ನೆಹರುರವರಿಂದ ಮೋದಿಯವರೆಗೆ, ಮುಸ್ಲಿಮರನ್ನು ಕೇವಲ ಮತದಾರರನ್ನಾಗಿ ಬಳಕೆ ಮಾಡಲಾಗಿದೆ: ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಒವೈಸಿ

0
160

ಸನ್ಮಾರ್ಗ ವಾರ್ತೆ

ಕೊಚ್ಚಿ: ಮುಸ್ಲಿಮರನ್ನು ಸಮಾನ ರಾಜಕೀಯ ಪಾಲುದಾರರಂತೆ ನೋಡುವ ಬದಲು ಅವರನ್ನು ಕೇವಲ ಒಂದು ವೋಟ್ ಬ್ಯಾಂಕ್ ಆಗಿ ಸೀಮಿತಗೊಳಿಸಿದ್ದಾರೆ ಎಂದು ‘ಇಂಡಿಯಾ ಟುಡೆ ಕಾನ್ಕ್ಲೇವ್ ಸೌತ್’ನಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹೈದರಾಬಾದ್ ಸಂಸದರು, ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷವು ಮುಸ್ಲಿಮರು ಸ್ವತಂತ್ರ ರಾಜಕೀಯ ಸಂಸ್ಥೆಯನ್ನು (ಏಜೆನ್ಸಿ) ಹೊಂದಿರುವುದನ್ನು ಬಯಸುವುದಿಲ್ಲ ಎಂದು ಹೇಳಿದರು.

ತಮ್ಮನ್ನು ತಾವು ಜಾತ್ಯತೀತರೆಂದು ಬಿಂಬಿಸಿಕೊಳ್ಳುವ ಪಕ್ಷಗಳಿಗೂ ಅಲ್ಪಸಂಖ್ಯಾತರ ಪರವಾಗಿ ನಿಲ್ಲಲು ಮತ್ತು ಅವರನ್ನು ರಾಜಕೀಯವಾಗಿ ಸಬಲೀಕರಣಗೊಳಿಸಲು ಬೌದ್ಧಿಕ ಪ್ರಾಮಾಣಿಕತೆಯಿಲ್ಲ ಎಂದು ಒವೈಸಿ ವಾದಿಸಿದರು. ಮುಸ್ಲಿಮರ ರಾಜಕೀಯ ಅಂಚಿಗೆ ಸರಿಯುವ ಸಮಸ್ಯೆಯನ್ನು ಯಾವುದೇ ಒಂದು ಸರ್ಕಾರ ಅಥವಾ ಪಕ್ಷಕ್ಕೆ ಆರೋಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

“ನೆಹರುರಿಂದ ಮೋದಿಯವರೆಗೆ, ಮುಸ್ಲಿಮರನ್ನು ಸಮಾನ ಪಾಲುದಾರರಲ್ಲದೆ ಕೇವಲ ಮತದಾರರನ್ನಾಗಿ ಮಾಡಲಾಗಿದೆ” ಎಂದು ಅವರು ಹೇಳಿದರು.

ವ್ಯವಸ್ಥಿತ ಬಹಿಷ್ಕರಣಕ್ಕೆ ಸಾಕ್ಷಿಯಾಗಿ ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯವನ್ನು ಅವರು ಬೆರಳು ಮಾಡಿ ತೋರಿಸಿದರು. “ಭಾರತೀಯ ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಶೇಕಡಾ 4 ರಷ್ಟಿದೆ. ಇದು ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಗಟ್ಟಿಯಾಗಿ ಮಾತನಾಡುವುದಿಲ್ಲವೇ? ನೀವು 18 ಕೋಟಿ ಜನಸಂಖ್ಯೆಯನ್ನು ಹೊಂದಿದ್ದೀರಿ ಮತ್ತು ಕೇವಲ ಶೇಕಡಾ 4 ರಷ್ಟು ಜನರು ಚುನಾಯಿತರಾಗಿದ್ದಾರೆ?”

ಬ್ರಾಹ್ಮಣರು, ಠಾಕೂರ್‌ಗಳು, ನಾಯರ್‌ಗಳು ಮತ್ತು ದಲಿತರು ಸೇರಿದಂತೆ ಇತರ ಸಮುದಾಯಗಳು ರಾಜಕೀಯ ನಾಯಕತ್ವ ಮತ್ತು ಪ್ರಾತಿನಿಧ್ಯದ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿವೆ, ಆದರೆ ಮುಸ್ಲಿಮರಿಗೆ ಅದೇ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಒವೈಸಿ ಅಭಿಪ್ರಾಯಪಟ್ಟರು. “ನನ್ನ ರಾಜಕೀಯ ಧ್ವನಿ ಎಲ್ಲಿದೆ? ನನ್ನ ರಾಜಕೀಯ ಸಂಸ್ಥೆ ಎಲ್ಲಿದೆ?” ಎಂದು ಅವರು ಪ್ರಶ್ನಿಸಿದರು.

ರಾಜಕೀಯ ನಿರ್ಧಾರ ಕೈಗೊಳ್ಳುವಲ್ಲಿ ಯಾವುದೇ ಸ್ವತಂತ್ರ ಅಭಿಪ್ರಾಯವಿಲ್ಲದೆ ಮುಸ್ಲಿಮರು ಚುನಾವಣೆಯಲ್ಲಿ ಮತ ಚಲಾಯಿಸುವಂತೆ ನಿರೀಕ್ಷಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥರು ಹೇಳಿದರು. “ನಾವು ಮತ ಚಲಾಯಿಸಬೇಕು ಮತ್ತು ಎಲ್ಲವನ್ನೂ ಸಹಿಸಿಕೊಳ್ಳಬೇಕು ಎಂದು ನಮಗೆ ಹೇಳಲಾಗುತ್ತದೆ, ಅದು ಬುಲ್ಡೋಜರ್ ಆಗಿರಲಿ, ಮಸೀದಿ ಆಗಿರಲಿ ಅಥವಾ ಎನ್‌ಕೌಂಟರ್ ಆಗಿರಲಿ. ಆದರೆ ಚುನಾವಣೆ ಬಂದಾಗ, ನಮ್ಮನ್ನು ಅಂಚಿಗೆ ಸರಿಸುತ್ತಿರುವವರಿಗೆ ಮತ ನೀಡಿ.”

ಮುಸ್ಲಿಮರು ಐತಿಹಾಸಿಕವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತ ಬಂದಿದ್ದಾರೆ ಎಂಬ ವಾದಕ್ಕೆ ಪ್ರತಿಕ್ರಿಯಿಸುತ್ತಾ, “ಮುಸ್ಲಿಮರು ಎರಡು ಕೆಡುಕುಗಳಲ್ಲಿ ಕಡಿಮೆ ಕೆಟ್ಟದಾದದ್ದನ್ನು ಆಯ್ದು ಮತ ಹಾಕಿದ್ದಾರೆ. ಅಲ್ಲಿ ಯಾವುದೇ ಕಾರ್ಯಸಾಧುವಾದ ಪರ್ಯಾಯ ಆಯ್ಕೆ ಇರಲಿಲ್ಲ” ಎಂದರು.

ಸಮುದಾಯದ ಚುನಾವಣಾ ಬೆಂಬಲವನ್ನು ಕೋರುವುದನ್ನು ಮುಂದುವರೆಸುತ್ತಲೇ, ಸ್ವತಂತ್ರ ಮುಸ್ಲಿಮರ ರಾಜಕೀಯ ನಾಯಕತ್ವದ ಹೊರಹೊಮ್ಮುವಿಕೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದೂ ಅವರು ಆರೋಪಿಸಿದರು.

“ಜಾತ್ಯತೀತ ಎಂದು ಕರೆಯಲ್ಪಡುವ ಪಕ್ಷಗಳು ಮುಸ್ಲಿಮರನ್ನು ಕೇವಲ ಮತದಾರರನ್ನಾಗಿ ಮತ್ತು ಬೊಂಬೆಗಳನ್ನಾಗಿ (ಶೋಬಾಯ್ಸ್) ಮಾಡಿವೆ” ಎಂದು ಹೇಳಿದರು, ಜಾತ್ಯತೀತತೆಯನ್ನು ಕೇವಲ ಚುನಾವಣಾ ಘೋಷಣೆಯಾಗಿ ಬಳಸದೆ, ಅದನ್ನು ಕ್ರಿಯೆಯ ಮೂಲಕ ಪ್ರದರ್ಶಿಸಬೇಕಾಗಿದೆ ಎಂದು ಅವರು ಹೇಳಿದರು.

ರಾಜಕೀಯ ಪ್ರಾತಿನಿಧ್ಯವನ್ನು ಅವರು ನೇರವಾಗಿ ಸಮಾನತೆಯ ವಿಶಾಲ ಪ್ರಶ್ನೆಗಳಿಗೆ ತಳಕುಹಾಕಿದರು. “ರಾಜಕೀಯ ನ್ಯಾಯವಿಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯವಿಲ್ಲ” ಎಂದು ಹೇಳಿದರು.