿ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ರಾಜ್ಯದ ಇತರ ಗೋ ಆಶ್ರಮಗಳ ನಿರ್ವಾಹಕರಿಗೂ ಸರಕಾರ ಎಚ್ಚರಿಕೆ ನೀಡಿದೆ.

ಮದ್ಯಕ್ಕೆ ಹೆಚ್ಚು ತೆರಿಗೆ ವಿಧಿಸಿ ಆ ಹಣದಿಂದ ಗೋವುಗಳನ್ನು ಸಂರಕ್ಷಿಸಲು ಯೋಗಿ ಆದಿತ್ಯನಾಥ ಸರಕಾರ ತೀರ್ಮಾನಿಸಿತ್ತು. ಯೋಗಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಗೋ ಆಶ್ರಮಗಳನ್ನು ಸ್ಥಾಪಿಸಲಾಗಿತ್ತು. ಇತ್ತೀಚೆಗೆ ಪ್ರಯಾಗ್‍ರಾಜ್‍ನ ಗೋಆಶ್ರಮದಲ್ಲಿ ವಿದ್ಯುತ್ ಅವಘಡದಿಂದ 30 ದನಗಳು ಸತ್ತು ಹೋಗಿತ್ತು.