ಪತ್ರಕರ್ತ ದಾನೀಶ್ ಸಿದ್ದೀಕಿ ಹತ್ಯೆ ಪ್ರಕರಣ: ಗುರುತನ್ನು ಪರಿಶೀಲಿಸಿಯೇ ತಾಲಿಬಾನ್ ಹತ್ಯೆ ಮಾಡಿತ್ತು ಎಂದ ಅಮೇರಿಕದ ನಿಯತಕಾಲಿಕೆ

0
474

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಕಳೆದ ಜುಲೈ 16 ರಂದು ಅಫ್ಘಾನಿಸ್ತಾನ ಸರಕಾರ ಹಾಗೂ ತಾಲಿಬಾನ್ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಕಂದಹಾರ್ ನಲ್ಲಿ ಮೃತಪಟ್ಟ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಫೋಟೋ ಜರ್ನಲಿಸ್ಟ್ ದಾನೀಶ್ ಸಿದ್ದೀಕಿಯವರು ಬಾಂಬ್ ದಾಳಿಯಿಂದ ಮೃತಪಟ್ಟದ್ದಲ್ಲ, ಅವರ ಗುರುತನ್ನು ಪರಿಶೀಲನೆ ನಡೆಸಿದ ಬಳಿಕವೇ ಗುಂಡು ಹಾರಿಸಿ ತಾಲಿಬಾನಿಗಳು ಕ್ರೂರವಾಗಿ ಹತ್ಯೆ ಮಾಡಿದರು ಎಂದು ಅಮೇರಿಕಾದ ನಿಯತಕಾಲಿಕವೊಂದು ತನ್ನ ವರದಿಯಲ್ಲಿ ತಿಳಿಸಿದೆ.

ದಾನಿಶ್ ಸಿದ್ದೀಕಿಯವರ ಹತ್ಯೆಯಲ್ಲಿ ನಮ್ಮ ಪಾತ್ರವಿಲ್ಲ ಎಂದು ತಾಲಿಬಾನ್ ಈ ಹಿಂದೆ ಹೇಳಿದ್ದರೂ ಅಫ್ಘಾನ್ ಸರಕಾರ ತಾಲಿಬಾನ್ ವಾದವನ್ನು ತಳ್ಳಿಹಾಕಿತ್ತು.

38 ರ ಹರೆಯದ ಪತ್ರಕರ್ತ ಸಿದ್ದೀಕಿಯವರು ನಿಧನರಾದಾಗ ಅಫ್ಘಾನಿಸ್ತಾನದಲ್ಲಿ ನಿಯೋಜನೆಯಲ್ಲಿದ್ದರು. ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನ್ ಸೈನಿಕರು ಮತ್ತು ತಾಲಿಬಾನ್ ನಡುವಿನ ಘರ್ಷಣೆಯ‌ ಬಗ್ಗೆ ವರದಿ ಮಾಡುತ್ತಿದ್ದರು.

ಅಮೆರಿಕದ ನಿಯತಕಾಲಿಕೆ ವಾಷಿಂಗ್ಟನ್ ಎಕ್ಸಾಮಿನರ್ ವರದಿಯ ಪ್ರಕಾರ, ಸಿದ್ದಿಕಿ ಅಫಘಾನ್ ರಾಷ್ಟ್ರೀಯ ಸೇನಾ ತಂಡದೊಂದಿಗೆ ಸ್ಪಿನ್ ಬೋಲ್ಡಾಕ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಅವರು ಕಸ್ಟಮ್ಸ್ ಪೋಸ್ಟ್‌ನಿಂದ ಮೂರು ಮೈಲಿ ದೂರ ಹೋದಾಗ ಇವರಿದ್ದ ವಾಹನದ ಮೇಲೆ ತಾಲಿಬಾನ್ ದಾಳಿ ನಡೆಸಿತ್ತು. ಇದರಿಂದಾಗಿ ಸೈನಿಕರ ತಂಡದಲ್ಲಿ ಕಮಾಂಡರ್ ಮತ್ತು ಇತರ ವ್ಯಕ್ತಿಗಳು ಸಿದ್ದಿಕಿ ಅವರಿಂದ ಬೇರ್ಪಟ್ಟರು. ಬಳಿಕ ಅವರು ಇತರ ಮೂರು ಅಫ್ಘಾನ್ ಪಡೆಗಳೊಂದಿಗೆ ಉಳಿದಿದ್ದರು. ದಾಳಿಯ ಸಮಯದಲ್ಲಿ ಸಿದ್ದಿಕಿ ಅವರಿಗೆ ಸ್ವಲ್ಪಮಟ್ಟಿಗೆ ಗಾಯಗೊಂಡ ಕಾರಣ ಅವರು ಮತ್ತು ಅವರ ತಂಡವು ಸ್ಥಳೀಯ ಮಸೀದಿಗೆ ಹೋಗಿ ಅಲ್ಲಿ ಅವರು ಪ್ರಥಮ ಚಿಕಿತ್ಸೆ ಪಡೆದರು. ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದಾನೆಂದು ಸುದ್ದಿ ಹರಡುತ್ತಿದ್ದಂತೆ ತಾಲಿಬಾನ್ ಮತ್ತೆ ದಾಳಿ ಮಾಡಿತು. ಸಿದ್ದೀಕಿಯವರು ಇದ್ದ ಕಾರಣದಿಂದಲೇ ತಾಲಿಬಾನ್ ಮಸೀದಿಯ ಮೇಲೆ ದಾಳಿ ಮಾಡಿತು ಎಂದು ಸ್ಥಳೀಯರೊಂದಿಗೆ ನಡೆಸಿದ ತನಿಖೆಯ ವೇಳೆ ತಿಳಿದು ಬಂತು ಎಂದು ನಿಯತಕಾಲಿಕೆ ತಿಳಿಸಿದೆ.

ತಾಲಿಬಾನ್ ಸೆರೆಹಿಡಿದಾಗ ಸಿದ್ದಿಕಿ ಜೀವಂತವಾಗಿದ್ದರು. ತಾಲಿಬಾನ್ ಸಿದ್ದಿಕಿ ಗುರುತನ್ನು ಪರಿಶೀಲಿಸಿದ ನಂತರವೂ ಆತನನ್ನು ಮತ್ತು ಆತನ ಜೊತೆಗಿದ್ದವರನ್ನು ಗುಂಡು ಹಾರಿಸಿ ಕ್ರೂರವಾಗಿ ಕೊಂದಿತು ಎಂದು ಅದು ಹೇಳಿದೆ.

ಪೋಟೋ ಜರ್ನಲಿಸ್ಟ್ ಸಿದ್ದೀಕಿಯವರು ರೊಹಿಂಗ್ಯನ್ನರ ಬಿಕ್ಕಟ್ಟನ್ನು ಜಗತ್ತಿಗೆ ಪರಿಚಯಿಸಿದ ಹಿನ್ನೆಲೆಯಲ್ಲಿ ರಾಯಿಟರ್ಸ್ ತಂಡದ ಭಾಗವಾಗಿ 2018 ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದಿದ್ದರು. ಅವರ ಪಾರ್ಥಿವ ಶರೀರವು ಜುಲೈ 18 ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು ನಂತರ ಜಾಮಿಯಾ ನಗರದಲ್ಲಿರುವ ಮನೆಯಲ್ಲಿ ಅಂತಿಮ ದರ್ಶನದ ವೇಳೆ ಅವರ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ಅಪಾರ ಜನಸ್ತೋಮವೇ ನೆರೆದಿತ್ತು.