ನಕಲಿ ವೀಸಾ ಹಾವಳಿ: ಯುಎಇ ಎಚ್ಚರಿಕೆ

0
142

ಸನ್ಮಾರ್ಗ ವಾರ್ತೆ

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನೆಲೆಸಿರುವ ಭಾರತೀಯ ವಲಸಿಗರಿಗಾಗಿ ಭಾರತೀಯ ದೂತವಾಸವು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ನೀಡಿ ಜನರನ್ನು ವಂಚಿಸುತ್ತಿರುವ ನಕಲಿ ವೀಸಾ ಮತ್ತು ವಲಸೆ ಏಜೆನ್ಸಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಪ್ರಕಟಿಸಲಾಗಿದೆ.

​ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈನ ಭಾರತೀಯ ದೂತವಾಸಕ್ಕೆ, ಖಾಸಗಿ ವೀಸಾ ಹಾಗೂ ಮೈಗ್ರೇಷನ್ ಏಜೆನ್ಸಿಗಳಿಂದ ವಂಚನೆಗೆ ಒಳಗಾಗಿರುವ ಬಗ್ಗೆ ಸತತ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ಅತ್ಯಂತ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮೂರನೇ ದೇಶಗಳಿಗೆ ಉದ್ಯೋಗ ಮತ್ತು ರೆಸಿಡೆನ್ಸಿ ವೀಸಾ ಕೊಡಿಸುವುದಾಗಿ ಆಕರ್ಷಕ ಜಾಹೀರಾತುಗಳನ್ನು ನೀಡಿ ಈ ವಂಚಕ ಏಜೆನ್ಸಿಗಳು ಜನರನ್ನು ಸೆಳೆಯುತ್ತವೆ. ಬಳಿಕ ಅರ್ಜಿದಾರರಿಂದ ಮುಂಗಡವಾಗಿ ಹಣ ಪಡೆದು, ಕೊನೆಗೆ ಭರವಸೆ ನೀಡಿದಂತೆ ವೀಸಾ ಕೊಡಿಸದೆಯೂ, ಹಣವನ್ನೂ ವಾಪಸ್ ನೀಡದೆ ಮೈಮರೆಸಿಕೊಳ್ಳುತ್ತಿವೆ ಎಂದು ದೂತವಾಸ ತಿಳಿಸಿದೆ.

ಸಾಮಾಜಿಕ ಜಾಲತಾಣಗಳ ಜಾಹೀರಾತುಗಳನ್ನು ಕುರುಡಾಗಿ ನಂಬಬೇಡಿ, ಭರವಸೆಗಳಿಗೆ ಬಲಿಯಾಗಿ ಹಣ ನೀಡಬೇಡಿ ಮತ್ತು ಅಧಿಕೃತ ಮೂಲಗಳನ್ನ ಪರಿಶೀಲಿಸುವ ಮೂಲಕ ಯಾವುದೇ ವೀಸಾ ಅಥವಾ ಉದ್ಯೋಗದ ವಂಚನೆಗೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಮಿಷನ್‌ಗಳು ಯುಎಇಯಲ್ಲಿರುವ ಪ್ರಜೆಗಳಿಗೆ ಮನವಿ ಮಾಡಿವೆ.