ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅಥವಾ ಎಸ್ಐಆರ್ ನಡೆಯುತ್ತಿದ್ದು ಅದರ ಅವಾಂತರಗಳನ್ನು ಎನ್ಡಿ ಟಿವಿ ಬಹಿರಂಗಕ್ಕೆ ತಂದಿದೆ. ಸಿಪಿಐಎಂ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಂಸದ ಮೊಹಮ್ಮದ್ ಸಲೀಂ ಮತ್ತು ಅವರ ಮಗ ಅಝೀ ಝ್ ಅವರನ್ನು ಬ್ರಾಹ್ಮಣರೆಂದು ಗುರುತಿಸಿದೆ. ಇವರಿಬ್ಬರಿಗೂ ಬ್ರಾಹ್ಮಣರ ಸರ್ ನೇಮ್ ಆಗಿರುವ ಅವಸ್ಥಿ ಎಂಬ ಹೆಸರನ್ನು ಕೊಟ್ಟು ಎಡವಟ್ಟು ಮಾಡಿದೆ.
ಚುನಾವಣಾ ಆಯೋಗವು ನನ್ನನ್ನು ಮತ್ತು ನನ್ನ ತಂದೆಯನ್ನು ಬ್ರಾಹ್ಮಣರನ್ನಾಗಿ ಮಾಡಿದೆ ಎಂದು ಅಝೀ ಝ್ ಅವರು ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಇದರ ಜೊತೆಗೆ ತನ್ನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನನ್ನ ತಂದೆ ದಶಕಗಳಿಂದ ರಾಜಕೀಯದಲ್ಲಿದ್ದಾರೆ. ನಮ್ಮ ಬಗ್ಗೆಯೇ ಇಷ್ಟೊಂದು ತಪ್ಪುಗಳು ನಡೆಯಬಹುದಾದರೆ ಉಳಿದವರ ವಿಷಯ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಚುನಾವಣಾ ಆಯೋಗವು ಎಸ್ಐಆರ್ ಅನ್ನು ತೀರ ಉದಾಸೀನ ಭಾವದಿಂದ ನೋಡುತ್ತಿದೆ ಎಂಬುದಕ್ಕೆ ನಾನೇ ಸಾಕ್ಷಿ. ಅದು ಈ ಅಭಿಯಾನಕ್ಕೆ ಸರಿಯಾದ ತಯಾರಿಯನ್ನೇ ನಡೆಸಿಲ್ಲ ಅನ್ನುವುದನ್ನು ನಮ್ಮ ಬೆಳವಣಿಗೆ ಸೂಚಿಸುತ್ತದೆ ಎಂದು ಸಲೀಂ ಅವರು ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯ ಮೊದಲ ಪಟ್ಟಿಯನ್ನು ಚುನಾವಣಾ ಆಯೋಗವು ದಿನದ ಹಿಂದೆ ಬಿಡುಗಡೆಗೊಳಿಸಿತ್ತು . ಒಟ್ಟು 58 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. 24 ಲಕ್ಷ ಮತದಾರರನ್ನು ಸಾವಿಗೀಡಾಗಿದ್ದಾರೆ ಎಂದು ಘೋಷಿಸಲಾಗಿದೆ. 19 ಲಕ್ಷ ಮಂದಿ ಶಾಶ್ವತವಾಗಿ ಬೇರೆಡೆಗೆ ಶಿಫ್ಟ್ ಆಗಿದ್ದಾರೆ. 12 ಲಕ್ಷ ಮಂದಿ ಕಾಣೆಯಾಗಿದ್ದಾರೆ ಎಂದು ಮೊದಲ ಪಟ್ಟಿಯಲ್ಲಿ ತಿಳಿಸಲಾಗಿದೆ.












