ರಾಜಕೀಯ ಭಿನ್ನಾಭಿಪ್ರಾಯವಿದ್ದರೂ ಬಾವಾರ ಕೆಲಸಕ್ಕೆ ಸಾಥ್: ಹುಸೈನ್ ಕಾಟಿಪಳ್ಳ
ಸನ್ಮಾರ್ಗ ವಾರ್ತೆ
ಮಂಗಳೂರು: ಸುಮಾರು ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಡೆಗಳಲ್ಲಿ ಕೋವಿಡ್ ತುರ್ತು ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲು ಸಹಕಾರ ನೀಡಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಜನಪ್ರತಿನಿಧಿಗಳಿಗೆ ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ ಅಧಿಕಾರದಲ್ಲಿ ಇದ್ದರೂ ಇಲ್ಲದಿದ್ದರೂ ಸಾರ್ವಜನಿಕರ ಕಷ್ಟಕ್ಕೆ ಹೇಗೆ ಸ್ಪಂದಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ಕೋವಿಡ್ ನ ಈ ತುರ್ತು ಪರಿಸ್ಥಿತಿಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ರವರು ಅಧಿಕಾರ ಇಲ್ಲದಿದ್ದರೂ ತನ್ನ ಕ್ಷೇತ್ರ ವ್ಯಾಪ್ತಿಯ ಕಾಟಿಪಳ್ಳ, ಬೈಕಂಪಾಡಿ, ಅಡ್ಯಾರ್, ಗುರುಪುರ ಕೈಕಂಬ, ಉಳಾಯಿಬೆಟ್ಟು, ಗಂಜಿಮಠ, ನೀರು ಮಾರ್ಗ ಈ 7 ಕಡೆಗಳಲ್ಲಿ ತನ್ನ ಸ್ವಂತ ಖರ್ಚಿನಿಂದ ಕೋವಿಡ್ ತುರ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸರ್ವರ ಮನಸನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯವಿದ್ದರೂ ಕೂಡ ಕೊರೋನ ವೈರಸ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ರೂಮಿಲ್ಲದೆ, ಬೆಡ್ ಗಳಿಲ್ಲದೆ, ಆಕ್ಸಿಜನ್ ಇಲ್ಲದೆ ಪರದಾಡುತ್ತಿರುವ ಬಹಳ ಕಷ್ಟದ ಈ ದಿನಗಳಲ್ಲಿ ತನ್ನ ವಿರೋಧಿಗಳೂ ಕೊಂಡಾಡುವಂತಹ ಅತ್ಯಂತ ಶ್ರೇಷ್ಠವಾದ ಒಂದು ಪುಣ್ಯ ಕಾರ್ಯವನ್ನು ಮಾಜಿ ಶಾಸಕ ಮಾನ್ಯ ಬಿ.ಎ. ಮೊಹಿದಿನ್ ಬಾವಾರವರು ಮಾಡಿರುವ ಸೇವೆಯನ್ನು ಕಂಡಿದ್ದೇವೆ. ನಿಜವಾಗಿಯೂ ಇದು ಎಲ್ಲರೂ ಮೆಚ್ಚುವಂತಹ ಕೆಲಸ. ಆದರೂ ಕೆಲವರು ಇದು ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವುದು ಎಂಬ ಬಾಲಿಶ ಹೇಳಿಕೆ ನೀಡುತ್ತಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.
ಸುಮಾರು 30 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಹಣ ವ್ಯಯಿಸಿ ನಾಲ್ಕು ಜನರ ಜೀವ ಸಂಕಟಕ್ಕೆ ಸಮಾಧಾನವಾಗುವಂತಹ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾನು ಮತ್ತು ಮೊಹಿದಿನ್ ಬಾವಾ ರವರು ಒಂದೇ ಪಕ್ಷದಲ್ಲಿ ಸುಮಾರು 15 ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದವರು. ಕೆಲವೊಂದು ವಿಚಾರದಲ್ಲಿ ನಮ್ಮ ಮಧ್ಯೆಯೂ ಭಿನ್ನಾಭಿಪ್ರಾಯವಿತ್ತು. ಆದರೆ ಒಳ್ಳೆಯ ಕೆಲಸಕ್ಕೆ ನಾವು ಪ್ರೋತ್ಸಾಹ ನೀಡಲೇಬೇಕಾಗಿದೆ ಎಂಬ ನೆಲೆಯಲ್ಲಿ ಅವರ ಸೇವೆ ಶ್ಲಾಘನೀಯ ಎಂದು ಹೇಳಿದ್ದಾರೆ.
ಕಾಟಿಪಳ್ಳದಲ್ಲಿ ಆರಂಭವಾಗಿರುವ
ಕೋವಿಡ್ ಕೇರ್ ಸೆಂಟರ್ ನ ನಿರ್ವಹಣೆಯನ್ನು ನಮ್ಮ ಪಣಂಬೂರು ಮುಸ್ಲಿಂ ಜಮಾತ್ ಹಾಗೂ ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಾವು ಸಹಕಾರ ನೀಡುತ್ತಿದ್ದೇವೆ. ಜಮಾತಿನ ಅಧ್ಯಕ್ಷ ಅಹ್ಮದ್ ಬಾವಾ ಅಯ್ಯೂಬ್, ಉಪಾಧ್ಯಕ್ಷ ಅಹ್ಮದ್ ಮೋನುರವರ ಮಾರ್ಗದರ್ಶನದಲ್ಲಿ ನಮ್ಮ ಒಕ್ಕೂಟದ ಸಂಚಾಲಕರಾದ ಸೈಫುಲ್ಲಾ ರವರ ನೇತೃತ್ವದಲ್ಲಿ ಲತೀಫ್ ಕೆ.ಎಂ., ಬಾವಾ, ನಿಯಾಝ್, ಶಂಶೀರ್, ಮನ್ಸೂರ್, ಖಯ್ಯೂಮ್, ಉಮರ್ ಫಾರೂಕ್ ಪುತ್ತ, ಸಮೀರ್, ಪಿ.ಹೆಚ್. ಅಹ್ಮದ್, ಗಫೂರ್, ಹಸನ್, ಸಲ್ಮಾನ್, ಶರೀಫ್, ಲತೀಫ್, ಶಂಶೀರ್, ಮುಸ್ತಫಾ, ಶ್ಯಾಡೋ ಸಲೀಂ, ಶರೀಫ್ ಐಡಿಯಲ್, ವಾಸಿಂ ಮತ್ತು ಇನ್ನಿತರರು ಕೊರೋನ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಡಾಕ್ಟರ್ ಹುಸೈನ್ ಹಾಗೂ ಡಾಕ್ಟರ್ ಅಶೋಕ್ ವೈದ್ಯರಾಗಿದ್ದಾರೆ. ಎವ್ಲಿನ್ ಹಾಗೂ ಸ್ಟೆಲ್ಲಾ ಎಂಬವರು ನರ್ಸ್ ಗಳಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಶರೀಫ್ ಹಾಗೂ ಶರೀಫ್ ಎಲ್., ಆಂಬುಲೆನ್ಸ್ ಡ್ರೈವರ್ ಗಳಾಗಿ ಹಗಲಿರುಳು ಸಹಕರಿಸುತ್ತಿದ್ದಾರೆ. ಪಿ.ಎಫ್.ಐ.ಯ ಝೈನುದ್ದೀನ್ ಸಾನಿಟೈಝ್ ಮಾಡಿ ಸಹಕರಿಸುತ್ತಿದ್ದಾರೆ ಎಂದು ಹುಸೈನ್ ಕಾಟಿಪಳ್ಳ ಮಾಹಿತಿ ನೀಡಿದ್ದಾರೆ.
ಮೇ 17 ರಂದು ಖ್ಯಾತ ವೈದ್ಯರಾದ ಬಿ.ವಿ.ಮಂಜುನಾಥ್ ರವರು ಕೋವಿಡ್ ಸೆಂಟರ್ ಉದ್ಘಾಟನೆ ಮಾಡಿದ್ದರು. ಮರುದಿನ ಕೊರೋನ ಸೋಂಕಿತರಾಗಿದ್ದ ಕೇಶವ ಹಾಗೂ ಅವರ ಪತ್ನಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ಗಳಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾದರು. ಚಿಕಿತ್ಸೆ ಪಡಕೊಂಡ ಕೇಶವ್ ರವರ ಕುಟುಂಬವು ಪ್ರತೀ ಊರಿನಲ್ಲೂ ಇಂತಹ ಕೋವಿಡ್ ಕೇರ್ ಸೆಂಟರ್ ನ ಅವಶ್ಯಕತೆ ಇದೆ. ನಮ್ಮ ಹತ್ತಿರದಲ್ಲೇ ಇಂತಹ ವ್ಯವಸ್ಥೆ ಕಲ್ಪಿಸಿದ ಮೊಯ್ದಿನ್ ಬಾವಾ ರವರಿಗೆ ಕೃತಜ್ಞತೆ ಸಲ್ಲಿಸಿರುವುದಾಗಿ ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಹುಸೈನ್ ಕಾಟಿಪಳ್ಳ ರವರು ಕೋವಿಡ್ ಕೇರ್ ಸೆಂಟರ್ ನಿಂದ ಸಾರ್ವಜನಿಕರಿಗಾಗುತ್ತಿರುವ ಪ್ರಯೋಜನವನ್ನು ಶ್ಲಾಘಿಸಿದ್ದಾರೆ.













