ಗುರುಗ್ರಾಮದಲ್ಲಿದ್ದ ಮಸೀದಿ ನೆಲಸಮಗೊಳಿಸಿ, ಈದ್ಗಾಹ್, ವಕ್ಫ್ ಆಸ್ತಿಗಳನ್ನು ಸರಕಾರ ಅತಿಕ್ರಮಿಸಿರುವುದೇ ಸಮಸ್ಯೆಗೆ ಕಾರಣ: ಜಮ್‍ಇಯ್ಯತ್ತುಲ್ ಉಲಮಾ-ಏ-ಹಿಂದ್ ನಾಯಕ

0
526

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮಸೀದಿಗಳಿಲ್ಲದೇ ಇರುವುದು ಮಾತ್ರವಲ್ಲ ಇರುವ ಮಸೀದಿ, ಈದ್ಗಾಹಗಳನ್ನು ಸರಕಾರ ವಶಪಡಿಸಿಕೊಂಡಿರುವುದೇ ನಮಾಝ್ ನಿರ್ವಹಿಸುವ ಸ್ಥಳಾವಕಾಶವಿಲ್ಲದಂತಹ ಪರಿಸ್ಥಿತಿಗೆ ಹಾಗೂ ಸಮಸ್ಯೆಗೆ ಕಾರಣವೆಂದು ಹರಿಯಾಣದ ಗುರುಗ್ರಾಮದ ಮುಸ್ಲಿಮ್ ಸಮುದಾಯ ಬೆಟ್ಟು ಮಾಡಿದೆ. ಮುಸ್ಲಿಮರೊಂದಿಗೆ ಮಾತಾಡಲು ಸಿದ್ಧವಾಗದೆ ಏಕಪಕ್ಷೀಯವಾಗಿ ನಮಾಝ್ ತಡೆಯಲಾಗುತ್ತಿದೆ. ಸಮಸ್ಯೆ ಪರಿಹರಿಸಲು ಯತ್ನಿಸುತ್ತಿರುವ ಜಮ್‍ಇಯ್ಯತ್ತುಲ್ ಉಲಮಾ ಏ ಹಿಂದ್ ನಾಯಕ ಮುಫ್ತಿ ಸಲೀಂ ಈ ವಿಷಯವನ್ನು ತಿಳಿಸಿದರು.

2018ರಿಂದ ಇವರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಮುಸ್ಲಿಮರನ್ನು ಇನ್ನಷ್ಟು ದಮನಿಸಲು ಹಿಂದುತ್ವ ಅಜೆಂಡ ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ ರೆಸಿಡೆಂಟ್ಸ್ ಅಸೋಸಿಯೇಶನ್‍ಗಳ ಕೆಲವರು ನಮಾಝ್ ನಿರ್ವಹಿಸುವುದರ ವಿರುದ್ಧ ಪ್ರತಿಭಟನೆಗೆ ಪ್ರಚೋದಿಸಿ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಗುರುಗ್ರಾಮದ ಬಹುಭಾಗ ಜನರು ಈ ಕೋಮುವಾದಿಗಳ ವಿರುದ್ಧವಿದ್ದಾರೆ ಎಂದು ಸಲೀಂ ಹೇಳಿದರು.

“ಸರಕಾರ ಮುಂದೆ ಬರದೇ ಇರುವುದು ಸಮಸ್ಯೆ ಹಾಗೆ ಉಳಿಯಲು ಕಾರಣವಾಗಿದೆ. ಗುರದ್ವಾರ ಕಮಿಟಿ ಮತ್ತು ಅಕ್ಷಯ ಯಾದವ್‍ರಂತಹ ಸಹೋದರ ಸಮುದಾಯದವರು ಮಂದೆ ಬಂದು ಈ ಅತಿಕ್ರಮಣಕ್ಕೆ ಕೊನೆ ಹಾಡಬೇಕೆಂದು ತಾನು ಬಯಸುವೆ ಎಂದು ಮುಫ್ತಿ ಹೇಳಿದರು.

ಹರಿಯಾಣ ವಕ್ಫ್ ಬೋರ್ಡ್ ಅಡ್ಮಿಸ್ಟ್ರೇಟ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಝಾಕಿರ್ ಹುಸೈನ್ನ ಮಗ ತಾಹಿರ್ ಹುಸೈನ್ ಈ ವಿಷಯದಲ್ಲಿ ಸಹಮತ ವ್ಯಕ್ತಪಡಿಸಿದರು‌.

ಹರಿಯಾಣ ಸರಕಾರ ಮತ್ತು ಬಿಜೆಪಿ ವಿಷಯದಿಂದ ದೂರವಿದೆ. ಹಿಂದುತ್ವ ತೀವ್ರವಾದಿಗಳು ಜುಮಾ ನಮಾಝ್ ತಡೆಯುತ್ತಿದೆ ಎಂದು ತಾಹಿರ್ ಹುಸೈನ್ ಹೇಳಿದರು. ಬಿಜೆಪಿಯಿಂದ ಹೊರಹಾಕಲ್ಪಟ್ಟ ಕುಲ್‍ಭೂಷಣ್ ಭಾರಧ್ವಾಜ್ ಜುಮುಟ ನಮಾಝ್ ತಡೆಯಲು ನೇತೃತ್ವ ನೀಡುತ್ತಿದ್ದಾರೆ. ಹರಿಯಾಣದ ಮಸೀದಿಗಳನ್ನು, ಈದ್‍ಗಾಹಗಳನ್ನು ವಕ್ಫ್ ಭೂಮಿಯನ್ನು ಈ ಹಿಂದೆಯೂ ವಶಪಡಿಸಿಕೊಂಡು ನಾಶಪಡಿಸಿದ್ದನ್ನು ಕೂಡ ಈ ಸಂದರ್ಭದಲ್ಲಿ ಅವರು ನೆನಪಿಸಿದರು.

ನೋರಂಗಪುರದಲ್ಲಿ ಜೆಸಿಬಿ ಹರಿಸಿ ಒಂದು ಮಸೀದಿ ಕೆಡವಿದ್ದು. ಮೇವ್ದಢ ಮಸೀದಿಯನ್ನು ಕೆಡವಿದರು. ಗುರುಗ್ರಾಮದ ಪಾಲಂ ವಿಹಾರದಲ್ಲಿ ವಕ್ಫ್ ಬೋರ್ಡಿನ ಮಾಲಕತ್ವದ ಈದ್‍ಗಾಹ್ ಭೂಮಿ ಕಾಂಗ್ರೆಸ್ ನಾಯಕ ಪ್ರದೀಪ್ ಸಿಂಗ್ ಹೂಡ ಮುಖ್ಯಮಂತ್ರಿಯಾಗಿದ್ದಾಗ ಕಟ್ಟಡ ಕೆಡವಲಾಯಿತು. ಹೀಗೆ ಇರುವ ಮಸೀದಿಗಳನ್ನು ವಕ್ಫ್ ಜಮೀನನ್ನು ಕಬಳಿಸಿದ್ದರಿಂದ ಇರುವ ಸೌಲಭ್ಯ ಕೂಡ ಇಲ್ಲದಾಯಿತು ಎಂದು ಮುಫ್ತಿ ತಿಳಿಸಿದರು.

ಈಗ ಸಾಕಷ್ಟು ಮಸೀದಿಗಳಿಲ್ಲ ಹಲವು ಬಹುರಾಷ್ಟ್ರ ಕಂಪೆನಿಗಳು ಇರುವ ಗುರುಗ್ರಾಮದಲ್ಲಿ ದೇಶದ ವಿವಿಧ ಕಡೆಗಳಿಂದ ಇಲ್ಲಿ ಬರುತ್ತಾರೆ. ಪ್ರಾರ್ಥನೆಗೆ ಸ್ಥಳ ನಿರ್ಣಯಿಸಿಕೊಡಬೇಕು. ಇಲ್ಲದಿದ್ದರೆ ಕಮ್ಯುನಿಟಿ ಹಾಲ್ ಮುಂತಾದುವುಗಳನ್ನು ಕೊಡಬೇಕು. ಖಾಸಗಿ ಕಂಪೆನಿಗಳು ತಮ್ಮ ಸ್ಥಳಗಳಲ್ಲಿ ಪ್ರಾರ್ಥನೆ ಸೌಕರ್ಯ ಮಾಡಿಕೊಡಬೇಕೆಂದು ತಾಹಿರ್ ಹುಸೈನ್ ವಿನಂತಿಸಿದರು.