ಸನ್ಮಾರ್ಗ ವಾರ್ತೆ
ಕೇರಳ,ಅ.21: ನೀಟ್ ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ಪಾಸಾದ ಕೊಲ್ಲಂ ಕುರುನಾಗಪ್ಪಳಿಯ ವಿಶೇಷ ಸಾಮರ್ಥ್ಯದ ಆಮಿನಾಳ ಬಯಕೆ ಈಡೇರಿದೆ. ಆಮಿನಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ನೇರವಾಗಿ ಭೇಟಿಯಾಗಿದ್ದಾಳೆ. ಆಮಿನಾಳಿಗೆ ರಾಹುಲ್ರನ್ನು ಭೇಟಿಯಾಗುವ ಅವಕಾಶವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಾಡಿಕೊಟ್ಟಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿಆರ್ ಮಹೇಶ್ರ ಜೊತೆಗೆ ಕರುನಾಗಪ್ಪಳಿಯಿಂದ ಆಮಿನಾ ವಯನಾಡಿಗೆ ಬಂದಿದ್ದಾಳೆ.
ರಾಹುಲ್ರನ್ನು ಆಮಿನಾ ಭೇಟಿಯಾದ ವಿವರವನ್ನು ಯುತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಶಾಫಿ ಪರಂಬಿಲ್ ಫೇಸ್ಬುಕ್ಗೆ ಪೋಸ್ಟ್ ಮಾಡಿದ್ದರು. ತನ್ನ ದೈಹಿಕ ಮಿತಿಗಳನ್ನು ಇಚ್ಛಾಶಕ್ತಿಯಿಂದ ಮೀರಿನಿಂತು ಉನ್ನತ ಯಶಸ್ಸು ಕಂಡ ಆಮಿನಾರ ಮನೆಯ ಅವಸ್ಥೆ ತೀರ ಕಷ್ಟಕರವಾದುದು.

ಡಯಾಲಿಸ್ ಮಾಡಬೇಕಾದ ಸ್ಥಿತಿಯಲ್ಲಿ ತಂದೆ ಇದ್ದಾರೆ. ಏಕೈಕ ಆದಾಯ ತಾಯಿಯ ಕೆಲಸವಾಗಿದೆ. ಅದು ಕೂಡ ನಷ್ಟವಾಗುವ ಸ್ಥಿತಿಯಲ್ಲಿದೆ. ದೈಹಿಕ ಮಿತಿ ವೈದ್ಯಕೀಯ ಕಲಿಯುವ ಆಸೆಗೆ ಅಡ್ಡಿಯಾಗಬಹುದೇ ಎಂಬ ಆತಂಕದಲ್ಲಿ ಆಮಿನಾ ಇದ್ದಾಳೆ ಎಂದು ಶಾಫಿ ಪರಂಬಿಲ್ ತಿಳಿಸಿದ್ದಾರೆ.












