ಸನ್ಮಾರ್ಗ ವಾರ್ತೆ
ಕೊಲ್ಕತಾ: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತಾನು ನಂದಿಗ್ರಾಮದಲ್ಲಿ ಸ್ಪರ್ಧಿಸದಿದ್ದರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲಿ ಸೋಲನುಭವಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಸುವೇಂದು ಅಧಿಕಾರಿ ಹೇಳಿದ್ದಾರೆ.
ನಂದಿಗ್ರಾಮ ಸುವೇಂದು ಅಧಿಕಾರಿಯವರ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿಂದ ತಾನು ಚುನಾವಣೆಗೆ ಸ್ಪರ್ಧಿಸುವೆ ಎಂದು ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಬಿಜೆಪಿ ಇಲ್ಲಿಂದ ಸ್ಪರ್ಧಿಸಲು ಆಯ್ಕೆ ಮಾಡಿದರೂ ಇಲ್ಲದಿದ್ದರೂ ನಂದಿಗ್ರಾಮ ಮಮತಾರನ್ನು ಸೋಲಿಸಲಿದೆ. ಅದು ತನ್ನ ಜವಾಬ್ದಾರಿ ಎಂದು ಸುವೇಂದು ಅಧಿಕಾರಿ ಹೇಳಿದರು.
ತೃಣಮೂಲ ಕಾಂಗ್ರೆಸ್ ಶಾಸಕರಾಗಿದ್ದ ಸುವೇಂದು ಅಧಿಕಾರಿ ವಿಧಾನಸಭಾ ಚುನಾವಣೆಯ ಸಮೀಪಿಸುತ್ತಿದ್ದಂತೆ ಬಿಜೆಪಿ ಸೇರಿದ್ದಾರೆ. ನಂತರ ನಂದಿಗ್ರಾಮದಿಂದ ತಾನು ಸ್ಪರ್ಧಿಸುವೆ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇದುವರೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಮಮತಾ ಬ್ಯಾನರ್ಜಿಯವರ ವಿರುದ್ಧ ಬಿಜೆಪಿ ಸುವೇಂದು ಅಧಿಕಾರಿಯವರನ್ನು ರಂಗಕ್ಕಿಳಿಸಲಿದೆಯೇ ಎಂದು ಕಾದು ನೋಡಬೇಕಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೃಣಮೂಲ ಕಾಂಗ್ರೆಸ್ನ ಮುಖ್ಯ ಪ್ರತಿಸ್ಪರ್ಧಿಯಾಗಿ ಮೇಲೆದ್ದು ಬಂದಿತ್ತು. 42 ಲೋಕಸಭಾ ಚುನಾವಣೆಯಲ್ಲಿ 18 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ 200 ಸೀಟುಗಳನ್ನು ಗೆದ್ದಿದ್ದರು. ಮಮತಾರ ಹತ್ತು ವರ್ಷದ ಆಡಳಿತ ಕೊನೆಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಮಾರ್ಚ್ 4ರಂದು ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಫ್ ಘೋಷ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ಕ್ಕೆ ಆರಂಭವಾಗಿ ಎಪ್ರಿಲ್ 29ಕ್ಕೆ ಚುನಾವಣೆ ಕೊನೆಗೊಳ್ಳಲಿದೆ. ಮೇ ಎರಡಕ್ಕೆ ಮತ ಎಣಿಕೆ ನಡೆಯಲಿದೆ.












