ಸೇನೆಗೆ ಸಹಾಯ ಮಾಡಿದ ಅಫ್ಘಾನ್ ಪ್ರಜೆಗಳನ್ನು ಹೊತ್ತ ಮೊದಲ ವಿಮಾನ ಅಮೆರಿಕಕ್ಕೆ

0
4167

ಸನ್ಮಾರ್ಗ ವಾರ್ತೆ

ಕಾಬೂಲ್: ಎರಡು ದಶಗಳ ಕಾಲ ಅಮೆರಿಕ ಸೇನೆಗಾಗಿ ಕೆಲಸ ಮಾಡಿದ ಅಫ್ಘಾನಿಸ್ತಾನದ ಪ್ರಜೆಗಳನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗುವ ಕ್ರಮ ಆರಂಭವಾಗಿದ್ದು ದುಭಾಷಿಗಳು ಮತ್ತು ಇತರ ನೆರವುದಾರರಾದ 221 ಮಂದಿಯನ್ನು ಮೊದಲ ವಿಮಾನದಲ್ಲಿ ಕರೆದುಕೊಂಡು ಹೋಗಿ ಡಲ್ಲಾಸ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಇವರಲ್ಲಿ 57 ಮಕ್ಕಳಿದ್ದಾರೆ. 15 ಪುಟ್ಟ ಕಂದಮ್ಮಗಳು ಕೂಡ ಇದ್ದಾರೆ.

ಅಫ್ಘಾನಿಸ್ಥಾನದಲ್ಲಿ ಅಮೆರಿಕನ್ ಅತಿಕ್ರಮಣಕ್ಕೆ ಸಹಾಯ ನೀಡಿದವರ ಮೇಲೆ ತಾಲಿಬಾನ್ ಪ್ರತೀಕಾರ ತೀರಿಸುವ ಸಾಧ್ಯತೆಯನ್ನು ಮನಗಂಡು ಅಮೆರಿಕ ತನಗೆ ನೆರವು ನೀಡಿದವರನ್ನು ಅಮೆರಿಕಕ್ಕೆ ಕರೆಯಿಸಿಕೊಂಡಿದೆ. ಸೈನಿಕ ಹಿಂದೆ ಸರಿಯುವಿಕೆಯ ಸಮಯದಲ್ಲಿ ಅಮೆರಿಕ ಸರಕಾರ ಇವರಿಗೆ ಪುನರ್ವಸತಿ ರಕ್ಷಣೆ ನೀಡುವ ಭರವಸೆ ನೀಡಿತ್ತು. ಅಫ್ಘಾನಿಸ್ತಾನಿ ಸಿಬ್ಬಂದಿಗಳ ಜೊತೆಗೆ ಅವರ ಕುಟುಂಬದವರನ್ನು ಕೂಡ ಅಮೆರಿಕಕ್ಕೆ ಕರೆಕೊಂಡು ಹೋಗುವುದಾಗಿ ಭರವಸೆ ನೀಡಲಾಗಿತ್ತು.

ವೀಸಾ ಇತ್ಯಾದಿಗಳು ಪೂರ್ಣಗೊಂಡ ಕೂಡಲೇ ಇತರರನ್ನು ಕೂಡ ಅಮೆರಿಕಕ್ಕೆ ಕರೆತರಲಾಗುವುದು ಎಂದು ಅಮೆರಿಕದ ಸೇನೆ ತಿಳಿಸಿದೆ. 750 ಸಿಬ್ಬಂದಿಗಳ ವೀಸಾ ಇತ್ಯಾದಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಇವರ ಕುಟುಂಬಗಳ ಸಹಿತ 1,750 ಮಂದಿಗೆ ಅಮೆರಿಕಕ್ಕೆ ಹೋಗುವ ಅವಕಾಶ ಕಲ್ಪಿಸಲಾಗುತ್ತಿದೆ ಸೇನೆ ಸ್ಪಷ್ಟಪಡಿಸಿತ್ತು.