ಬೆಂಗಳೂರಿನ ಬಿಫ್ಟ್ ನಲ್ಲೊಂದು ಸಂಜೆ

0
1022

ಅಕ್ಬರ್ ಅಲಿ, ಬೆಂಗಳೂರು

ಬಿಫ್ಟ್ ನಲ್ಲಿ ಪ್ರತಿ ತಿಂಗಳು ಮೊದಲನೇ ಶನಿವಾರ ಪ್ರೊಫೆಶನಲ್ಸ್ ಮೀಟ್ ಕಾರ್ಯಕ್ರಮ ವಿರುತ್ತದೆ. ಇತ್ತೀಚೆಗೆ ರಮಝಾನ್ ಬಗ್ಗೆ ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ಪ್ರೊಫೆಶನಲ್ಸ್ (ವೃತ್ತಿಪರರು)ಗಳಿಗೆ ರಮಝಾನ್ ತಿಂಗಳಲ್ಲಿ ದೇವನನ್ನು ಕೊಂಡಾಡುವಂತೆ, ಆತನೆಡೆಗೆ ಕೇಂದ್ರೀಕೃತಗೊಂಡು ದೇವಭಯವನ್ನು ರೂಢಿಸಿ ಕೊಳ್ಳುವಂತೆ ಪ್ರವಚನಕಾರರು ಕರೆ ನೀಡಿದರು. ಪ್ರವಚನಕಾರರು ಓರ್ವ ಬದ್ಧತೆ ಇರುವ ಸಾಮಾಜಿಕ ದುರೀಣರಿದ್ದು, ಆಹೋರಾತ್ರಿ ಜಮಾಅತೆ ಇಸ್ಲಾಮೀ ಸಂಘಟನೆಯ ವಕ್ತಾರರಾಗಿ ದುಡಿಯುತ್ತಿದ್ದಾರೆ. ಅವರು ಈ ರೀತಿ ಕರೆ ನೀಡುವಾಗ ಕೆಲವೊಂದು ವಾಸ್ತವಗಳು ಎಲ್ಲೋ ಮರೆಯಾಗಿ ಅಣಕಿಸುತ್ತಿವೆ ಎಂಬುದನ್ನು ನಾನವರಿಗೆ ನೆನಪಿಸ ಬಯಸಿದರೂ, ಇದರಿಂದಾಗಿ ಅಲ್ಲಿರುವವರ ಶ್ರದ್ಧೆ, ಆತ್ಮಸ್ಥೈರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಲಿ ಎಂಬ ಆಲೋಚನೆಯೊಂದಿಗೆ ಸುಮ್ಮನಾದೆ. ಸಚಿವಾಲಯದಲ್ಲಿ ರಮಝಾನ್ ವ್ರತದೊಂದಿಗೆ ಕಛೇರಿ ತಲಪುವಾಗ ಅಲ್ಲಿ ರೂಟೀನ್ ಆಗಿ ಎದುರಿಸ ಬೇಕಾದ ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ಒಂದೊಂದಾಗಿ ಕಲೆ ಹಾಕಿ ಎದುರಿಸುವಷ್ಟರಲ್ಲೇ ಸಂಜೆ ಹೊತ್ತಿಗೆ ಉಪವಾಸ ವ್ರತದ ಸ್ಫೂರ್ತಿ ಮಂಜಾಗಿರುತ್ತದೆ! ಅಂದರೆ, ನಾವಿರುವ ಪ್ಲೂರಲ್ ಸೊಸೈಟಿಯಲ್ಲಿ ಕೆಲವರು ಉಪವಾಸವಿರುವುದು, ಹೆಚ್ಚಿನವರು ಇಲ್ಲದೇ ಇರುವುದು ಎಂಬಂತಹ ಪರಿಸರದಲ್ಲಿ ಇದು ವ್ಯತಿರಿಕ್ತ ಪ್ರಭಾವ ಉಂಟು ಮಾಡಬಲ್ಲುದು ಎಂಬುದು ವಾಸ್ತವ. ಹಾಗಿರುವಾಗ ಇಂಥ ಪ್ರವಚನ ಬರೀ ಕಸ್ಟಮ್ (custom) ಆಗಿ ತೋರಿ ಬರುತ್ತದೆಯೇ ವಿನಃ, ಅದರ ನ್ಯಾಯಯುತ ಗುರಿ ಸಾಧನೆಗೆ ಹೆಚ್ಚಿನ ಸಂದರ್ಭಗಳಲ್ಲಿ ಅವಕಾಶ ಶಿಥಿಲವಾಗಿ ನಿಲ್ಲುತ್ತದೆ! ಹಾಗಿದ್ದರೆ, ಕೆಲವೊಂದು ಶ್ರೀಮಂತ ಅಥವಾ ಸಾಫ್ಟ್ ವೇರ್ ಕಂಪೆನಿಯಲ್ಲಿರುವವರಿಗೆ ತಮ್ಮ ಶೆಡ್ಯೂಲ್‍ಗಳನ್ನು ಬದಲಿಸಿಕೊಳ್ಳುವ ಅವಕಾಶವಿದ್ದಲ್ಲಿ, ಸ್ವಲ್ಪ ಅನುಕೂಲಕರವಾಗಿ ಪರಿಣಮಿಸಬಹುದೋ ಏನೋ? ಅಂತೂ ಬಹುಜನ ಸಮಾಜದ ರೂಪರೇಷೆಯಲ್ಲಿ ರಮಝಾನನ್ನು ಆಚರಿಸಿಕೊಂಡು ಹೋಗಬಹುದೇ ವಿನಃ ಅದನ್ನು ಗುರಿ ಸಾಧನೆ ಇತ್ಯಾದಿಗಳಿಗೆ ಸಮಪರ್ಕವಾಗಿ ಬಳಸಿಕೊಳ್ಳುವುದು ಅಷ್ಟೊಂದು ಸುಲಭ ಸಾಧ್ಯವಲ್ಲವೆಂದು ಪ್ರಾಯೋಗಿಕವಾಗಿ ನಮಗೆ ತಿಳಿದಿರಬೇಕಾದ ವಾಸ್ತವ. ಹಾಗಿದ್ದಲ್ಲಿ, ಹೆಚ್ಚಿನವರಿಗೆ ಅಂದರೆ ಸರಕಾರಿ ಅಥವಾ ಖಾಸಗಿ ರಂಗದಲ್ಲಿ ಉದ್ಯೋಗದಲ್ಲಿರುವವರಿಗೆ ರಮಝಾನ್ ಗುರಿ ಸಾಧನೆಗೆ ಅವಕಾಶವಿಲ್ಲವೆನ್ನಬೇಕೆ? ಬಹು ಜನ ಸಮಾಜದ ಆಗುಹೋಗುಗಳನ್ನು ನಿರ್ಲಕ್ಷಿಸಿ, ತೀರಾ ನಿರ್ಲಿಪ್ತನಾಗಿ ಇದು ಸಾಧ್ಯವೆಂಬ ರೀತಿಯಲ್ಲಿ ಹೆಜ್ಜೆ ಇಟ್ಟಲ್ಲಿ “ಮುಸ್ಲಿಮ್ ಲೆದಾರ್ಜಿ (Muslim lethargy) ಅಥವಾ ಇವರು ಮೈಗಳ್ಳರು ಅಥವಾ ಪಲಾಯನವಾದಿಗಳು (Escapists) ಎಂಬಂತಹ ಆರೋಪಗಳಿಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ರಮಝಾನ್‍ನಲ್ಲೂ ರೂಟೀನ್ ಆಗಿ ಅಥವಾ ಹೆಚ್ಚಿನ ಅವಕಾಶದೊಂದಿಗೆ ಸಹೋದರ ಬಾಂಧವರಲ್ಲಿ ಸಂವಹನ ಕಾರ್ಯವನ್ನು ಮುಂದುವರಿಸುತ್ತಾ, ಶಕ್ತಿ ಮೀರಿ ಸಂವಹನ, ಸಂಧಾನದ ಚರ್ಚೆಗಳು ಹೆಚ್ಚು ಸಂದರ್ಭೋಚಿತ ಅಥವಾ ಸಮಯೋಚಿತ ಎನ್ನಬಹುದು. ಮುಸ್ಲಿಮರಲ್ಲಿ ಗೆಟ್ಟೊ ಮೆಂಟಾಲಿಟಿ (Ghetto mentality) ಉಂಟು ಮಾಡುವ ಮಾತುಗಳು, ಅಂದರೆ ಅವರನ್ನು ಎಕ್ಸ್ ಕ್ಲೂಸಿವ್ ಮಾಡುವಂತಹ ಮಾತುಗಳು ಇನ್ನಷ್ಟು ಹಿಂದಕ್ಕೆ ತಳ್ಳಬಹುದೋ? ಎಂಬ ಆತಂಕ ಮೂಡಿ ಬರುತ್ತದೆ. ಜೊತೆಗೆ ಅವು ಕುರ್‍ಆನ್‍ನ ಆಶಯಕ್ಕೆ ವಿರುದ್ಧವಾಗಿದೆ. ಅಂದರೆ ರಮಝಾನ್ ತಿಂಗಳಲ್ಲಿ ಸಂಪೂರ್ಣ ಮಾನವತೆಗೆ ಮಾರ್ಗದರ್ಶನವಾಗಿ ಬಂದಂತಹ ಕುರ್‍ಆನನ್ನು ಕೇವಲ ಮುಸ್ಲಿಮರೇ ಓದಿ, ಇನ್ನಷ್ಟು ಓದಿದರೆ, ಆ ಪ್ರಕ್ರಿಯೆಯಿಂದ ಇತರರಿಗೆ ಎಲ್ಲಿಯ ದೀಪ ಬೆಳಗೀತು ಎಂಬುದನ್ನು ಪುನರಾವಲೋಕಿಸಬೇಕಾಗಿದೆ. ಮುಂದುವರೆದು ಪ್ರವಚನಕಾರರು, ಅರೆಬಿಕ್ ಭಾಷೆಯ ಸೌಂದರ್ಯದ ಬಗ್ಗೆ, ಅದರ ಮಾಧುರ್ಯದ ಬಗ್ಗೆ ಹಾಗೂ ದೇವನಲ್ಲಿ ಅವಿನಾಭಾವದಿಂದ ಪ್ರಾರ್ಥಿಸುವ ಬಗ್ಗೆ, ದುವಾಗಳ ವೈಶಿಷ್ಟ್ಯದ ಬಗ್ಗೆ ಗಮನ ಸೆಳೆದರು. ಅರೆಬಿಕ್ ಭಾಷೆ ಖಂಡಿತವಾಗಿ ಅರಬರಿಗೆ ಅಭಿಮಾನ. ಅವರದೇ ಭಾಷೆಯೆಂಬ ನೆಲೆಯಲ್ಲಿ ಅವರ ಪ್ರತಿಯೊಂದು ಭಾವನೆಯ ಕಣ ಕಣದಲ್ಲೂ ತಲ್ಲಣ ಮೂಡಿಸುತ್ತದೆ. ಅಷ್ಟೊಂದು ದೈವಿಕ ಪ್ರತೀಕವನ್ನು ಹೊಂದಿದ್ದರೂ, ಭಾರತೀಯರಿಗೆ ಅಜ್ಞಾತವಾಗಿ ಉಳಿಯಲು ಕಾರಣ ಈ ಭಾಷೆಯನ್ನು ನಮ್ಮಲ್ಲಿ Popularaise ಮಾಡದೆ ಇದ್ದುದ್ದು. ಇದನ್ನು ಕೆಲವು ಹಿತಾಸಕ್ತಿಗಳು ಬರೀ ಸ್ವರ ಮಾಧುರ್ಯದ ಅಸ್ವಾದವಾಗಿ (ಸಂಸ್ಕೃತ ಭಾಷೆಯಂತೆ ಎಂದು ಹೇಳಬಹುದೆ?) ಹೊರತು ಕೈಗೆಟುಕದ ರೀತಿಯಲ್ಲಿ ಬಳಸಿಕೊಂಡರು. ಅರೆಬಿಕ್ ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವ ಬಹಳಷ್ಟು ಜನ ಹಿಂದೂಗಳಿದ್ದಾರೆ. ಆದರೆ ಮುಸ್ಲಿಮರು ಬರೀ ಇದನ್ನು ದೈವಿಕ ಮಂತ್ರ ದಂಡದಂತೆ ಉಪಯೋಗಿಸುತ್ತಾ ಬಂದಿರುವುದು ಈ ದೇಶದ ದೊಡ್ಡ ದುರಂತವೆನ್ನದೆ ನಿರ್ವಾಹವಿಲ್ಲ. 1995ರಲ್ಲಿ ನಾನು ಉದ್ಯೋಗ ನಿಮಿತ್ತ ಸೌದಿ ಅರೇಬಿಯಕ್ಕೆ ತೆರಳಿದ್ದಾಗ, ಅರೆಬಿಕ್ ಭಾಷಾ ಜ್ಞಾನವಿರಬೇಕೆಂದಾಗ, ಕೈಗೆಟುಕುವಂತೆ ದೊರೆತದ್ದು ಶ್ರೀ ಪಂಡಿತ ವಿಶಾರದ ಗಣೌತೆ ಇವರು ರಚಿಸಿದ Learn Arabic through English ಎಂಬ ಪುಸ್ತಕ (ಪ್ರಕಟನೆ ಬಾಲಾಜಿ ಪಬ್ಲಿಕೇಶನ್ ಚೆನ್ನೈ). ಅಲ್ಲಲ್ಲಿ ಅರೆಬಿಕ್ ಭಾಷಾ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಲ್ಲಿ ಪ್ರಾಯಶಃ ಈ ಭಾಷೆಯ ಅಂತರ್ ಚೈತನ್ಯವನ್ನು ಇಲ್ಲಿನ ಸಹೋದರ ಸಹೋದರಿಯರು ಗಳಿಸಿಕೊಳ್ಳುವಂತೆ ಆಗುತ್ತಿತ್ತೋ ಏನೊ? ಎಷ್ಟೋ ಮಂದಿ ಗಲ್ಫ್ ದೇಶದಲ್ಲಿರುವ ನಮ್ಮ ಹಿಂದೂ, ಕ್ರೈಸ್ತ ಸಹೋದರ/ಸಹೋದರಿಯರು ಅರೆಬಿಕ್ ಭಾಷಾ ಜ್ಞಾನವನ್ನು ಹೊಂದಿರುತ್ತಾರೆಂದು ನಮಗೆ ಇನ್ನೂ ಭಾಸವಾಗದ ವಿಚಾರ. ಉದಾಹರಣೆಗೆ, ನಾವು ಮಣಿಪಾಲಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ರೆಸ್ಟಾರೆಂಟ್ ಒಂದರಲ್ಲಿ ಓರ್ವ ಬಿಲ್ಲವರು ಅರೆಬಿಕ್ ಚೆನ್ನಾಗಿ ಮಾತನಾಡಿದರು. ಏತಕ್ಕಾಗಿ ಅರೆಬಿಕ್ ಭಾಷೆ ನಮಗೆ ಪ್ರಸ್ತುತವಾಗಬೇಕು? ಸರ್ವಶಕ್ತನಾದ ದೇವನು ಮಾನವತೆಯ ಕೊನೆಯ ಪ್ರವಾದಿಯೊಂದಿಗೆ ಸಂಭಾಷಿಸಿದ ಹಾಗೂ ಮಾನವತೆಯ ವಿಮೋಚನೆಗೆ ಸತ್ಯ ನ್ಯಾಯದ ಸ್ಥಾಪನೆಗಾಗಿ ನೀಡಿದ ಚಿರಂತನ ಮೌಲ್ಯಗಳು ಅರೆಬಿಕ್ ಭಾಷೆಯಲ್ಲಿದೆ ಹಾಗೂ ಇಂದಿಗೂ ಮಧ್ಯಪ್ರಾಚ್ಯದ ದೇಶಗಳಲ್ಲಿ ಜೀವಂತವಿರುವ ಭಾಷೆಯಾಗಿದೆ. ಈ ಭಾಷೆಯನ್ನು ಪಾಶ್ಚಾತ್ಯ ವಿದ್ವಾಂಸರು ದೈವಿಕ ಭಾಷೆ ಎಂದು ಸಾರಿರುವ ಬಗ್ಗೆ ಲೇಖನವನ್ನು `ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದಲ್ಲಿ ಓದಿದ ನೆನಪಿದೆ. ಕುರ್‍ಆನನ್ನು ಬೆಸೆಯಲ್ಪಟ್ಟಿರುವ ಅಪ್ರತಿಮ ಬುದ್ಧಿಮತ್ತೆ ಹಾಗೂ ಜೊತೆಗೆ ಸೇರಿರುವ ಕಾಲ್ಪನಿಕ ಮೆರುಗುಗಳು ಮಾನವತೆಗೆ ಮಾರ್ಗದರ್ಶನದ ಜೊತೆಗೆ ಪರೀಕ್ಷಾರ್ಥದ ಹೊನಲುಗಳಿಂದ ಹೊರ ಹೊಮ್ಮುತ್ತವೆ. ಆದ್ದರಿಂದಲೇ ಪ್ರಾಮಾಣಿಕ ಬುದ್ಧಿ ಜೀವಿಗಳು ಇದರಿಂದ ಉದ್ಬುದ್ಧರಾದರೆ ಹೃದಯದಲ್ಲಿ ಹೃದಯವಂತಿಕೆಯನ್ನು ಬದಿಗಿಟ್ಟವರಿಗೆ ಇದೊಂದು ನಿಗೂಢ ಅಥವಾ ನಿರರ್ಥಕ ನಿನಾದದಂತೆ ತೋರುತ್ತಿದೆಯೇನೋ? ಪ್ರವಚನಕಾರರು ಅರೆಬಿಕ್‍ನಲ್ಲಿ ರಮಝಾನ್ ಯಾವ ರೀತಿ ಒಳಿತಿನ ಹೊನಲುಗಳನ್ನು ಮಾನವತೆಗೆ ಧಾರೆ ಎರೆಯಲು ಸನ್ನದ್ಧವಾಗಿದೆ ಎಂದು ವಿಸ್ತೃತವಾಗಿ ಉದಾಹರಣೆಗಳೊಂದಿಗೆ ವಿವರಣೆ ನೀಡುವುದರ ಜೊತೆಗೆ, ನಾವು ಅದೇಕೆ ಇನ್ನೊಂದೆಡೆ ಬನೀ ಇಸ್ರಾಯೀಲ್ ಜನಾಂಗದ ತರಹ ಕುಸಿದು ಹೋಗಿದ್ದೇವೆ ಎಂದು ಜ್ಞಾಪಿಸಿದರು. ನಮ್ಮಲ್ಲಿ ಒಳಿತು ಮಾಯವಾಗಿ, ಅಶಿಸ್ತು, ಅಪ್ರಬುದ್ಧತೆ, ಆಲಸ್ಯ ಹಾಗೂ ಅಪ್ರಾಮಾಣಿಕತೆ ಮನೆ ಮಾಡಿದೆ ಎನ್ನಲು ಬೇಸರವಾಗಿದೆ ಎಂದು ತೋಡಿಕೊಂಡರು. ಒಳಿತನ್ನು ಪುನರ್‍ಜೀವನಗೊಳಿಸಿ, ವಿಲಾಸದ ಜೀವನವನ್ನು ಬದಿಗೊತ್ತಿ ತ್ಯಾಗ ಬಲಿ ದಾನದ ಮೂಲಕ ನಮ್ಮ ಸ್ಥಾನವನ್ನು ಪುನರ್‍ಗಳಿಸಬೇಕು ಎಂಬುದಾಗಿ ಅವರು ಕರೆ ನೀಡಿದರು.

ಹೌದು, ನಾವು ಕನ್ನಡಿಗರಿಗೆ ಅರೆಬಿಕ್ ವಿನಾದದ ಹೊನಲುಗಳನ್ನು, ಅಂದರೆ ಕುರ್‍ಆನ್ ಪ್ರಸ್ತುತ ಪಡಿಸು ವಂತಹ ಗಹನವಾದ ಸರಳವಾದ ಸತ್ಯಗಳನ್ನು ಅವರಲ್ಲಿ ಅತ್ಯಂತ ಔದಾರ್ಯದೊಂದಿಗೆ ಧಾರೆ ಎರೆಯಬೇಕು. ಹೀಗಾಗಬೇಕಾದಲ್ಲಿ ಕುರ್‍ಆನ್‍ನ ಅಂತರ್ಯದ ಅಲೆಗಳು ನಮ್ಮ ನರನಾಡಿಗಳಲ್ಲಿ ಪ್ರವೇಶಿಸಬೇಕು. ನಮ್ಮ ಸಹೋದರರ ನೋವು ನಲಿವುಗಳು ನಮ್ಮದಾಗಬೇಕು. ಅವರ ಏಳು ಬೀಳುಗಳಲ್ಲಿ ನಮ್ಮ ಸಹಾಯಹಸ್ತವಿರಬೇಕು. ಅವರ ಏಳಿಗೆಯಲ್ಲಿ ನಮ್ಮ ಔದಾರ್ಯವಿರಬೇಕು. ದೇವನ ಆಗಾಧ ಕರುಣೆಯ ಹೊನಲುಗಳನ್ನು ಅವರು ದರ್ಶಿಸುವಂತಾಗಬೇಕು.

ರಮಝಾನ್ ತಿಂಗಳಲ್ಲಿ ಎಲ್ಲಾ ಒಳಿತುಗಳನ್ನು ಕ್ರೋಢೀಕರಿಸಿ ನಾವು ಎಷ್ಟೇ ಸಫಲರೆನಿಸಿದರೂ ಇದಕ್ಕಾಗಿ ದೇವನು ನಮಗೆ ಕೇವಲ ಇಂಟರ್‍ನಲ್ ಮಾಕ್ರ್ಸ್ ಮಾತ್ರ ನೀಡುವನೇ ವಿನಃ ನಂತರದ ದಿನಗಳಲ್ಲಿ ನಾವು ನಿರ್ವಹಿಸಬೇಕಾದ ಸಾಮಾಜಿಕ ಪರಿವರ್ತನೆ ಯಲ್ಲಿ ನಾವು ಪಾಸ್ ಆಗಬೆಕಿದೆ. ಅಂದರೆ ರಮಝಾನ್ ನಮ್ಮನ್ನು ಅಂತಹ ಸೋಶಿಯಲ್ ಇಂಜಿನಿಯರಿಂಗ್‍ಗೆ ಸನ್ನದ್ಧಗೊಳಿಸಬೇಕು. ಇಲ್ಲವಾದಲ್ಲಿ, ಸರ್ವಶಕ್ತನಾದ ದೇವನು ಪ್ರವಾದಿ ಯೂನುಸ್(ಅ)ರವರಿಗೆ ನೀಡಿದ ಉತ್ತರವನ್ನು ನಮಗೂ ನೀಡುವನು. “ನೀವು ಕಂಡ ಪರದೇಶದಲ್ಲಿ ಒಳ್ಳೆಯವರೆನಿಸಿ ಕೊಂಡವರು (20 ಶೇಕಡ ಅಥವಾ 25 ಶೇಕಡ) ಇದ್ದುದು ನಿಜ! ಆದರೆ ಅವರು ಸಮಾಜದಲ್ಲಿ ಉಂಟಾಗಿರುವ ಕ್ಷೋಭೆ ಹಾಗೂ ಕೆಡುಕುಗಳ ಬಗ್ಗೆ ನಿರ್ಲಿಪ್ತರಾಗಿರುವುದಕ್ಕೆ ನಾನು ಅವರನ್ನೇ ಬಲಿ ತೆಗೆದುಕೊಳ್ಳಬೇಕಾಯಿತು. ಅವರು ಯಾವುದೇ ರೀತಿಯ ಕ್ಷಮೆಗೆ ಅರ್ಹರಲ್ಲ, ಅವರ ನಿರ್ಲಿಪ್ತತೆಗಾಗಿಯೇ ನಾನು ಆ ಪ್ರದೇಶವನ್ನು ನಾಶಮಾಡಿದೆ.”

ಪ್ರಾಯಶಃ ಪ್ರವಚನಕಾರರು ಇದೇ ಸಂದೇಶವನ್ನು ನಮಗೆ ತಿಳಿಹೇಳಬಯಸಿದ್ದರು. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕಿದೆ.