ಸನ್ಮಾರ್ಗ ವಾರ್ತೆ
ಭಾರತದ ಪ್ರಮುಖ ಮುಸ್ಲಿಂ ಸಂಘಟನೆಗಳು ಧಾರ್ಮಿಕ ನಾಯಕರು ಮತ್ತು ಸಮಾಜದ ಮುಖಂಡರು ದೆಹಲಿಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು ಗಾಝಾದ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರವು ಇನ್ನಷ್ಟು ಜವಾಬ್ದಾರಿಯುತ ಪಾತ್ರವನ್ನು ನಿಭಾಯಿಸಬೇಕು ಎಂದು ಆಗ್ರಹಿಸಿದ್ದಾರೆ.
ಗಾಝಕ್ಕೆ ಆಹಾರವನ್ನು ನಿರ್ಬಂಧಿಸುವ ಮತ್ತು ಹಸಿವೆಗೆ ದೂಡಿ ಸಾಯಿಸುವ ಇಸ್ರೇಲ್ನ ಕ್ರೌರ್ಯವನ್ನು ಖಂಡಿಸಿದ ಇವರು 20 ಲಕ್ಷ ನಾಗರಿಕರು ಹಸಿವಿನ ದವಡೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
90 ಶೇಕಡ ಆಸ್ಪತ್ರೆಗಳು ಬಾಂಬು ದಾಳಿಗೀಡಾಗಿ ಧ್ವಂಸವಾಗಿವೆ. ಬಹುತೇಕ ಮನೆಗಳು ಕುಸಿದು ಬಿದ್ದಿವೆ ಜನರು ಅವಶೇಷಗಳ ನಡುವೆ ಬದುಕುತ್ತಿದ್ದಾರೆ. ನವಜಾತ ಶಿಶುಗಳು ಪೋಷಕ ಆಹಾರವಿಲ್ಲದೆ ಸಾಯುತ್ತಿವೆ. ವೈದ್ಯರು ಅನಸ್ತೇಶಿಯ ಇಲ್ಲದೆ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದಾರೆ. ಮೂಲಭೂತ ಸೌಕರ್ಯಗಳಾದ ಆರೋಗ್ಯ ಶಿಕ್ಷಣ ಆಹಾರ ಎಲ್ಲವೂ ನಾಶವಾಗಿದೆ. ಇದು ಇಸ್ರೇಲ್ನ ಸ್ವರಕ್ಷಣೆ ಅಲ್ಲ. ಇದು ಯೋಜಿತವಾಗಿ ಒಂದು ಸಮುದಾಯವನ್ನು ನಾಮಾವವೇಶ ಮಾಡುವ ತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಭಾರತೀಯ ನಾಗರಿಕರ ಮೌನವನ್ನೂ ಇವರು ಪ್ರಶ್ನಿಸಿದ್ದಾರೆ. ಫೆಲೆಸ್ತೀನನ್ನು ಮುಸ್ಲಿಂ ಎಂಬ ಚೌಕಟ್ಟಿನ ಒಳಗಿಟ್ಟು ನೋಡಬೇಡಿ. ಇದೊಂದು ಮಾನವೀಯ ಬಿಕ್ಕಟ್ಟು. ಇದು ನ್ಯಾಯ ಮತ್ತು ಮಾನವ ಘನತೆಯ ಪ್ರಶ್ನೆಯಾಗಿದೆ ವಿದ್ಯಾರ್ಥಿಗಳು ಧಾರ್ಮಿಕ ಮುಖಂಡರು ಚಿಂತಕರು ಮತ್ತು ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಮೌನ ಮುರಿಯಬೇಕಾಗಿದೆ. ಇಸ್ರೇಲ್ನ ಕ್ರೌರ್ಯದ ವಿರುದ್ಧ ಪ್ರತಿಭಟನೆ, ಜನಜಾಗೃತಿ ಅಭಿಯಾನ ಪ್ರೌಢ ಚರ್ಚೆಗಳು ನಡೆಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಜಮೀಯತೆ ಉಲಮಾಯೆ ಹಿಂದ್, ಜಮಾಅತೆ ಇಸ್ಲಾಮಿ ಹಿಂದ್, ಮರ್ಕಜೆ ಜಮೀಯತೆ ಅಹ್ಲೆ ಹದೀಸ್, ಎಸ್ಐಒ ಮತ್ತು ಇನ್ನಿತರ ಸಂಘಟನೆಗಳು ಭಾಗಿಯಾಗಿದ್ದುವು.












