Home ಅಂಕಣಗಳು ಗಲ್ಫ್ ನ ಮಾಲ್ ನಲ್ಲಿ ಗುಡಿಸುತ್ತಿದ್ದ ಆ ಸುಂದರಿಯ ಜೀವನ ವೃತ್ತಾ0ತ ಕೇಳಿ ನನ್ನ ಧರ್ಮದ...

ಆಯಿಶತುಲ್ ಅಫೀಫ
ಕೆಲವು ವರ್ಷಗಳ ಮೊದಲು ಶಾಪಿಂಗ್ ಮಾಲ್ ಗೆ ಹೋಗಿದ್ದಾಗ, ನಮಾಝಿನ ಸಮಯವಾದ ಕಾರಣ ಮಾಲ್ ಗಳಲ್ಲಿ ಅದಕ್ಕಾಗಿಯೇ ಕಾಯ್ದಿರಿಸಿದ ಕೋಣೆಯನ್ನು ಪ್ರವೇಶಿಸುವಾಗ ಕವಿ ಕಾವ್ಯ ಕಲ್ಪನೆಯಲ್ಲಿ ಬರುವಂತಹ ಇಪ್ಪತ್ತರ ಹರೆಯದ ಸುಂದರಿಯೊಬ್ಬಳು ಸ್ವಚ್ಛತಾ ಕಾರ್ಯಕರ್ತರ ಸಮವಸ್ತ್ರದಲ್ಲಿ ಕಣ್ಣಿಗೆ ಬಿದ್ದಳು. ಸಿನಿಮಾ ತಾರೆಯರನ್ನು ಮೀರಿಸಿದ ಮುಗ್ಧ ಸೌಂದರ್ಯ ಮಾತಿಗೆಳೆಯುವ ತವಕವುಂಟಾಯಿತು. ಆಕೆಯ ಕಡೆಗೆ ಮುಗುಳ್ನಗೆ ಬೀರಿ ”ನಾನಿಲ್ಲಿ ಕುಳಿತುಕೊಳ್ಳಬಹುದಾ, ನನ್ನ ಗಂಡ ಪಕ್ಕದ ಕೋಣೆಯಲ್ಲಿ ನಮಾಜ್ ಮಾಡುತ್ತಿದ್ದಾರೆ” ಎಂದು ಕೇಳಿದೆ. ಆಕೆ ನಗುವಿನೊಂದಿಗೆ ಉತ್ತರಿಸಿದಳು,
”ಬೇಕಾದರೆ ನೀವು ನಮಾಝಿನ ಕೋಣೆಯಲ್ಲಿ ಕುಳಿತುಕೊಳ್ಳಿ. ಇಲ್ಲಿ ಕುರ್ಚಿ ಇಲ್ಲ.”
”ಬೇಡ ಪರವಾಗಿಲ್ಲ, ಇಲ್ಲೇ ಕೂತ್ಕೋತ್ತೀನಿ.”
ಮಾಲ್ ಹೊಸದಾಗಿ ನಿರ್ಮಾಣವಾದ ಕಾರಣ ಅಚ್ಚುಕಟ್ಟಾಗಿತ್ತು. ಅಲ್ಲೇ ಪಕ್ಕದಲ್ಲಿ ವುಜೂ ಮಾಡಲು ನಿರ್ಮಿಸಿದ ಕಟ್ಟೆಯ ಮೇಲೆ ಕುಳಿತು ಆಕೆಯನ್ನು ಮಾತಿಗೆಳೆದೆ,
”ತಾವು ಎಲ್ಲಿಂದ?”
ಆಕೆ ಸಂಕೋಚದಿಂದ ”. . . … ಪಾನ್ ”
” ಏನು . . . ಜಪಾನ್ ”
” ಇಲ್ಲ ಇಲ್ಲ, ಅಲ್ಲಿಯವಳಾದರೆ ಇಲ್ಲಿ ಬಂದು ಈ ಕೆಲಸ ಯಾಕೆ ಮಾಡುತ್ತಿದ್ದೆ, ನೇಪಾಳ್ ”ನಗುತ್ತಾ ಉತ್ತರಿಸಿದಳು.
”ಹಾಂ ನನಗೆ ಜಪಾನ್ ಕೇಳಿಸಿತು . ನಿಮ್ಮ ಹೆಸರು?”
”ಸುಸೀಲ”
”ಎಷ್ಟು ಸಮಯವಾಯಿತು ಇಲ್ಲಿ ಬಂದು?”
”ಒಂಬತ್ತು ತಿಂಗಳು. ಸೇಲ್ಸ್ ಗರ್ಲ್ ಕೆಲಸಕ್ಕೆಂದು ಬಂದದ್ದು. ಆದರೆ ಇಲ್ಲಿ ಈ ಕೆಲಸ ಕೊಟ್ಟಿದಾರೆ. ಹೆಚ್ಚಿನ ವಿದ್ಯಾಭ್ಯಾಸ ಇಲ್ಲ ನೋಡಿ. ಅಂಗ್ರೇಝಿ ಬರುವುದಿಲ್ಲ. ಕೆಲ ಸಮಯದ ನಂತರ ಒಳಗೆ ಟ್ರಾನ್ಸ್ಫರ್ ಮಾಡ್ತಾರೆಂದು ಹೇಳಿದ್ದಾರೆ.”
”ಸಣ್ಣ ವಯಸ್ಸಿಗೆ ದುಡಿಯಲು ಬಂದಿದ್ದೀಯಾ, ಸಂಬಳ ಸರಿಯಾಗಿ ಕೊಡುತ್ತಾರ?”
”ಹಾಂ ತಿಂಗಳಿಗೆ ಒಂಬೈನೂರು ರಿಯಲ್ (ಸುಮಾರು ಹನ್ನೆರಡರಿಂದ ಹದಿನೈದು ಸಾವಿರ ರೂಪಾಯಿ ). ನನ್ನದು ನೈಟ್ ಡ್ಯೂಟಿ.”
” ಅಷ್ಟೇನಾ ಓವರ್ಟೈಮ್ ಇಲ್ವಾ?”
” ಇಲ್ಲ, ಒಳಗೆ ಟ್ರಾನ್ಸ್ಫರ್ ಮಾಡಿದರೆ 1300 ರ ಮೇಲೆ ಬರಬಹುದು . ರೂಮ್ ಕೊಟ್ಟಿದ್ದಾರೆ. ಊಟ ತಿಂಡಿ ನಾವೇ ನೋಡ್ಕೋಬೇಕು.”
ಈ ಚೆಲುವೆ ನನ್ನೊಳಗೆ ಪ್ರಶ್ನೆಗಳ ಅಬ್ಬರವನ್ನು ಸೃಷ್ಟಿಸಿದ್ದಳು. ಇಲ್ಲಿ ಬಂದು ದುಡಿಯಲು ಈಕೆಯನ್ನು ಅನಿವಾರ್ಯಗೊಳಿಸಿರುವ ಕಾರಣ ಯಾವುದು? ಬಡತನದಿಂದ ಬೇಸತ್ತು ತಾಯಿಗೆ ನೆರವಾಗಲು ಬಂದಿರಬಹುದಾ? ತಾಯಿಗಾಗಿ ಈ ಮರುಭೂಮಿಯಲ್ಲಿ ದುಡಿಯಲು ಬಂದಿರುವ ಅನೇಕ ಪಿಲಿಪೈನ್ ಹೆಣ್ಣುಮಕ್ಕಳ ಕತೆಗಳನ್ನು ಕೇಳಿದ್ದೇನೆ. ಅವರನ್ನ ಮಾತಾಡಿಸಿದ್ದೆ. ಈಕೆಯದ್ದೂ ಅದೇ ಕಾರಣ ವಿರಬಹುದು . ನನ್ನದೇ ವಯಸ್ಸು. ನಾನಾದರೆ ಹೊಸ ಬಾಳಿನ ಕನಸಿನೊಂದಿಗೆ ಗಂಡನ ಜೊತೆಗೂಡಲು ಪರದೇಶಕ್ಕೆ ಬಂದಿರುವುದು . ಹೀಗೆ ಎಲ್ಲ ಕಡೆಗಳಿಗೂ ನನ್ನ ಆಲೋಚನ ಲಹರಿ ಹರಿಯುತ್ತಿರಬೇಕಾದರೆ ಅಷ್ಟರಲ್ಲಿ ಆಕೆ ತಾವು ಎಲ್ಲಿಂದ ಎಂದು ಕೇಳಿದಳು.
”ಇಂಡಿಯಾ”
” ಇಷ್ಟು ಸಣ್ಣ ವಯಸ್ಸಿಗೆ ಎಲ್ಲರನ್ನೂ ಬಿಟ್ಟು ಬಂದಿದ್ದೀಯಲ್ಲ, ಮನೆಯವರ ನೆನಪಾಗಲ್ಲ ನಿನಗೆ” ಎಂದು ನಾನು ಕೇಳಿದೆ.
” ಆಗುತ್ತೆ. ಆದರೆ, ಏನು ಮಾಡುವುದು? ತುಂಬ ಸಾಲ ಇದೆ. ಅದನ್ನು ತೀರಿಸಬೇಕು.”
” ನಿನಗೆಂತ ಸಾಲ?”
” ಇದೆ….. ನನಗಲ್ಲ, ನನ್ನ ಗಂಡನಿಗಿದೆ. ಅವರು ರೋಗಿ. ಮದ್ದಿಗೆ ತುಂಬ ಖರ್ಚಾಗಿದೆ. ಸಾಲ ಮಾಡಬೇಕಾಗಿ ಬಂದಿದೆ.”
” ನಿನಗೆ ಮದುವೆಯಾಗಿದೆಯೇ? ರೋಗಿ ಅಂದರೆ?” ನನಗೆ ಆಶ್ಚರ್ಯ.
ಹಾಂ, ಒಂಬತ್ತನೇ ಕ್ಲಾಸ್ ಕಲಿಯುವಾಗ ಮದುವೆಯಾಯಿತು. ಅವರ ತಲೆ ಸರಿ ಇಲ್ಲ.”
” ಅಂದರೆ ಹುಚ್ಚು . . . … ”
” ಹಾಂ ಸ್ವಲ್ಪ ಹಾಗೇನೇ.”
” ಮದುವೆಯ ನಂತರ ರೋಗ ಬಾಧಿಸಿರುವುದು?”
(ಹುಚ್ಚ ಅಂತ ಕೇಳಿ ನನಗೆ ಮುಜುಗರವಾಗಿತ್ತು )
” ಅಲ್ಲ ಮೊದಲೇ ಇತ್ತು. ಅವರು ನಮಗೆ ತಿಳಿಸಿರಲಿಲ್ಲ. ಮದುವೆಯಾದ ಒಂದು ವಾರಕ್ಕೆ ನನಗೆ ತಿಳಿಯಿತು.”
”ಅದರ ನಂತರ ನಿನ್ನ ಮನೆಯವರು ಈ ಮದುವೆಯನ್ನು ರದ್ದು ಮಾಡಿ ನಿನಗೆ ಬೇರೆ ಮದುವೆ ಮಾಡುವ ಯೋಚನೆ ಮಾಡಲಿಲ್ಲವೆ?”
” ಇಲ್ಲ, ನಾವು ಬಡವರು. ನನ್ನ ನಂತರ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನ್ನ ಧರ್ಮದಲ್ಲಿ ನಮಗೆ ಎರಡು ಮದುವೆ ಇಲ್ಲ.”
” ಯಾರಿಗೂ ಇಲ್ಲ.”
” ಗಂಡಸರು ಮಾಡ್ಕೋತ್ತಾರೆ, ನಮಗಿಲ್ಲ.’
” ನಿನ್ನ ಗಂಡನಿಗೆ ಅಣ್ಣ ತಮ್ಮ ಯಾರಿಲ್ಲವಾ ಸಾಲ ತೀರಿಸಲು?”
” ಇಲ್ಲ, ಅವರು ಒಬ್ಬನೇ ಮಗ. ತಂದೆ ತಾಯಿ ಇದ್ದಾರೆ ವಯಸ್ಸಾಗಿದೆ.”
” ಮದುವೆಯಾಗಿ ಎಷ್ಟು ವರ್ಷವಾಯಿತು?”
” ಆರು ವರ್ಷ. ”
” ಮಕ್ಕಳು?”
” ಇಲ್ಲ … ಎಲ್ಲಿಂದ ಮಕ್ಕಳು ,ಒಳ್ಳೆದಾಯಿತು ಇಲ್ಲದ್ದು.”
” ಯಾಕೆ ? ನಿನಗೆ ಮಕ್ಕಳೆಂದರೆ ಇಷ್ಟವಿಲ್ಲವೇ ?”
” ಇಲ್ಲ ಹಾಗಲ್ಲ, ಜವಾಬ್ದಾರಿ ಜಾಸ್ತಿ, ನಾನು ನನ್ನ ಅಕ್ಕನ ಮಕ್ಕಳನ್ನು ತುಂಬಾ ಪ್ರೀತಿಸ್ತೀನಿ.”
” ನಿನಗೆ ಸಿಗುವ ಸಂಬಳ ಸಾಕಾಗುತ್ತ?”
” ಎಲ್ಲಿ ಸಾಕಾಗುತ್ತೆ? ಊರಿಗೆ ಕರೆ ಮಾಡಿದರೆ ದುಡ್ಡು ಕಳಿಸು ಅಂತಾರೆ ಹಾಗೂ ಹೀಗೋ ನಿಭಾಯಿಸ್ತಾ ಇದ್ದೀನಿ. ಒಳಗೆ ಟ್ರಾನ್ಸ್ಫರ್ ಮಾಡಿದರೆ ಸ್ವಲ್ಪ ಹೆಚ್ಚಿಗೆ ದುಡ್ಡು ಕೈಗೆ ಬರುತ್ತೆ. ”
” ಆದರೂ ನಿನಗೆ ನಿನ್ನ ಗಂಡ, ಮನೆಯವರಾರು ನೆನಪಿಗೆ ಬರುವುದಿಲ್ಲವೆ?”
ಗಂಡ ….. ಅಂತ ಹೇಳಿ ವಿಷಾದದ ನಗೆ ನಕ್ಕು, ” ನಾವು ಸರಿಯಾಗಿ ಸಂಸಾರವೇ ನಡೆಸಿಲ್ಲ, ಅವರು ಹುಚ್ಚ. ಹೊಡೀತಾ ಇದ್ದರು. ನಾನು ಅಮ್ಮನೊಟ್ಟಿಗೆ ಇದ್ದೆ. ಅಮ್ಮ ತುಂಬಾ ನೆನಪಾಗ್ತಾಳೆ, ನನ್ನ ಪರಿಸ್ಥಿತಿ ಬಗ್ಗೆ ಅವಳಿಗೆ ಮರುಕ ಜಾಸ್ತಿ….. ನೀವು ಇಲ್ಲಿ ಕೆಲಸ ಮಾಡಲು ಬಂದದ್ದ?” ಅವಳು ನನ್ನಲ್ಲಿ ಕೇಳಿದಳು.
ಅವಳ ಈ ಪ್ರಶ್ನೆಗೆ ಉತ್ತರಿಸಲು ನನಗೆ ಸಂಕೋಚವಾಯಿತು. ಆದರೂ, ”ಅಲ್ಲ ಗಂಡನ ಜೊತೆ ಬಂದದ್ದು. ಒಂದು ವರ್ಷ ಆಗ್ತಾ ಬಂತು” ಎಂದು ಹೇಳಿ ಅವಳನೊಮ್ಮೆ ದಿಟ್ಟಿಸಿದೆ.
ಅಲ್ಲಿ ಯಾವುದೇ ನೋವಿನ ಎಳೆಯಾಗಲಿ ಅಸೂಯೆಯ ಭಾವವಾಗಲಿ ಕಾಣಲಿಲ್ಲ. ಅದೇ ಮುಗ್ಧತೆ ಬೀರುವ ಕಣ್ಣುಗಳು. ಕಾಪಟ್ಯವಿಲ್ಲದ ಮಗುನಂತಹ ನಗು. ಅವಳ ಸ್ಥಿತಿ ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಹೆಚ್ಚಿಗೆ ಮಾತುಕತೆ ಬೇಡವೆಂದು, ”ಸರಿ ನನ್ನವರ ನಮಾಝ್ ಮುಗಿದಿರಬಹುದು. ನಾನು ಹೊರಡುತ್ತೇನೆ” ಎಂದು ಹೇಳಿದೆ.
”ಸರಿ… ನೀವು ತುಂಬಾ ಸುಂದರವಾಗಿದ್ದೀರಾ. ಇಲ್ಲಿ ಬರುವ ಯಾರೂ ನನ್ನನ್ನು ಇಷ್ಟರವರೆಗೆ ಮಾತನಾಡಿಸಿರಲಿಲ್ಲ. ನೀವು ತುಂಬ ಒಳ್ಳೆಯವರು” ಅದೇ ನಗುವಿನೊಂದಿಗೆ ಹೇಳಿದಳು.
ಇಲ್ಲ, ಇಲ್ಲ, ನನಗಿಂತ ನೀನು ಚೆನ್ನಾಗಿದ್ದೀಯಾ. ನಿನಗೆ ಹೀರೋಯಿನ್ ಆಗಬಹುದಿತ್ತೆಂದು ನಗುತ್ತಾ ಹೇಳಿ ಅಲ್ಲಿಂದ ಹೊರಬಂದೆ.
ಈ ಸುಶೀಲ ನನಗೀಗಲೂ ಕಾಡ್ತಾಳೆ. ಆಕೆಯ ನೆನಪಾದಾಗಲೆಲ್ಲ ಅವಳನ್ನು ಯಾರೂ ದುರುಪಯೋಗ ಪಡಿಸದಿರಲಿ ಆ ನಗು ಮುಗ್ಧತೆ ಸ್ಥಿರವಾಗಿರಲಿ ಎಂಬ ಪ್ರಾರ್ಥನೆ ನನ್ನ ಅಂತರಾಳದಿಂದ ಹೊರ ಬರುತ್ತೆ.
ಆ ಮಾಲ್ ಗೆ ಹೋದಾಗಲೆಲ್ಲ ಆಕೆಯನ್ನು ಭೇಟಿ ಮಾಡುವುದನ್ನು ಮರೆಯುವುದಿಲ್ಲ . ಅಕ್ಕನಿಗೆ ಹೆಣ್ಣು ಮಗುವಾಯಿತು, ಇನ್ನು ಎರಡು ತಿಂಗಳಲ್ಲಿ ನನ್ನನ್ನು ಒಳಗೆ ಟ್ರಾನ್ಸ್ಫರ್ ಮಾಡ್ತಾರೆಂದು ಹೇಳಿದ್ದಾರೆಂದು ಒಮ್ಮೆ ಹೇಳಿದ್ದಳು. ಅವಳು ಆಸೆಪಟ್ಟಂತೆ ಅವಳನ್ನು ಬೇಕರಿ ವಿಭಾಗಕ್ಕೆ ಕಳಿಸಿದ್ದಾರೆ. ಹಾಗಾಗಿ ನನ್ನ ಅವಳ ಭೇಟಿ ಕಡಿಮೆಯಾಗುತ್ತ ಬಂದು ನಿಂತು ಹೋಯಿತು. ಇದೆಲ್ಲ ನಡೆದು ಐದಾರು ವರ್ಷಗಳೇ ಕಳೆದಿದೆ. ನನ್ನ ಬಾಹ್ಯ ಪ್ರಪಂಚದಿಂದ ಆ ಹೆಣ್ಣು ಮಗಳು ಕಾಣೆಯಾದರೂ ನನ್ನ ಮನಸ್ಸಿನಿಂದ ಮರೆಯಾಗಲೇ ಇಲ್ಲ.
ಅರೆ ಹುಚ್ಚ ಗಂಡ, ಬಿಡಲೊಲ್ಲದ ಧರ್ಮ, ಯಾರದೋ ಅನಿವಾರ್ಯಕ್ಕೆ ಸುಳ್ಳಿನ ಬುನಾದಿ ಮೇಲೆ ಕಟ್ಟಿರುವ ಮದುವೆ ಇದೆಲ್ಲದರ ನಡುವೆ ಸಿಲುಕಿರುವ ಸಂದಿಗ್ದ ಪರಿಸ್ಥಿತಿ ಈ ಹೆಣ್ಣುಮಗಳದು. ಮಹಿಳೆಯರಿಗೆ ಸ್ಥಾನಮಾನವನ್ನು ನೀಡಿರುವ, ಅವ್ರ ಹಕ್ಕುಗಳ ಬಗ್ಗೆ ಕಾಳಜಿ ವಹಿಸಿರುವ ಮತ್ತು ಜೀವನದ ಎಲ್ಲ ಮಜಲುಗಳಲ್ಲಿ ತಲೆದೋರುವ ಗೋಜಲುಗಳನ್ನು ಸುಲಲಿತವಾಗಿ ಬಿಡಿಸಿಡುವ ನನ್ನ ಧರ್ಮದ ಬಗ್ಗೆ ಅಭಿಮಾನವೆನಿಸಿತು.
ಹೀಗೆ ಗಂಡನಿಗಾಗಿ, ಮಕ್ಕಳಿಗಾಗಿ, ತಂದೆ ತಾಯಿಗಳಿಗೆ, ಒಡಹುಟ್ಟಿದವರಿಗಾಗಿ ಬೇಷರತ್ತು ಕಷ್ಟಪಡುವ ಅನೇಕ ಹೆಣ್ಣು ಜೀವಗಳನ್ನು ನಾನು ನೋಡಿದ್ದೇನೆ. ಹೆಂಗಸರ ಬುದ್ದಿಮತ್ತೆ ಬಗ್ಗೆ ಹಾಸ್ಯಗಳನ್ನು ಓದುವಾಗ ಯಾರೋ ಒಬ್ಬಳು ಗಂಡನನ್ನು ಕೊಂದಳೆಂಬ ಕಾರಣಕ್ಕೆ ಟ್ರೊಲ್ ಗಳನ್ನ ನೋಡುವಾಗ ಇಂತಹ ಹೆಣ್ಣುಮಕ್ಕಳು ನನ್ನ ಮನಃ ಮಸ್ತಿಷ್ಕಗಳಲ್ಲಿ ಸುಳಿಯುತ್ತಾರೆ.